ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷ : ನಕಲಿ ಟ್ರೇಡಿಂಗ್ ಆ್ಯಪ್‌ ಮೂಲಕ ವ್ಯಕ್ತಿಗೆ 46 ಲಕ್ಷ ರೂ. ಪಂಗನಾಮ

ಕಾರವಾರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲೇ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ನಿವೃತ್ತ ನೌಕರರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ ₹46 ಲಕ್ಷ ವಂಚಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.  ಪ್ರತಿಷ್ಠಿತ ಸಂಸ್ಥೆಯ ಹೆಸರಿನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿ, ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುವ ಮೂಲಕ ಈ ವಂಚನೆ ಎಸಗಿದ್ದಾರೆ ಎಂದು ಹೇಳಲಾಗಿದೆ.
ಶಿರಸಿಯ ಬನವಾಸಿ ರಸ್ತೆಯ ಹಂಚಿನಕೇರಿಯ ನಿವೃತ್ತ ನೌಕರರೊಬ್ಬರು ವಂಚನೆಗೊಳಗಾದವರು ಎಂದು ಹೇಳಲಾಗಿದೆ. ಈ ಸಂಬಂಧ ಕಾರವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆಯ ಜಾಲದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 10ರಂದು ವಾಟ್ಸಪ್‌ಗೆ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (NSE) ಹೆಸರಿನಲ್ಲಿ ಸಂದೇಶವೊಂದು ಬಂದಿತ್ತು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಕರ್ಷಕ  ಆಫರ್‌ ಸಹ ಅದರಲ್ಲಿ ನೀಡಲಾಗಿತ್ತು.
ಹೆಸರಾಂತ ಷೇರು ವಿನಿಮಯ ಸಂಸ್ಥೆಯ ಹೆಸರಿನಲ್ಲಿ ಸಂದೇಶ ಬಂದಿದ್ದರಿಂದ ಅದನ್ನು ನಂಬಿದ ವ್ಯಕ್ತಿ, ಸಂದೇಶದಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ಲಿಂಕ್ ತೆರೆದ ಕೂಡಲೇ ವಾಟ್ಸಪ್ ಗ್ರೂಪ್‌ಗೆ ಅವರನ್ನು ಸೇರಿಸಲಾಗಿತ್ತು.
ವಾಟ್ಸಪ್ ಗ್ರೂಪ್‌ಗೆ ಸೇರಿದ ಬಳಿಕ, ಅಲ್ಲಿ ಅಡ್ಮಿನ್‌ಗಳೆಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕುರಿತು  ಮಾಹಿತಿ ನೀಡಿ,  ಹೆಚ್ಚಿನ ಲಾಭ ಗಳಿಸುವ ಬಗ್ಗೆ ತಿಳಿಸಿ, ವಿಶ್ವಾಸ ಮೂಡಿಸಿದ್ದರು. ಈ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಆಕರ್ಷಕ ಲಾಭ ಪಡೆಯಬಹುದು ಎಂದು ಗ್ರೂಪ್ ಅಡ್ಮಿನ್ ಮೀರಾ ಅಯ್ಯರ್ ಎಂದು ಹೇಳೊಕೊಂಡವರು ಸೇರಿದಂತೆ ಹಲವರು ಇವರನ್ನು ನಂಬಿಸಿದ್ದರು.
ಬಳಿಕ ಟ್ರೇಡಿಂಗ್ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಈ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯಲಿದೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ಹಂತ ಹಂತವಾಗಿ ಹಣ ಹೂಡಿಕೆ ಮಾಡುವ ವಿಧಾನವನ್ನೂ ವಿವರಿಸಿದ್ದರು. ವಂಚಕರ ಮಾತುಗಳನ್ನು  ನಂಬಿದ ನಿವೃತ್ತ ನೌಕರ ವಂಚಕರು ಸೂಚಿಸಿದ ರೀತಿಯಲ್ಲೇ ಹಣ ಹೂಡಿಕೆ ಮಾಡಲು ಆರಂಭಿಸಿದರು.
ವಂಚಕರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ  ಸೆಪ್ಟೆಂಬರ್ 11ರಿಂದ ಸೆಪ್ಟೆಂಬರ್ 27ರವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ ನಿವೃತ್ತ ನೌಕರ  16 ದಿನಗಳ ಅವಧಿಯಲ್ಲಿ ಒಟ್ಟು ₹46 ಲಕ್ಷವನ್ನು ವಂಚಕರು ಸೂಚಿಸಿದ್ದ ಖಾತೆಗಳಿಗೆ ಜಮಾ ಮಾಡಿದ್ದರು.
ಆದರೆ, ಹಣ ಹೂಡಿಕೆ ಮಾಡಿದರೂ ನಿರೀಕ್ಷಿಸಿದಂತೆ  ಲಾಭಾಂಶ ಸಿಗುವುದು ದೂರದ ಮಾತಾಯಿತು, ಅವರು ಹೂಡಿಕೆ ಮಾಡಿದ್ದ  ಹಣವೂ ವಾಪಸ್ ಸಿಗಲಿಲ್ಲ. ಆಗ ಅವರಿಗೆ ತಾವು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಅರಿವಾಗಿದೆ.
ತಕ್ಷಣ ಈ ಕುರಿತು ಕಾರವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚನೆಯ ಜಾಲ ಹಾಗೂ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement