ಶಿರಸಿ: ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ಈ ಹಳ್ಳಿಗಳ ಜನಜೀವನಕ್ಕೆ ಮಾರಕವಾಗಲಿದೆ. ಹೀಗಾಗಿ ಈ ವರದಿಯಿಂದ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ವಿರೋಧಿಸಿ ಹಮ್ಮಿಕೊಳ್ಳಲಾದ ‘ಒಂದು ಲಕ್ಷ ಆಕ್ಷೇಪಣಾ ಪತ್ರ’ ಅಭಿಯಾನದ ಅಂಗವಾಗಿ ಶಿರಸಿಯ ನಗರಸಭೆ ಬಯಲು ರಂಗಮಂದಿರದಲ್ಲಿ ಶನಿವಾರ ನಡೆದ ಬೃಹತ್ ಸಭೆಯಲ್ಲಿ ಸಾವಿರಾರು ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸೂಕ್ಷ್ಮ ಪ್ರದೇಶಗಳ ಸಮಗ್ರ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸಿ, ತಾಂತ್ರಿಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ಈ ಅಧಿಸೂಚನೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ವರದಿಯಿಂದಾಗಿ ಅರಣ್ಯವಾಸಿಗಳಲ್ಲಿ ಅಭದ್ರತೆ ಕಾಡುತ್ತಿದೆ. ರಾಜ್ಯ ಸರ್ಕಾರವು ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರಗಳೊಂದಿಗೆ, ಸ್ಥಳೀಯ ಜನಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ದಾಖಲಿಸಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಕಸ್ತೂರಿರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಗ್ರಾಮಗಳ ಪಂಚಾಯತಗಳ ವ್ಯಾಪ್ತಿಯ ಹಳ್ಳಿಗಳ ಗ್ರಾಮಸಭೆಗಳಲ್ಲಿ ವರದಿ ವಿರೋಧಿಸಿ ನಿರ್ಣಯ ಅಂಗೀಕರಿಸಬೇಕುಎಂದರು. ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಜಿಲ್ಲೆಯ ಗ್ರಾಪಂ ಮಟ್ಟದಿಂದ ದೆಹಲಿಯವರೆಗೂ ಬೃಹತ್ ಹೋರಾಟ ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಡಳಿತದ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅಮಿತ್ ಚೌಹಾಣ ಹಾಗೂ ನಗರಸಭೆ ಆಯುಕ್ತ ಪ್ರಕಾಶ ಅವರು ಸಾರ್ವಜನಿಕರಿಂದ ಆಕ್ಷೇಪಣಾ ಪತ್ರಗಳನ್ನು ಸ್ವೀಕರಿಸಿದರು.
ಶೋಭಾ ನಾಯ್ಕ, ಎಸ್.ಎನ್. ಹೆಗಡೆ, ರಾಘು ಗುಡ್ನಾಪುರ, ಶ್ರೀಧರ ಹೆಗಡೆ, ನಾಗಪತಿ ಗೌಡ ಹುಕ್ಕಳ್ಳಿ ಮೊದಲಾದವರು ಮಾತನಾಡಿದರು. ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಮುಂಡಗೋಡು ಅಧ್ಯಕ್ಷ ಶಿವಾನಂದ ಜೋಗಿ, ಕೆ.ಟಿ. ನಾಯ್ಕ, ರಾಜು ನರೇಬೈಲ್, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಆರ್.ಟಿ. ನಾಯ್ಕ ವಾಜಗೋಡ, ಸ್ವಾತಿ ಜೈನ್, ಮಲ್ಲೇಶಿ, ಸತೀಶ ನಾಯ್ಕ ತ್ಯಾಗಲಿ, ಲಕ್ಷ್ಮಣ ನಾಯ್ಕ, ಕಲ್ಪನಾ ನರೇಬೈಲ್, ಯಶೋಧಾ ನೌಟೂರು ಮೊದಲಾದ ಪ್ರಮುಖರಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ