ಟೆಲ್ ಅವೀವ್: ಫ್ಲೈದುಬೈ (flydubai) ಸಂಸ್ಥೆಯ ಎಫ್‌ಝೆಡ್1073 (FZ1073) ವಿಮಾನದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರು ಸಹ ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಬಳಲುತ್ತಿದ್ದರು. ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಅವರು ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಸಿದರು ಎಂದು ಅದೇ ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯ ಮುಸಾಯೆವ್ ಶೋಟಾ (Musaev Shota) ಹೇಳಿದ್ದಾರೆ.
ಒಮಾನಿ ಮೂಲದ ಸಹ ಪೈಲಟ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಯತ್ನಿಸಿದ್ದಾನೆ ಎನ್ನಲಾದ ಸಂದರ್ಭದಲ್ಲಿ ಕಾಕ್‌ಪಿಟ್‌ನತ್ತ ಮೊದಲಿಗೆ ಧಾವಿಸಿದ ನಾಲ್ವರು ಪ್ರಯಾಣಿಕರಲ್ಲಿ ಒಬ್ಬರಾಗಿದ್ದರು. ದಾಳಿ ಮಾಡಿದ ಸಹ ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ನೆರವಾದ ಬಳಿಕ, ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚಾರ್‌ಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದ ಮೊದಲ ವ್ಯಕ್ತಿಯೂ ಅವರೇ ಆಗಿದ್ದರು. ಅವರ ತುರ್ತು ಚಿಕಿತ್ಸೆಯಿಂದ ಪೈಲಟ್‌ನ ಜೀವ ಉಳಿಯಲು ನೆರವಾಯಿತು ಎಂದು ವರದಿಯಾಗಿದೆ.
ಇಸ್ರೇಲಿ ಮಾಧ್ಯಮ ವೈನೆಟ್ (Ynet) ಜತೆ ಮಾತನಾಡಿದ ಮುಸಾಯೆವ್ ಶೋಟಾ, ವಿಮಾನದೊಳಗೆ ನಡೆದ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡರು. “ನಾನು ಕಾಯಲಿಲ್ಲ. ಏನೋ ತಪ್ಪಾಗಿದೆ ಎಂಬುದು ಗೊತ್ತಾದ ತಕ್ಷಣ ಓಡಿದೆ,” ಎಂದು ಅವರು ಹೇಳಿದರು.
ಕ್ಯಾಪ್ಟನ್ ಮಚ್ಚಾರ್ ಅವರ ಸ್ಥಿತಿಯನ್ನು ವಿವರಿಸಿದ ಅವರು, “ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು. ತಲೆ ಹಾಗೂ ಕೈಗಳಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು,” ಎಂದರು. “ವಿಮಾನದಲ್ಲಿದ್ದ ಏಕೈಕ ವೈದ್ಯ ನಾನು. ರಕ್ತಸ್ರಾವವನ್ನು ನಿಯಂತ್ರಿಸಲು ನನಗೆ ಸಾಧ್ಯವಾಯಿತು. ಲ್ಯಾಂಡಿಂಗ್‌ಗೆ ಸ್ವಲ್ಪ ಸಮಯ ಬಾಕಿ ಇರುವಾಗ ಅವರ ಆರೋಗ್ಯದಲ್ಲಿ ಮತ್ತೆ ಸ್ವಲ್ಪ ಹದಗೆಟ್ಟ ಲಕ್ಷಣ ಕಂಡುಬಂದರೂ ಅದುವರೆಗೆ ಅವರು ಸ್ಥಿರವಾಗಿದ್ದರು,” ಎಂದು ಶೋಟಾ ಹೇಳಿದರು.
ಸಿಎನ್‌ಎನ್ (CNN) ಜತೆ ಮಾತನಾಡಿದ ಅವರು, ಪೈಲಟ್‌ನ ಗಾಯಗಳ ತೀವ್ರತೆಯನ್ನು ವಿವರಿಸಿದರು. “ಅವರ ತಲೆ ಮತ್ತು ಕೈಗಳು ಬಹುತೇಕ ಎರಡು ಭಾಗವಾಗುವಷ್ಟು ಆಳವಾಗಿ ಕತ್ತರಿಸಲ್ಪಟ್ಟಿದ್ದವು. ಅವರು ಗಂಭೀರ ಸ್ಥಿತಿಯಲ್ಲಿದ್ದರು. ಬಹುಶಃ ಅತ್ಯಂತ ಅಪಾಯಕರ ಹಂತದಲ್ಲಿರಲಿಲ್ಲ, ಆದರೆ ಅಪಾರ ರಕ್ತಸ್ರಾವದಿಂದ ಅವರ ಪರಿಸ್ಥಿತಿ ಗಂಭೀರವಾಗಿತ್ತು,” ಎಂದು ಹೇಳಿದರು.
ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚಾರ್ ಪ್ರಜ್ಞೆಯಲ್ಲೇ ಇದ್ದು, ರಕ್ತದ ಮಡುವಿನಲ್ಲೇ ನೆಲದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ತಮ್ಮೊಂದಿಗೆ ಮಾತನಾಡುತ್ತಿದ್ದರು ಎಂದು ಶೋಟಾ ತಿಳಿಸಿದ್ದಾರೆ.
“ಅವರು ನೆಲದ ಮೇಲೆ ಮಲಗಿದ್ದಾಗಲೂ ನಮ್ಮೊಂದಿಗೆ ಮಾತನಾಡುತ್ತಿದ್ದರು. ತಮ್ಮ ವಯಸ್ಸು 39 ವರ್ಷ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರು. ದಾಳಿಕೋರನು ಅವರಿಗೆ ಚಾಕು ಇರಿದು ನಿಂದಿಸಿದ್ದಾನೆ ಎಂದೂ ತಿಳಿಸಿದರು,” ಎಂದು ಶೋಟಾ ವೈನೆಟ್‌ಗೆ ಹೇಳಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ (AP) ಜತೆ ಮಾತನಾಡಿದ ಶೋಟಾ, “ಗಾಯಗೊಂಡ ಪೈಲಟ್ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ಅವರು ನನ್ನೊಂದಿಗೆ ಸಂಪರ್ಕದಲ್ಲೇ ಇದ್ದರು. ನಾವು ಅವರನ್ನು ಕಳೆದುಕೊಳ್ಳುವ ಭೀತಿ ನನಗಿತ್ತು,” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಗಳಲ್ಲಿ ವಿಮಾನದ ನೆಲದ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಗಾಯಗೊಂಡಿದ್ದ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ.
ಶೋಟಾ ಅವರ ಪ್ರಕಾರ, ವಿಮಾನವು ಸೌದಿ ಅರೇಬಿಯಾದ ತಬುಕ್ (Tabuk) ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಅಲ್ಲಿನ ವೈದ್ಯಕೀಯ ತಂಡ ಗಾಯಗೊಂಡಿದ್ದ ಪೈಲಟ್‌ನ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿತು. “ನಂತರ ಅವರಿಂದ ತಿಳಿದುಕೊಂಡಂತೆ, ಪೈಲಟ್ ಬದುಕುಳಿದಿದ್ದು ಅಪಾಯದಿಂದ ಪಾರಾಗಿದ್ದಾರೆ,” ಎಂದು ಅವರು ಹೇಳಿದರು.
‘ಪೈಲಟ್ ಆರೋಗ್ಯ ಸ್ಥಿರವಾಗಿದೆ’
ಇದಾದ ಬಳಿಕ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜೆಡ್ಡಾದಲ್ಲಿರುವ ಭಾರತೀಯ ವಾಣಿಜ್ಯ ದೂತಾವಾಸವು, ವಿಮಾನದಲ್ಲಿನ ಗಂಭೀರ ಬಿಕ್ಕಟ್ಟನ್ನು ತಪ್ಪಿಸಲು ನೆರವಾದ ಸಂದರ್ಭದಲ್ಲಿ ಗಾಯಗೊಂಡ ಕ್ಯಾಪ್ಟನ್ ಮಚ್ಚಾರ್ ಅವರ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ತಿಳಿಸಿವೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಸೌದಿ ಅರೇಬಿಯಾದಲ್ಲಿರುವ ಎರಡೂ ಭಾರತೀಯ ರಾಜತಾಂತ್ರಿಕ ಕಚೇರಿಗಳು ಕ್ಯಾಪ್ಟನ್ ಮಚ್ಚಾರ್ ಅವರ ಆರೋಗ್ಯದ ಕುರಿತು ನಿರಂತರ ಮಾಹಿತಿ ಪಡೆದುಕೊಳ್ಳುತ್ತಿವೆ ಎಂದು ತಿಳಿಸಿವೆ.
ರಾಯಭಾರ ಕಚೇರಿಯ ಮಾಹಿತಿಯ ಪ್ರಕಾರ, ಕ್ಯಾಪ್ಟನ್ ಮಚ್ಚಾರ್ ಅವರನ್ನು ಸೌದಿ ಅರೇಬಿಯಾದ ವಾಯುವ್ಯ ಭಾಗದಲ್ಲಿರುವ ತಬುಕ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಕುರಿತು ವಿವರವಾದ ವರದಿಗಾಗಿ ಕಾಯಲಾಗುತ್ತಿದೆ. ಆದರೆ ಪ್ರಾಥಮಿಕ ಮಾಹಿತಿಯಂತೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. “ಅವರು ಶೀಘ್ರವಾಗಿ ಗಾಯಗಳಿಂದ ಚೇತರಿಸಿಕೊಳ್ಳಲಿ ಎಂದು ನಾವು ಆಶಿಸುತ್ತೇವೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಕ್ಯಾಪ್ಟನ್ ಮಚ್ಚಾರ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತೀಯ ಮಿಷನ್ ತಿಳಿಸಿದ್ದು, ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅವರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದೆ. “ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಸೌದಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇವೆ,” ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ