ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಾಸಿನಲ್ಲಿ ಬಿಜೆಪಿ ನಾಯಕನ ಮನೆಗೆ ನುಗ್ಗಿ, ಕಟ್ಟಿ ಹಾಕಿ ₹50 ಲಕ್ಷ ದೋಚಿದ ದರೋಡೆಕೋರರು

ಕಾನ್ಪುರ: ರಾಜಕೀಯದಲ್ಲಿ ಹೊಸ ಜವಾಬ್ದಾರಿ ಸಿಕ್ಕ ಸಂಭ್ರಮದಲ್ಲಿದ್ದ ಬಿಜೆಪಿ ನಾಯಕನಿಗೆ ಅದೇ ದಿನ ಮಧ್ಯರಾತ್ರಿ ಆಘಾತ ಎದುರಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ರಾಜ್ಯ ಕಾರ್ಯದರ್ಶಿ ರಮೇಶ ಯಾದವ್ ಅವರ ಫಾರ್ಮ್‌ಹೌಸ್‌ಗೆ ಮಾಸ್ಕ್‌ ಹಾಕಿದ್ದ ದರೋಡೆಕೋರರು ನುಗ್ಗಿ, ಅವರನ್ನು ಕಟ್ಟಿ ಹಾಕಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಲಕ್ನೋದಲ್ಲಿ ಸೋಮವಾರ ನೂತನ ಹುದ್ದೆಯ ಅಧಿಕಾರ ಸ್ವೀಕರಿಸಿದ ಬಳಿಕ ತಡರಾತ್ರಿ ಕಾನ್ಪುರಕ್ಕೆ ಮರಳಿದ್ದ ರಮೇಶ ಯಾದವ್ ಅವರು, ಮಾರನೇ ದಿನವಿಡೀ ಅಭಿನಂದನೆ ಹಾಗೂ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಡರಾತ್ರಿಯವರೆಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ವಿಶ್ರಾಂತಿ ಪಡೆಯಲೆಂದು ಕಾನ್ಪುರ ನಗರದ ಸಮೀಪದ ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಆದರೆ, ಮಧ್ಯರಾತ್ರಿ ನಡೆದ ದರೋಡೆ ಅವರ ಪಾಲಿಗೆ ಸಂಭ್ರಮದ ದಿನವನ್ನು ದುಃಸ್ವಪ್ನವಾಗಿಸಿತು.
ಕಾನ್ಪುರ ನಗರದ ಸೆನ್-ಪಶ್ಚಿಮ್ ಪರಾ ಪ್ರದೇಶದಲ್ಲಿರುವ ಫಾರ್ಮ್‌ಹೌಸ್‌ಗೆ ಮಧ್ಯರಾತ್ರಿ ಮಾಸ್ಕ್‌ ಧಾರಿ ದರೋಡೆಕೋರರು ನುಗ್ಗಿದ್ದಾರೆ. ನಗರದ ಕೇಂದ್ರ ಭಾಗದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಈ ಫಾರ್ಮ್‌ಹೌಸ್‌ಗೆ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ರಮೇಶ ಯಾದವ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಹುಡುಕಾಡಿ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಖಿಲೇಶ ಯಾದವಗೆ ಹಿನ್ನಡೆ : ಬಿಜೆಪಿಗೆ ಸೇರಿದ ಮೂವರು ಸಮಾಜವಾದಿ ಪಕ್ಷದ ಬಂಡಾಯ ಶಾಸಕರು

ತಮ್ಮ ಹೇಳಿಕೆಯಲ್ಲಿ ರಮೇಶ ಯಾದವ್ ಅವರು, ದರೋಡೆಕೋರರು ಪೂರ್ವಸಿದ್ಧತೆಯೊಂದಿಗೆ ಬಂದಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮನೆಯೊಳಗೆ ನುಗ್ಗಿದ ತಕ್ಷಣವೇ ರಮೇಶ ಯಾದವ್‌ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಕೈಕಾಲುಗಳನ್ನು ಕಟ್ಟಿಹಾಕಿದ ದುಷ್ಕರ್ಮಿಗಳು ಬಳಿಕ ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿದ್ದಾರೆ. ಒಟ್ಟು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಲಾಗಿದೆ ಎಂದು ವರದಿಯಾಗಿದೆ.
ರಮೇಶ ಯಾದವ್ ಅವರು ಸ್ಥಳೀಯ ಮಟ್ಟದಲ್ಲಿ ರಾಜಕೀಯ ಅನುಭವ ಹೊಂದಿರುವ ನಾಯಕರಾಗಿದ್ದಾರೆ. ಈ ಹಿಂದೆ ಮೂರು ಬಾರಿ ಬ್ಲಾಕ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಪತ್ನಿ ಶಶಿ ಯಾದವ್ ಕೂಡ ಇದೇ ಜವಾಬ್ದಾರಿಯನ್ನು ನಿರ್ವಹಿಸಿದ್ದರು. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಥೂರ್ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇತ್ತೀಚೆಗೆ ಬಿಎಸ್‌ಪಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು.
ಅಕ್ಟೋಬರ್ 1ರಂದು ರಮೇಶ ಯಾದವ್ ಅವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಅದರಂತೆ ಅಕ್ಟೋಬರ್ 12ರ ಸೋಮವಾರ ಲಕ್ನೋದಲ್ಲಿ ಅಧಿಕಾರ ವಹಿಸಿಕೊಂಡ ಅವರು, ತಡರಾತ್ರಿ ಕಾನ್ಪುರಕ್ಕೆ ಮರಳಿದ್ದರು. ರಾಜಕೀಯವಾಗಿ ಹೊಸ ಜವಾಬ್ದಾರಿ ದೊರೆತ ಸಂಭ್ರಮದ ಬೆನ್ನಲ್ಲೇ ಅವರ ನಿವಾಸದಲ್ಲಿ ದರೋಡೆ ನಡೆದಿರುವುದು ಗಮನ ಸೆಳೆದಿದೆ.

ಪ್ರಮುಖ ಸುದ್ದಿ :-   ನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆ

ಆಡಳಿತಾರೂಢ ಬಿಜೆಪಿಯ ಪ್ರಮುಖ ನಾಯಕರೊಬ್ಬರ ಫಾರ್ಮ್‌ಹೌಸ್‌ನಲ್ಲೇ ದರೋಡೆ ನಡೆದಿರುವ ಸುದ್ದಿ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿಯೇ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ವಿಪಿನ್ ಟಾಡಾ, ದಕ್ಷಿಣ ವಿಭಾಗದ ಡಿಸಿಪಿ ದೀಪೇಂದ್ರ ನಾಥ ಚೌಧರಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ಫಾರ್ಮ್‌ಹೌಸ್‌ನಲ್ಲಿರುವ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಮುಸುಕುಧಾರಿಗಳ ಗುರುತು ಪತ್ತೆಹಚ್ಚಲು ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ, ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದವರೂ ಸೇರಿದಂತೆ ಸುಮಾರು 14 ಮಂದಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ನಾಲ್ವರು ಗನ್‌ಮನ್‌ಗಳು ಹಾಗೂ ಒಬ್ಬ ಚಾಲಕ ಸೇರಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ವಿಚಾರಣೆ ಮುಂದುವರಿದಿದ್ದು, ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement