ನೇಪಾಳ ಹಠಾತ್‌ ಪ್ರವಾಹ ದುರಂತ : ಮೃತರ ಸಂಖ್ಯೆ 469ಕ್ಕೆ ಏರಿಕೆ, 1498 ಮಂದಿ ಇನ್ನೂ ನಾಪತ್ತೆ ; ಮತ್ತೊಂದು ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ. ದುರಂತದಲ್ಲಿ ಇದುವರೆಗೆ 1,545 ಮಂದಿ ಗಾಯಗೊಂಡಿದ್ದಾರೆ. ಹಾಗೂ 1,468 ಜನರು ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಹಠಾತ್‌ ಪ್ರವಾಹದಿಂದ ಹೊಸದಾಗಿ ರೂಪುಗೊಂಡ ತಾತ್ಕಾಲಿಕ ಸರೋವರವು ೊಡೆದು ಮತ್ತೊಂದು ಹಠಾತ್‌ ಪ್ರವಾಹದ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಸಂಪರ್ಕಕ್ಕೆ ಸಿಗದ 290 ಪ್ರಜೆಗಳನ್ನು ಪತ್ತೆಹಚ್ಚಲು ಭಾರತವು ಪ್ರಯತ್ನ ನಡೆಸಿದೆ.
ಪತ್ತೆಯಾದ ಮೃತದೇಹಗಳ ಪೈಕಿ ಅತಿ ಹೆಚ್ಚು 110 ಮೃತದೇಹಗಳು ನವಲ್ಪರಾಸಿ ಪೂರ್ವ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಚಿತ್ವಾನ್ ಜಿಲ್ಲೆಯಲ್ಲಿ 108, ಗೋರ್ಖಾದಲ್ಲಿ 44, ನುವಾಕೋಟ್‌ನಲ್ಲಿ 37, ಧಾದಿಂಗ್‌ನಲ್ಲಿ 33, ತನಹುನ್‌ನಲ್ಲಿ 28, ನವಲ್ಪರಾಸಿ ಪಶ್ಚಿಮದಲ್ಲಿ 27 ಹಾಗೂ ರಸುವಾದಲ್ಲಿ 12 ಮೃತದೇಹಗಳು ಪತ್ತೆಯಾಗಿವೆ.
ಪೀಡಿತ ಪ್ರದೇಶಗಳಿಂದ 50 ವಿದೇಶಿಯರು ಸೇರಿದಂತೆ 796 ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ, ಮತ್ತು ಇನ್ನೂ 796 ಜನರನ್ನು ಭೂಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ. ಆದರೆ ರಕ್ಷಿಸಲ್ಪಟ್ಟ ವಿದೇಶಿಯರ ರಾಷ್ಟ್ರೀಯತೆಗಳನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ.
ಗಾಯಗೊಂಡ ಮತ್ತು ರಕ್ಷಿಸಲ್ಪಟ್ಟವರ ಸಂಖ್ಯೆಯ ವಿವರಗಳನ್ನೂ ಪೊಲೀಸರು ಪ್ರಕಟಿಸಿದ್ದಾರೆ. ರಸುವಾ ಜಿಲ್ಲೆಯಲ್ಲಿ 644 ಮಂದಿ, ನುವಾಕೋಟ್‌ನಲ್ಲಿ 898 ಮಂದಿ ಹಾಗೂ ಧಾದಿಂಗ್‌ನಲ್ಲಿ ಮೂವರು ಗಾಯಗೊಂಡ ಅಥವಾ ರಕ್ಷಿಸಲ್ಪಟ್ಟವರ ಪಟ್ಟಿಯಲ್ಲಿ ದಾಖಲಾಗಿದ್ದಾರೆ. ಇದೇ ವೇಳೆ, ಕಠ್ಮಂಡು ಕಣಿವೆಯ ವಿವಿಧ ಆಸ್ಪತ್ರೆಗಳಲ್ಲಿ 84 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ರಸುವಾ–ಭೋಟೆಕೊಶಿ ಪ್ರದೇಶಗಳಲ್ಲಿ ಪ್ರವಾಹದಿಂದ ತತ್ತರಿಸಿರುವ ಜನರಿಗೆ ನೆರವು ಒದಗಿಸುವ ಕಾರ್ಯಾಚರಣೆಗಳು ನಿರಂತರವಾಗಿ ಸಾಗುತ್ತಿವೆ.

ನೇಪಾಳ ಅಧಿಕಾರಿಗಳು 910 ಜನರು ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದರೆ, ಟಿಬೆಟ್‌ನಲ್ಲಿ ಇನ್ನೂ 558 ಜನರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇದರಿಂದಾಗಿ ಗಡಿಯ ಎರಡೂ ಬದಿಗಳಲ್ಲಿ ಕಾಣೆಯಾದವರ ಒಟ್ಟು ಸಂಖ್ಯೆ 1,468 ಕ್ಕೆ ತಲುಪಿದೆ.
ಕನಿಷ್ಠ 44 ನೇಪಾಳಿ ಸೇನಾ ಸಿಬ್ಬಂದಿ, 28 ನೇಪಾಳ ಪೊಲೀಸ್ ಸಿಬ್ಬಂದಿ ಮತ್ತು 13 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ. ಜಲವಿದ್ಯುತ್ ಯೋಜನೆಗಳು ಮತ್ತು ಕಸ್ಟಮ್ಸ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 160 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

290 ಭಾರತೀಯರು ಸಂಪರ್ಕ್ಕೆ ಸಿಗುತ್ತಿಲ್ಲ…
ಈ ದುರಂತವು ಭಾರತದಿಂದ ಪ್ರಮುಖ ರಕ್ಷಣಾ ಪ್ರಯತ್ನವನ್ನು ಪ್ರಾರಂಭಿಸಿದೆ, ನೇಪಾಳದಲ್ಲಿ 290 ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಜಲವಿದ್ಯುತ್ ಕಾರ್ಮಿಕರು ಮತ್ತು ವಿವಿಧ ರಾಜ್ಯಗಳ ಪ್ರವಾಸಿ ಗುಂಪುಗಳು ಸೇರಿದಂತೆ ಕಾಣೆಯಾದ ಭಾರತೀಯರು ಇರುವ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ರಕ್ಷಣೆಯನ್ನು ಸಂಘಟಿಸಲು ಭಾರತವು “ತುರ್ತು ಪ್ರಯತ್ನಗಳನ್ನು” ಮಾಡುತ್ತಿದೆ.
ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿ ಭಾರತದ ರಾಯಭಾರಿಗಳು ವರ್ಚುವಲ್ ಆಗಿ ಭಾಗವಹಿಸಿದ ಉನ್ನತ ಮಟ್ಟದ ಸಭೆಯ ನಂತರ, ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತುರ್ತು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿದ್ದು, ಭಾರತದ ಸಂಪೂರ್ಣ ಮಾನವೀಯ ನೆರವಿನ ಭರವಸೆ ನೀಡಿದ್ದಾರೆ.
ಭಾರತ ಇದುವರೆಗೆ 84 ಪ್ರಜೆಗಳನ್ನು ರಕ್ಷಿಸಿದೆ. ಇದರಲ್ಲಿ ತ್ರಿಶೂಲಿ-I ನದಿಯ ಜಲವಿದ್ಯುತ್ ಯೋಜನೆಯ 63 ಕಾರ್ಮಿಕರು ಮತ್ತು ತಮಿಳುನಾಡಿನ 21 ಜನರು ಸೇರಿದ್ದಾರೆ.
ಟಿಬೆಟ್ ಕಡೆಯಿಂದ ಸುಮಾರು 200 ಭಾರತೀಯ ಪ್ರಜೆಗಳು ಸ್ಥಳಾಂತರಿಸುವಿಕೆಗೆ ಸಹಾಯ ಕೋರಿದ್ದಾರೆ, ಕೆಲವರು ಈಗಾಗಲೇ ನೇಪಾಳದ ಕಡೆಗೆ ತೆರಳುತ್ತಿದ್ದಾರೆ. ಪತ್ತೆಹಚ್ಚುವಿಕೆ ಮತ್ತು ಸ್ಥಳಾಂತರಿಸುವ ಪ್ರಯತ್ನಗಳಿಗೆ ಸಹಾಯ ಮಾಡಲು ವಿದೇಶಾಂಗ ಸಚಿವಾಲಯವು 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಿದೆ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

11 ಭಾರತೀಯರು ಸೇರಿದಂತೆ 27 ವಿದೇಶಿ ಪ್ರವಾಸಿಗರ ರಕ್ಷಣೆ
ನೇಪಾಳದ ಅಧಿಕಾರಿಗಳು ಗುರುವಾರ ರಸುವಾದಲ್ಲಿ ಸಿಲುಕಿಕೊಂಡಿದ್ದ 27 ವಿದೇಶಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ, ಇದರಲ್ಲಿ 11 ಭಾರತೀಯರು ಸೇರಿದ್ದಾರೆ. ಗುಂಪಿನಲ್ಲಿ ನಾಲ್ವರು ದಕ್ಷಿಣ ಕೊರಿಯನ್ನರು, ಇಬ್ಬರು ಇಟಾಲಿಯನ್ನರು ಮತ್ತು ಇಬ್ಬರು ಅಮೇರಿಕನ್ ನಾಗರಿಕರು ಸೇರಿದ್ದಾರೆ. ಉಳಿದ ಎಂಟು ಜನರ ರಾಷ್ಟ್ರೀಯತೆಗಳನ್ನು ನೇಪಾಳ ಪ್ರವಾಸೋದ್ಯಮ ಮಂಡಳಿ ದೃಢೀಕರಿಸಿಲ್ಲ.
ಹಿಮ ಬಂಡೆ ಕುಸಿತದಿಂದ ಆರಂಭವಾದ ಮಹಾದುರಂತ
ಕಳೆದ ಬುಧವಾರ ಹಿಮಾಲಯದ ಎತ್ತರದ ಪ್ರದೇಶದಲ್ಲಿ ಹಿಮನದಿಯ ಒಂದು ಭಾಗ ಹಾಗೂ ಪರ್ವತದ ಇಳಿಜಾರು ಕುಸಿದ ಪರಿಣಾಮ ಈ ಭೀಕರ ದುರಂತ ಸಂಭವಿಸಿತ್ತು. ಈ ಕುಸಿತದಿಂದ ಅಪಾರ ಪ್ರಮಾಣದ ಹಿಮ, ಬಂಡೆಗಳು ಮತ್ತು ಮಣ್ಣಿನ ರಾಶಿಗಳು ಕಣಿವೆಯತ್ತ ಧಾವಿಸಿ, ನದಿಗಳ ಜಾಲದ ಮೂಲಕ ನೇಪಾಳದತ್ತ ಪ್ರಬಲ ಪ್ರವಾಹದ ಅಲೆಗಳನ್ನು ಸೃಷ್ಟಿಸಿವೆ.
ಈ ಆಕಸ್ಮಿಕ ಪ್ರವಾಹ ಮತ್ತು ಮಣ್ಣಿನ ಹರಿವು ತ್ರಿಶೂಲಿ ಹಾಗೂ ಭೋಟೆಕೊಶಿ ನದಿ ತೀರದ ವಸತಿ ಪ್ರದೇಶಗಳನ್ನು ಅಕ್ಷರಶಃ ನಾಶಮಾಡಿದೆ. ಮನೆಗಳು, ಸೇತುವೆಗಳು, ರಸ್ತೆಗಳು, ಜಲವಿದ್ಯುತ್ ಯೋಜನೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಅಥವಾ ತೀವ್ರ ಹಾನಿಗೊಳಗಾಗಿವೆ. ಚೀನಾ ಗಡಿಯ ಭಾಗದಲ್ಲಿರುವ ಗ್ಯಿರೋಂಗ್ ಪೋರ್ಟ್‌ ಪ್ರದೇಶವೂ ಭಾರೀ ಮಣ್ಣಿನ ಕುಸಿತ ಮತ್ತು ಪ್ರವಾಹದಿಂದ ಮುಳುಗಿದೆ.

ಪ್ರಮುಖ ಸುದ್ದಿ :-   ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

ಉಪಗ್ರಹ ಚಿತ್ರಗಳಲ್ಲಿ ಗೋಚರಿಸಿದ ವಿನಾಶದ ಪ್ರಮಾಣ
ವ್ಯಾಂಟರ್ (Vantor) ಸಂಸ್ಥೆಯ ಉಪಗ್ರಹ ಚಿತ್ರಗಳು ದುರಂತದ ಭೀಕರತೆಯನ್ನು ಸ್ಪಷ್ಟವಾಗಿ ತೋರಿಸಿವೆ. ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನೇಪಾಳ-ಟಿಬೆಟ್‌ ಗಡಿ ದಾಟುವ ಕೇಂದ್ರ ಮತ್ತು ಅದರ ಸುತ್ತಲಿನ ಮೂಲಸೌಕರ್ಯಗಳಿದ್ದ ಪ್ರದೇಶಗಳು ಈಗ ಸಂಪೂರ್ಣವಾಗಿ ಜಲಾವೃತಗೊಂಡು ಮಣ್ಣು ಮತ್ತು ಅವಶೇಷಗಳಡಿ ಹೂತುಹೋಗಿವೆ.
ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಸುವಾಗಢಿ ಗಡಿ ದಾಟುವ ಕೇಂದ್ರವೂ ಒಂದು. ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಪ್ರಮುಖ ವ್ಯಾಪಾರ ಮತ್ತು ಸಂಚಾರ ಮಾರ್ಗವಾಗಿದ್ದ ಈ ಕೇಂದ್ರದ ನಾಶದಿಂದ ಗಡಿದಾಟುವ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ರಸ್ತೆ ಮತ್ತು ಸೇತುವೆಗಳ ಹಾನಿಯಿಂದ ರಕ್ಷಣಾ ತಂಡಗಳು ಪೀಡಿತ ಪ್ರದೇಶಗಳಿಗೆ ತಲುಪುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೆಚ್ಚುತ್ತಲೇ ಇವೆ ಸಾವಿನ ಸಂಖ್ಯೆ
ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಲೇ ಇದೆ. ನಾಪತ್ತೆಯಾದವರಲ್ಲಿ ನೂರಾರು ವಿದೇಶಿ ಪ್ರಜೆಗಳೂ ಸೇರಿದ್ದು, ಅವರಲ್ಲಿ ಭಾರತೀಯ ಯಾತ್ರಿಕರು ಮತ್ತು ಪ್ರವಾಸಿಗರೂ ಇದ್ದಾರೆ. ಇವರು ಹಿಮಾಲಯ ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ದುರಂತಕ್ಕೆ ಸಿಲುಕಿದ್ದಾರೆ.
ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ, ಸೈನಿಕರು ಹಾಗೂ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೆ ರಸ್ತೆ ಜಾಲಗಳ ಹಾನಿ, ದುರ್ಗಮ ಭೂಪ್ರದೇಶ, ನಿರಂತರ ಭೂಕುಸಿತದ ಅಪಾಯ ಮತ್ತು ಮತ್ತಷ್ಟು ಪ್ರವಾಹ ಸಂಭವಿಸುವ ಸಾಧ್ಯತೆಗಳು ಕಾರ್ಯಾಚರಣೆಯನ್ನು ನಿಧಾನಗೊಳಿಸುತ್ತಿವೆ.
ಮತ್ತೊಂದು ಪ್ರವಾಹದ ಭೀತಿ
ದುರಂತದ ಅಪಾಯ ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ ಎಂದು ನೇಪಾಳ ಮತ್ತು ಟಿಬೆಟ್ ಆಡಳಿತಗಳು ಎಚ್ಚರಿಕೆ ನೀಡಿವೆ. ಅಪಾರ ಪ್ರಮಾಣದ ಮಣ್ಣು, ಕಲ್ಲು ಮತ್ತು ಅವಶೇಷಗಳು ನದಿಗಳ ಹರಿವಿಗೆ ಅಡ್ಡಿಯಾಗಿರುವುದರಿಂದ ಹಲವು ತಾತ್ಕಾಲಿಕ ಸರೋವರಗಳು ರೂಪುಗೊಂಡಿವೆ.
ಈ ತಾತ್ಕಾಲಿಕ ಸರೋವರಗಳು ಒಡೆದರೆ ಮತ್ತೊಮ್ಮೆ ಭಾರೀ ಪ್ರವಾಹ ಉಂಟಾಗಿ ಕೆಳಭಾಗದ ಪ್ರದೇಶಗಳಿಗೆ ಅಪಾರ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನದಿ ತೀರದ ನಿವಾಸಿಗಳು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement