ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದಿದೆ, ಅಡುಗೆ ಮಾಡ್ಲಿಕ್ಕೆ ಆಗಲ್ಲ ಎಂದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನೃತ್ಯ ತರಗತಿಗೆ (ಡ್ಯಾನ್ಸ್ ಕ್ಲಾಸ್) ಹೋಗುವುದನ್ನು ಕುರಿತು ಪತಿ-ಪತ್ನಿಯ ನಡುವೆ ಉಂಟಾದ ವಾಗ್ವಾದ ಭೀಕರ ತಿರುವು ಪಡೆದು, 38 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮೃತ ಮಹಿಳೆಯನ್ನು ಯಾಮಿನಿ ಕೃಷ್ಣಲಾಲ ಯಾದವ್ (38) ಹಾಗೂ ಆರೋಪಿಯನ್ನು ಕೃಷ್ಣಲಾಲ ಯಾದವ್ (41) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
ಪೊಲೀಸರ ಪ್ರಕಾರ, ಕೃಷ್ಣಲಾಲ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ತನ್ನ ಪತ್ನಿ ಯಾಮಿನಿಗೆ ತನಗಾಗಿ ಹಾಗೂ ಮಕ್ಕಳಿಗಾಗಿ ಊಟ ಸಿದ್ಧಪಡಿಸುವಂತೆ ಹೇಳಿದ್ದ. ಆದರೆ ಯಾಮಿನಿ ತಮ್ಮ ವಸತಿ ಸಮುಚ್ಚಯದಲ್ಲಿ ನಡೆಯುತ್ತಿದ್ದ ನೃತ್ಯ ತರಗತಿಗೆ ಹೋಗಬೇಕುಎಂದು ಅಡುಗೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾಳೆ.
ಇದರಿಂದ ದಂಪತಿಯ ನಡುವೆ ಮಾತಿನ ಚಕಮಕಿ ಆರಂಭಗೊಂಡು, ಬಳಿಕ ಅದು ತೀವ್ರ ವಾಗ್ವಾದಕ್ಕೆ ತಿರುಗಿದೆ. ಘಟನೆ ನಡೆದ ವೇಳೆ ಕೃಷ್ಣಲಾಲ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ವಾಗ್ವಾದದ ನಡುವೆ ಆತ ತನ್ನ ಇಬ್ಬರು ಮಕ್ಕಳ ಎದುರೇ ಯಾಮಿನಿಯ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಯ ನಂತರ ಯಾಮಿನಿಗೆ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು, ನೋವು ನಿವಾರಕ ಮಾತ್ರೆ ತರಲು ಪತಿಗೆ ಹೇಳಿದ್ದಳು. ಇದಕ್ಕೆ ಕೃಷ್ಣಲಾಲ ಔಷಧ ಅಂಗಡಿಗೆ ತೆರಳಿದರೂ, ಅಂಗಡಿ ಮುಚ್ಚಿದ್ದ ಕಾರಣ ಯಾವುದೇ ಔಷಧಿಯನ್ನು ತರದೇ ಮನೆಗೆ ಹಿಂದಿರುಗಿದ್ದಾನೆ.
ಇದಾದ ಬಳಿಕ ಯಾಮಿನಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಶರೀರದ ಒಳಗಿನ ಗಾಯಗಳಿಂದಾಗಿ ಆಕೆಯ ಹೊಟ್ಟೆ ಊದಿಕೊಳ್ಳಲು ಆರಂಭವಾಗಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯಾಮಿನಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಆರಂಭಿಕ ಹಂತದಲ್ಲಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (ಪೋಸ್ಟ್‌ಮಾರ್ಟಂ) ಕಳುಹಿಸಿದ್ದರು.
ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತಂಕಕಾರಿ ಅಂಶಗಳು ಬಹಿರಂಗವಾಗಿವೆ. ವರದಿಯಲ್ಲಿ ಯಾಮಿನಿಯ ಕುತ್ತಿಗೆಯ ಮೂಳೆ ಮುರಿದಿರುವುದು, ಕರುಳಿಗೆ ತೀವ್ರ ಹಾನಿಯಾಗಿರುವುದು ಸೇರಿದಂತೆ ಗಂಭೀರ ಒಳಾಂಗಣ ಗಾಯಗಳು ಪತ್ತೆಯಾಗಿವೆ. ಅಲ್ಲದೆ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಲಕ್ಷಣಗಳೂ ಕಂಡುಬಂದಿವೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಡ್ರಗ್ ಪರೀಕ್ಷೆಯಲ್ಲಿ ಫೇಲ್ : ಫುಕೆಟ್-ದೆಹಲಿ ವಿಮಾನದ ಮುಖ್ಯ ಪೈಲಟ್‌ನನ್ನು ವಜಾಗೊಳಿಸಿದ ಏರ್ ಇಂಡಿಯಾ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಾಮಿನಿಯ ಸಹೋದರ, “ನಾವು ಮುಂಬೈನಲ್ಲಿ ಇದ್ದಾಗ ನನ್ನ ಸಹೋದರಿ ಮೃತಪಟ್ಟಿರುವ ಮಾಹಿತಿ ದೂರವಾಣಿ ಕರೆ ಮೂಲಕ ತಿಳಿಯಿತು. ಮೊದಲಿಗೆ ಇದು ದುರಂತಕರ ಸಾವು ಎಂದುಕೊಂಡಿದ್ದೆವು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಸುಕಿದ ಗುರುತುಗಳು ಹಾಗೂ ಹೊಟ್ಟೆಗೆ ಗಂಭೀರ ಗಾಯಗಳಿರುವುದು ಬೆಳಕಿಗೆ ಬಂತು. ವರದಿ ಆಧರಿಸಿ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ, ನನ್ನ ಬಾವ ಕೃಷ್ಣಲಾಲ ಯಾದವ್ ಅವರನ್ನು ಬಂಧಿಸಿದರು. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇದಕ್ಕೂ ಮುನ್ನವೂ ಅವರಿಬ್ಬರ ನಡುವೆ ಜಗಳಗಳು ನಡೆಯುತ್ತಿದ್ದವು. ಅನೇಕ ದಂಪತಿಯ ನಡುವೆ ನಡೆಯುವಂತೆ ಸಣ್ಣ-ಪುಟ್ಟ ಕಲಹಗಳು ಆಗುತ್ತವೆ ಎಂದು ನಾವು ಭಾವಿಸಿದ್ದೆವು. ನನ್ನ ಸಹೋದರಿ ಕೆಲವೊಮ್ಮೆ ಜಗಳಗಳ ಬಗ್ಗೆ ಹೇಳುತ್ತಿದ್ದಳು. ಆಗ ನಾನು ಬೇಕಾದರೆ ಈ ಸಂಬಂಧ ಮಾತನಾಡುತ್ತೇನೆ ಎಂದು ಹೇಳುತ್ತಿದ್ದೆ. ಆದರೆ ‘ಇದು ಕುಟುಂಬದ ವಿಷಯ, ನೀವು ಏನಾದರೂ ಹೇಳಿದರೆ ನಂತರ ನಾನು ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಹೇಳಿ ನಮ್ಮನ್ನು ತಡೆಯುತ್ತಿದ್ದಳು. ಆಕೆಯ ಮಾತಿಗೆ ಗೌರವ ನೀಡಿ ನಾವು ಮಧ್ಯಪ್ರವೇಶ ಮಾಡಲಿಲ್ಲ. ಇವು ಸಾಮಾನ್ಯ ದಾಂಪತ್ಯ ಕಲಹಗಳೆಂದುಕೊಂಡಿದ್ದೆವು. ಆದರೆ ಈಗ ಈ ದುರಂತ ಸಂಭವಿಸಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪೊಲೀಸರು ಕೃಷ್ಣಲಾಲನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಬಳಿಕ ಬಂಧಿಸಿದ್ದಾರೆ. ಸದ್ಯ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕ ; ಆತನಿಗೆ ಕಚ್ಚಿ-ಓಡಿಸಿ ಮಹಿಳೆ ರಕ್ಷಿಸಿದ ಬೀದಿನಾಯಿಗಳು!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement