

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದು, ಕ್ಯಾನ್ಸರ್, ಅಲ್ಜೈಮರ್ಸ್, ಹೃದ್ರೋಗ ಮತ್ತು ಮಾನಸಿಕ ಕಾಯಿಲೆಗಳು ಇನ್ನು ಹತ್ತು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಇಲ್ಲವಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಆಂಥ್ರೊಪಿಕ್ (Anthropic) ಸಂಸ್ಥೆಯ ಸಿಇಒ ಹಾಗೂ ಕ್ಲಾಡ್ (Claude) ಎಐ ತಂತ್ರಜ್ಞಾನದ ನಿರ್ಮಾತೃ ಡೇರಿಯೋ ಅಮೋಡಿ (Dario Amodei) ಭವಿಷ್ಯ ನುಡಿದಿದ್ದಾರೆ.
ಅಮೋಡಿ ಅವರ ಈ ಹೇಳಿಕೆ ವೈದ್ಯಕೀಯ ಲೋಕದಲ್ಲಿ ಹೊಸ ನಿರೀಕ್ಷೆಗಳಿಗೆ ಕಾರಣವಾಗಿದೆ. ಇವು ಯಾವುದೋ ಅಪರೂಪದ ಕಾಯಿಲೆಗಳಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಕುಟುಂಬಗಳನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳು. ಇಂದಿಗೂ ವೈದ್ಯಕೀಯ ವಿಜ್ಞಾನಕ್ಕೆ ದೊಡ್ಡ ಸವಾಲಾಗಿಯೇ ಉಳಿದಿರುವ ಇಂತಹ ಕಾಯಿಲೆಗಳಿಗೆ ಎಐ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ..
“ನಾವು ಈ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಮಾನವಕುಲವು ಸಾವಿರಾರು ವರ್ಷಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಸಮಸ್ಯೆಗಳನ್ನು ಬಗೆಹರಿಸುವಂತಹ ಪವಾಡಗಳ ಯುಗವನ್ನೇ ಸೃಷ್ಟಿಸಬಹುದು” ಎಂದು ಅಮೋಡಿ ಹೇಳಿದ್ದಾರೆ.
ಜೈವಿಕ ಸಂಶೋಧನೆ (Biological Research), ಔಷಧಗಳ ಆವಿಷ್ಕಾರ (Drug Discovery) ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಮಹತ್ವದ ಸಂಶೋಧನೆಗಳನ್ನು ಎಐ ತಂತ್ರಜ್ಞಾನವು ಅತ್ಯಂತ ವೇಗಗೊಳಿಸಬಲ್ಲದು ಎಂಬುದು ಅಮೋಡಿ ಅವರ ಅಭಿಪ್ರಾಯ. ಈ ಮೂಲಕ ಪ್ರಸ್ತುತ ವೈದ್ಯಕೀಯ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಮಹತ್ವದ ಪ್ರಗತಿ ಸಾಧ್ಯವಾಗಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.
ಅಮೋಡಿ ಅವರಷ್ಟೇ ಅಲ್ಲ, ಎಐ ಕ್ಷೇತ್ರದ ಇತರ ಪ್ರಮುಖ ಲೀಡರ್ಗಳು ಇಂತಹ ಆಶಾವಾದಿ ಭವಿಷ್ಯವಾಣಿಗಳನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಮತ್ತು ಗೂಗಲ್ನ ಎಐ ವಿಭಾಗದ ಪ್ರಮುಖ ವಿಜ್ಞಾನಿ ಡೆಮಿಸ್ ಹಸ್ಸಾಬಿಸ್ (Demis Hassabis) ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದಿಂದ ಆಗಬಹುದಾದ ಬದಲಾವಣೆಗಳ ಬಗ್ಗೆ ಇದೇ ರೀತಿಯ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಗೂಗಲ್ನ ಡೀಪ್ಮೈಂಡ್ (DeepMind) ಮುಖ್ಯಸ್ಥರೂ ಆಗಿರುವ ಹಸ್ಸಾಬಿಸ್, ಔಷಧ ಸಂಶೋಧನೆಗೆ ಸಾಮಾನ್ಯವಾಗಿ ಹತ್ತು ವರ್ಷಗಳ ಕಾಲ ಬೇಕಾಗುವ ಪ್ರಕ್ರಿಯೆಯನ್ನು ಎಐ ತಂತ್ರಜ್ಞಾನ ಕೆಲವೇ ವಾರಗಳಿಗೆ ಇಳಿಸಬಹುದು ಎಂದು ಹೇಳಿದ್ದಾರೆ. ಮುಂದಿನ ಒಂದು ದಶಕದೊಳಗೆ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಕಂಡುಹಿಡಿಯುವ ಮೂಲಕ ರೋಗಗಳೇ ಇಲ್ಲದ ಜಗತ್ತನ್ನು ನಿರ್ಮಿಸುವ ಅಥವಾ ‘ಎಂಡ್ ಆಫ್ ಡಿಸೀಸ್’ (End of Disease) ಸಾಧ್ಯವಾಗಿಸುವ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.


ತಮ್ಮ ಈ ಆಶಾವಾದಕ್ಕೆ ಪೂರಕವಾಗಿ ಹಸ್ಸಾಬಿಸ್ ಅವರು ಗೂಗಲ್ ಡೀಪ್ಮೈಂಡ್ನ ಆಲ್ಫಾಫೋಲ್ಡ್ (AlphaFold) ಸಾಧನದ ಸಾಧನೆಯನ್ನು ಉಲ್ಲೇಖಿಸಿದ್ದಾರೆ. ಆಲ್ಫಾಫೋಲ್ಡ್ ಈಗಾಗಲೇ 20 ಕೋಟಿಗೂ ಅಧಿಕ ಪ್ರೋಟೀನ್ಗಳ ರಚನೆಯನ್ನು (Protein Structures) ಗುರುತಿಸುವಲ್ಲಿ ಯಶಸ್ವಿಯಾಗಿದೆ. ಪ್ರೋಟೀನ್ಗಳ ರಚನೆಯನ್ನು ಅರ್ಥಮಾಡಿಕೊಳ್ಳುವುದು ಜೈವಿಕ ಸಂಶೋಧನೆ ಮತ್ತು ಹೊಸ ಔಷಧಗಳ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ಸಾಧನೆಯು ಜೈವಿಕ ಸಂಶೋಧನೆಯ ವೇಗವನ್ನು ಎಐ ತಂತ್ರಜ್ಞಾನ ಎಷ್ಟರಮಟ್ಟಿಗೆ ಹೆಚ್ಚಿಸಬಲ್ಲದು ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ ಎಂದು ಹಸ್ಸಾಬಿಸ್ ಪ್ರತಿಪಾದಿಸಿದ್ದಾರೆ.
ಆಲ್ಫಾಫೋಲ್ಡ್ ನಿಜವಾದ ವೈಜ್ಞಾನಿಕ ಸಾಧನೆಯಾಗಿದ್ದರೂ, ಒಂದು ದಶಕದೊಳಗೆ ಕ್ಯಾನ್ಸರ್, ಆಲ್ಝೈಮರ್ ಅಥವಾ ಇತರ ಸಂಕೀರ್ಣ ಕಾಯಿಲೆಗಳಿಗೆ ಎಐ (AI) ಔಷಧಗಳನ್ನು ಕಂಡುಹಿಡಿಯಬಹುದು ಎಂಬುದನ್ನು ಈಗಲೇ ನಿಖರವಾಗಿ ನಿರ್ಧರಿಸಲಾಗದು.
ಪ್ರೋಟೀನ್ಗಳ ರಚನೆಯನ್ನು ಗುರುತಿಸುವುದು ಮತ್ತು ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಅಥವಾ ಸಂಪೂರ್ಣ ಗುಣಪಡಿಸುವ ಔಷಧವನ್ನು ಅಭಿವೃದ್ಧಿಪಡಿಸುವುದು ಎರಡು ವಿಭಿನ್ನ ಹಂತಗಳಾಗಿವೆ. ಹೀಗಾಗಿ ಆಲ್ಫಾಫೋಲ್ಡ್ನ ಸಾಧನೆಯು ಎಐನ ಸಾಮರ್ಥ್ಯವನ್ನು ತೋರಿಸುತ್ತದೆಯೇ ಹೊರತು, ಎಲ್ಲ ಕಾಯಿಲೆಗಳಿಗೆ ಔಷಧ ಕಂಡುಹಿಡಲಾಗಿದೆ ಎಂದು ಅರ್ಥವಲ್ಲ.
ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಎಐನ ವೈದ್ಯಕೀಯ ಸಾಮರ್ಥ್ಯದ ಬಗ್ಗೆ ಮಹತ್ವದ ಭವಿಷ್ಯವಾಣಿ ಮಾಡಿದ್ದಾರೆ. ಎಐ ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಭವಿಷ್ಯದಲ್ಲಿ ಜಗತ್ತಿನ ಪ್ರತಿಯೊಬ್ಬರಿಗೂ ಅಮೆರಿಕದ ಅಧ್ಯಕ್ಷರಿಗೆ ದೊರೆಯುವ ಮಟ್ಟದ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಾಗಲಿದೆ ಎಂಬುದು ಅವರ ಹೇಳಿಕೆ. ಅಂದರೆ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಗಳು ಶ್ರೀಮಂತರಿಗೆ ಅಥವಾ ಅಧಿಕಾರಸ್ಥರಿಗೆ ಮಾತ್ರ ಸೀಮಿತವಾಗದೆ, ಸಾಮಾನ್ಯ ಜನರಿಗೂ ಸಮಾನವಾಗಿ ಲಭ್ಯವಾಗುವ ಕಾಲ ಬರಲಿದೆ ಎಂಬ ಆಶಯವನ್ನು ಮಸ್ಕ್ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಕ್ಯಾನ್ಸರ್, ಅಲ್ಜೈಮರ್ಸ್, ಹೃದ್ರೋಗ ಮತ್ತು ಮಾನಸಿಕ ಕಾಯಿಲೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಐ ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಎಐ ತಜ್ಞರು ವ್ಯಕ್ತಪಡಿಸಿರುವ ಈ ಭವಿಷ್ಯವಾಣಿಗಳು ಇನ್ನೂ ನಿರೀಕ್ಷೆಗಳ ಹಂತದಲ್ಲಿದ್ದು, ಅವು ನಿಜವಾಗಲು ವೈಜ್ಞಾನಿಕ ಸಂಶೋಧನೆ, ಔಷಧಗಳ ಪರೀಕ್ಷೆ ಮತ್ತು ವೈದ್ಯಕೀಯ ದೃಢೀಕರಣದಂತಹ ಹಲವು ಹಂತಗಳು ಬಾಕಿ ಇವೆ.



ನಿಮ್ಮ ಕಾಮೆಂಟ್ ಬರೆಯಿರಿ