ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿಯಾಗಿರುವ ಇಮ್ರಾನ್ ಖಾನ್, ಭಾರತೀಯ ಪ್ರಜೆಯಲ್ಲದಿದ್ದರೂ ದೇಶದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ನೋಟಿಸ್ನಲ್ಲಿ ಗಡುವು ನೀಡಲಾಗಿದೆ ಎಂದು ವರದಿಯಾಗಿದೆ.
ಮುಂಬೈನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಸುಮಾರು ಒಂದು ಗಂಟೆ ಕಾಲ ಇರಿಸಿಕೊಂಡಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇಮ್ರಾನ್ ಖಾನ್ಗೆ ದೇಶ ತೊರೆಯುವಂತೆ ಸೂಚಿಸಿದ್ದೇಕೆ?
ಭಾರತದ ಪ್ರಜೆಯಲ್ಲದ ಇಮ್ರಾನ್ ಖಾನ್ ಅವರು ದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ವಲಸೆ ಕಾಯ್ದೆಯ (Immigration Act) ಸಂಬಂಧಿತ ಸೆಕ್ಷನ್ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಇಮ್ರಾನ್ ಖಾನ್ ಅಮೆರಿಕದ ಪೌರತ್ವ ಹೊಂದಿದ್ದು, ಭಾರತೀಯ ಪೌರತ್ವದ ಬದಲಿಗೆ ಸಾಗರೋತ್ತರ ಭಾರತೀಯ ನಾಗರಿಕತ್ವ (OCI — Overseas Citizen of India) ಕಾರ್ಡ್ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಯೊಬ್ಬರು ಭಾರತದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರಿತ್ ಸೋಮಯ್ಯ ಅವರು ಈ ಕುರಿತು ದೂರು ನೀಡಿದ್ದರು. ವಿದೇಶಿ ಪೌರತ್ವ ಹೊಂದಿರುವ ಇಮ್ರಾನ್ ಖಾನ್ ರಾಜಕೀಯ ಆಂದೋಲನದಲ್ಲಿ ಭಾಗವಹಿಸಲು ಅನುಮತಿ ಇದೆಯೇ ಎಂದು ಅವರು ಪ್ರಶ್ನಿಸಿದ್ದರು.
ಇಮ್ರಾನ್ ಖಾನ್ ಅವರ ಪ್ರತಿಭಟನೆಯಲ್ಲಿನ ಭಾಗವಹಿಸುವಿಕೆ ಒಸಿಐ ಕಾರ್ಡ್ ಹೊಂದಿರುವವರಿಗೆ ಅನ್ವಯಿಸುವ ನಿಯಮಗಳು ಹಾಗೂ ಭಾರತದಲ್ಲಿ ವಾಸ್ತವ್ಯ ಹೂಡಲು ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿರಬಹುದು ಎಂದು ಸೋಮಯ್ಯ ಆರೋಪಿಸಿದ್ದರು. ಅಲ್ಲದೆ, ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಅವರನ್ನು ಗಡೀಪಾರು ಮಾಡುವ ಸಾಧ್ಯತೆಯನ್ನೂ ಪರಿಗಣಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಅವರ ಜೊತೆ ಸಂಗಾತಿ ಹಾಗೂ ನಟಿ ಲೇಖಾ ವಾಷಿಂಗ್ಟನ್ ಹಾಗೂ ಸೋದರ ಸಂಬಂಧಿ ಝೈನ್ ಮೇರಿ ಖಾನ್ ಕೂಡ ಪಾಲ್ಗೊಂಡಿದ್ದರು. ಪ್ರತಿಭಟನೆಯ ವೇಳೆ ಮೂವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು.
“ಭಾರತದ ಪ್ರಜೆಯಲ್ಲದಿದ್ದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ವಲಸೆ ಕಾಯ್ದೆಯ ಸಂಬಂಧಿತ ನಿಬಂಧನೆಯಡಿ ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇಕೆ ಎಂದಿದ್ದ ಇಮ್ರಾನ್ ಖಾನ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಇಮ್ರಾನ್ ಖಾನ್, ತಾವು ಯಾವುದೇ ಬೇಡಿಕೆಗಳನ್ನು ಮುಂದಿಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
“ನನಗೆ ಯಾವುದೇ ಬೇಡಿಕೆಗಳಿಲ್ಲ. ಈ ನಗರದ ನಿವಾಸಿಯಾಗಿ, ಒಬ್ಬ ವ್ಯಕ್ತಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಜನರ ಸಂಚಾರ ಸ್ವಾತಂತ್ರ್ಯವನ್ನು ಏಕೆ ನಿರ್ಬಂಧಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಜನರ ಧ್ವನಿಯನ್ನು ಏಕೆ ಹತ್ತಿಕ್ಕಲಾಗುತ್ತಿದೆ? ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಅವರು ಹೇಳಿದ್ದರು.
ತಾವು ಯಾವುದೇ ಸಂಘಟನೆಯ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ; ವೈಯಕ್ತಿಕ ನೆಲೆಯಲ್ಲಿ ಬಂದಿರುವುದಾಗಿ ಅವರು ಹೇಳಿದ್ದರು.
“ನಾನು ಯಾವುದೇ ಸಂಘಟನೆಯ ಭಾಗವಲ್ಲ. ನಾನು ಒಬ್ಬ ವ್ಯಕ್ತಿಯಾಗಿ, ನನ್ನದೇ ಪ್ರತಿನಿಧಿಯಾಗಿ ನಿಲ್ಲುತ್ತೇನೆ” ಎಂದು ಇಮ್ರಾನ್ ಖಾನ್ ಹೇಳಿದ್ದರು.
ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದ ಸ್ವಲ್ಪ ಸಮಯದ ಬಳಿಕ ಇಮ್ರಾನ್ ಖಾನ್ ಪೊಲೀಸ್ ವಾಹನದೊಳಗಿಂದಲೇ ಸೆಲ್ಫಿ ಹಂಚಿಕೊಂಡಿದ್ದರು. ಅದರೊಂದಿಗೆ, “ಬಹುಶಃ ನಾನು ಒಂದು ಸುತ್ತು ಹೋಗಿ ಬರಲಿದ್ದೇನೆ” (Apparently I’m going for a drive) ಎಂದು ಬರೆದಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ