ಬೆಂಗಳೂರು : ಪಶ್ಚಿಮ ಘಟ್ಟದ ದಟ್ಟ ಹಸಿರು ಕಾಡುಗಳು, ಎತ್ತರದ ಪರ್ವತಗಳು ಹಾಗೂ ಮಳೆಗಾಲದ ಮಂಜಿನ ಹೊದಿಕೆಯ ನಡುವೆ ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸಾಗುತ್ತಿರುವ ಮನಮೋಹಕ ವೈಮಾನಿಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ.
ಎಫ್ಪಿವಿ (FPV) ಕ್ರಿಯೇಟರ್ @hemisphere.fpv ಸೆರೆಹಿಡಿದ ಈ ಸಿನೆಮಾಟಿಕ್ ಡ್ರೋನ್ ವಿಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡ ಬಳಿಕ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಈ ಅದ್ಭುತ ದೃಶ್ಯಗಳು ಕರ್ನಾಟಕದ ಸಕಲೇಶಪುರ–ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಇತ್ತೀಚೆಗೆ ನಡೆದ ವಂದೇ ಭಾರತ ರೈಲಿನ ಪ್ರಯೋಗಾತ್ಮಕ ಸಂಚಾರದ ವೇಳೆ ಸೆರೆಹಿಡಿಯಲ್ಪಟ್ಟಿವೆ. ಶಿರಾಡಿ ಘಾಟ್ ಎಂದೂ ಕರೆಯಲಾಗುವ ಈ ಮಾರ್ಗವು ಬಹುನಿರೀಕ್ಷಿತ ಬೆಂಗಳೂರು–ಮಂಗಳೂರು ರೈಲು ಮಾರ್ಗದ ಪ್ರಮುಖ ಭಾಗವಾಗಿದೆ. ಕಡಿದಾದ ಏರು-ಇಳಿಜಾರುಗಳು, ತೀಕ್ಷ್ಣ ತಿರುವುಗಳು, ಉದ್ದನೆಯ ಸುರಂಗಗಳು ಹಾಗೂ ಸೇತುವೆಗಳಿಂದ ಕೂಡಿರುವ ಈ ಪ್ರದೇಶವು ಭಾರತೀಯ ರೈಲ್ವೆಯ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ವಿಡಿಯೊದಲ್ಲಿ ಸಕಲೇಶಪುರ–ಸುಬ್ರಹ್ಮಣ್ಯ ರೈಲ್ವೆ ಮಾರ್ಗದಲ್ಲಿ ದಟ್ಟ ಕಾಡುಗಳು, ಪರ್ವತಗಳ ಇಳಿಜಾರುಗಳು ಮತ್ತು ಮಂಜಿನ ತೆರೆಗಳ ನಡುವೆ ಸಾಗುತ್ತಿರುವ ವಂದೇ ಭಾರತ್ ರೈಲು, ಕಿತ್ತಳೆ ಬಣ್ಣದ ಹಾವೊಂದು ಹಸಿರು ಅರಣ್ಯದ ಮಧ್ಯೆ ಸಾಗಿ ಹೋಗುತ್ತಿರುವಂತೆ ಕಾಣುತ್ತದೆ. ಪ್ರಕೃತಿಯ ವೈಭವ ಮತ್ತು ಆಧುನಿಕ ತಂತ್ರಜ್ಞಾನದ ಸಾಮರ್ಥ್ಯ ಒಂದೇ ಚೌಕಟ್ಟಿನಲ್ಲಿ ಬೆರೆತಿರುವ ಈ ದೃಶ್ಯಗಳು ನೋಡುಗರ ಮನಸೆಳೆಯುತ್ತವೆ.
ದಟ್ಟ ಅರಣ್ಯ ಹಾಗೂ ಎತ್ತರದ ಬೆಟ್ಟಗಳ ನಡುವೆ ಚುರುಕಾಗಿ ಸಾಗುವ ಸೆಮಿ-ಹೈ ಸ್ಪೀಡ್ ರೈಲಿನ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ. ವಿಡಿಯೊ ಹಂಚಿಕೊಂಡಿರುವ ಅಶ್ವಿನಿ ವೈಷ್ಣವ ಅವರು, “ಹೊಸ ಯುಗದ ರೈಲುಗಳು! ಭಾರತದಲ್ಲೇ ಇನ್ನಷ್ಟು ನಿರ್ಮಿಸೋಣ” ಎಂದು ಬರೆದುಕೊಂಡಿದ್ದಾರೆ.
ಈ ದೃಶ್ಯಗಳು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದು, ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯ ಮತ್ತು ಇಂತಹ ದುರ್ಗಮ ಪ್ರದೇಶದಲ್ಲಿ ಆಧುನಿಕ ರೈಲನ್ನು ಯಶಸ್ವಿಯಾಗಿ ಸಂಚರಿಸುವಂತೆ ಮಾಡಿರುವ ಭಾರತೀಯ ಎಂಜಿನಿಯರಿಂಗ್ ಸಾಮರ್ಥ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
“ಆಧುನಿಕ ಎಂಜಿನಿಯರಿಂಗ್ ಮತ್ತು ಪ್ರಕೃತಿಯ ಅದ್ಭುತ ಸಂಗಮ! ಭಾರತೀಯ ರೈಲ್ವೆ ತನ್ನ ಸುವರ್ಣಯುಗವನ್ನು ಅನುಭವಿಸುತ್ತಿದೆ” ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. ಇನ್ನೋರ್ವ ಬಳಕೆದಾರ, “ಇಂತಹ ದಟ್ಟ ಕಾಡು ಮತ್ತು ಘಾಟ್ ಪ್ರದೇಶದಲ್ಲಿ ರೈಲು ಸಂಚಾರಕ್ಕೆ ಅಗತ್ಯವಾದ ಮೂಲಸೌಕರ್ಯ ಹಾಗೂ ಸಾಧನಗಳನ್ನು ಹೇಗೆ ತಲುಪಿಸಿದರು? ಈ ಸಾಧನೆಯ ಹಿಂದೆ ಇರುವ ಶ್ರಮಕ್ಕೆ ನನ್ನ ಸಲಾಂ” ಎಂದು ಕೊಂಡಾಡಿದ್ದಾರೆ.
“ಭಾರತದ ಆಧುನಿಕ ರೈಲ್ವೆ ವ್ಯವಸ್ಥೆ ಮತ್ತು ಪ್ರಕೃತಿಯ ಉಸಿರು ಬಿಗಿಹಿಡಿಯುವ ಸೌಂದರ್ಯದ ಪರಿಪೂರ್ಣ ಸಂಗಮ ಇದು” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ವಿಭಾಗದಲ್ಲಿ ಒಟ್ಟು 57 ಸುರಂಗಗಳು, 258 ಸೇತುವೆಗಳು ಹಾಗೂ 108 ತೀಕ್ಷ್ಣ ತಿರುವುಗಳು ಇದ್ದು, ಇದು ದೇಶದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ದುರ್ಗಮ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ 2026ರ ಆಗಸ್ಟ್ ಮಧ್ಯಭಾಗದಲ್ಲಿ ವಿಶೇಷ ಸುರಕ್ಷತಾ ಪರೀಕ್ಷೆಗಳು ಆರಂಭಗೊಂಡಿವೆ.
ಮಂಜಿನ ನಡುವೆ ಕೆಲ ಕ್ಷಣ ಕಣ್ಮರೆಯಾಗುತ್ತಾ ಮತ್ತೆ ಹೊರಹೊಮ್ಮುವ ವಂದೇ ಭಾರತ ರೈಲಿನ ಈ ದೃಶ್ಯಗಳು ಪ್ರಕೃತಿಯ ಸೊಬಗು ಮತ್ತು ತಂತ್ರಜ್ಞಾನದ ಶಕ್ತಿಯ ಅಪೂರ್ವ ಸಂಗಮವನ್ನು ಅನಾವರಣಗೊಳಿಸಿವೆ. ಜೊತೆಗೆ, ಭಾರತೀಯ ರೈಲ್ವೆಯ ಆಧುನಿಕತೆ, ಸಾಮರ್ಥ್ಯ ಹಾಗೂ ಭವಿಷ್ಯದ ಕನಸುಗಳನ್ನು ದೇಶದ ಮುಂದೆ ಹೆಮ್ಮೆಯಿಂದ ಪ್ರದರ್ಶಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ