ಏಷ್ಯನ್ ಗೇಮ್ಸ್ : ಬಾಕ್ಸಿಂಗ್‌ನಲ್ಲಿ ಮೂರು ಚಿನ್ನ; ಕುಸ್ತಿಯಲ್ಲಿ ಬಂಗಾರ : ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದ ಭಾರತ

ಏಷ್ಯನ್ ಗೇಮ್ಸ್ 2026ರ 13ನೇ ದಿನ ಭಾರತ ಪದಕಗಳ ಮಳೆಯನ್ನೇ ಸುರಿಸಿದ್ದು, ಒಟ್ಟು ಪದಕಗಳ ಸಂಖ್ಯೆ 75ಕ್ಕೆ ಏರಿದೆ. ಭಾರತ ಇದುವರೆಗೆ 15 ಚಿನ್ನ, 25 ಬೆಳ್ಳಿ ಹಾಗೂ 35 ಕಂಚಿನ ಪದಕಗಳನ್ನು ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಒಂದೇ ದಿನ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮೆರೆದಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಡೆದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಮಹಿಳಾ ರಿಕರ್ವ್ ತಂಡ ಐತಿಹಾಸಿಕ ಸಾಧನೆ ಮಾಡಿತು. ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿತು. ಇದೇ ವೇಳೆ ರಿಕರ್ವ್ ಮಿಶ್ರ ತಂಡ ಹಾಗೂ ಪುರುಷರ ರಿಕರ್ವ್ ತಂಡಗಳು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟವು.
ಬಾಕ್ಸಿಂಗ್‌ನಲ್ಲಿ ಭಾರತದ ಚಿನ್ನದ ಅಭಿಯಾನಕ್ಕೆ ಲವ್ಲಿನಾ ಬೊರ್ಗೊಹೈನ್ ಮತ್ತು ಪರ್ವೀನ್ ಹೂಡಾ ಮುನ್ನುಡಿ ಬರೆದರು. ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲವ್ಲಿನಾ, ಚೀನಾದ ಬಾವೊ ಜಿಯಿಯನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಮಹಿಳೆಯರ 65 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಕೂಡ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಏಷ್ಯನ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಇಬ್ಬರು ಭಾರತೀಯ ಮಹಿಳಾ ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲ ಬಾರಿ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಪುರುಷರ ಬಾಕ್ಸಿಂಗ್‌ನ 80 ಕೆಜಿ ವಿಭಾಗದಲ್ಲಿ ಅಂಕುಶ್ ಪಂಘಾಲ್ ಕೂಡ ಚಿನ್ನದ ಪದಕ ಗೆದ್ದು ಭಾರತದ ಪದಕ ಖಾತೆಗೆ ಮತ್ತೊಂದು ಅಮೂಲ್ಯ ಪದಕ ಸೇರಿಸಿದರು.

ಪ್ರಮುಖ ಸುದ್ದಿ :-   174 ಜನರ ಜೀವ ಉಳಿಸಿದ ಫ್ಲೈದುಬೈನ ಭಾರತೀಯ ಪೈಲಟ್‌ಗೆ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗುಜರಾತ್‌ ಸರ್ಕಾರ

ಕುಸ್ತಿ ಸ್ಪರ್ಧೆಯಲ್ಲಿ ಪುರುಷರ 65 ಕೆಜಿ ವಿಭಾಗದ ಫೈನಲ್‌ನಲ್ಲಿ ಸುಜೀತ ಕಲ್ಕಲ್ ಚಿನ್ನದ ಪದಕ ಗೆದ್ದು ಭಾರತದ ಚಿನ್ನದ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ ಇತರ ಕುಸ್ತಿ ವಿಭಾಗಗಳಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿತು. 125 ಕೆಜಿ ವಿಭಾಗದ ರಜತ್ ರೂಹಲ್, 50 ಕೆಜಿ ವಿಭಾಗದ ದೀಪಾಂಶಿ ಹಾಗೂ 76 ಕೆಜಿ ವಿಭಾಗದ ಪ್ರಿಯಾ ಮಲಿಕ್ ತಮ್ಮ ತಮ್ಮ ಪಂದ್ಯಗಳಲ್ಲಿ ಸೋಲು ಅನುಭವಿಸಿದರು. ದೀಪಾಂಶಿ ರೆಪೆಚೇಜ್ ಸುತ್ತಿನ ಮೂಲಕ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.
ನೌಕಾಯಾನ ಸ್ಪರ್ಧೆಯಲ್ಲಿ ನೇತ್ರಾ ಕುಮಾನನ್ ಮಹಿಳೆಯರ ಡಿಂಗಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು. ಇದೇ ವೇಳೆ ಪುರುಷರ ಸೆಪಕ್‌ಟಕ್ರಾ ಕ್ವಾಡ್ರಂಟ್ ತಂಡವೂ ಕಂಚಿನ ಪದಕ ಜಯಿಸಿತು.
ವರ್ಚುವಲ್ ತೈಕ್ವಾಂಡೋ ಸ್ಪರ್ಧೆಯಲ್ಲಿ ಭಾರತದ ಕಾಶಿಶ್ ಮಲಿಕ್ ವೈಯಕ್ತಿಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನದ ರಿತಾ ಬಕಿಶೇವಾ ವಿರುದ್ಧ 1-2 ಅಂತರದಿಂದ ಸೋತು ಪದಕದ ಅವಕಾಶ ಕಳೆದುಕೊಂಡರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement