ಪಾಕಿಸ್ತಾನದ ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ : 21 ಸಾವು, 78 ಮಂದಿಗೆ ಗಾಯ; ಮೃತರಲ್ಲಿ 15 ಪೊಲೀಸ್ ಸಿಬ್ಬಂದಿ

ಇಸ್ಲಾಮಾಬಾದ್: ಪಾಕಿಸ್ತಾನದ ವಾಯವ್ಯ ಭಾಗದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿ ಶುಕ್ರವಾರ ಮಸೀದಿಯೊಂದರಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಘಟನೆಯಲ್ಲಿ ಮೃತಪಟ್ಟವರಲ್ಲಿ 15 ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿರುವ ಮಸೀದಿಯ ಸಮೀಪದಲ್ಲೇ ಪೊಲೀಸ್ ಕಚೇರಿಗಳು ಇರುವ ಕಟ್ಟಡವಿದ್ದು, ದಾಳಿಕೋರನು ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಮಸೀದಿಗೆ ಡಿಕ್ಕಿ ಹೊಡೆಸಿ ಸ್ಫೋಟಿಸಿದ್ದಾನೆ ಎಂದು ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಜುಲ್ಫಿಕಾರ್ ಹಮೀದ್ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಪೊಲೀಸ್ ಕಚೇರಿಗಳ ಹೊರಗೋಡೆ ಕುಸಿದಿದ್ದು, ಮಸೀದಿ ತೀವ್ರ ಹಾನಿಗೊಳಗಾಗಿದೆ. ಇದೇ ವೇಳೆ ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರು ಪೊಲೀಸ್ ಆವರಣದೊಳಗೆ ನುಗ್ಗಲು ಯತ್ನಿಸಿ ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಒಬ್ಬ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಿಬಿಸಿ ವರದಿ ಮಾಡಿದೆ.

ಸ್ಫೋಟದಲ್ಲಿ ಗಾಯಗೊಂಡವರ ಬಹುತೇಕರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ಹಿರಿಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಘಟನೆಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ತೀವ್ರವಾಗಿ ಖಂಡಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪಾಕಿಸ್ತಾನದ ರಾಷ್ಟ್ರಪತಿ ಪ್ರಾರ್ಥಿಸಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಂಗು ಜಿಲ್ಲೆಯಲ್ಲಿ ಭದ್ರತಾ ಪಡೆಗಳ ವಾಹನಗಳ ಬೆಂಗಾವಲು ಪಡೆಯ ಮೇಲೆ ರಸ್ತೆಬದಿ ಬಾಂಬ್ ದಾಳಿ ನಡೆದಿದ್ದು, ಆ ಘಟನೆಯಲ್ಲಿ ಆರು ಸೈನಿಕರು ಮೃತಪಟ್ಟಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂಬುದು ಗಮನಾರ್ಹ

. ಇದೇ ವೇಳೆ ಗುರುವಾರ ವಿವಿಧ ಪ್ರದೇಶಗಳಲ್ಲಿ ಸರ್ಕಾರದ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ಸದಸ್ಯರೆಂದು ಶಂಕಿಸಲಾದ 10 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸೇನೆ ಮತ್ತು ಪೊಲೀಸರು ತಿಳಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ತಾಲಿಬಾನ್ ಸಂಘಟನೆಯು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ತೀವ್ರಗೊಳಿಸಿದೆ. 2023ರಲ್ಲಿ ಖೈಬರ್ ಪಖ್ತುನ್ಖ್ವಾ ರಾಜಧಾನಿ ಪೇಶಾವರದಲ್ಲಿರುವ ಮಸೀದಿಯೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 101 ಮಂದಿ ಮೃತಪಟ್ಟಿದ್ದರು.
ಪಾಕಿಸ್ತಾನಿ ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದ ತಾಲಿಬಾನ್‌ನಿಂದ ಪ್ರತ್ಯೇಕವಾಗಿದ್ದರೂ ಅದರ ಮಿತ್ರ ಸಂಘಟನೆಯಾಗಿದೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ಬಳಿಕ, ಗಡಿ ದಾಟಿ ನಡೆಯುವ ಉಗ್ರ ದಾಳಿಗಳಿಗೆ ಆಶ್ರಯ ನೀಡಲಾಗುತ್ತಿದೆ ಮತ್ತು ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಸಂಘಟನೆಗೆ ಅಫ್ಘಾನಿಸ್ತಾನ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನ ಹಲವು ಬಾರಿ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಅಫ್ಘಾನಿಸ್ತಾನದ ಸರ್ಕಾರ ನಿರಾಕರಿಸಿದೆ.

ಪ್ರಮುಖ ಸುದ್ದಿ :-   ಲಂಡನ್-ಬಾಂಗ್ಲಾದೇಶ ವಿಮಾನ ಹಾರಾಟದಲ್ಲಿದ್ದಾಗಲೇ ಪ್ರಯಾಣಿಕರಿಬ್ಬರ ಮಧ್ಯೆ ಮಾರಾಮಾರಿ : ವಿಡಿಯೊ ವೈರಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement