‘ಫ್ಲೈದುಬೈ’ ದುರಂತ ತಪ್ಪಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ ಘೋಷಣೆ

ಟೆಲ್ ಅವೀವ್: ಇಸ್ರೇಲಿನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಲು ನಡೆದಿತ್ತೆನ್ನಲಾದ ಯತ್ನದ ವೇಳೆ ಅಸಾಧಾರಣ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿದ ಭಾರತೀಯ ಮೂಲದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರಿಗೆ ಇಸ್ರೇಲ್‌ನ ಅತ್ಯುತ್ತನ ಪ್ರಶಸ್ತಿಯಾದ ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ಗಂಭೀರ ಗಾಯಗಳಾಗಿ ಅಪಾರ ಪ್ರಮಾಣದ ರಕ್ತಸ್ರಾವವಾಗಿದ್ದರೂ ಎದೆಗುಂದದೆ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಕ್ಯಾಪ್ಟನ್ ಮಚ್ಛರ್ ಅವರ ಸಾಹಸದಿಂದ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತ ತಪ್ಪಿದೆ ಎಂದು ಹೇಳಲಾಗಿದೆ. ವಿಮಾನದಲ್ಲಿದ್ದ 174 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ರಕ್ಷಣೆಯಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಈ ಪ್ರಶಸ್ತಿ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಮಚ್ಛರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದ್ಯ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಚ್ಛರ್ ಅವರ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ ಅಧ್ಯಕ್ಷ ಹೆರ್ಜಾಗ್, ಅವರ ಸಮಯಪ್ರಜ್ಞೆಯ ಕ್ರಮದಿಂದ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಿದ್ದಾರೆ. ಅವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

“ಇಂದು ನಾವು ಗೌರವಿಸುತ್ತಿರುವ ಇಸ್ರೇಲ್‌ನ ವೀರರೊಂದಿಗೆ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರು ಸಂಪೂರ್ಣವಾಗಿ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಕ್ಯಾಪ್ಟನ್ ಮಚ್ಛರ್ ಅವರ ಅಪ್ರತಿಮ ಧೈರ್ಯ ಮತ್ತು ಉನ್ನತ ಮಟ್ಟದ ವೃತ್ತಿಪರತೆ ದೊಡ್ಡ ದುರಂತವೊಂದನ್ನು ತಡೆಯಲು ನೆರವಾಗಿದೆ. ಅವರು ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ಅವರಿಗೆ ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದು ನನಗೆ ಗೌರವದ ವಿಷಯವಾಗಲಿದೆ” ಎಂದು ಹೆರ್ಜಾಗ್ ಹೇಳಿದ್ದಾರೆ.
ತೀವ್ರ ಒತ್ತಡದ ಸನ್ನಿವೇಶದಲ್ಲಿಯೂ ಗಾಯಗಳನ್ನು ಲೆಕ್ಕಿಸದೆ ಮಚ್ಛರ್ ತೋರಿದ ಅಸಾಧಾರಣ ಧೈರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದು, ವಿಮಾನದೊಳಗಿದ್ದ ಪ್ರಯಾಣಿಕರು ಒಳಗೆ ಪ್ರವೇಶಿಸಿ ದಾಳಿಕೋರನನ್ನು ಎದುರಿಸಲು ಸಾಧ್ಯವಾಯಿತು. ಇದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನೆರವಾಯಿತು.

ಪ್ರಮುಖ ಸುದ್ದಿ :-   ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ... : ನಾನಾ ಪಾಟೇಕರ್ ಅಂತಿಮ ಕ್ಷಣಗಳು...

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು?
ಲಭ್ಯವಾದ ವಿವರಗಳ ಪ್ರಕಾರ, ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನೊಳಗೆ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಮೇಲೆ ಅವರ ಸಹಪೈಲಟ್, ಒಮಾನ್ ಮೂಲದ ಹಮ್ಮಾಮಿ ಅಲ್-ಹಮ್ಮಾಮಿ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಗೆ ವಿಮಾನದ ತುರ್ತು ಅಪಘಾತ ಸಂದರ್ಭಗಳಲ್ಲಿ ಬಳಸುವ ಕೊಡಲಿಯನ್ನು (ಕ್ರ್ಯಾಶ್ ಆಕ್ಸ್) ಬಳಸಿದ್ದಾನೆ ಎನ್ನಲಾಗಿದೆ.
ಈ ದಾಳಿಯಿಂದ ಮಚ್ಛರ್ ಗಂಭೀರವಾಗಿ ಗಾಯಗೊಂಡು ಅಪಾರ ಪ್ರಮಾಣದ ರಕ್ತಸ್ರಾವವಾಗಿತ್ತು. ಆದರೂ ಅವರು ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರಿಗೆ ಕಾಕ್‌ಪಿಟ್ ಒಳಗೆ ಪ್ರವೇಶಿಸಿ ಸಹಪೈಲಟ್‌ನನ್ನು ಮಣಿಸಲು ಅವಕಾಶ ದೊರೆಯಿತು. ಆತನ ಆರೋಪಿತ ಯೋಜನೆಯನ್ನು ವಿಫಲಗೊಳಿಸುವಲ್ಲಿ ಈ ಕ್ರಮ ಮಹತ್ವದ ಪಾತ್ರ ವಹಿಸಿತು.
ಈ ಘಟನೆಯಿಂದ ವಿಮಾನದಲ್ಲಿದ್ದ ಎಲ್ಲರ ಜೀವಕ್ಕೂ ಗಂಭೀರ ಅಪಾಯ ಎದುರಾಗಿತ್ತು. ಕ್ಯಾಪ್ಟನ್ ಮಚ್ಛರ್ ಅವರ ಪ್ರತಿರೋಧ, ಪ್ರಯಾಣಿಕರ ಮಧ್ಯಪ್ರವೇಶ ಮತ್ತು ವಿಮಾನದಲ್ಲಿದ್ದ ಇತರ ಪೈಲಟ್‌ಗಳ ಸಹಕಾರದಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇಸ್ರೇಲ್ ಗುಪ್ತಚರ ವರದಿಯಲ್ಲಿ ಏನಿದೆ?
ಈ ಘಟನೆಯ ಕುರಿತು ಉಲ್ಲೇಖಿಸಲಾದ ಇಸ್ರೇಲ್ ಗುಪ್ತಚರ ವರದಿಯ ಪ್ರಕಾರ, ಸಹಪೈಲಟ್ ಅಲ್-ಹಮ್ಮಾಮಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದು ಟೆಲ್ ಅವೀವ್‌ಗೆ ಕೊಂಡೊಯ್ದು, ಅಲ್ಲಿನ ಕಟ್ಟಡವೊಂದಕ್ಕೆ ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪ್ಪಳಿಸುವ ಯೋಜನೆ ಹೊಂದಿದ್ದನೆಂದು ಆರೋಪಿಸಲಾಗಿದೆ.
ವಿಮಾನವನ್ನು ಟೆಲ್ ಅವೀವ್‌ನತ್ತ ಕೊಂಡೊಯ್ಯುವ ಆತನ ಪ್ರಯತ್ನ ವಿಫಲವಾದ ಬಳಿಕ, ಮರುಭೂಮಿ ಪ್ರದೇಶದಲ್ಲಿ ವಿಮಾನವನ್ನು ಅಪ್ಪಳಿಸಲು ಯತ್ನಿಸಿದ್ದಾನೆ ಎಂದು ವರದಿ ತಿಳಿಸಿದೆ. ಆದರೆ ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇತರ ಪೈಲಟ್‌ಗಳು ಮಧ್ಯಪ್ರವೇಶಿಸಿ ವಿಮಾನದ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ನಂತರ ಅವರು ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಇಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವಕ್ಕೆ ಅಪಾಯ ತಂದೊಡ್ಡಿದ್ದ ತುರ್ತು ಪರಿಸ್ಥಿತಿ ಅಂತ್ಯಗೊಂಡಿತು. ವರದಿಯಲ್ಲಿ ಉಲ್ಲೇಖಿಸಿರುವ ಅಪಾಯದ ನಡುವೆಯೂ ವಿಮಾನ ಪತನವಾಗದೆ ಸುರಕ್ಷಿತವಾಗಿ ಇಳಿದಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಧೈರ್ಯ, ಪ್ರಯಾಣಿಕರ ಪ್ರತಿರೋಧ ಹಾಗೂ ಇತರ ಪೈಲಟ್‌ಗಳ ಮಧ್ಯಪ್ರವೇಶದಿಂದ ಸಂಭವಿಸಬಹುದಾಗಿದ್ದ ಭೀಕರ ದುರಂತ ತಪ್ಪಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement