ಚಾಮರಾಜನಗರ: ಹುಲಿ ದಾಳಿಯಲ್ಲಿ 65 ವರ್ಷದ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಸೋಮವಾರ (ಸೆಪ್ಟೆಂಬರ್ 14) ನಡೆದಿದೆ ಎಂದು ವರದಿಯಾಗಿದೆ.
ಮೃತ ರೈತನನ್ನು ಬಸವಣ್ಣ (65)ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಬಸವಣ್ಣ ಅವರು ತಮ್ಮ ದನ ಕರುಗಳಿಗೆ ಮೇವು ತರಲು ಗ್ರಾಮದ ಸಮೀಪದ ಕೃಷಿ ಜಮೀನಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದು, ದಾಳಿಯ ತೀವ್ರತೆಗೆ ಬಸವಣ್ಣ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಜಮೀನಿಗೆ ಹುಡುಕಲು ಹೋದಾಗ ಹುಲಿ ದಾಳಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬಸವಣ್ಣನ ದೇಹದ ಕೆಲ ಬಾಗವನ್ನು ಹುಲಿ ತಿಂದಿದೆ ಎನ್ನಲಾಗಿದೆ. ಜನರು ಹೋದ ನಂತರ ಹುಲಿ ಹೆದರಿ ಪರಾರಿಯಾಗಿದ್ದು, ಸಮೀಪದ ಜಮೀನಿನಲ್ಲೇ ಅಡಗಿಕೊಂಡಿದೆ ಶಂಕಿಸಲಾಗಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ, ಬಡಗಲಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಭಾರೀ ಭಯ ಮತ್ತು ಆತಂಕ ಮನೆಮಾಡಿದೆ. ಹುಲಿ ಇನ್ನೂ ಪ್ರದೇಶದಲ್ಲೇ ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ.
ಘಟನೆಯ ಬಳಿಕ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹುಲಿ ಸಂಚರಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಲಾಗಿತ್ತು. ಆದರೂ, ಕೆಲ ಪಂಜರಗಳನ್ನು ಅಳವಡಿಸುವುದನ್ನು ಹೊರತುಪಡಿಸಿ ಜನರ ಸುರಕ್ಷತೆಗೆ ಅಗತ್ಯವಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹುಲಿ ಸಂಚಾರವನ್ನು ನಿಯಂತ್ರಿಸಿ ಗ್ರಾಮಸ್ಥರ ಜೀವ ರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು, ಹುಲಿಯನ್ನು ಸೆರೆಹಿಡಿಯಬೇಕು ಹಾಗೂ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದು, ಹುಲಿಯ ಚಲನವಲನ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಗ್ರಾಮಸ್ಥರಲ್ಲಿ ಮುಂದುವರಿದಿರುವ ಭಯದ ವಾತಾವರಣದಿಂದ ಕೃಷಿ ಚಟುವಟಿಕೆಗಳಿಗೂ ಅಡ್ಡಿಯಾಗಿದೆ.
ಗಣೇಶ ಚತುರ್ಥಿ ದಿನವಾದ ಸೋಮವಾರ ಬೆಳಿಗ್ಗೆ ಆನೆ ದಾಳಿಯಿಂದ ರೈತ ಸಾವಿಗೀಡಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ. ಇವರು ಸೋಮವಾರ ಹಸುಗಳನ್ನು ಜಮೀನಿನಲ್ಲಿ ಕಟ್ಟುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ