ಇಸ್ರೋ ಐತಿಹಾಸಿಕ ಸಾಧನೆ ; ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ ಉಡಾವಣೆ : ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ಬೆಂಗಳೂರು/ಶ್ರೀಹರಿಕೋಟಾ : ಶುಕ್ರವಾರ (ಸೆಪ್ಟೆಂಬರ್‌ 4) ಮುಂಜಾನೆ 2:55 ಗಂಟೆಗೆ ದೇಶದ ಬಹುತೇಕ ಜನರು ನಿದ್ರೆಯಲ್ಲಿದ್ದಾಗ, ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಬಾಹ್ಯಾಕಾಶ ಇತಿಹಾಸದ ಮತ್ತೊಂದು ಮಹತ್ವದ ಅಧ್ಯಾಯ ಬರೆಯಲಾಗುತ್ತಿತ್ತು. ದೇಶದ ವಿವಿಧ ಮಿಷನ್ ಕಂಟ್ರೋಲ್ ಕೇಂದ್ರಗಳು, ಉಡಾವಣಾ ಸಂಕೀರ್ಣಗಳು ಮತ್ತು ಟ್ರ್ಯಾಕಿಂಗ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 16,500 ಇಸ್ರೋ ವಿಜ್ಞಾನಿಗಳು, ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ತೀವ್ರ ಒತ್ತಡ ಮತ್ತು ನಿರೀಕ್ಷೆಗಳ ನಡುವೆ ಕೆಲಸ ಮಾಡುತ್ತಿದ್ದರು.
ಕೇವಲ 19 ನಿಮಿಷಗಳ ಬಳಿಕ, ಬೆಳಗಿನ 3:14 ಗಂಟೆಗೆ, ಜಿಎಸ್‌ಎಲ್‌ವಿ-ಎಫ್17 (GSLV-F17) ರಾಕೆಟ್‌ ಮೂಲಕ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋ ಮಹತ್ವದ ಸಾಧನೆ ಮಾಡಿತು. ಈ ಉಡಾವಣೆಯ ಯಶಸ್ಸಿನೊಂದಿಗೆ ನಿಯಂತ್ರಣ ಕೊಠಡಿಗಳಲ್ಲಿ ಸಂಭ್ರಮ, ಹರ್ಷೋದ್ಗಾರ ಮತ್ತು ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಪಿಎಸ್‌ಎಲ್‌ವಿ ವೈಫಲ್ಯಗಳ ನಂತರದ ಮಹತ್ವದ ಗೆಲುವು
ಇತ್ತೀಚಿನ ವರ್ಷಗಳಲ್ಲಿ ಇಸ್ರೋದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನವೆಂದು ಪರಿಗಣಿಸಲ್ಪಟ್ಟಿದ್ದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಎರಡು ಸತತ ವೈಫಲ್ಯಗಳನ್ನು ಎದುರಿಸಿತ್ತು. 2025ರಲ್ಲಿ ಒಂದು ಹಾಗೂ 2026ರ ಜನವರಿಯಲ್ಲಿ ಮತ್ತೊಂದು ವಿಫಲವಾದ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ವಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಾರಣಗಳ ಕುರಿತು ಆಳವಾದ ತನಿಖೆ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತದ ಉಡಾವಣಾ ಸಾಮರ್ಥ್ಯದ ಕುರಿತು ಪ್ರಶ್ನೆಗಳು ಮೂಡಿದ್ದವು. ಆದರೆ ಜಿಎಸ್‌ಎಲ್‌ವಿ-ಎಫ್17 ಯಶಸ್ಸು ಇಸ್ರೋ ತನ್ನ ವೈಫಲ್ಯಗಳಿಂದ ಪಾಠ ಕಲಿತು ಮತ್ತೆ ಬಲವಾಗಿ ಪುನರಾಗಮನ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.
ಇಸ್ರೋ ವಿಜ್ಞಾನಿಗಳ ಪ್ರಕಾರ, ಈ ರಾಕೆಟ್ ತಂತ್ರಜ್ಞಾನವು ಅತ್ಯಂತ ಸಂಕೀರ್ಣವಾಗಿರುವುದರಿಂದ ವಿಶ್ವದ ಕೆಲವೇ ರಾಷ್ಟ್ರಗಳು ನಿಯಮಿತವಾಗಿ ಉಡಾವಣೆಗಳನ್ನು ನಡೆಸುತ್ತವೆ. ಶ್ರೀಹರಿಕೋಟಾದಿಂದ ಇದುವರೆಗೆ ನಡೆದಿರುವ ಭಾರೀ ರಾಕೆಟ್ ಉಡಾವಣೆಗಳಲ್ಲಿ ಇದು 107ನೇ ಮಿಷನ್ ಆಗಿದೆ.

‘ನಾಟಿ ಬಾಯ್’ನಿಂದ ವಿಶ್ವಾಸಾರ್ಹ ರಾಕೆಟ್‌ವರೆಗೆ
ಪಿಎಸ್‌ಎಲ್‌ವಿ ತಾತ್ಕಾಲಿಕವಾಗಿ ಕಾರ್ಯನಿರತವಾಗದ ಸಂದರ್ಭದಲ್ಲಿ ಹೊಣೆಗಾರಿಕೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್-II (GSLV Mk-II) ಮೇಲೆ ಬಿದ್ದಿತ್ತು. ಈ ರಾಕೆಟ್‌ಗೆ ಇಸ್ರೋ ಇವಿಜ್ಞಾನಿಗಳು ಪ್ರೀತಿಯಿಂದ ಹಾಗೂ ಕೆಲವೊಮ್ಮೆ ಆತಂಕದಿಂದ “ನಾಟಿ ಬಾಯ್” ಎಂಬ ಅಡ್ಡಹೆಸರಿನಿಂದಲೂ ಕರೆಯುತ್ತಾರೆ.
ಇದಕ್ಕೆ ಕಾರಣವೂ ಇದೆ. ಈವರೆಗೆ ನಡೆದ 19 ಉಡಾವಣೆಗಳಲ್ಲಿ ಜಿಎಸ್‌ಎಲ್‌ವಿ ಆರು ಬಾರಿ ವಿಫಲವಾಗಿದೆ. ಅದರ ಪಯಣ ಏರಿಳಿತಗಳಿಂದ ಕೂಡಿದ್ದರೂ, ಇದೇ ರಾಕೆಟ್ ಇಂದು ಭಾರತದ ತಾಂತ್ರಿಕ ಸ್ವಾವಲಂಬನೆಯ ಸಂಕೇತವಾಗಿ ಬೆಳೆದಿದೆ.
ಕ್ರಯೋಜೆನಿಕ್ ತಂತ್ರಜ್ಞಾನಕ್ಕಾಗಿ ಎರಡು ದಶಕಗಳ ಹೋರಾಟ
1990ರ ದಶಕದ ಆರಂಭದಲ್ಲಿ ಭಾರತವು ಭಾರೀ ಸಂವಹನ ಉಪಗ್ರಹಗಳನ್ನು ಉಡಾಯಿಸಲು ಅಗತ್ಯವಿದ್ದ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಪಡೆಯಲು ಪ್ರಯತ್ನಿಸಿತು. ಕ್ರಯೋಜೆನಿಕ್ ಎಂಜಿನ್‌ಗಳು ಅತಿ ಕಡಿಮೆ ತಾಪಮಾನದಲ್ಲಿ ದ್ರವ ರೂಪದಲ್ಲಿರುವ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಇಂಧನವಾಗಿ ಬಳಸುತ್ತವೆ. ಇವು ರಾಕೆಟ್ ವಿಜ್ಞಾನದ ಅತ್ಯಂತ ಸಂಕೀರ್ಣ ತಂತ್ರಜ್ಞಾನಗಳಲ್ಲಿ ಒಂದಾಗಿದೆ.
ಆರಂಭದಲ್ಲಿ ಭಾರತ ರಷ್ಯಾದ ನೆರವನ್ನು ಕೇಳಿತ್ತು. ಆದರೆ ಅಮೆರಿಕ ನೇತೃತ್ವದ ತಂತ್ರಜ್ಞಾನ ನಿರ್ಬಂಧಗಳು ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳಿಂದ ಪೂರ್ಣ ತಂತ್ರಜ್ಞಾನ ವರ್ಗಾವಣೆ ಸಾಧ್ಯವಾಗಲಿಲ್ಲ. ರಷ್ಯಾ ಕೆಲವು ಎಂಜಿನ್‌ಗಳನ್ನು ನೀಡಿದರೂ, ಸಂಪೂರ್ಣ ತಂತ್ರಜ್ಞಾನವನ್ನು ಹಂಚಿಕೊಳ್ಳಲಿಲ್ಲ. ಇದರಿಂದ ಹಿಂದೆ ಸರಿಯದ ಇಸ್ರೋ ವಿಜ್ಞಾನಿಗಳು ಸುಮಾರು 20 ವರ್ಷಗಳ ಕಾಲ ನಿರಂತರ ಸಂಶೋಧನೆ ನಡೆಸಿ ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಅನೇಕ ವೈಫಲ್ಯಗಳು, ವಿಳಂಬಗಳು ಮತ್ತು ನಿರಾಸೆಗಳ ನಡುವೆಯೂ ಭಾರತ ಹೋರಾಟ ಮುಂದುವರಿಸಿತು. ಇಂದು ಜಿಎಸ್‌ಎಲ್‌ವಿ ಯಶಸ್ವಿಯಾಗಿ ಹಾರುವ ಪ್ರತಿಯೊಂದು ಮಿಷನ್ ಕೂಡ ಭಾರತದ ವೈಜ್ಞಾನಿಕ ಸ್ವಾವಲಂಬನೆಯ ಪ್ರತೀಕವಾಗಿದೆ.

ಪ್ರಮುಖ ಸುದ್ದಿ :-   ತಿರುಪತಿ ದೇವಾಲಯದ ಉಪ ಇಒ ಮನೆಯಲ್ಲಿ ಅಂದಾಜು 5 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ !

2021ರ ಅಪೂರ್ಣ ಕನಸಿನ ಸಾಕಾರ
ಈ ಯಶಸ್ಸಿಗೆ ಮತ್ತೊಂದು ಭಾವನಾತ್ಮಕ ಹಿನ್ನೆಲೆಯೂ ಇದೆ. 2021ರ ಆಗಸ್ಟ್‌ನಲ್ಲಿ ಇಸ್ರೋ GISAT-1 ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್10 ಮೂಲಕ ಉಡಾಯಿಸಲು ಯತ್ನಿಸಿತ್ತು. ದೇಶದ ಮೇಲೆ ನಿರಂತರ ನಿಗಾವಹಿಸುವ ಉದ್ದೇಶದಿಂದ ರೂಪಿಸಲಾಗಿದ್ದ ಆ ಮಿಷನ್‌ನಲ್ಲಿ ಸ್ವದೇಶಿ ಕ್ರಯೋಜೆನಿಕ್ ಹಂತ ಸರಿಯಾಗಿ ಕಾರ್ಯನಿರ್ವಹಿಸದೇ ಉಪಗ್ರಹ ಕಳೆದುಹೋಗಿತ್ತು. ಈಗ ಇಒಎಸ್-05 ಅನ್ನು ಆ ಅಪೂರ್ಣ ಕನಸಿನ ಮುಂದುವರಿದ ರೂಪವೆಂದು ಪರಿಗಣಿಸಲಾಗುತ್ತಿದೆ.

ಇಒಎಸ್-05 (EOS-05) ಉಪಗ್ರಹದ ವಿಶೇಷತೆ ಏನು?
ಇಒಎಸ್-05 (EOS-05) ಉಪಗ್ರಹವನ್ನು ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದ ಜಿಯೋಸಿಂಕ್ರೋನಸ್ ಕಕ್ಷೆಗೆ ಕಳುಹಿಸಲಾಗುತ್ತಿದೆ.
ಸಾಮಾನ್ಯವಾಗಿ ಭೂ ವೀಕ್ಷಣಾ ಉಪಗ್ರಹಗಳು ಭೂಮಿಗೆ ಸಮೀಪದ ಕಕ್ಷೆಗಳಲ್ಲಿ ಸುತ್ತುತ್ತವೆ. ಅವು ನಿರ್ದಿಷ್ಟ ಪ್ರದೇಶದ ಚಿತ್ರಗಳನ್ನು ನಿರ್ದಿಷ್ಟ ಅವಧಿಗಳಲ್ಲಿ ಮಾತ್ರ ಸೆರೆಹಿಡಿಯುತ್ತವೆ. ಅಂದರೆ ಅವು ‘ಫೋಟೋ’ಗಳನ್ನು ಒದಗಿಸುತ್ತವೆ. ಆದರೆ ಇಒಎಸ್-05 (EOS-05) ನಿರಂತರವಾಗಿ ಒಂದೇ ಪ್ರದೇಶವನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಸರಳವಾಗಿ ಹೇಳುವುದಾದರೆ, ಇದು ಕೇವಲ ಫೋಟೋಗಳನ್ನು ಅಲ್ಲ, ನಿರಂತರ ‘ವೀಡಿಯೊ’ ಮಾದರಿಯ ಮಾಹಿತಿಯನ್ನು ಒದಗಿಸಬಲ್ಲದು. ಈ ಉಪಗ್ರಹವು ಗೋಚರ ಬೆಳಕು (Visible), ಇನ್ಫ್ರಾರೆಡ್ (Infrared), ಮಲ್ಟಿ-ಸ್ಪೆಕ್ಟ್ರಲ್ ಹಾಗೂ ಹೈಪರ್-ಸ್ಪೆಕ್ಟ್ರಲ್ ತಂತ್ರಜ್ಞಾನಗಳ ಮೂಲಕ ಚಿತ್ರಗಳನ್ನು ಸೆರೆಹಿಡಿಯಲಿದೆ.
ಯಾವೆಲ್ಲ ಕ್ಷೇತ್ರಗಳಿಗೆ ಉಪಯೋಗ?
ಇಒಎಸ್-05 ಭಾರತದ ಉಪಖಂಡ, ಸುತ್ತಮುತ್ತಲಿನ ಸಮುದ್ರ ಪ್ರದೇಶಗಳು ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸಲಿದೆ.
ಇದರ ಮೂಲಕ
ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಚಂಡಮಾರುತಗಳ ಮೇಲ್ವಿಚಾರಣೆ
ಪ್ರವಾಹ ಪರಿಸ್ಥಿತಿಯ ನೈಜ ಸಮಯದ ಮಾಹಿತಿ
ಕಾಡ್ಗಿಚ್ಚುಗಳ ಪತ್ತೆ
ಕೃಷಿ ಕ್ಷೇತ್ರದ ಬದಲಾವಣೆಗಳ ಅಧ್ಯಯನ
ಪರಿಸರ ಮೇಲ್ವಿಚಾರಣೆ
ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅವಲೋಕನ
ಸಮುದ್ರ ಭದ್ರತೆ ಮತ್ತು ಗಡಿ ಪ್ರದೇಶಗಳ ನಿಗಾ ಮುಂತಾದ ಕಾರ್ಯಗಳಿಗೆ ಈ ಉಪಗ್ರಹ ನೆರವಾಗಲಿದೆ.
ಈ ಉಪಗ್ರಹವನ್ನು ನಿರ್ಮಿಸಿರುವ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಡಿ.ಕೆ. ಸಿಂಗ್, ಇಒಎಸ್-05 (EOS-05) ಅನ್ನು “ಭಾರತದ ಮತ್ತೊಂದು ಆಕಾಶ ಕಣ್ಣು” ಎಂದು ಬಣ್ಣಿಸಿದ್ದಾರೆ.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

ರಕ್ಷಣಾ ಕ್ಷೇತ್ರಕ್ಕೂ ಬಲ
ಉಡಾವಣೆಯ ಮಹತ್ವವನ್ನು ಮನಗಂಡು ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಹಿರಿಯ ಅಧಿಕಾರಿಗಳು ಶ್ರೀಹರಿಕೋಟಾದಲ್ಲಿ ಹಾಜರಿದ್ದರು. ನಿರಂತರ ವೀಕ್ಷಣಾ ಸಾಮರ್ಥ್ಯದಿಂದ ಸಮುದ್ರ ಚಟುವಟಿಕೆಗಳ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ ಹಾಗೂ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗಳಿಗೆ ಮಹತ್ವದ ನೆರವು ದೊರೆಯಲಿದೆ.
ಕಳೆದ ವರ್ಷ ಇದೇ ಜಿಎಸ್‌ಎಲ್‌ವಿ ಕುಟುಂಬದ ರಾಕೆಟ್ ಮೂಲಕ ನಾಸಾ-ಇಸ್ರೋ ಸಹಯೋಗದ ನಿಸಾರ್ (NISAR) ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು. ವಿಶ್ವದ ಅತ್ಯಂತ ದುಬಾರಿ ನಾಗರಿಕ ಭೂ ವೀಕ್ಷಣಾ ಉಪಗ್ರಹಗಳಲ್ಲಿ ಒಂದಾಗಿರುವ ನಿಸಾರ್ ಮಿಷನ್ ಜಿಎಸ್‌ಎಲ್‌ವಿ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.
ಈಗ 2,376 ಕಿಲೋಗ್ರಾಂ ತೂಕದ ಇಒಎಸ್-05 (EOS-05) ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಇಸ್ರೋ ಅಧಿಕಾರಿಗಳ ಪ್ರಕಾರ ಉಪಗ್ರಹವು ನಿರೀಕ್ಷೆಗಿಂತ ಉತ್ತಮ ಕಕ್ಷೆಯನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಅಂತಿಮ ಜಿಯೋಸ್ಟೇಷನರಿ ಕಕ್ಷೆಗೆ ಸ್ಥಳಾಂತರಿಸಲಾಗುತ್ತದೆ.

ಗಗನಯಾನ ಮಿಷನ್ ಕಡೆ ಇಸ್ರೋ ದೃಷ್ಟಿ
ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್, “ಕಠಿಣ ಪರಿಶ್ರಮಕ್ಕೆ ದೊರೆಯುವ ಪ್ರತಿಫಲ ಮತ್ತಷ್ಟು ಕೆಲಸ” ಎಂದು ಹೇಳುವ ಮೂಲಕ ಸಂಸ್ಥೆಯ ಕಾರ್ಯಸಂಸ್ಕೃತಿಯನ್ನು ವಿವರಿಸಿದರು. ಇಸ್ರೋದ ಮುಕ್ತ ಕಾರ್ಯಪದ್ಧತಿ ಈ ಸಾಧನೆಗೆ ಕಾರಣವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಈ ಯಶಸ್ಸಿನಿಂದ ಆತ್ಮವಿಶ್ವಾಸ ಹೆಚ್ಚಿದರೂ, ಇಸ್ರೋಗೆ ಮುಂದಿನ ದಿನಗಳಲ್ಲಿ ವಿಶ್ರಾಂತಿ ಇಲ್ಲ. ಪ್ರಸ್ತುತ ಹಣಕಾಸು ವರ್ಷದಲ್ಲಿ ಇನ್ನೂ ಆರು ಉಡಾವಣೆಗಳನ್ನು ಕೈಗೊಳ್ಳುವ ಗುರಿ ಹೊಂದಿದೆ.
ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಮಾನವ ಬಾಹ್ಯಾಕಾಶ ಮಿಷನ್‌ಗೆ ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಅಂತ್ಯದೊಳಗೆ ಮೊದಲ ಮಾನವರಹಿತ ಗಗನಯಾನ ಪರೀಕ್ಷಾ ಮಿಷನ್ ನಡೆಸುವ ಗುರಿ ಹೊಂದಲಾಗಿದೆ. ಭಾರತೀಯ ನೆಲೆಯಿಂದ ಭಾರತೀಯ ರಾಕೆಟ್ ಮೂಲಕ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕನಸಿನತ್ತ ಇದು ನಿರ್ಣಾಯಕ ಹೆಜ್ಜೆಯಾಗಲಿದೆ.
ಆತ್ಮವಿಶ್ವಾಸ ಮರಳಿಸಿದ ಯಶಸ್ಸು
ಜಿಎಸ್‌ಎಲ್‌ವಿ-ಎಫ್17 ಮಿಷನ್ ಕೇವಲ ಮತ್ತೊಂದು ಉಪಗ್ರಹ ಉಡಾವಣೆ ಅಲ್ಲ. ಇದು ಇತ್ತೀಚಿನ ವೈಫಲ್ಯಗಳ ಬಳಿಕ ಇಸ್ರೋಗೆ ಆತ್ಮವಿಶ್ವಾಸ ಮರಳಿಸಿದ ಯಶಸ್ಸು. ಎರಡು ದಶಕಗಳ ಸ್ವದೇಶಿ ತಂತ್ರಜ್ಞಾನ ಹೋರಾಟದ ಫಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸಾಧನೆ. 2021ರಲ್ಲಿ ವಿಫಲವಾದ ಕನಸಿಗೆ ಹೊಸ ಜೀವ ತುಂಬಿದ ಮಿಷನ್.
ಅದರ ಜೊತೆಗೆ ಭಾರತದ ಭೂಭಾಗ, ಸಮುದ್ರ ಪ್ರದೇಶಗಳು ಮತ್ತು ಸುತ್ತಮುತ್ತಲಿನ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸುವ ಸಾಮರ್ಥ್ಯವನ್ನು ದೇಶಕ್ಕೆ ಒದಗಿಸಿದ ಐತಿಹಾಸಿಕ ಹೆಜ್ಜೆಯಾಗಿದೆ. ಸೆಪ್ಟೆಂಬರ್ 4ರ ಬೆಳಗಿನ ಜಾವ ದೇಶ ಎಚ್ಚರಗೊಳ್ಳುವಷ್ಟರಲ್ಲಿ, ಇಸ್ರೋ ಈಗಾಗಲೇ ಈ ವರ್ಷದ ಅತ್ಯಂತ ಮಹತ್ವದ ಕಾರ್ಯಗಳಲ್ಲಿ ಒಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ಒಮ್ಮೆ ‘ನಾಟಿ ಬಾಯ್’ ಎಂದು ಕರೆಯಲ್ಪಟ್ಟ ಜಿಎಸ್‌ಎಲ್‌ವಿ, ಇದೀಗ ಭಾರತದ ಬಾಹ್ಯಾಕಾಶ ಶಕ್ತಿಯ ವಿಶ್ವಾಸಾರ್ಹ ಪ್ರತೀಕವಾಗಿ ಬೆಳೆದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement