ತನ್ನ ಬುಡಕ್ಕೇ ಬಂದಾಗ…| ರಷ್ಯಾ ತೈಲ ಖರೀದಿಗೆ ಭಾರತದ ಮೇಲೆ ಉದ್ದೇಶಿತ ಶೇ.100 ಸುಂಕಕ್ಕೆ ತಾತ್ಕಾಲಿಕ ವಿನಾಯಿತಿ ಘೋಷಿಸಿದ ಟ್ರಂಪ್

ವಾಷಿಂಗ್ಟನ್‌: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ ಮತ್ತು ಚೀನಾಕ್ಕೆ ದೊಡ್ಡ ಮಟ್ಟದ ರಿಲೀಫ್‌ ನೀಡುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಸುಂಕ ಹಾಗೂ ನಿರ್ಬಂಧಗಳ ಜಾರಿಯನ್ನು ಟ್ರಂಪ್ ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಈ ಕ್ರಮ ಜಾರಿಗೆ ಬರಲು ಒಂದು ದಿನ ಬಾಕಿ ಇರುವಾಗ, ಕಳೆದ ತಿಂಗಳು ಸಹಿ ಹಾಕಿದ್ದ ಕಾನೂನಿನ ಅಡಿಯಲ್ಲಿ ವಿಧಿಸಬೇಕಿದ್ದ ಹಲವು ಸುಂಕ ಮತ್ತು ನಿರ್ಬಂಧಗಳಿಂದ ವಿನಾಯಿತಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಬಿಡುಗಡೆಯಾದ ಕಾರ್ಯಕಾರಿ ಆದೇಶದಲ್ಲಿ, “ಗ್ರಹಾಂ ಕಾಯ್ದೆಯಲ್ಲಿ (Graham Act) ಉಲ್ಲೇಖಿಸಿರುವ ನಿರ್ಬಂಧಗಳು, ನಿರ್ಬಂಧಾತ್ಮಕ ಕ್ರಮಗಳು ಹಾಗೂ ಸುಂಕಗಳ ಅನ್ವಯವನ್ನು ನಾನು ಈ ಮೂಲಕ ಮನ್ನಾ ಮಾಡುತ್ತಿದ್ದೇನೆ. ಇಂತಹ ವಿನಾಯಿತಿಯನ್ನು ಈ ಸಂದರ್ಭದಲ್ಲಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಪ್ರಮಾಣೀಕರಿಸಿ ಕಾಂಗ್ರೆಸ್‌ಗೆ ಸಲ್ಲಿಸಿದ್ದೇನೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಆದರೆ, ಈ ಆದೇಶವು ರಷ್ಯಾಕ್ಕೆ ಸಂಬಂಧಿಸಿದ ಸುಂಕಗಳ ಜಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತದೆಯೇ ಹೊರತು, ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯವೆಂದು ಭಾವಿಸಿದರೆ ಟ್ರಂಪ್ ಮತ್ತೆ ಈ ಸುಂಕಗಳನ್ನು ಜಾರಿಗೊಳಿಸಬಹುದಾಗಿದೆ.

ಏನಿದು ರಷ್ಯಾ ವಿರುದ್ಧದ ನಿರ್ಬಂಧಗಳ ಕಾಯ್ದೆ?
ಅಮೆರಿಕದ ಸೆನೆಟರ್ ಲಿಂಡ್ಸೆ ಒ. ಗ್ರಹಾಂ ಅವರ ಹೆಸರನ್ನು ಒಳಗೊಂಡ ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ ಆಫ್ 2026’ (Lindsey O. Graham Sanctioning Russia and Iran Act of 2026) ಎಂಬ ಕಾನೂನಿಗೆ ಟ್ರಂಪ್ ಕಳೆದ ತಿಂಗಳು ಸಹಿ ಹಾಕಿದ್ದರು. ಉಕ್ರೇನ್‌ಗೆ ಬಲವಾದ ಬೆಂಬಲ ನೀಡುತ್ತಿದ್ದ ಅಮೆರಿಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಸೆನೆಟರ್ ಲಿಂಡ್ಸೆ ಗ್ರಹಾಂ, ಈ ವರ್ಷದ ಜುಲೈನಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ನೀಡಿ ಮರಳಿದ ಕೆಲವೇ ದಿನಗಳಲ್ಲಿ ನಿಧನರಾಗಿದ್ದರು.
ಈ ಕಾನೂನಿನ ಪ್ರಕಾರ, ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಪ್ರಮುಖ ಐದು ದೇಶಗಳಾದ ಚೀನಾ, ಭಾರತ, ಸ್ಲೊವಾಕಿಯಾ, ಹಂಗೇರಿ ಮತ್ತು ಅಜರ್‌ಬೈಜಾನ್‌ನಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಟ್ರಂಪ್‌ಗೆ 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಇದರ ಜೊತೆಗೆ ರಷ್ಯಾದ ಹಲವು ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸುವುದು ಹಾಗೂ ಅಮೆರಿಕಕ್ಕೆ ಆಮದಾಗುವ ರಷ್ಯಾದ ಎಲ್ಲ ಇಂಧನ ಉತ್ಪನ್ನಗಳ ಮೇಲೆ ಶೇ.500ರಷ್ಟು ಸುಂಕ ಹೇರಲು ಅವಕಾಶ ಕಲ್ಪಿಸಲಾಗಿತ್ತು.
ಈ ನಿರ್ಬಂಧಗಳನ್ನು ಜಾರಿಗೊಳಿಸಲು ನೀಡಲಾಗಿದ್ದ ಒಂದು ತಿಂಗಳ ಗಡುವು ಅಕ್ಟೋಬರ್ 18ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ, ಗಡುವು ಮುಗಿಯುವ ಒಂದು ದಿನ ಮುಂಚಿತವಾಗಿ ಟ್ರಂಪ್ ಸುಂಕಗಳ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.
ಈ ಕಾನೂನಿನ ಮುಖ್ಯ ಉದ್ದೇಶ ಉಕ್ರೇನ್ ವಿರುದ್ಧದ ಯುದ್ಧವನ್ನು ಮುಂದುವರಿಸಲು ರಷ್ಯಾಕ್ಕೆ ನೆರವಾಗುತ್ತಿರುವ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವುದಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ರಷ್ಯಾದ ಅಧಿಕಾರಿಗಳು, ಬ್ಯಾಂಕ್‌ಗಳು, ಇಂಧನ ವಲಯದ ಹಿತಾಸಕ್ತಿಗಳು ಹಾಗೂ ರಷ್ಯಾದ ಸೇನಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ವಿದೇಶಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳಲು ಇದು ಅವಕಾಶ ನೀಡುತ್ತದೆ. ರಷ್ಯಾದ ತೈಲ ಮತ್ತು ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ರಷ್ಯಾದ ಜೊತೆ ವ್ಯಾಪಾರ ನಡೆಸುವ ದೇಶಗಳ ಮೇಲೂ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ಈ ಕಾನೂನು ನೀಡಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ಅವರ ಸರ್ಕಾರದ ಹಿರಿಯ ನಾಯಕರ ವಿರುದ್ಧ ನಿರ್ಬಂಧ ವಿಧಿಸುವ ಅಂಶವೂ ಇದರಲ್ಲಿ ಸೇರಿತ್ತು.
ಒಟ್ಟಾರೆ, ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವುದಕ್ಕೆ ಈ ಕಾನೂನು ಅವಕಾಶ ಕಲ್ಪಿಸಿತ್ತು. ಇದರಿಂದ ಭಾರತ ಮತ್ತು ಚೀನಾ ಸೇರಿದಂತೆ 10 ದೇಶಗಳು ಅಮೆರಿಕದ ಹೆಚ್ಚುವರಿ ಸುಂಕದ ಭೀತಿಗೆ ಸಿಲುಕಿದ್ದವು.

ಪ್ರಮುಖ ಸುದ್ದಿ :-   ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು

ಭಾರತದ ರಫ್ತು ವಹಿವಾಟಿನ ಮೇಲೆ ಯಾವ ಪರಿಣಾಮ ಬೀರುತ್ತಿತ್ತು?
ಭಾರತದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದರೆ, ಅದು ಈಗಾಗಲೇ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ವಿಧಿಸುತ್ತಿರುವ ಶೇ.10ರಷ್ಟು ಸುಂಕದ ಜೊತೆಗೆ ಸೇರ್ಪಡೆಯಾಗುತ್ತಿತ್ತು.
ಆದರೆ, ಹೊಸ ಸುಂಕಗಳ ನಿಖರ ಪ್ರಮಾಣ ಮತ್ತು ಅನ್ವಯದ ವಿವರಗಳು ಪ್ರಕಟವಾದ ನಂತರವಷ್ಟೇ ಭಾರತದ ರಫ್ತು ವಹಿವಾಟಿನ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತಿತ್ತು.
ಕಳೆದ ವರ್ಷ ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ಆಕ್ಷೇಪಿಸಿದ್ದ ಟ್ರಂಪ್, ಭಾರತದ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಿದ್ದರು. ಅದಕ್ಕೂ ಮೊದಲು, ಪ್ರತಿ ಸುಂಕದ (Reciprocal Tariff) ರೂಪದಲ್ಲಿ ಶೇ.25ರಷ್ಟು ಸುಂಕ ಜಾರಿಯಲ್ಲಿತ್ತು. ಹೀಗಾಗಿ, ಭಾರತಕ್ಕೆ ಒಟ್ಟು ಸುಂಕದ ಹೊರೆ ಹೆಚ್ಚಾಗಿತ್ತು.
ಆದರೆ, 2026ರ ಫೆಬ್ರವರಿಯಲ್ಲಿ ರಷ್ಯಾದ ಕಚ್ಚಾ ತೈಲ ಆಮದಿಗೆ ಸಂಬಂಧಿಸಿದ ಹೆಚ್ಚುವರಿ ಶೇ.25ರಷ್ಟು ಸುಂಕವನ್ನು ಅಮೆರಿಕ ಹಿಂಪಡೆದಿತ್ತು. ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಚೌಕಟ್ಟಿನ ಒಪ್ಪಂದದ ಭಾಗವಾಗಿ ಪ್ರತಿ ಸುಂಕವನ್ನೂ ಶೇ.25ರಿಂದ ಶೇ.18ಕ್ಕೆ ಇಳಿಸಲಾಗಿತ್ತು.
ಆದರೆ ನಂತರದಲ್ಲಿ ಗ್ರಹಾಂ ಕಾನೂನಡಿ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವ ಭಾರತದ ಮೇಲೆ ಮತ್ತೆ ಶೇ.100ರಷ್ಟು ಸುಂಕ ವಿಧಿಸುವ ಸಾಧ್ಯತೆ ವ್ಯಾಪಾರ ವಲಯದಲ್ಲಿ ಆತಂಕ ಮೂಡಿಸಿತ್ತು. ಇದೀಗ ಟ್ರಂಪ್ ಕೈಗೊಂಡಿರುವ ತಾತ್ಕಾಲಿಕ ತಡೆ ನಿರ್ಧಾರ ಭಾರತಕ್ಕೆ ನಿರಾಳತೆ ನೀಡಿದೆ.
ಇಂಧನ ಭದ್ರತೆಗೆ ಆದ್ಯತೆ: ಭಾರತದ ಸ್ಪಷ್ಟ ನಿಲುವು
ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಯನ್ನು ಅಮೆರಿಕದ ಕಾಂಗ್ರೆಸ್ ಕಳೆದ ತಿಂಗಳು ಅಂಗೀಕರಿಸಿದ ಸಂದರ್ಭದಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ದೇಶದ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಭಾರತ ಬದ್ಧವಾಗಿದೆ ಎಂದು ತಿಳಿಸಿತ್ತು.
“ಹಲವು ಸಂದರ್ಭಗಳಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವಂತೆ, ಭಾರತದ 140 ಕೋಟಿ ಜನರಿಗೆ ಇಂಧನ ಭದ್ರತೆಯನ್ನು ಖಚಿತಪಡಿಸುವುದಕ್ಕೆ ದೇಶ ದೃಢವಾಗಿ ಬದ್ಧವಾಗಿದೆ. ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿವಿಧ ಮೂಲಗಳಿಂದ ಇಂಧನವನ್ನು ಖರೀದಿಸುವ ಮೂಲಕ ಈ ಗುರಿಯನ್ನು ಮುಂದುವರಿಸಲಾಗುವುದು” ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾದಿಂದ ಭಾರತದ ತೈಲ ಖರೀದಿಯ ವಿಚಾರವಾಗಿ ಅಮೆರಿಕದ ಹಲವು ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದೂ ಸಚಿವಾಲಯ ತಿಳಿಸಿತ್ತು.
“ಈ ವಿಚಾರವು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಮೇಲೂ ಬೀರಬಹುದಾದ ಪರಿಣಾಮಗಳನ್ನು ಭಾರತದ ಪರವಾಗಿ ಅಮೆರಿಕದ ಗಮನಕ್ಕೆ ಸ್ಪಷ್ಟವಾಗಿ ತರಲಾಗಿದೆ” ಎಂದು ಸಚಿವಾಲಯ ಹೇಳಿತ್ತು.

ಪ್ರಮುಖ ಸುದ್ದಿ :-   2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ಪುತಿನ್ ಜತೆ ಟ್ರಂಪ್ ನಿಕಟತೆ; ಝೆಲೆನ್‌ಸ್ಕಿ ವಿರುದ್ಧ ಟೀಕೆ
ರಷ್ಯಾದ ಮೇಲಿನ ಸುಂಕಗಳ ಜಾರಿಯನ್ನು ಮುಂದೂಡುವ ಟ್ರಂಪ್ ಅವರ ನಿರ್ಧಾರವು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಜೊತೆ ಅವರು ಹೆಚ್ಚು ನಿಕಟವಾಗುತ್ತಿರುವ ಬೆಳವಣಿಗೆಯ ನಡುವೆಯೇ ಹೊರಬಿದ್ದಿದೆ. ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರನ್ನು ಟ್ರಂಪ್ ಬಹಿರಂಗವಾಗಿ ಟೀಕಿಸುತ್ತಿದ್ದು, ಉಕ್ರೇನ್‌ಗೆ ಹೊಸ ನಾಯಕನ ಅಗತ್ಯವಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಪುತಿನ್ ಅವರ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಟ್ರಂಪ್ ಘೋಷಿಸಿದ್ದರು. ಅದರಂತೆ, ರಷ್ಯಾ ತಕ್ಷಣವೇ 3 ಲಕ್ಷ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಡೀಸೆಲ್ ಅನ್ನು ಅಮೆರಿಕಕ್ಕೆ ಪೂರೈಸಲಿದ್ದು, ಮುಂಬರುವ ತಿಂಗಳುಗಳಲ್ಲಿಯೂ ಹೆಚ್ಚಿನ ಪ್ರಮಾಣದ ಇಂಧನ ಸಾಗಣೆ ಮುಂದುವರಿಯಲಿದೆ ಎಂದು ತಿಳಿಸಲಾಗಿತ್ತು.
ರಷ್ಯಾದ ಜೊತೆ ಅಮೆರಿಕ ಮಾಡಿಕೊಂಡಿರುವ ಈ ಡೀಸೆಲ್ ಒಪ್ಪಂದವನ್ನು ಝೆಲೆನ್‌ಸ್ಕಿ ತೀವ್ರವಾಗಿ ಟೀಕಿಸಿದ್ದರು. ಈ ಒಪ್ಪಂದವನ್ನು “ನಮ್ಮ ಪಾಲುದಾರರಿಗೆ ತಕ್ಕುದಲ್ಲದ ನಡೆ” ಹಾಗೂ “ದುರ್ಬಲ ನಿರ್ಧಾರ” ಎಂದು ಅವರು ಬಣ್ಣಿಸಿದ್ದರು. ಒಪ್ಪಂದದ ಮೂಲಕ ಅಮೆರಿಕ ನೀಡಿದ ನೆರವಿಗೆ ಪ್ರತಿಯಾಗಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ತನ್ನ “ಕೃತಜ್ಞತೆ” ತೋರಿಸುತ್ತಿದೆ ಎಂದೂ ಅವರು ಆರೋಪಿಸಿದ್ದರು.
ಇದೇ ವೇಳೆ, ರಷ್ಯಾ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಒಪ್ಪಂದ ಮಾಡಿಕೊಳ್ಳುವಲ್ಲಿ ಝೆಲೆನ್‌ಸ್ಕಿ ವಿಫಲರಾಗಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ. ಅವರ “ಅಸಮರ್ಥತೆ”ಯನ್ನು ಉಲ್ಲೇಖಿಸಿ, ಉಕ್ರೇನ್‌ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಒಪ್ಪಂದ ಮಾಡಿಕೊಳ್ಳಬಲ್ಲ ಹೊಸ ನಾಯಕನನ್ನು ಅವರು ಆಯ್ಕೆ ಮಾಡಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ. ಏಕೆಂದರೆ, ಯಾವುದೋ ಕಾರಣಕ್ಕೆ ಝೆಲೆನ್‌ಸ್ಕಿ ಎಂದಿಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement