ಟೈಗರ್ ಶ್ರಾಫ್ ಮೂಲ ಟಾರ್ಗೆಟ್‌ ಆಗಿರಲಿಲ್ಲ, ಶೂಟರ್‌ಗಳು ಬೇರೊಬ್ಬರನ್ನು ಕೊಲ್ಲಲು ಬಂದಿದ್ದರು : ವರದಿ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹತ್ಯೆಗೆ ಯತ್ನ ನಡೆದಿತ್ತು ಎನ್ನಲಾದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಗುಂಡಿನ ದಾಳಿ ನಡೆಸಿದ ಆರೋಪಿಗಳ ಮೂಲ ಗುರಿ ಟೈಗರ್ ಶ್ರಾಫ್ ಆಗಿರಲಿಲ್ಲ. ಬದಲಿಗೆ, ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಅವರು ಮುಂಬೈಗೆ ಬಂದಿದ್ದರು ಎಂಬ ಆಘಾತಕಾರಿ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳುತಿಳಿಸಿವೆ.
ಬಿಹಾರದ 22 ವರ್ಷದ ಹೃತಿಕ್ ಅಲಿಯಾಸ್ ರೋಷನ್ ಹಾಗೂ ಹರಿಯಾಣದ 18 ವರ್ಷದ ರೆಹಾನ್ ಮತ್ತು ಫೂಲ್ ಸಿಂಗ್ ಎಂಬವರು ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ಫುಟ್‌ಬಾಲ್ ಪಂದ್ಯವೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಟೈಗರ್‌ ಶ್ರಾಫ್‌ ಅವರನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು.
ಮಂಗಳವಾರ ಲಭ್ಯವಾದ ಮಾಹಿತಿಯ ಪ್ರಕಾರ, ಮೂವರು ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ಮತ್ತೊಬ್ಬ ಗಣ್ಯ ವ್ಯಕ್ತಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಮುಂಬೈಗೆ ಬಂದಿದ್ದರು ಎಂಬುದು ತಿಳಿದುಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ಆ ವ್ಯಕ್ತಿ ಆಗಾಗ್ಗೆ ಭೇಟಿ ನೀಡುತ್ತಿದ್ದ ಪ್ರದೇಶಗಳನ್ನು ಪರಿಶೀಲಿಸಿದ ಆರೋಪಿಗಳಿಗೆ, ಅವರನ್ನು ತಲುಪುವುದು ಸಾಧ್ಯವಾಗುವುದಿಲ್ಲ ಎಂಬುದು ಅರಿವಿಗೆ ಬಂದಿತ್ತು. ಹೀಗಾಗಿ ಅವರು ತಮ್ಮ ಗುರಿಯನ್ನು ಬದಲಿಸಿಕೊಂಡು ಟೈಗರ್ ಶ್ರಾಫ್ ಅವರನ್ನು ಟಾರ್ಗೆಟ್ ಮಾಡಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಅಭಿಮಾನಿಗಳ ರೀಲ್ಸ್‌ನಿಂದ ಸಿಕ್ಕ ಸುಳಿವು
ಟೈಗರ್ ಶ್ರಾಫ್ ಅವರಿಗೆ ಪೊಲೀಸ್ ಭದ್ರತೆ ಇಲ್ಲ ಎಂಬ ವಿಚಾರವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ರೀಲ್ಸ್‌ಗಳ ಮೂಲಕ ಆರೋಪಿಗಳು ತಿಳಿದುಕೊಂಡಿದ್ದರು ಎನ್ನಲಾಗಿದೆ. ಇದೇ ಮಾಹಿತಿ ನಟನನ್ನು ಟಾರ್ಗೆಟ್‌ ಮಾಡಲು ಈಆರೋಪಿಗಳಿಗೆ ಪ್ರೇರಣೆಯಾಯಿತು. ನಂತರ ಆರೋಪಿಗಳು ಟೈಗರ್ ಶ್ರಾಫ್ ಮತ್ತು ಅವರ ಅಭಿಮಾನಿಗಳ ಇನ್‌ಸ್ಟಾಗ್ರಾಂ ಖಾತೆಗಳನ್ನು ನಿರಂತರವಾಗಿ ಗಮನಿಸಲು ಆರಂಭಿಸಿದ್ದರು. ಈ ಮೂಲಕ ನಟ ಎಲ್ಲಿಗೆ ತೆರಳುತ್ತಾರೆ, ಅವರ ಚಲನವಲನ ಹೇಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದರು ಎಂದು ತನಿಖೆಯ ಮಾಹಿತಿ ಉಲ್ಲೇಖಿಸಿ ವರದಿ ತಿಳಿಸಿದೆ.
ಬಾಲಿವುಡ್‌ನಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಟೈಗರ್ ಶ್ರಾಫ್ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ದಾಳಿಯ ವೇಳೆ ನಟನ ಕಾರಿನ ಮೇಲೆ ಏಳು ಸುತ್ತು ಗುಂಡು ಹಾರಿಸಲಾಗಿತ್ತು. ಇನ್ನಷ್ಟು ಗುಂಡು ಹಾರಿಸುವ ಉದ್ದೇಶ ಆರೋಪಿಗಳಿಗಿತ್ತಾದರೂ, ಬಂದೂಕಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಅದು ಜಾಮ್ ಆಗಿದ್ದರಿಂದ ಹೆಚ್ಚಿನ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯಿಂದ ಟೈಗರ್ ಶ್ರಾಫ್ ಮತ್ತು ಅವರ ಕಾರಿನ ಚಾಲಕ ಗಾಯಗೊಂಡಿದ್ದರು. ಆದರೂ, ಅವರು ಅಲ್ಲಿಂದ ಕಾರಿನಲ್ಲಿ ತೆರಳುವಲ್ಲಿ ಯಶಸ್ವಿಯಾಗಿದ್ದರು.

ಪ್ರಮುಖ ಸುದ್ದಿ :-   ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಟಿ ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಅಭಿಮಾನಿಯ ಹುಚ್ಚಾಟ

‘ಎಚ್ಚರಿಕೆ ನೀಡಿದರೂ ಕೇಳಲಿಲ್ಲ’: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೇಳಿಕೆ
ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಘಟನೆಯ ಹೊಣೆ ಹೊತ್ತುಕೊಂಡಿತ್ತು. ನಟ ಸಲ್ಮಾನ್ ಖಾನ್ ಅವರ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಟೈಗರ್ ಶ್ರಾಫ್ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅವರು ಅದನ್ನು ಪಾಲಿಸದ ಕಾರಣ ಗುರಿಯಾಗಿಸಿಕೊಂಡಿದ್ದೇವೆ ಎಂದು ಗ್ಯಾಂಗ್‌ನ ಸದಸ್ಯನೆನ್ನಲಾದ ವ್ಯಕ್ತಿ ಹೇಳಿಕೊಂಡಿದ್ದ.
ದಾಳಿಯ ಬಳಿಕ ಬಿಡುಗಡೆ ಮಾಡಲಾದ ಆಡಿಯೊ ಕ್ಲಿಪ್‌ನಲ್ಲಿ ಮಾತನಾಡಿದ್ದ ಅನಿಲ ಪಂಡಿತ್ ಎಂದು ಹೇಳಿಕೊಂಡಾತ, “ನಾನು ಅನಿಲ ಪಂಡಿತ್. ಲಾರೆನ್ಸ್ ಬಿಷ್ಣೋಯ್‌ಗೆ ಕಿರಿಯ ಸಹೋದರನಿದ್ದಂತೆ. ಇಂದು ಟೈಗರ್ ಶ್ರಾಫ್‌ಗೆ ಸಂಬಂಧಿಸಿದಂತೆ ನಡೆದ ಘಟನೆಯ ಹೊಣೆಯನ್ನು ನಾವು ಹೊತ್ತುಕೊಳ್ಳುತ್ತೇವೆ” ಎಂದು ಹೇಳಿದ್ದಾನೆ ಎನ್ನಲಾಗಿದೆ. “ನಾವು ಅವರಿಗೆ ಎಚ್ಚರಿಕೆ ನೀಡಿದ್ದೆವು. ಆದರೆ, ಅವರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳಲಿಲ್ಲ” ಎಂದೂ ಆತ ಹೇಳಿಕೊಂಡಿದ್ದಾನೆ.
“ಸಂಪೂರ್ಣ ಚಿತ್ರರಂಗದಲ್ಲಿ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಕೆಲಸ ಮಾಡುವವರು ಅಥವಾ ಸಲ್ಮಾನ್ ಖಾನ್ ಅವರ ಜೊತೆ ಕೆಲಸ ಮಾಡುವವರು ಯಾರೇ ಆಗಿರಲಿ, ಅವರನ್ನು ಹತ್ಯೆ ಮಾಡಲಾಗುತ್ತದೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆ” ಎಂದು ಆಡಿಯೊದಲ್ಲಿ ಬೆದರಿಕೆ ಹಾಕಲಾಗಿದೆ.

ಪ್ರಮುಖ ಸುದ್ದಿ :-   “ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್”: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರ್ಣಿಕದ ಅರ್ಥವೇನು?

₹50 ಸಾವಿರ ಮುಂಗಡ, ವಿದೇಶದಲ್ಲಿ ಉದ್ಯೋಗದ ಆಮಿಷ
ಟೈಗರ್ ಶ್ರಾಫ್ ಅವರ ಮೇಲೆ ದಾಳಿ ನಡೆಸಲು ಆರೋಪಿಗಳಿಗೆ ಮುಂಗಡವಾಗಿ ₹50,000 ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಪೂರ್ಣಗೊಳಿಸಿದ ಬಳಿಕ ಇನ್ನಷ್ಟು ಹಣ ನೀಡುವುದರ ಜೊತೆಗೆ ವಿದೇಶದಲ್ಲಿ ಉದ್ಯೋಗ ಒದಗಿಸುವುದಾಗಿಯೂ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಗುಂಡಿನ ದಾಳಿ ನಡೆಸಿದ ಬಳಿಕ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಆರೋಪಿಗಳು ತಮ್ಮನ್ನು ನಿರ್ದೇಶಿಸುತ್ತಿದ್ದ ವ್ಯಕ್ತಿಗಳಿಗೆ ಮಾಹಿತಿ ನೀಡಿದ್ದರು ಎಂದು ತನಿಖೆಯ ಮೂಲಗಳು ತಿಳಿಸಿವೆ.
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳ ಮೂಲ ಗುರಿ ಬೇರೊಬ್ಬ ಗಣ್ಯ ವ್ಯಕ್ತಿಯಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿರುವುದು ತನಿಖೆಗೆ ಹೊಸ ಆಯಾಮ ನೀಡಿದೆ. ಆರೋಪಿಗಳು ಹೇಳಿರುವ ಈ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement