ಲಕ್ನೋ : ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ ಯಾದವ್ ಪಾಲ್ಗೊಂಡಿದ್ದ ಸಭೆಯಲ್ಲಿ ಅವರ ಸುಮ್ಮುಖದಲ್ಲೇ ಇಬ್ಬರು ಹಿರಿಯ ನಾಯಕರು ಪರಸ್ಪರ ವಾಗ್ವಾದಕ್ಕಿಳಿದು, ಜಗಳವಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶನಿವಾರ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಇಬ್ಬರು ನಾಯಕರನ್ನೂ ಸಭೆಯಿಂದ ಹೊರಗೆ ಹೋಗುವಂತೆ ಅಖಿಲೇಶ ಯಾದವ್ ಸೂಚಿಸಿದ್ದಾರೆ. ಘಟನೆಯ ಬೆನ್ನಲ್ಲೇ ಎಟಾ ಮತ್ತು ಕಾಸ್‌ಗಂಜ್ ಜಿಲ್ಲೆಗಳ ಪಕ್ಷದ ಸಂಘಟನಾ ಘಟಕಗಳನ್ನು ವಿಸರ್ಜಿಸಲಾಗಿದೆ.
2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಘಟನಾ ಸಿದ್ಧತೆ ಹಾಗೂ ಚುನಾವಣಾ ಕಾರ್ಯತಂತ್ರವನ್ನು ಪರಿಶೀಲಿಸುವ ಉದ್ದೇಶದಿಂದ ಎಟಾ ಮತ್ತು ಕಾಸ್‌ಗಂಜ್ ಜಿಲ್ಲೆಗಳ ಸುಮಾರು 250 ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಕ್ಷದ ಸಂಘಟನಾ ಬಲ ಮತ್ತು ಚುನಾವಣಾ ಸಿದ್ಧತೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇದು ವಿಕೋಪಕ್ಕೆ ಹೋಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಗಳ ಯಾಕೆ ನಡೆಯಿತು?
ಪಕ್ಷದ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿರುವ ಪ್ರಕಾರ, ಎಸ್‌ಪಿ ನಾಯಕ ಮಂಜೀತ್ ಯಾದವ್ ಮತ್ತು ಎಟಾ ಜಿಲ್ಲಾ ಪಂಚಾಯತದ ಮಾಜಿ ಅಧ್ಯಕ್ಷ ಜುಗೇಂದ್ರ ಸಿಂಗ್ ಯಾದವ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಅದು ತೀವ್ರ ವಾಗ್ವಾದಕ್ಕೆ ತಿರುಗಿದೆ. ಉತ್ತರ ಪ್ರದೇಶ ವಿಧಾನ ಪರಿಷತ್‌ನ ಮಾಜಿ ಅಧ್ಯಕ್ಷ ರಮೇಶ ಯಾದವ್ ಅವರ ಸೋದರಳಿಯರಾಗಿರುವ ಮಂಜೀತ್ ಯಾದವ್, ಚರ್ಚೆಯ ವೇಳೆ ಜುಗೇಂದ್ರ ಸಿಂಗ್ ಯಾದವ್ ಮಾಡಿದ ಕೆಲವು ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸಭೆಯಲ್ಲಿ ಮೊದಲು ಮಂಜೀತ್ ಯಾದವ್ ಪಕ್ಷದ ಹಿಂದಿನ ಚುನಾವಣಾ ಸಾಧನೆಗಳ ಕುರಿತು ಮಾತನಾಡಿದ್ದರು. ಬಳಿಕ ಜುಗೇಂದ್ರ ಸಿಂಗ್ ಯಾದವ್ ಸಭೆಯನ್ನುದ್ದೇಶಿಸಿ ಮಾತನಾಡಲು ಆರಂಭಿಸಿದಾಗ, ಅವರ ಕೆಲವು ಹೇಳಿಕೆಗಳಿಗೆ ಮಂಜೀತ್ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಹೊತ್ತಿನಲ್ಲಿ ಪರಸ್ಪರ ನಿಂದನಾತ್ಮಕ ಮಾತುಗಳನ್ನೂ ಆಡಿದ್ದಾರೆ ಎನ್ನಲಾಗಿದೆ.
ಇತರ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಇಬ್ಬರನ್ನೂ ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ. ನಂತರ ಮಂಜೀತ್ ಯಾದವ್ ಮತ್ತು ಜುಗೇಂದ್ರ ಸಿಂಗ್ ಯಾದವ್ ಸಭೆಯಿಂದ ಹೊರಗೆ ತೆರಳಿದರು. ಸುಮಾರು ಒಂದು ಗಂಟೆಯ ಬಳಿಕ ಅಖಿಲೇಶ ಯಾದವ್ ಕೂಡ ಪಕ್ಷದ ಕಚೇರಿಯಿಂದ ಹೊರಟರು.
ಘಟನೆಯ ಬಳಿಕ ಎಟಾ ಮತ್ತು ಕಾಸ್‌ಗಂಜ್ ಜಿಲ್ಲೆಗಳ ಎಸ್‌ಪಿ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಎರಡು ಜಿಲ್ಲೆಗಳಲ್ಲಿರುವ ಪಕ್ಷದ ಮುಂಚೂಣಿ ಸಂಘಟನೆಗಳ ಘಟಕಗಳಿಗೂ ಈ ಕ್ರಮ ಅನ್ವಯವಾಗಲಿದೆ ಎಂದು ವರದಿಗಳು ತಿಳಿಸಿವೆ.
2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಎಸ್‌ಪಿ ತನ್ನ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಎಟಾ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ನಾಲ್ಕೂ ಕ್ಷೇತ್ರಗಳು ಪ್ರಸ್ತುತ ಬಿಜೆಪಿ ವಶದಲ್ಲಿವೆ. ಕಾಸ್‌ಗಂಜ್‌ನ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಶಾಸಕರಿದ್ದು, ಒಂದು ಕ್ಷೇತ್ರ ಎಸ್‌ಪಿ ವಶದಲ್ಲಿದೆ.
ಎರಡೂ ಜಿಲ್ಲೆಗಳ ಸಂಘಟನಾ ಸಮಿತಿಗಳನ್ನು ವಿಸರ್ಜಿಸಿರುವ ಹಿನ್ನೆಲೆಯಲ್ಲಿ, ಎಸ್‌ಪಿ ಶೀಘ್ರದಲ್ಲೇ ಎಟಾ ಮತ್ತು ಕಾಸ್‌ಗಂಜ್‌ಗೆ ಹೊಸ ಸಂಘಟನಾ ಪದಾಧಿಕಾರಿಗಳನ್ನು ನೇಮಿಸುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ