ತೆಹ್ರಾನ್: ಇರಾನ್ನ ಪರಮೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಅವರಿರುವ ಸ್ಥಳದ ಕುರಿತು ಇನ್ನೂ ನಿಗೂಢತೆ ಮುಂದುವರಿದಿರುವ ನಡುವೆಯೇ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ದಾಖಲಾಗಿದ್ದ ಆಸ್ಪತ್ರೆಯ ಅವಶೇಷಗಳಡಿಯಿಂದ ರಕ್ಷಿಸಲಾಗಿತ್ತು ಎಂಬ ಹೊಸ ಮಾಹಿತಿ ಬಹಿರಂಗವಾಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿರುವ ವರದಿಯ ಪ್ರಕಾರ, ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ತೆಹ್ರಾನ್ನಲ್ಲಿದ್ದ ಕಟ್ಟಡಗಳ ಸಂಕೀರ್ಣವೊಂದರ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯ ಉದ್ದೇಶ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಗುರಿಯಾಗಿಸಿ ಸಾಯಿಸುವುದಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಈ ದಾಳಿಯೇ ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ನಾಂದಿ ಹಾಡಿತ್ತು.
ದಾಳಿಯಲ್ಲಿ ಅಲಿ ಖಮೇನಿ ಮೃತಪಟ್ಟರೆ ಅವರ ಉತ್ತರಾಧಿಕಾರಿಯಾಗಿರುವ 56 ವರ್ಷದ ಮೊಜ್ತಬಾ ಖಮೇನಿ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ತೆಹ್ರಾನ್ನ ಮೂರು ವೈದ್ಯಕೀಯ ಸಂಕೀರ್ಣಗಳ ಮೇಲೂ ದಾಳಿ ನಡೆಸಿದ್ದವು ಎಂದು ವರದಿ ತಿಳಿಸಿದೆ. ಅವುಗಳಲ್ಲಿ ಒಂದರಲ್ಲಿ ಮೊಜ್ತಬಾ ಖಮೇನಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಇರಾನ್ನ ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ ಸದಸ್ಯ ಮೊಹ್ಸೆನ್ ಹೆೈದರಿ ಅವರನ್ನು ಉಲ್ಲೇಖಿಸಿರುವ ವರದಿಯ ಪ್ರಕಾರ, “ಮೊಜ್ತಬಾ ಖಮೇನಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಂತರವೂ ತೆಹ್ರಾನ್ನ ಮೂರು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಮೂರನೇ ಆಸ್ಪತ್ರೆಯಲ್ಲಿದ್ದ ಮೊಜ್ತಬಾ ಖಮೇನಿಯನ್ನು ಅವಶೇಷಗಳಡಿಯಿಂದ ಹೊರತೆಗೆದು ರಕ್ಷಿಸಲಾಯಿತು” ಎಂದು ಹೇಳಿದ್ದಾರೆ.
ಇದೇ ವೇಳೆ, ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ನ ಮುಂದಿನ ಪರಮೋಚ್ಚ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿಯಿದ್ದ ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ ಅನ್ನು ಟಾರ್ಗೆಟ್ ಮಾಡಲು ಅಮೆರಿಕ ಮತ್ತು ಇಸ್ರೇಲ್ ಯತ್ನಿಸಿದ್ದವು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಹೇಳಿದೆ. ಅಲ್ಲದೆ, ಕ್ವೋಮ್ (Qom) ಕಾರ್ಯದರ್ಶಾಲಯದ ಮೇಲೂ ದಾಳಿ ನಡೆದಿದ್ದು, ಎಂಟು ಮಂದಿ ಸಾವಿಗೀಡಾಗಿದ್ದರು ಎಂದು ತಿಳಿಸಲಾಗಿದೆ.
ಆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮೊಜ್ತಬಾ ಖಮೇನಿ ಅವರನ್ನು ಮುಂದಿನ ಪರಮೋಚ್ಚ ನಾಯಕರಾಗಿ ನೇಮಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರು ತಮ್ಮ ತಂದೆಗಿಂತಲೂ ಹೆಚ್ಚು ಕಠಿಣ ನಿಲುವಿನವರಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.
ಆದಾಗ್ಯೂ, ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ ಸಭೆಯಲ್ಲಿ ನಡೆದ ಮತದಾನದಲ್ಲಿ ಮೊಜ್ತಬಾ ಖಮೇನಿ ಅವರಿಗೆ ಭಾರೀ ಬೆಂಬಲ ವ್ಯಕ್ತವಾಯಿತು. ಒಟ್ಟು 59 ಮತಗಳಲ್ಲಿ 50 ಮತಗಳು ಅವರ ಪರವಾಗಿ ಚಲಾಯಿಸಲ್ಪಟ್ಟವು. ಅಯತೊಲ್ಲಾ ಅಲಿರೆಝಾ ಅರಾಫಿ ಅವರಿಗೆ ಎಂಟು ಮತಗಳು ದೊರೆತರೆ, ಒಬ್ಬ ಸದಸ್ಯ ಮತದಾನದಿಂದ ದೂರ ಉಳಿದಿದ್ದರು.
ಮೊಜ್ತಬಾ ಖಮೇನಿ ಅವರ ಹೆಸರನ್ನು ಸಭೆಯಲ್ಲಿ ಮೊದಲಾಗಿ ಪ್ರಸ್ತಾಪಿಸಿದ್ದ ಮೊಹ್ಸೆನ್ ಹೆೈದರಿ, “ಶತ್ರುಗಳ ನಿಲುವನ್ನು ಗಮನಿಸಿದರೆ, ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ಹೊರತುಪಡಿಸಿ ಇಸ್ಲಾಮಿಕ್ ಗಣರಾಜ್ಯದ ನಾಯಕ ಹಾಗೂ ಪರಮೋಚ್ಚ ಮಾರ್ಗದರ್ಶಕರಾಗಿ ಬೇರೆ ಯಾರನ್ನೂ ನಾವು ಆಯ್ಕೆ ಮಾಡುವುದಿಲ್ಲ. ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದು ದೇಶವನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಯಿತು. ಧಾರ್ಮಿಕ ಅರ್ಹತೆ, ನ್ಯಾಯಬದ್ಧತೆ ಮತ್ತು ದೇಶದ ಆಡಳಿತ ನಡೆಸುವ ಸಾಮರ್ಥ್ಯ ಸೇರಿದಂತೆ ಅಗತ್ಯ ಎಲ್ಲ ಮಾನದಂಡಗಳನ್ನು ಅವರಲ್ಲಿವೆ ಎಂಬುದನ್ನು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ