

ಅಮೆರಿಕದ ಸಿಯಾಟಲ್ನಲ್ಲಿ ಶನಿವಾರ (ಸ್ಥಳೀಯ ಕಾಲಮಾನ) ನಡೆದ ದೀಪಾವಳಿ ಆಚರಣೆಯ ವೇಳೆ ಸಂಪ್ರದಾಯವಾದಿ ಗುಂಪೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಭಾರತೀಯ ಮೂಲದ ಜನರ ವಿರುದ್ಧ ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ಡಾಟ್ ಹೆಡ್ಗಳನ್ನೆಲ್ಲ ಗಡಿಪಾರು ಮಾಡಿ’ (Deport All Dot Heads) ಎಂದು ಘೋಷಣೆ ಕೂಗಿದ ಈ ಕೃತ್ಯವನ್ನು ಭಾರತೀಯ-ಅಮೆರಿಕನ್ ನಾಯಕರು ಹಾಗೂ ಅಮೆರಿಕದ ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಜೇಕ್ ಲ್ಯಾಂಗ್ ಮತ್ತು ಥಾಮಸ್ ಅಲೆನ್ ನೇತೃತ್ವದ ಕಾರ್ಯಕರ್ತರು ಸಿಯಾಟಲ್ನಲ್ಲಿ ನಡೆಯುತ್ತಿದ್ದ ದೀಪಾವಳಿ ಸಂಭ್ರಮಾಚರಣೆಯ ಸ್ಥಳಕ್ಕೆ ನುಗ್ಗಿ, ಅಮೆರಿಕದ ಧ್ವಜಗಳನ್ನು ಪ್ರದರ್ಶಿಸುತ್ತಾ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ‘ಡಾಟ್ ಹೆಡ್ಗಳನ್ನೆಲ್ಲ ಗಡಿಪಾರು ಮಾಡಿ’ ಎಂಬ ಘೋಷಣೆಯ ಫಲಕಗಳನ್ನು ಹಿಡಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
‘ಡಾಟ್ ಹೆಡ್’ ಎಂಬ ಪದವು ದಕ್ಷಿಣ ಏಷ್ಯಾ ಮೂಲದ ಜನರನ್ನು, ಅದರಲ್ಲೂ ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಬಳಸುವ ಜನಾಂಗೀಯ ನಿಂದನೆಯ ಪದವಾಗಿದೆ. ಹಣೆಯ ಮೇಲೆ ತಿಲಕ ಅಥವಾ ಬಿಂದಿ ಧರಿಸುವ ಭಾರತೀಯರನ್ನು ಅವಹೇಳನ ಮಾಡುವ ಉದ್ದೇಶದಿಂದ ಈ ಪದವನ್ನು ಬಳಸಲಾಗುತ್ತದೆ.
ಇದಲ್ಲದೆ, ‘ಕ್ರೈಸ್ತರ ಸ್ಥಾನವನ್ನು ಹಿಂದೂಗಳು ಆಕ್ರಮಿಸಿಕೊಳ್ಳುವುದನ್ನು ನಿಲ್ಲಿಸಿ’ (Stop Hindu Replacement of Christians) ಎಂಬ ಬರಹವಿರುವ ಮತ್ತೊಂದು ಫಲಕವನ್ನೂ ಲ್ಯಾಂಗ್ ಮತ್ತು ಅಲೆನ್ ಪ್ರದರ್ಶಿಸಿದ್ದಾರೆ.
ಸಿಯಾಟಲ್ ಸೆಂಟರ್ ಫೆಸ್ಟಲ್ (Seattle Center Festal) ಕಾರ್ಯಕ್ರಮದ ಭಾಗವಾಗಿ ಸಿಯಾಟಲ್ ಸೆಂಟರ್ ಆರ್ಮರಿ (Seattle Center Armoury) ಸಭಾಂಗಣದಲ್ಲಿ ದೀಪಾವಳಿ ಆಚರಣೆ ನಡೆಯುತ್ತಿತ್ತು. ಈ ವೇಳೆ ನೃತ್ಯ ಪ್ರದರ್ಶನ ನಡೆಯುತ್ತಿದ್ದಾಗಲೇ ಕಾರ್ಯಕರ್ತರು ಅಲ್ಲಿಗೆ ನುಗ್ಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ.
ಟ್ರಂಪ್ ಬೆಂಬಲಿಗರಾದ ಜೇಕ್ ಲ್ಯಾಂಗ್, ಥಾಮಸ್ ಅಲೆನ್
ಜೇಕ್ ಲ್ಯಾಂಗ್ ಮತ್ತು ಥಾಮಸ್ ಅಲೆನ್ ಇಬ್ಬರೂ ತೀವ್ರ ಬಲಪಂಥೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ರಿಪಬ್ಲಿಕನ್ ಪಕ್ಷ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಬಲ ಬೆಂಬಲಿಗರು ಎಂದು ವರದಿಯಾಗಿದೆ. ಲ್ಯಾಂಗ್, ಈ ವರ್ಷದ ಆಗಸ್ಟ್ನಲ್ಲಿ ಲ್ಯಾಂಗ್ ಫ್ಲೋರಿಡಾ ರಾಜ್ಯದಿಂದ ಅಮೆರಿಕದ ಸೆನೆಟ್ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದ. ಆದರೆ, ಅಭ್ಯರ್ಥಿಯಾಗಿ ನೋಂದಣಿ ಮಾಡಿಕೊಳ್ಳಲು ವಿಫಲನಾಗಿದ್ದ.


ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಲ್ಯಾಂಗ್ ‘ವೈಟ್ ರಿಪ್ಲೇಸ್ಮೆಂಟ್’ (White Replacement) ಎಂಬ ಸಂಘಟನೆಯೊಂದರ ಜೊತೆಗೂ ನಂಟು ಹೊಂದಿದ್ದಾನೆ. 2021ರ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪವೂ ಆತನ ಮೇಲಿದೆ. ಈ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಲ್ಯಾಂಗ್ಗೆ, 2025ರಲ್ಲಿ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೇ ಅಧ್ಯಕ್ಷೀಯ ಅವಧಿಯ ಮೊದಲ ದಿನವೇ ಕ್ಷಮಾದಾನ ನೀಡಿದ್ದರು.
ಭಾರತೀಯ-ಅಮೆರಿಕನ್ನರಿಂದ ತೀವ್ರ ಖಂಡನೆ
ಸಿಯಾಟಲ್ನ ದೀಪಾವಳಿ ಆಚರಣೆಗೆ ಅಡ್ಡಿಪಡಿಸಿ ಭಾರತೀಯ ಮೂಲದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿದ ಘಟನೆಗೆ ಭಾರತೀಯ-ಅಮೆರಿಕನ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಕಾಂಗ್ರೆಸ್ ಸದಸ್ಯೆ, ಭಾರತೀಯ ಮೂಲದ ಪ್ರಮೀಳಾ ಜಯಪಾಲ ಅವರು ಜೇಕ್ ಲ್ಯಾಂಗ್ ಮತ್ತು ಥಾಮಸ್ ಅಲೆನ್ ಅವರ ಕೃತ್ಯವನ್ನು ‘ಅಸಹ್ಯಕರ’ ಎಂದು ಖಂಡಿಸಿದ್ದಾರೆ. ದೀಪಾವಳಿ ಅತ್ಯಂತ ಮಹತ್ವದ ಹಬ್ಬವಾಗಿದ್ದು, ಇಂತಹ ದ್ವೇಷಪೂರಿತ ಪ್ರದರ್ಶನಕ್ಕೆ ಸಿಯಾಟಲ್ ಅಥವಾ ಅಮೆರಿಕದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ.
ಶ್ವೇತಭವನದ ಮಾಜಿ ಸಲಹೆಗಾರ ಅಜಯ ಜೈನ್ ಭುಟೋರಿಯಾ ಕೂಡ ಈ ಘಟನೆಯನ್ನು ‘ಅಸಹ್ಯಕರ’ ಎಂದು ಬಣ್ಣಿಸಿದ್ದಾರೆ. ಭಾರತೀಯ ಮೂಲದ ವಲಸಿಗರು ಹಾಗೂ ಹಿಂದೂ ಅಮೆರಿಕನ್ನರನ್ನು ಜನಾಂಗೀಯ ನಿಂದನೆ ಮತ್ತು ಪಿತೂರಿ ಸಿದ್ಧಾಂತಗಳ ಮೂಲಕ ಗುರಿಯಾಗಿಸಿಕೊಳ್ಳುವ ಕೃತ್ಯಗಳಿಗೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (Coalition of Hindus of North America – CoHNA) ದೀಪಾವಳಿ ಆಚರಿಸುವ ಸಂದರ್ಭದಲ್ಲಿ ಭಾರತೀಯ-ಅಮೆರಿಕನ್ನರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ. ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ (Hindus for Human Rights) ಸಂಘಟನೆಯ ಸಹ-ಸಂಸ್ಥಾಪಕಿ ಸುನೀತಾ ವಿಶ್ವನಾಥ ಅವರು ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಭಾರತೀಯ-ಅಮೆರಿಕನ್ನರನ್ನು ಅನಗತ್ಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಒಟ್ಟಾರೆ, ಧಾರ್ಮಿಕ ಹಬ್ಬದ ಸಂಭ್ರಮದ ನಡುವೆ ನಡೆದ ಈ ಘಟನೆಯು ಅಮೆರಿಕದಲ್ಲಿ ಭಾರತೀಯ ಮೂಲದ ಸಮುದಾಯದ ವಿರುದ್ಧದ ಜನಾಂಗೀಯ ದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ