ಹಾರ್ಮುಜ್‌ನಲ್ಲಿ ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್‌; ಅದು ಹಾಳಾಗಿತ್ತು ಎಂದ ಅಮೆರಿಕ

ತೆಹ್ರಾನ್: ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದ ಬಳಿ ಅಮೆರಿಕ ಸೇನೆಯ ಅತ್ಯಾಧುನಿಕ ಹಾಗೂ ‘ಸ್ಮಾರ್ಟ್‌’ ಮಾನವರಹಿತ ಜಲಾಂತರ್ಗಾಮಿ ವಾಹನವನ್ನು ವಶಕ್ಕೆ ಪಡೆದಿರುವುದಾಗಿ ಇರಾನ್‌ನ ನೌಕಾಪಡೆ ಹೇಳಿಕೊಂಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಅಧಿಕೃತ ಸುದ್ದಿವಾಹಿನಿ ಸೆಪಾಹ್ ನ್ಯೂಸ್ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ನಡೆಸಿ ಈ ಮಾನವರಹಿತ ನೀರೊಳಗಿನ ಮಾನವರಹಿತ ಜಲಾಂತರ್ಗಾಮಿಯನ್ನು ವಶಕ್ಕೆ ಪಡೆಯಲಾಗಿದೆ. ಇರಾನ್ ಗುರುತಿಸಿರುವ ಈ ವಾಹನದ ಹೆಸರು Dive-LD.
ವಿಶ್ವದ ಅತ್ಯಾಧುನಿಕ ನೀರಿನಾಳದ ವಾಹನ ತಂತ್ರಜ್ಞಾನವನ್ನು ಹೊಂದಿರುವ Dive-LD ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳಿರುವ ಇರಾನ್ ನೌಕಾಪಡೆ, ಅದರ ವಿಡಿಯೊವನ್ನೂ ಬಿಡುಗಡೆ ಮಾಡಿದೆ. ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ MQ-9 Reaper ಡ್ರೋನ್‌ ಅನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತೊಂದು ಹೇಳಿಕೆಯಲ್ಲಿ ತಿಳಿಸಿದೆ ಎಂದು ಸೆಪಾಹ್ ನ್ಯೂಸ್ ವರದಿ ಮಾಡಿದೆ.

ಅಮೆರಿಕದ ಪ್ರತಿಕ್ರಿಯೆ ಏನು?
ಇರಾನ್‌ನ ಈ ಹೇಳಿಕೆ ಬೆನ್ನಲ್ಲೇ ಅಮೆರಿಕ ಸೇನೆ ಕೂಡ ಪ್ರತಿಕ್ರಿಯೆ ನೀಡಿದೆ. ಪ್ರಾದೇಶಿಕ ಜಲಪ್ರದೇಶದ ಸಮೀಕ್ಷೆ ನಡೆಸುತ್ತಿದ್ದ ತನ್ನ ಮಾನವರಹಿತ ನೀರೊಳಗಿನ ಡ್ರೋನ್‌ವೊಂದು ಒಂದು ದಿನಕ್ಕೂ ಮುನ್ನ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿತ್ತು ಎಂದು ಅಮೆರಿಕ ಹೇಳಿದೆ. ಆದರೆ ಇರಾನ್ ವಶಪಡಿಸಿಕೊಂಡಿರುವ Dive-LD ಇದೇ ವಾಹನವೇ ಎಂಬುದನ್ನು ಅಮೆರಿಕ ಸೇನೆ ಸ್ಪಷ್ಟಪಡಿಸಿಲ್ಲ.
“ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಅದು ಪ್ರಾದೇಶಿಕ ಜಲಪ್ರದೇಶವನ್ನು ಸಮೀಕ್ಷೆ ನಡೆಸುತ್ತಿತ್ತು. ದೋಷಕ್ಕೊಳಗಾದ ಡ್ರೋನ್ ಹಳೆಯ ಮಾದರಿಯಾಗಿದ್ದು, ಯಾವುದೇ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿರಲಿಲ್ಲ. ಅದರಲ್ಲೂ ಯಾವುದೇ ವರ್ಗೀಕೃತ ಸೋನಾರ್ ಅಥವಾ ರೇಡಾರ್ ಉಪಕರಣ ಇರಲಿಲ್ಲ” ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ.
ಅಮೆರಿಕ ಸೇನೆ ಇತ್ತೀಚಿನ ವರ್ಷಗಳಲ್ಲಿ ಮಾನವರಹಿತ ನೌಕಾ ವ್ಯವಸ್ಥೆಗಳ ಅಭಿವೃದ್ಧಿಗೆ ಭಾರಿ ಹೂಡಿಕೆ ಮಾಡುತ್ತಿದೆ. ವಿಶಾಲ ಸಮುದ್ರ ಪ್ರದೇಶಗಳ ಮೇಲ್ವಿಚಾರಣೆ, ಗುಪ್ತಚರ ಮಾಹಿತಿ ಸಂಗ್ರಹಣೆ ಹಾಗೂ ಎದುರಾಳಿ ದೇಶಗಳ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ಚಲನವಲನ ಪತ್ತೆಹಚ್ಚುವ ಕಾರ್ಯವನ್ನು ಕಡಿಮೆ ವೆಚ್ಚದಲ್ಲಿ ನಡೆಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ಸೈನಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸದೆ ಸಮುದ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿದೆ.

6,000 ಮೀಟರ್ ಆಳಕ್ಕೆ ಇಳಿಯಬಲ್ಲ Dive-LD
ಆಂಡುರಿಲ್‌ (Anduril) ಕಂಪನಿಯ ವೆಬ್‌ಸೈಟ್‌ ಪ್ರಕಾರ, ಡೈವ್-ಎಲ್‌ಡಿ (Dive-LD) ಅನ್ನು ಒಂದು ಬಾರಿ ನೆಲೆಯಿಂದ ಹೊರಟ ಬಳಿಕ 10 ದಿನಗಳವರೆಗೆ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಗರಿಷ್ಠ 6,000 ಮೀಟರ್‌ (19,700 ಅಡಿ) ಆಳದವರೆಗೆ ಮುಳುಗಬಲ್ಲದು. ಅಮೆರಿಕದ ಸೇನಾ ಸುದ್ದಿವಾಹಿನಿ ಡಿಫೆನ್ಸ್‌ ಸ್ಕೂಪ್‌ (DefenseScoop) 2024ರಲ್ಲಿ ಪ್ರಕಟಿಸಿದ್ದ ವರದಿ ಪ್ರಕಾರ, ಒಂದು Dive-LD ಘಟಕದ ಬೆಲೆ ಸುಮಾರು 25 ಲಕ್ಷ ಡಾಲರ್‌.
ಐದು ಇರಾನ್ ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದ ಅಮೆರಿಕ
ಇದೇ ವೇಳೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಅಮೆರಿಕದ ಯುದ್ಧನೌಕೆಯ ಮೇಲೆ ದಾಳಿ ನಡೆಸಿದ ಬಳಿಕ ತನ್ನ ಪಡೆಗಳು ಐದು ಇರಾನ್‌ನ ಕಚ್ಚಾ ತೈಲ ಸಾಗಣೆ ಟ್ಯಾಂಕರ್‌ಗಳನ್ನು ನಾಶಪಡಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೊಂಡಿದೆ.
ಕಳೆದ ಎರಡು ದಿನಗಳಲ್ಲಿ ಇರಾನ್ ಅಮೆರಿಕದ ಯುದ್ಧನೌಕೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಟಾರ್ಗೆಟ್‌ ಮಾಡಲು ಎರಡು ಬಾರಿ ಪ್ರಯತ್ನಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಈ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕದ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.

ಇರಾನ್‌ನ 27 ವಿಮಾನಯಾನ ಸಂಸ್ಥೆಗಳ ವಿರುದ್ಧ ಅಮೆರಿಕ ನಿರ್ಬಂಧ
ಇದರ ನಡುವೆಯೇ, ಇರಾನ್ ಮೇಲೆ ಒತ್ತಡ ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಅಮೆರಿಕದ ಹಣಕಾಸು ಇಲಾಖೆ ಇರಾನ್‌ನ 27 ವಿಮಾನಯಾನ ಸಂಸ್ಥೆಗಳನ್ನು ‘ವಿಶೇಷವಾಗಿ ಗುರುತಿಸಲ್ಪಟ್ಟ (Specially Designated)) ಪಟ್ಟಿಗೆ ಸೇರಿಸಿದೆ. ಇದರಿಂದ ಇರಾನ್‌ನ ಉಳಿದಿರುವ ಎಲ್ಲ ಪ್ರಮುಖ ವಿಮಾನಯಾನ ಸಂಸ್ಥೆಗಳ ಮೇಲೂ ನಿರ್ಬಂಧದ ಬಿಗಿ ಕ್ರಮ ಕೈಗೊಂಡಂತಾಗಿದೆ.
ಇರಾನ್‌ನ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಬಹುಕಾಲದಿಂದ ಇರಾನ್ ಆಡಳಿತದ ಅಸ್ಥಿರತೆಗೊಳಿಸುವ ಚಟುವಟಿಕೆಗಳನ್ನು ಬೆಂಬಲಿಸುತ್ತ ಬಂದಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಆರೋಪಿಸಿದೆ. ಐಆರ್‌ಜಿಸಿ (IRGC), ಖಾಸಗಿ ವಿಮಾನಯಾನ ಸಂಸ್ಥೆಗಳಂತೆ ಕಾಣುವ ಕಂಪನಿಗಳನ್ನು ಶಸ್ತ್ರಾಸ್ತ್ರಗಳ ಖರೀದಿ ಮತ್ತು ಸಾಗಣೆ ಹಾಗೂ ಸಿಬ್ಬಂದಿಯ ಸ್ಥಳಾಂತರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅದು ಹೇಳಿದೆ.
ಅಮೆರಿಕ 2011ರ ಅಕ್ಟೋಬರ್‌ನಲ್ಲೇ ಇರಾನ್‌ನ ‘ಮಹಾನ್ ಏರ್’ (Mahan Air) ಮೇಲೆ ಮೊದಲ ಬಾರಿಗೆ ನಿರ್ಬಂಧ ವಿಧಿಸಿತ್ತು. ಬಳಿಕ ಜುಲೈ 30ರಂದು ‘ಮಹಾನ್ ಏರ್’ನ ಸಾಮಾನ್ಯ ಮಾರಾಟ ಪ್ರತಿನಿಧಿಗಳೆಂದು ಪರಿಗಣಿಸಲಾದ ಹಲವು ಕಂಪನಿಗಳನ್ನೂ ಗುರಿಯಾಗಿಸಿತ್ತು.

‘ಆಕ್ರಮಣಕಾರರು ಪಶ್ಚಾತ್ತಾಪ ಪಡುವವರೆಗೆ ಪ್ರತಿರೋಧ ಮುಂದುವರಿಯಲಿದೆ’: ಇರಾನ್
ಮತ್ತೊಂದೆಡೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ದೇಶವು ತನ್ನ ಪ್ರತಿರೋಧವನ್ನು ಮತ್ತಷ್ಟು ಬಲದಿಂದ ಮುಂದುವರಿಸಲಿದೆ ಎಂದು ಹೇಳಿದ್ದಾರೆ. ‘ಆಕ್ರಮಣಕಾರರು ಸಂಪೂರ್ಣ ಪಶ್ಚಾತ್ತಾಪ ಪಡುವವರೆಗೆ’ ಇರಾನ್ ಹೋರಾಟ ಮುಂದುವರಿಸಲಿದೆ ಎಂದು ಅವರು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಯಾವಾಗಲೂ ಯುದ್ಧವನ್ನು ವಿರೋಧಿಸುತ್ತಾ ಬಂದಿದೆ. ಜನರ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಪಶ್ಚಿಮ ಏಷ್ಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಯುದ್ಧೋನ್ಮಾದದಿಂದ ದೂರ ಉಳಿಯುವುದರಲ್ಲಿದೆ ಎಂಬುದು ಇರಾನ್‌ನ ನಿಲುವು ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.
ಆದರೆ, “ಆಕ್ರಮಣದ ವಿರುದ್ಧ ಇದುವರೆಗೆ ಧೈರ್ಯದಿಂದ ಎದ್ದು ನಿಂತಿರುವಂತೆ, ಆಕ್ರಮಣಕಾರರು ಸಂಪೂರ್ಣ ಪಶ್ಚಾತ್ತಾಪ ಪಡುವವರೆಗೆ ಇರಾನ್ ತನ್ನ ಪ್ರತಿರೋಧವನ್ನು ಬಲದಿಂದ ಮುಂದುವರಿಸಲಿದೆ. ಮಹಾನ್ ಇರಾನ್ ಜನರ ಹಕ್ಕುಗಳ ರಕ್ಷಕನಾಗಿ ದೇಶ ಉಳಿಯಲಿದೆ” ಎಂದು ಅವರು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement