ದುಬೈ: ದುಬೈ–ತೆಲ್‌ಅವೀವ್ ಮಾರ್ಗದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ ಒಮಾನಿ ಸಹ ಪೈಲಟ್, ವಿಮಾನವನ್ನು ಇಸ್ರೇಲ್‌ನಲ್ಲಿ ಪತನಗೊಳಿಸುವ ಉದ್ದೇಶ ಹೊಂದಿದ್ದೆ ಮತ್ತು ಸಾವಿನ ಭಯವೂ ಇರಲಿಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತನನ್ನು ಸೌದಿ ಅರೇಬಿಯಾ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ಹೊರಬಂದಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.
ಹಮ್ಮಾಮಿ ಒಮಾನಿನ ಪ್ರಜೆಯಾಗಿದ್ದರೂ, ತನ್ನ ಜೀವನದ ಬಹುಭಾಗವನ್ನು ದೇಶದ ಹೊರಗೇ ಕಳೆದಿದ್ದಾನೆ. ವಿಶೇಷವಾಗಿ, ಆತನ ತಾಯಿ ಮೂಲತಃ ಸಿರಿಯಾದವರಾಗಿದ್ದ ಕಾರಣ, ಸಿರಿಯಾದಲ್ಲೇ ಹೆಚ್ಚು ಕಾಲ ವಾಸಿಸಿದ್ದಾನೆ. ಅಲ್ಲಿಯೇ ಆತ ಉಗ್ರವಾದಿ ವಿಚಾರಗಳತ್ತ ಆಕರ್ಷಿತನಾಗಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ.
2024ರಲ್ಲಿ ಒಮಾನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹಮ್ಮಾಮಿಯ ಬಳಿ ಉಗ್ರವಾದಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದವು. ಆತನ ತೀವ್ರವಾದಿ ಚಿಂತನೆಗಳ ಹಿನ್ನೆಲೆಯಲ್ಲಿ ಸ್ವದೇಶ ಒಮಾನಿನಲ್ಲಿ ವಿಮಾನ ಹಾರಿಸುವುದಕ್ಕೂ ನಿಷೇಧ ಹೇರಲಾಗಿತ್ತು ಎಂದು ತಿಳಿದುಬಂದಿದೆ. ಈ ಪ್ರಕರಣದ ಸಂಬಂಧ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳೂ ಹಮ್ಮಾಮಿಯನ್ನು ವಿಚಾರಣೆ ನಡೆಸಿದ್ದಾರೆ. ಸಹ ಪೈಲಟ್ ಭಯೋತ್ಪಾದಕ ಕೃತ್ಯವೊಂದನ್ನು ನಡೆಸಲು ಯೋಜನೆ ರೂಪಿಸಿದ್ದ ಎಂದು ಯುಎಇ ಅಧಿಕಾರಿಗಳು ಹೇಳಿದ್ದಾರೆ.
“ಸಹ ಪೈಲಟ್ ಭಯೋತ್ಪಾದಕ ಕೃತ್ಯವೊಂದನ್ನು ನಡೆಸಲು ಪ್ರಯತ್ನಿಸಿದ್ದ. ಆತ ಕಾಕ್‌ಪಿಟ್‌ನೊಳಗೆ ತುರ್ತು ಪರಿಸ್ಥಿತಿಯಲ್ಲಿ ಬಳಸುವ ಕೊಡಲಿಯಿಂದ ಕ್ಯಾಪ್ಟನ್ (ಪೈಲಟ್) ಮೇಲೆ ದಾಳಿ ನಡೆಸಿ, ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ಪಡೆಯಲು ಯತ್ನಿಸಿದ್ದ” ಎಂದು ಎಮಿರೇಟ್ಸ್ ನ್ಯೂಸ್ ಏಜೆನ್ಸಿ (WAM) ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಘಟನೆಯ ವೇಳೆ ಹಮ್ಮಾಮಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದ. ಆದರೆ ಭಾರತೀಯ ಮೂಲದ ಪೈಲಟ್ ಮಚ್ಚಾರ್ ಪ್ರತಿರೋಧ ತೋರಿದ್ದು, ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ದಾಳಿಯ ಬಳಿಕ ಗಾಯಗೊಂಡ ಸ್ಥಿತಿಯಲ್ಲಿದ್ದ ಮಚ್ಚಾರ್ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯಲು ಯಶಸ್ವಿಯಾಗಿದ್ದರು. ಆಗ ಪ್ರಯಾಣಿಕರು ಅವರನ್ನು ರಕ್ತಸಿಕ್ತ ಹಾಗೂ ಗಾಯಗೊಂಡ ಸ್ಥಿತಿಯಲ್ಲಿ ಕಂಡಿದ್ದರು.
ಈ ಘಟನೆಯ ಬಳಿಕ ಕ್ಯಾಪ್ಟನ್ ಮಚ್ಚಾರ್ ಅವರನ್ನು ವಿಶ್ವದಾದ್ಯಂತ ನಾಯಕರು ಶ್ಲಾಘಿಸಿದ್ದಾರೆ. ಶನಿವಾರ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಗೌರವ ಅತಿಥಿಯಾಗಿ ದೇಶಕ್ಕೆ ಭೇಟಿ ನೀಡುವಂತೆ ನೆತನ್ಯಾಹು ಆಹ್ವಾನ ನೀಡಿದ್ದಾರೆ.
ನೆತನ್ಯಾಹು ಅವರ ಜೊತೆ ನಡೆದ ಸಂಭಾಷಣೆಯಲ್ಲಿ, ನಮಾಜ್ ಮಾಡಲು ಸಮಯ ಬೇಕೆಂದು ಕೇಳಿದ ಬಳಿಕ ಹಮ್ಮಾಮಿ ತನ್ನ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ ಎಂದು ಮಚ್ಚಾರ್ ವಿವರಿಸಿದ್ದಾರೆ. “ನಾನು ಕಾಕ್‌ಪಿಟ್‌ನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದೆ. ಆದರೆ ಅವನು ಮತ್ತೆ ಅದನ್ನು ಮುಚ್ಚಿದ್ದಾನೆ ಎಂದು ನನಗೆ ಅನಿಸುತ್ತದೆ” ಎಂದು ಮಚ್ಚಾರ್ ಹೇಳಿದ್ದಾರೆ.
“ಮೊದಲಿಗೆ ವಿಮಾನಕ್ಕೆ ಭಾರೀ ಹಾನಿಯಾಗಿರಬಹುದು, ಏನೋ ಗಂಭೀರ ಸಮಸ್ಯೆ ಉಂಟಾಗಿದೆ ಎಂದು ನಾನು ಭಾವಿಸಿದೆ. ಆದರೆ ನಂತರ ಒಂದರ ಹಿಂದೆ ಒಂದರಂತೆ ಹೊಡೆತಗಳು ಬೀಳತೊಡಗಿದವು. ಆಗ ಸಮಸ್ಯೆ ವಿಮಾನದಲ್ಲಲ್ಲ, ನನಗೆ ಸಹ ಪೈಲಟ್ ಹೊಡೆಯುತ್ತಿದ್ದಾನೆ ಎಂಬುದು ಅರ್ಥವಾಯಿತು” ಎಂದು ಅವರು ನೆನಪಿಸಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ