ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಇ20 ಪೆಟ್ರೋಲ್‌ನಲ್ಲೇ ಶೇ.30ಕ್ಕೂ ಅಧಿಕ ಎಥೆನಾಲ್ ಮಿಶ್ರಣ: ಲ್ಯಾಬ್‌ ಪರೀಕ್ಷಾ ವರದಿ ಉಲ್ಲೇಖಿಸಿ ಸಚಿವ ರಿಜ್ವಾನ್‌ ಆರೋಪ

ಬೆಂಗಳೂರು: ದೇಶದಲ್ಲಿ ವಾಹನಗಳಿಗೆ ಪೂರೈಸಲಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ (Ethanol) ಮಿಶ್ರಣ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಗಂಭೀರ ಆರೋಪ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಶೇ.20ರ ಮಿತಿಯನ್ನು ಮೀರಿ ಶೇ.31.2ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಕಂಪನಿಗಳ ಪೆಟ್ರೋಲ್‌ನಲ್ಲಿ ಈ ಪ್ರಮಾಣ ದಾಖಲಾಗಿದ್ದು, ತಪ್ಪಿತಸ್ಥ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಜಿಲ್ಲೆಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಷನ್ ಲ್ಯಾಬೊರೇಟರೀಸ್ (NABL) ಮಾನ್ಯತೆ ಹಾಗೂ ಐಎಸ್‌ಒ (ISO) ಪ್ರಮಾಣೀಕರಣ ಹೊಂದಿರುವ ಬೆಂಗಳೂರಿನ ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪರೀಕ್ಷಾ ವರದಿಯನ್ನು ನೀಡಿದೆ. ಈ ವರದಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಪೆಟ್ರೋಲ್‌ನಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಪೆಟ್ರೋಲ್‌ನಲ್ಲಿ ಶೇ.30.5ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ಹೇಳಿದರು.
ಇನ್ನುಳಿದ ಮಾದರಿಗಳಲ್ಲಿಯೂ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಎಚ್‌ಪಿಸಿಎಲ್‌ನ ಎಂಎಸ್ (Motor Spirit) ಪೆಟ್ರೋಲ್‌ನಲ್ಲಿ ಶೇ.27ರಷ್ಟು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (BPCL) ಸ್ಪೀಡ್ ಪೆಟ್ರೋಲ್‌ನಲ್ಲಿ ಶೇ.26.5ರಷ್ಟು ಹಾಗೂ ನಯಾರಾ ಪೆಟ್ರೋಲ್‌ನಲ್ಲಿ ಶೇ.26.1ರಷ್ಟು ಎಥೆನಾಲ್ ಪತ್ತೆಯಾಗಿದೆ. ಶೆಲ್ ಪೆಟ್ರೋಲ್‌ನಲ್ಲಿ ಶೇ.25.5ರಷ್ಟು ಎಥೆನಾಲ್ ಇರುವುದು ವರದಿಯಾಗಿದೆ. ಬಿಪಿಸಿಎಲ್‌ನ ಮತ್ತೆರಡು ಮಾದರಿಗಳಲ್ಲಿ ಕ್ರಮವಾಗಿ ಶೇ.24.2 ಮತ್ತು ಶೇ.22.6ರಷ್ಟು ಎಥೆನಾಲ್ ಪತ್ತೆಯಾಗಿದ್ದರೆ, ಎಚ್‌ಪಿಸಿಎಲ್‌ನ ಮತ್ತೊಂದು ಮಾದರಿಯಲ್ಲಿ ಶೇ.22.4 ಹಾಗೂ ಐಒಸಿಎಲ್‌ನ ಇನ್ನೊಂದು ಮಾದರಿಯಲ್ಲಿ ಶೇ.20.8ರಷ್ಟು ಎಥೆನಾಲ್ ದಾಖಲಾಗಿದೆ.
ಉಳಿದ ಮೋಟಾರ್ ಸ್ಪಿರಿಟ್ (MS) ಮಾದರಿಗಳ ಪೈಕಿ ನಯಾರಾ ಪೆಟ್ರೋಲ್‌ನಲ್ಲಿ ಶೇ.20.6, ಬಿಪಿಸಿಎಲ್‌ನ ಒಂದು ಮಾದರಿಯಲ್ಲಿ ಶೇ.19.9, ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (MRPL) ಮಾದರಿಯಲ್ಲಿ ಶೇ.19.2 ಹಾಗೂ ಶೆಲ್ ಪೆಟ್ರೋಲ್‌ನಲ್ಲಿ ಶೇ.13.5ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ತಿಳಿಸಿದರು.
ವಾಹನಗಳಿಗೆ ಸಮಸ್ಯೆ 
ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಶೇ.20 ಮೀರಿರುವುದು ವಾಹನ ಸವಾರರಿಗೆ ಗಂಭೀರ ಸಮಸ್ಯೆ ಉಂಟುಮಾಡಲಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಆತಂಕ ವ್ಯಕ್ತಪಡಿಸಿದರು.
“ತೈಲ ಕಂಪನಿಗಳು ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿವೆ. ಆದರೆ, 2023ರಿಂದ ದೇಶದಲ್ಲಿ ಇ20 (E20) ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳನ್ನು ತಯಾರಿಸಲಾಗುತ್ತಿದೆ. ಒಟ್ಟಾರೆ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಇ20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳ ಪ್ರಮಾಣ ಅತ್ಯಂತ ಕಡಿಮೆ. ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಿದರೆ ಇ20ಗೆ ಹೊಂದಿಕೊಳ್ಳುವ ವಾಹನಗಳಿಗೂ ಸಮಸ್ಯೆಯಾಗಲಿದೆ. ದೇಶದ ಶೇ.99ರಷ್ಟು ವಾಹನಗಳು ಇ20 ಮಿತಿಗಿಂತ ಹೆಚ್ಚಿನ ಎಥೆನಾಲ್ ಹೊಂದಿರುವ ಇಂಧನವನ್ನು ಬಳಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಆರಂಭದಲ್ಲಿ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳು ಶೇ.20ರಷ್ಟು ಎಥೆನಾಲ್ ಮಿಶ್ರಿತ ಇಂಧನಕ್ಕೆ ಹೊಂದಿಕೊಳ್ಳುವುದಿಲ್ಲ ಎಂದು ತಿಳಿಸಿದ್ದವು. ಆದರೆ, ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಈ ಕಂಪನಿಗಳು ತಮ್ಮ ನಿಲುವು ಬದಲಿಸಿಕೊಂಡಿವೆಯೇ ಅಥವಾ ಅವುಗಳಿಂದ ಬೇರೆ ರೀತಿಯ ವಿವರಣೆ ಪಡೆಯಲಾಗಿದೆಯೇ ಎಂಬುದು ತಿಳಿದಿಲ್ಲ. ಆ ಬಳಿಕ ಈ ಕಂಪನಿಗಳು ಈ ವಿಚಾರವಾಗಿ ಮೌನವಾಗಿವೆ ಎಂದು ಸಚಿವರು ಆರೋಪಿಸಿದರು.
ಇ20 ಇಂಧನ ಬಳಕೆಯಿಂದ ವಾಹನಗಳಿಗೆ ಹಾನಿಯಾದರೆ ಕಂಪನಿಗಳ ವಾರಂಟಿ (Warranty) ಅಡಿಯಲ್ಲಿ ದುರಸ್ತಿ ಸೌಲಭ್ಯ ದೊರೆಯುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.
 ಪೆಟ್ರೋಲ್ ಮಾದರಿಗಳನ್ನು ಮೊದಲಿಗೆ ಐಒಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಆಂತರಿಕ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ, ಎಥೆನಾಲ್ ಪ್ರಮಾಣವು ನಿಗದಿತ ಪರೀಕ್ಷಾ ಮಾನದಂಡಗಳಲ್ಲಿ ಒಂದಾಗಿದ್ದರೂ, ಕಂಪನಿಗಳು ನೀಡಿದ ಪರೀಕ್ಷಾ ವರದಿಗಳಲ್ಲಿ ಅದರ ಪ್ರಮಾಣವನ್ನು ಉಲ್ಲೇಖಿಸಿರಲಿಲ್ಲ ಎಂದು ಸಚಿವರ ಪತ್ರಿಕಾ ಪ್ರಕಟಣೆ ಆರೋಪಿಸಿದೆ.
“ಪರೀಕ್ಷೆಯ ಕಡ್ಡಾಯ ಮಾನದಂಡಗಳಲ್ಲಿ ಒಂದಾಗಿರುವ ಎಥೆನಾಲ್ ಪ್ರಮಾಣವನ್ನು ವರದಿಯಲ್ಲಿ ಉಲ್ಲೇಖಿಸದಿರುವುದು ತೈಲ ಮಾರುಕಟ್ಟೆ ಕಂಪನಿಗಳ ಪಾರದರ್ಶಕತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ವಾಹನಗಳ ಮೈಲೇಜ್ ಇಳಿಕೆ, ಬಿಡಿಭಾಗಗಳ ಹಾನಿ ಆತಂಕ
ಎಥೆನಾಲ್ ಅನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮಿಶ್ರಣ ಮಾಡುವುದರಿಂದ ವಾಹನ ಸವಾರರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದರ ಜತೆಗೆ ಫಿಲ್ಟರ್‌ಗಳು, ಇಂಧನ ಪಂಪ್‌ಗಳು, ಇಂಜೆಕ್ಟರ್‌ಗಳು, ಸೇರಿದಂತೆ ಪ್ರಮುಖ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ದೇಶದಲ್ಲಿರುವ ಒಟ್ಟು 35 ಕೋಟಿ ವಾಹನಗಳ ಪೈಕಿ ಶೇ.99ರಷ್ಟು ವಾಹನಗಳು ಇ20 ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಬಳಸಲು ವಿನ್ಯಾಸಗೊಳಿಸಿಲ್ಲ ಎಂದು ಸರ್ಕಾರ ಹೇಳಿದೆ. 2023ರ ಏಪ್ರಿಲ್ ಬಳಿಕ ಮಾರಾಟವಾಗಿರುವ ವಾಹನಗಳಿಗೂ ಗರಿಷ್ಠ ಶೇ.20ರಷ್ಟು ಎಥೆನಾಲ್ ಮಿಶ್ರಣದ ಇಂಧನ ಬಳಸಲು ಮಾತ್ರ ಪ್ರಮಾಣೀಕರಣ ನೀಡಲಾಗಿದೆ ಎಂದು ತಿಳಿಸಿದೆ.
ಇದಲ್ಲದೆ, ದೇಶದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಲಾಗಿರುವ ಇಂಧನ ವಿತರಣಾ ಯಂತ್ರಗಳು (Dispensing Units) ಗರಿಷ್ಠ ಶೇ.15ರಷ್ಟು ಎಥೆನಾಲ್ ಮಿಶ್ರಣ ಹೊಂದಿರುವ ಇಂಧನವನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಿರುವಾಗ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಪೂರೈಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಗಳು
ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪೂರೈಸುತ್ತಿರುವ ತೈಲ ಮಾರುಕಟ್ಟೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಇಂಧನದಿಂದ ವಾಹನಗಳಿಗೆ ಹಾನಿಯಾಗಿರುವ ಗ್ರಾಹಕರಿಗೆ ಪರಿಹಾರ ನೀಡಬೇಕು. ದೇಶದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದಲ್ಲಿರುವ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.
ಅಲ್ಲದೆ, ಗ್ರಾಹಕರಿಗೆ ತಮ್ಮ ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ವಿವಿಧ ಪ್ರಮಾಣದ ಎಥೆನಾಲ್ ಮಿಶ್ರಿತ ಇಂಧನಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದೆ.
ಇಂಧನದಿಂದ ವಾಹನಗಳಿಗೆ ಹಾನಿಯಾದ ಗ್ರಾಹಕರಿಗೆ ಪರಿಹಾರ ನೀಡಲು ಪ್ರತ್ಯೇಕವಾದ ‘ಇ20 ಸ್ಪಾಯಿಲೇಜ್ ಫಂಡ್’ (E20 Spoilage Fund) ಸ್ಥಾಪಿಸಬೇಕು. ಅಧಿಕೃತ ವಾಹನ ಸೇವಾ ಕೇಂದ್ರಗಳಿಂದ ಹಾನಿಯನ್ನು ದೃಢೀಕರಿಸಿಕೊಂಡು, ನಿಗದಿತ ಕಾಲಮಿತಿಯೊಳಗೆ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.
“ಗ್ರಾಹಕರಿಗೆ ನಿಜವಾಗಿ ಯಾವ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪೂರೈಸಲಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು” ಎಂದು ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಈ ವಿಚಾರವಾಗಿ  ಉತ್ತರ ನೀಡಬೇಕಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದರು.
ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದ. ಆದರೆ, ಈ ನೀತಿಯಿಂದ ಗ್ರಾಹಕರಿಗೆ ಯಾವುದೇ ನೇರ ಹಾಗೂ ಸ್ಪಷ್ಟ ಪ್ರಯೋಜನ ದೊರೆತಿಲ್ಲ ಎಂದು ಅವರು ಟೀಕಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement