ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ

ಮುಂಬೈ: ಟಾಟಾ ಸಮೂಹದ ಮಹತ್ವದ ನಿರ್ಧಾರವೊಂದರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2027ರ ಫೆಬ್ರವರಿಯಲ್ಲಿ ತಮ್ಮ ಪ್ರಸ್ತುತ ಅವಧಿ ಪೂರ್ಣಗೊಂಡ ಬಳಿಕ ಮರುನೇಮಕಗೊಳ್ಳಲು ತಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18ರಂದು ನಡೆಯಲಿರುವ ಟಾಟಾ ಸನ್ಸ್‌ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಗೂ ಮುನ್ನ ಈ ಬೆಳವಣಿಗೆ ನಡೆದಿದೆ.
ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಹೇಳಿಕೆಯಲ್ಲಿ ಚಂದ್ರಶೇಖರನ್ ಅವರು, “ಟಾಟಾ ಸಮೂಹದಲ್ಲಿ ನನ್ನ ವೃತ್ತಿಜೀವನದ 40 ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. ಈ ಪ್ರತಿಷ್ಠಿತ ಸಂಸ್ಥೆಗೆ ಕೊಡುಗೆ ನೀಡುವ ಅತ್ಯಂತ ತೃಪ್ತಿದಾಯಕ ಅವಕಾಶ ದೊರೆತಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಕಳೆದ ಒಂದು ದಶಕದಲ್ಲಿ ಟಾಟಾ ಸನ್ಸ್ ಅನ್ನು ಮುನ್ನಡೆಸಿರುವುದು ನನಗೆ ದೊಡ್ಡ ಗೌರವವೂ, ಹೆಚ್ಚಿನ ಜವಾಬ್ದಾರಿಯೂ ಆಗಿತ್ತು” ಎಂದು ಹೇಳಿದ್ದಾರೆ.
ತಮ್ಮ ಉತ್ತರಾಧಿಕಾರಿಯನ್ನು ಶೀಘ್ರವಾಗಿ ನಿರ್ಧರಿಸುವಂತೆ ಟಾಟಾ ಸನ್ಸ್ ಮಂಡಳಿಗೆ ಅವರು ಮನವಿ ಮಾಡಿದ್ದಾರೆ. “ಸರಿಯಾದ ವರ್ಗಾವಣೆ ದೃಢಪಡಿಸಿಕೊಳ್ಳಲು ಉತ್ತರಾಧಿಕಾರಿಯ ಬಗ್ಗೆಶೀಘ್ರವಾಗಿ ನಿರ್ಧರಿಸುವಂತೆ ನಾನು ಮಂಡಳಿಗೆ ಕೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.

ಏಕೆ ರಾಜೀನಾಮೆ?
ಚಂದ್ರಶೇಖರನ್ ಅವರ ರಾಜೀನಾಮೆಯ ಹಿಂದೆ ಟಾಟಾ ಸನ್ಸ್‌ನ ಷೇರುದಾರರ ಜೊತೆಗಿನ ಉದ್ವಿಗ್ನತೆ ಹಾಗೂ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ನೋಯೆಲ್ ಟಾಟಾ ಅವರ ಜೊತೆ ಭಿನ್ನಾಭಿಪ್ರಾಯಗಳು ಪ್ರಮುಖ ಕಾರಣಗಳಾಗಿರಬಹುದು ಎಂಬ ಚರ್ಚೆಗಳು ನಡೆದಿವೆ.
ಅವರ ಹೇಳಿಕೆಯ ಪ್ರಕಾರ, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ಗಳು ಚಂದ್ರಶೇಖರನ್ ಅವರ ಮುಂದಿನ ಅವಧಿಯನ್ನು 2027ರ ಫೆಬ್ರವರಿ 20ರ ನಂತರ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸುವುದಕ್ಕೆ ಸರ್ವಾನುಮತದಿಂದ ನಿರ್ಧರಿಸಿ ಶಿಫಾರಸು ಮಾಡಿದ್ದವು. ಈ ಶಿಫಾರಸನ್ನು ಟಾಟಾ ಸನ್ಸ್‌ನ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (Nomination and Remuneration Committee) ಹಾಗೂ ಮಂಡಳಿಯೂ ದಾಖಲಿಸಿ ಶಿಫಾರಸು ಮಾಡಿದ್ದವು.
ಈ ಪ್ರಸ್ತಾವನೆಯನ್ನು 2026ರ ಫೆಬ್ರವರಿ 24ರಂದು ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಮಂಡಳಿಯ ಒಬ್ಬ ಸದಸ್ಯ ಈ ಪ್ರಸ್ತಾವನೆಗೆ ಬೆಂಬಲ ನೀಡದ ಕಾರಣ ಅದು ಅಂಗೀಕಾರವಾಗಲಿಲ್ಲ. ಮಂಡಳಿಯಲ್ಲಿ ಸರ್ವಾನುಮತದ ಬೆಂಬಲ ಇಲ್ಲದ ಹಿನ್ನೆಲೆಯಲ್ಲಿ ತಾವು ನಿರ್ಧಾರವನ್ನು ಮುಂದೂಡಲು ಆಯ್ಕೆ ಮಾಡಿಕೊಂಡಿದ್ದಾಗಿ ಚಂದ್ರಶೇಖರನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಾಂದೇಡ್‌ನಲ್ಲಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಕಿರ್ಪಾನ್‌ನಿಂದ ದಾಳಿ : ಆಸ್ಪತ್ರೆಗೆ ದಾಖಲು

ಟಾಟಾ ಸನ್ಸ್–ಟಾಟಾ ಟ್ರಸ್ಟ್‌ಗಳ ನಡುವೆ ಭಿನ್ನಾಭಿಪ್ರಾಯ
ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳ ನಡುವೆ ಮಂಡಳಿಯ ಪ್ರಾತಿನಿಧ್ಯ, ಸಮೂಹದ ವ್ಯವಹಾರ ತಂತ್ರ ಹಾಗೂ ಷೇರುದಾರರಾದ ಶಾಪೂರ್ಜಿ ಪಲ್ಲೋಂಜಿ ಸಮೂಹದ ನಿರ್ಗಮನ ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ.
ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರಾಗಿ ಮರುನೇಮಕ ಮಾಡುವ ವಿಚಾರದಲ್ಲಿ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ನೋಯೆಲ್ ಟಾಟಾ ವಿರೋಧ ವ್ಯಕ್ತಪಡಿಸಿದ ಬಳಿಕ ಈ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತಷ್ಟು ತೀವ್ರಗೊಂಡವು ಎಂದು ವರದಿಗಳಲ್ಲಿ ಹೇಳಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ನೋಯೆಲ್ ಟಾಟಾ ಅವರ ಪುತ್ರ ನೆವಿಲ್ ಟಾಟಾ ಅವರು ಟಾಟಾ ಸಮೂಹದಲ್ಲಿ ಇನ್ನಷ್ಟು ಪ್ರಮುಖ ಪಾತ್ರ ವಹಿಸಬೇಕು ಎಂಬ ಅಭಿಪ್ರಾಯವೂ ಇದೆ.
ಮಂಡಳಿ ಸದಸ್ಯರ ನಡುವೆ ಒಮ್ಮತ ಮೂಡುವವರೆಗೆ ಚಂದ್ರಶೇಖರನ್ ಅವರು ತಮ್ಮ ಮರುನೇಮಕದ ನಿರ್ಧಾರವನ್ನು ಮುಂದೂಡಲು ಈ ಹಿಂದೆ ಪ್ರಸ್ತಾಪಿಸಿದ್ದರು. ದಿವಂಗತ ರತನ್ ಟಾಟಾ ಅವರ ಕಾಲದಿಂದಲೂ ಒಮ್ಮತದ ನಿರ್ಧಾರಕ್ಕೆ ಮಹತ್ವ ನೀಡುವ ಪರಂಪರೆ ಟಾಟಾ ಸಮೂಹದಲ್ಲಿತ್ತು ಎಂದು ಹೇಳಲಾಗಿದೆ.

ನಾಲ್ಕು ದಶಕಗಳ ಟಾಟಾ ಪಯಣ
ಎನ್. ಚಂದ್ರಶೇಖರನ್ ಅವರು 1987ರಲ್ಲಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (TCS)ನಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ, 2009ರಲ್ಲಿ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ನೇಮಕಗೊಂಡರು.
2017ರಲ್ಲಿ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಳೆದ ಸುಮಾರು ಒಂದು ದಶಕದ ಅವಧಿಯಲ್ಲಿ ಅವರ ನಾಯಕತ್ವದಲ್ಲಿ ಟಾಟಾ ಸಮೂಹ ಹಲವು ಮಹತ್ವದ ಸವಾಲುಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಿದೆ.
ಇವುಗಳಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ, ಟಿಸಿಎಸ್‌ (TCS) ಎದುರಿಸಿದ ಬೆಲೆ ನಿಗದಿ ಒತ್ತಡ ಹಾಗೂ ಜಾಗ್ವಾರ್ ಲ್ಯಾಂಡ್ ರೋವರ್‌ಗೆ (JLR) ಎದುರಾದ ಸೈಬರ್ ದಾಳಿ ಪ್ರಮುಖವಾಗಿವೆ.

ಪ್ರಮುಖ ಸುದ್ದಿ :-   6 ಸ್ನೇಹಿತರು...ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕ

ಟಾಟಾ ಸಮೂಹದ ವ್ಯಾಪ್ತಿ
ಟಾಟಾ ಸನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಟಾಟಾ ಮೋಟಾರ್ಸ್ ಮತ್ತು ಏರ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಉದ್ಯಮಗಳ ಮೇಲ್ವಿಚಾರಣೆ ನಡೆಸುವ ಟಾಟಾ ಸಮೂಹವು ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾಗಿದೆ.
ಮಾಹಿತಿ ತಂತ್ರಜ್ಞಾನ ಸೇವೆಗಳು, ಉಕ್ಕು, ವಿಮಾನಯಾನ, ರಕ್ಷಣಾ ಕ್ಷೇತ್ರ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಹಲವು ವಲಯಗಳಲ್ಲಿ ಟಾಟಾ ಸಮೂಹ ತನ್ನ ವ್ಯವಹಾರವನ್ನು ವಿಸ್ತರಿಸಿದೆ.
ಚಂದ್ರಶೇಖರನ್ ಅವರ ರಾಜೀನಾಮೆಯಿಂದ ಇದೀಗ ಟಾಟಾ ಸನ್ಸ್‌ಗೆ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಪ್ರಮುಖವಾಗಿದ್ದು, ಸುಗಮ ಅಧಿಕಾರ ಹಸ್ತಾಂತರಕ್ಕಾಗಿ ಉತ್ತರಾಧಿಕಾರಿಯನ್ನು ಶೀಘ್ರದಲ್ಲಿ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಆಗಸ್ಟ್ 18ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯ ಮುನ್ನವೇ ಈ ಬೆಳವಣಿಗೆ ನಡೆದಿರುವುದು ಮತ್ತಷ್ಟು ಮಹತ್ವ ಪಡೆದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement