ಮಂಗೋಲಿಯಾದ ಅಧ್ಯಕ್ಷ ಉಖ್ನಾಗೀನ್ ಖುರೆಲ್ಸುಖ್ ಅವರು ಸೇನಾ ಘಟಕಕ್ಕೆ ಭೇಟಿ ನೀಡಿದ ವೇಳೆ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್ಪ್ರೆಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ 58 ವರ್ಷದ ಮಾಜಿ ಸೇನಾ ಅಧಿಕಾರಿ ಖುರೆಲ್ಸುಖ್ ತಮ್ಮ ಕೋಟ್ ಅನ್ನು ತೆಗೆದು ಬೆಂಚ್ ಮೇಲೆ ಮಲಗಿ, 100 ಕೆ.ಜಿ. ತೂಕವನ್ನು ಯಾವುದೇ ಅಡಚಣೆಯಿಲ್ಲದೆ ಸತತವಾಗಿ ಎತ್ತುತ್ತಿರುವುದು ಕಾಣಿಸುತ್ತದೆ. ಈ ದೃಶ್ಯವನ್ನು ಅಲ್ಲಿದ್ದ ಸೇನಾ ಅಧಿಕಾರಿಗಳು ಹಾಗೂ ಯೋಧರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
2021ರಿಂದ ಮಂಗೋಲಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಖುರೆಲ್ಸುಖ್, ಕಸರತ್ತು ಪೂರ್ಣಗೊಳಿಸಿದ ಬಳಿಕ ಸುತ್ತಮುತ್ತಲಿದ್ದವರ ಜೊತೆ ಹಸ್ತಲಾಘವ ಮಾಡಿ ಮತ್ತೆ ತಮ್ಮ ಕೋಟ್ ಧರಿಸಿದರು.
ಅವರ ಈ ಪ್ರದರ್ಶನವು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದು, ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಎಕ್ಸ್ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಖುರೆಲ್ಸುಖ್ ಅವರಿಗೆ ದೇಹದಾರ್ಢ್ಯ ಮತ್ತು ಸಮರ ಕಲೆಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರು ಮಂಗೋಲಿಯನ್ ಪೀಪಲ್ಸ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಇದರ ಜೊತೆಗೆ ಅವರು ‘ಪಾಲ್ಸ್’ ಎಂಬ ರಾಕ್ ಬ್ಯಾಂಡ್ನಲ್ಲಿ ಗಿಟಾರ್ ವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಮಂಗೋಲಿಯಾದಲ್ಲಿ ಹರ್ಲೆ-ಡೇವಿಡ್ಸನ್ ಅಭಿಮಾನಿಗಳ ಕ್ಲಬ್ ಸ್ಥಾಪಕರಾಗಿದ್ದಾರೆ.
ಸೇನಾ ಘಟಕದಲ್ಲಿ ಅಧ್ಯಕ್ಷರು ತೋರಿದ ಈ ಫಿಟ್ನೆಸ್ ಪ್ರದರ್ಶನ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅವರ ದೈಹಿಕ ಸಾಮರ್ಥ್ಯವನ್ನು ಹಲವರು ಪ್ರಶಂಸಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ