ಮಾಸ್ಕೋದಲ್ಲಿ ಅಮೆರಿಕ ಸೇನಾ ವಿಮಾನ ಲ್ಯಾಂಡಿಂಗ್‌ ; ʼತನಗೆ ಗೊತ್ತೆ ಇಲ್ಲ’ ಎಂದ ರಷ್ಯಾ ; ಈ ರಹಸ್ಯ ಹಾರಾಟದ ಮರ್ಮವೇನು?

ಮಾಸ್ಕೋ: ಅಮೆರಿಕ ವಾಯುಪಡೆಯ ಬೋಯಿಂಗ್ C-17A ಗ್ಲೋಬ್‌ಮಾಸ್ಟರ್ III (Globemaster III) ಎಂಬ ಭಾರೀ ಸೇನಾ ಸರಕು ಸಾಗಣೆ ವಿಮಾನ ಸೋಮವಾರ ಬೆಳಿಗ್ಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಳಿದಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಮಾನದ ಆಗಮನದ ಕುರಿತು ರಷ್ಯಾ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಆನ್‌ಲೈನ್ ವಿಮಾನ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ಅಂಕಿ-ಅಂಶಗಳ (online air traffic monitoring systems data) ಪ್ರಕಾರ, ಅಮೆರಿಕದ ವಾಷಿಂಗ್ಟನ್ ಸಮೀಪದ ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್‌ನಿಂದ ಹೊರಟಿದ್ದ ಈ ಸೇನಾ ವಿಮಾನವು ಮಧ್ಯಂತರವಾಗಿ ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ನಿಲುಗಡೆ ಮಾಡಿ ಬಳಿಕ ಮಾಸ್ಕೋ ತಲುಪಿದೆ. ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ಟಾಸ್ (TASS) ವರದಿ ಪ್ರಕಾರ, ವಿಮಾನವು ಮಾಸ್ಕೋ ಸಮಯ ಬೆಳಿಗ್ಗೆ ಸುಮಾರು 10 ಗಂಟೆಗೆ (0700 GMT) ರಷ್ಯಾ ರಾಜಧಾನಿಯಲ್ಲಿ ಇಳಿದಿದೆ.
ಲಭ್ಯವಿರುವ ವಿಮಾನ ಹಾರಾಟದ ಮಾಹಿತಿಯಂತೆ, ಈ ಭಾರೀ ಸರಕು ಸಾಗಣೆ ವಿಮಾನವು ನೇರವಾಗಿ ಮಾಸ್ಕೋಗೆ ತೆರಳದೆ ಹಲವು ಹಂತಗಳಲ್ಲಿ ಪ್ರಯಾಣ ನಡೆಸಿದೆ. ಮೊದಲಿಗೆ ಅದು ಅಮೆರಿಕದ ಚಾರ್ಲ್ಸ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಾಯುಪಡೆ ನೆಲೆಯಲ್ಲಿ ತಂಗಿ, ಅಲ್ಲಿಂದ ಲಾಟ್ವಿಯಾದ ರಿಗಾಕ್ಕೆ ಹಾರಿದೆ. ನಂತರ ರಷ್ಯಾ ಗಡಿಯನ್ನು ದಾಟಿ ಮಾಸ್ಕೋ ಕಡೆಗೆ ಪ್ರಯಾಣ ಮುಂದುವರಿಸಿದೆ.
ಯುರೋಪಿಯನ್ ಒಕ್ಕೂಟದ (EU) ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ಮೂಲವೊಂದು ಟಾಸ್‌ಗೆ ನೀಡಿದ ಮಾಹಿತಿಯಲ್ಲಿ, ಅಮೆರಿಕದ ಸೇನಾ ವಿಮಾನವು ಲಾಟ್ವಿಯಾದಿಂದ ಹೊರಟು ನೇರವಾಗಿ ರಷ್ಯಾದ ವಾಯುಪ್ರದೇಶದತ್ತ ಪ್ರಯಾಣಿಸಿದೆ ಎಂದು ದೃಢಪಡಿಸಿದೆ.

ಕ್ರೆಮ್ಲಿನ್‌ಗೆ ಮಾಹಿತಿ ಇಲ್ಲ!
ವಿಮಾನದ ಆಗಮನ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಷ್ಯಾದ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಸ್ಪಷ್ಟಪಡಿಸಿದೆ. ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್ಕೋವ್, ಈ ವಾರ ಮಾಸ್ಕೋದಲ್ಲಿ ಅಮೆರಿಕ ಆಡಳಿತದ ಅಧಿಕಾರಿಗಳ ಜೊತೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.
ವಿಮಾನದ ಈ ವಿಶೇಷ ಹಾರಾಟದ ಉದ್ದೇಶವೇನು? ಅದು ಯಾವ ಸರಕು ಅಥವಾ ಸಾಮಗ್ರಿಯನ್ನು ಹೊತ್ತೊಯ್ದಿತ್ತು? ಎಂಬ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ (Pentagon) ಅಥವಾ ರಷ್ಯಾದ ವಿದೇಶಾಂಗ ಸಚಿವಾಲಯ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಈ ಹಾರಾಟವು ರಾಜತಾಂತ್ರಿಕ ಕಾರ್ಯಾಚರಣೆ, ಕೈದಿಗಳ ವಿನಿಮಯ, ಅಥವಾ ಉಭಯ ದೇಶಗಳ ನಡುವಿನ ಆಡಳಿತಾತ್ಮಕ ವ್ಯವಹಾರಗಳಿಗೆ ಸಂಬಂಧಿಸಿದದ್ದೇ ಎಂಬ ಪ್ರಶ್ನೆಗಳಿಗೂ ಇದುವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ.
ಉಕ್ರೇನ್ ಯುದ್ಧದ ಬಳಿಕದ ನಿರ್ಬಂಧಗಳ ನಡುವೆ ಹಾರಾಟ
ಉಕ್ರೇನ್ ಯುದ್ಧ ಆರಂಭವಾದ ನಂತರ ಅಮೆರಿಕ ಮತ್ತು ಯುರೋಪಿನ ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ಆರ್ಥಿಕ ಹಾಗೂ ವಾಯುಯಾನ ನಿರ್ಬಂಧಗಳನ್ನು ಹೇರಿವೆ. ಇದರ ಭಾಗವಾಗಿ ರಷ್ಯಾದ ವಿಮಾನಗಳಿಗೆ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ವಾಯುಪ್ರದೇಶ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಪ್ರತಿಯಾಗಿ ರಷ್ಯಾ ಕೂಡ ತಾನು “ಸ್ನೇಹವಿಲ್ಲದ ರಾಷ್ಟ್ರಗಳು” ಎಂದು ಪರಿಗಣಿಸುವ ದೇಶಗಳ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.
ಇಂತಹ ಪರಿಸ್ಥಿತಿಯ ನಡುವೆ ಅಮೆರಿಕದ ಸೇನಾ ವಿಮಾನವೊಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಳಿದಿರುವುದು ವಿಶೇಷ ಗಮನ ಸೆಳೆದಿದೆ.

C-17A ಗ್ಲೋಬ್‌ಮಾಸ್ಟರ್ III ವಿಶೇಷತೆ ಏನು?
ಬೋಯಿಂಗ್ ನಿರ್ಮಿತ C-17A ಗ್ಲೋಬ್‌ಮಾಸ್ಟರ್ III ಅಮೆರಿಕ ವಾಯುಪಡೆಯ ಅತ್ಯಾಧುನಿಕ ಹಾಗೂ ಅತ್ಯಂತ ಸಾಮರ್ಥ್ಯವುಳ್ಳ ತಂತ್ರಾತ್ಮಕ ಸೇನಾ ಸರಕು ಸಾಗಣೆ ವಿಮಾನವಾಗಿದೆ. ದೀರ್ಘ ದೂರಗಳಿಗೆ ಸೈನಿಕರು, ಯುದ್ಧ ವಾಹನಗಳು ಮತ್ತು ಭಾರೀ ಪ್ರಮಾಣದ ಸಾಮಗ್ರಿಗಳನ್ನು ವೇಗವಾಗಿ ಸಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಅಮೆರಿಕ ವಾಯುಪಡೆಯ ಮಾಹಿತಿಯ ಪ್ರಕಾರ, ಈ ವಿಮಾನವು ಸುಮಾರು 1,70,900 ಪೌಂಡ್‌ (77,500 ಕೆ.ಜಿ.) ತೂಕದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದರ ವಿಶಾಲ ಸರಕು ವಿಭಾಗದಲ್ಲಿ ಸೇನಾ ವಾಹನಗಳು ಸೇರಿದಂತೆ ಗಾತ್ರದಲ್ಲಿ ದೊಡ್ಡದಾದ ಉಪಕರಣಗಳನ್ನು ಸಾಗಿಸಬಹುದು.
ಈ ವಿಮಾನವು ತಂತ್ರಾತ್ಮಕ ವಾಯುಸಾಗಣೆ, ಗಗನದಿಂದ ಸಾಮಗ್ರಿ ಇಳಿಸುವ ಕಾರ್ಯಾಚರಣೆ (Airdrop) ಹಾಗೂ ವೈದ್ಯಕೀಯ ತುರ್ತು ಸ್ಥಳಾಂತರ (Aeromedical Evacuation) ಕಾರ್ಯಗಳಿಗೂ ಬಳಸಲಾಗುತ್ತದೆ. ಕಡಿಮೆ ಉದ್ದದ ಹಾಗೂ ಸೌಲಭ್ಯಗಳು ಕಡಿಮೆಯಿರುವ ವಿಮಾನ ನಿಲ್ದಾಣಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.
ಸುಮಾರು 53 ಮೀಟರ್ ಉದ್ದ ಮತ್ತು 52 ಮೀಟರ್ ರೆಕ್ಕೆಗಳ ಅಗಲ ಹೊಂದಿರುವ ಈ ವಿಮಾನವು ನಾಲ್ಕು ಪ್ರಾಟ್‌ & ವಿಟ್ನೆ ಎಫ್‌117 (Pratt & Whitney F117) ಟರ್ಬೋಫ್ಯಾನ್ ಎಂಜಿನ್‌ಗಳಿಂದ ಕಾರ್ಯನಿರ್ವಹಿಸುತ್ತದೆ. ಇದು ಸುಮಾರು 450 ನಾಟ್ಸ್ ವೇಗದಲ್ಲಿ ಹಾರಬಲ್ಲದು.
ಸೇನಾ ನೆಲೆಗಳ ನಡುವೆ ಶಸ್ತ್ರಾಸ್ತ್ರ, ವಾಹನ ಹಾಗೂ ಸೈನಿಕರನ್ನು ಸಾಗಿಸುವುದರಿಂದ ಹಿಡಿದು ಸರ್ಕಾರ ಮತ್ತು ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ನೆರವಾಗುವವರೆಗೆ ಹಲವು ಉದ್ದೇಶಗಳಿಗೆ ಈ ವಿಮಾನವನ್ನು ಬಳಸಲಾಗುತ್ತದೆ. ಹೀಗಾಗಿ, ಯಾವುದೇ ಅಧಿಕೃತ ವಿವರಣೆ ಇಲ್ಲದೆ ಈ ವಿಮಾನ ಮಾಸ್ಕೋದಲ್ಲಿ ಕಾಣಿಸಿಕೊಂಡಿರುವುದು ಅದರ ನಿಜವಾದ ಉದ್ದೇಶದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಆಚರಣೆಯಲ್ಲ’: ಅಲಹಾಬಾದ್ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement