ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಡಿಯೋ | ಪ್ರಕರಣದಲ್ಲಿ ಸಿಲುಕಿಸಲು ಮಹಾಂತರ ಮನೆಯಲ್ಲಿ ತಾನೇ ಡ್ರಗ್ಸ್‌ ಇಟ್ಟಿದ್ದ ಪೊಲೀಸ್‌ ಅಧಿಕಾರಿ ; ರಹಸ್ಯ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ಚಂಡೀಗಢ : ಧಾರ್ಮಿಕ ಮುಖಂಡರೊಬ್ಬರನ್ನು ಮಾದಕವಸ್ತು ಪ್ರಕರಣವೊಂದರಲ್ಲಿ ಸಿಲುಕಿಸಲು ಪೊಲೀಸರು ರೂಪಿಸಿದ್ದ ಸಂಚು, ಗುಪ್ತ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಿಂದ ಬಯಲಾಗಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಅವರ ಮನೆಯ ಹಾಸಿಗೆಯ ಕೆಳಗೆ ಹೆರಾಯಿನ್‌ ಪ್ಯಾಕೆಟ್‌ ಇಟ್ಟಿದ್ದಾರೆ ಎನ್ನಲಾದ ಇದರ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ.
ಲೂಧಿಯಾನ ಜಿಲ್ಲೆಯ ಖನ್ನಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಖನ್ನಾ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಡಾ. ದರ್ಪಣ ಅಹ್ಲುವಾಲಿಯಾ ಅವರು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಸುಖದೇವ ಸಿಂಗ್‌ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಯಿಂದಲೂ ಅವರನ್ನು ಹೊರಗಿಡುವಂತೆ ಆದೇಶಿಸಿದ್ದಾರೆ. ಇದೇ ಪ್ರಕರಣದಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಂಧಿತರಾಗಿದ್ದ ಹಿಂದೂ ಧಾರ್ಮಿಕ ಮುಖಂಡ ಮಹಾಂತ ಕಾಶ್ಮೀರ್‌ ಗಿರಿ ಅವರನ್ನೂ ಪ್ರಕರಣದಿಂದ ಬಿಡುಗಡೆ ಮಾಡಲಾಗಿದೆ.

ಖನ್ನಾ ಪಟ್ಟಣದಲ್ಲಿರುವ ಮಹಾಂತ್‌ ಕಾಶ್ಮೀರ್‌ ಗಿರಿ ಅವರ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿ ಈ ವಿವಾದಕ್ಕೆ ಕೇಂದ್ರಬಿಂದುವಾಗಿದೆ. ಮಹಾಂತ ಅವರ ಚಾಲಕ ಗುರ್ಜಂತ್‌ ಸಿಂಗ್‌ ಅಲಿಯಾಸ್‌ ಜಂಟಾ ಎಂಬಾತನನ್ನು ಪೊಲೀಸರು ಮೊದಲು ಬಂಧಿಸಿದ್ದರು. ಆತನ ಬಳಿ 7.5 ಗ್ರಾಂ ಹೆರಾಯಿನ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಬಳಿಕ ಚಾಲಕನ ವಿಚಾರಣೆ ವೇಳೆ ಮಹಾಂತ ಕಾಶ್ಮೀರ ಗಿರಿ ಅವರಿಗೂ ಮಾದಕವಸ್ತು ಸಾಗಾಟದ ಜಾಲಕ್ಕೂ ಸಂಬಂಧವಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಹಾಂತ ಅವರ ನಿವಾಸದ ಮೇಲೆ ಶೋಧ ಕಾರ್ಯಾಚರಣೆ ನಡೆಸಲು ಪೊಲೀಸ್‌ ತಂಡ ತೆರಳಿತ್ತು.
ಈ ವೇಳೆ ಮನೆಯಲ್ಲಿದ್ದ ಹಾಸಿಗೆಯ ಕೆಳಗೆ ಸುಮಾರು 30 ಗ್ರಾಂ ಹೆರಾಯಿನ್‌ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಇದರ ಆಧಾರದ ಮೇಲೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣ ದಾಖಲಿಸಿ ಮಹಾಂತ ಕಾಶ್ಮೀರ ಗಿರಿ ಅವರನ್ನು ಬಂಧಿಸಿದ್ದರು.
ಆದರೆ, ಮನೆಯಲ್ಲಿ ಅಳವಡಿಸಿದ್ದ ಗುಪ್ತ ಕ್ಯಾಮೆರಾದ ದೃಶ್ಯಗಳು ಈಗ ವೈರಲ್‌ ಆಗಿರುವ ವಿಡಿಯೊದಲ್ಲಿ ಎಎಸ್‌ಐ ಸುಖದೇವ ಸಿಂಗ್‌ ಅವರು ಸಾಮಾನ್ಯ ಉಡುಪಿನಲ್ಲಿ ಪೊಲೀಸ್‌ ತಂಡ ದಾಳಿ ನಡೆಸುವ ಮುನ್ನವೇ ಮಹಾಂತ ಅವರ ಮನೆಯ ಕೋಣೆಯೊಳಗೆ ಪ್ರವೇಶಿಸುವುದು ಕಂಡುಬಂದಿದೆ. ಬಳಿಕ ಅವರು ಹಾಸಿಗೆಯ ಕೆಳಗೆ ಯಾವುದೋ ಪ್ಯಾಕೆಟ್‌ ಇರಿಸುತ್ತಿರುವಂತೆ ದೃಶ್ಯದಲ್ಲಿ ಕಾಣಿಸುತ್ತದೆ.

ಪ್ರಮುಖ ಸುದ್ದಿ :-   ಆತ್ಮಹತ್ಯೆ ಮಾಡಿಕೊಳ್ಳಲು ಕಾರನ್ನು 7 ವಾಹನಗಳಿಗೆ ಡಿಕ್ಕಿ ಹೊಡೆಸಿದ ವ್ಯಕ್ತಿ !

ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸ್‌ ಸಿಬ್ಬಂದಿ ಮಹಾಂತ ಕಾಶ್ಮೀರ ಗಿರಿ ಅವರ ಜೊತೆ ಕೋಣೆಯೊಳಗೆ ಪ್ರವೇಶಿಸುತ್ತಾರೆ. ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಹಾಸಿಗೆಯ ಕೆಳಗಿನಿಂದಲೇ ಹೆರಾಯಿನ್‌ ಪ್ಯಾಕೆಟ್‌ ಪತ್ತೆಯಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅದಕ್ಕೂ ಮುನ್ನ ಅದೇ ಸ್ಥಳದಲ್ಲಿ ಎಎಸ್‌ಐ ಎನ್ನಲಾದ ವ್ಯಕ್ತಿ ಪ್ಯಾಕೆಟ್‌ ಇರಿಸಿರುವ ದೃಶ್ಯ ಗುಪ್ತ ಕ್ಯಾಮರಾದಲ್ಲಿ ಸೆರೆಯಾಗಿರುವುದು ಇಡೀ ಕಾರ್ಯಾಚರಣೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ವಿಡಿಯೊ ಬಹಿರಂಗವಾದ ಬೆನ್ನಲ್ಲೇ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.
ವೈರಲ್‌ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ಅಮಾನತುಗೊಂಡಿರುವ ಎಎಸ್‌ಐ ಸುಖದೇವ ಸಿಂಗ್‌ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವುದು, ಹೆರಾಯಿನ್‌ ಪತ್ತೆಯಾದ ಸಂದರ್ಭ ಹಾಗೂ ಅದರ ಹಿಂದಿನ ಸನ್ನಿವೇಶಗಳನ್ನು ಪರಿಶೀಲಿಸುವುದು ಎಸ್‌ಐಟಿಯ ಜವಾಬ್ದಾರಿಯಾಗಿದೆ. ಅಲ್ಲದೆ, ಈ ಕಾರ್ಯಾಚರಣೆಯಲ್ಲಿ ಇತರ ಪೊಲೀಸ್‌ ಸಿಬ್ಬಂದಿಯೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

ಆಮ್‌ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಅಕಾಲಿದಳ ಟೀಕೆ
ಈ ಘಟನೆ ಪಂಜಾಬ್‌ನಲ್ಲಿ ರಾಜಕೀಯ ವಾಗ್ದಾಳಿಗೂ ಕಾರಣವಾಗಿದೆ. ವೈರಲ್‌ ವಿಡಿಯೊ ಹಾಗೂ ಪೊಲೀಸರ ಕಾರ್ಯವೈಖರಿಯನ್ನು ಮುಂದಿಟ್ಟುಕೊಂಡು ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವಿರುದ್ಧ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಭಗವಂತ್‌ ಮಾನ್‌ ನೇತೃತ್ವದ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯ ಮಾದರಿಯನ್ನು ಪ್ರಶ್ನಿಸಿದ್ದಾರೆ. ”ಎಎಪಿ ಮಾದರಿಯ ಕಾನೂನು ಮತ್ತು ಸುವ್ಯವಸ್ಥೆಗೆ ಸ್ವಾಗತ ! ಖನ್ನಾ ಪೊಲೀಸ್‌ ಠಾಣೆಯ ಎಎಸ್‌ಐ ಒಬ್ಬರು ಮನೆಯೊಳಗೆ ನುಸುಳಿ, ಹಾಸಿಗೆಯ ಕೆಳಗೆ ರಹಸ್ಯವಾಗಿ ಮಾದಕವಸ್ತುಗಳ ಪ್ಯಾಕೆಟ್‌ ಇಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರಿಗೆ ಮನೆ ಬಾಗಿಲಿಗೇ ಸೇವೆ ಒದಗಿಸುವುದಾಗಿ ಎಎಪಿ ಭರವಸೆ ನೀಡಿತ್ತು. ಆದರೆ, ನಾಗರಿಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪಂಜಾಬ್‌ ಪೊಲೀಸರೇ ಮನೆ ಬಾಗಿಲಿಗೆ ಡ್ರಗ್ಸ್‌ ತಂದು ಇಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಬಾದಲ್‌ ವ್ಯಂಗ್ಯವಾಡಿದ್ದಾರೆ.
ಗುಪ್ತ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾದ ದೃಶ್ಯಗಳು ಬಹಿರಂಗವಾದ ಬೆನ್ನಲ್ಲೇ ಪೊಲೀಸ್‌ ಅಧಿಕಾರಿ ಅಮಾನತು, ಮಹಾಂತ್‌ ಬಿಡುಗಡೆ ಹಾಗೂ ಎಸ್‌ಐಟಿ ತನಿಖೆಗೆ ಆದೇಶಿಸಿರುವುದು ಪ್ರಕರಣದ ಗಂಭೀರತೆಯನ್ನು ಎತ್ತಿತೋರಿಸಿದೆ. ವಿಡಿಯೊದ ಸತ್ಯಾಸತ್ಯತೆ, ಪೊಲೀಸ್‌ ಕಾರ್ಯಾಚರಣೆಯ ಹಿಂದಿನ ಉದ್ದೇಶ ಮತ್ತು ಇತರ ಅಧಿಕಾರಿಗಳ ಪಾತ್ರದ ಕುರಿತು ಎಸ್‌ಐಟಿ ತನಿಖೆಯ ವರದಿಯಿಂದ ಮತ್ತಷ್ಟು ವಿವರಗಳು ಹೊರಬರಬೇಕಿದೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಆರೋಪಗಳ ತನಿಖೆ: ಎಸ್‌ಐಟಿ ಮುಖ್ಯಸ್ಥರಾಗಿ ಎಡಿಜಿಪಿ ಆರ್ ಹಿತೇಂದ್ರ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement