

ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಉಗ್ರರ ಪ್ರಮುಖ ಗುರಿಯಾಗಿದ್ದ ಕೊಲಾಬಾದ ಚಾಬಾದ್ ಹೌಸ್ (ನರಿಮನ್ ಹೌಸ್) ಸೇರಿದಂತೆ ಮುಂಬೈನ ಸೂಕ್ಷ್ಮ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನೊಬ್ಬನನ್ನು ನವಿ ಮುಂಬೈನಲ್ಲಿ ಶನಿವಾರ ಬಂಧಿಸಲಾಗಿದೆ.
ವಿದೇಶಿ ಹ್ಯಾಂಡ್ಲರ್ಗಳ ಸೂಚನೆಯಂತೆ ಈತ ಯಹೂದಿ ಧಾರ್ಮಿಕ ಕೇಂದ್ರಗಳು, ಯಹೂದಿ ನಾಗರಿಕರು, ವಿದೇಶಿ ಪ್ರಜೆಗಳು ಹಾಗೂ ಅವರ ವ್ಯವಹಾರ ಸಂಸ್ಥೆಗಳ ಕುರಿತು ರಹಸ್ಯ ಮಾಹಿತಿ ಸಂಗ್ರಹಿಸಿ ತನ್ನ ಲಿಂಕ್ಗಳಿಗೆ ರವಾನಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಂಧಿತನನ್ನು ಯಶ್ ಸಿಂಗ್ ಎಂದು ಗುರುತಿಸಲಾಗಿದೆ. ನವಿ ಮುಂಬೈನ ಐರೋಲಿ ಪ್ರದೇಶದ ನಿವಾಸಿಯಾಗಿರುವ ಈತನನ್ನು ನವಿ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಂತಾರಾಷ್ಟ್ರೀಯ ಅಪರಾಧ ಜಾಲಗಳೊಂದಿಗೆ ಈತ ಸಂಪರ್ಕ ಹೊಂದಿದ್ದಾನೆ ಎಂಬ ಖಚಿತ ಸುಳಿವಿನ ಆಧಾರದ ಮೇಲೆ ಎಟಿಎಸ್ ಕಾರ್ಯಾಚರಣೆ ನಡೆಸಿತ್ತು.
ಪೊಲೀಸರ ಪ್ರಕಾರ, ಈತ ವಿದೇಶದಲ್ಲಿರುವ ಹ್ಯಾಂಡ್ಲರ್ಗಳ ಸೂಚನೆಯಂತೆ ಮುಂಬೈನ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿದ್ದ. ಈತ ಯಹೂದಿ ನಾಗರಿಕರು, ವಿದೇಶಿ ಪ್ರಜೆಗಳು ಮತ್ತು ಅವರ ವ್ಯವಹಾರ ಸಂಸ್ಥೆಗಳ ಛಾಯಾಚಿತ್ರಗಳು, ವಾಹನಗಳ ವಿವರಗಳು ಹಾಗೂ ನಿಖರ ಭೌಗೋಳಿಕ ಸ್ಥಳದ ಮಾಹಿತಿಯನ್ನು ಸಂಗ್ರಹಿಸಿ ತನ್ನ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.
ತನಿಖೆಯ ಸಂದರ್ಭದಲ್ಲಿ ಈತನ ಚಟುವಟಿಕೆಗಳು ಕೇರಳದ ತ್ರಿಶ್ಶೂರ್ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ತನಿಖೆಯಲ್ಲಿ ಭಾಗಿಯಾದರು.
ನವಿ ಮುಂಬೈ ಎಟಿಎಸ್ನಿಂದ ಮಾಹಿತಿ ಪಡೆದ ಕೇರಳ ಪೊಲೀಸ್ ಅಧಿಕಾರಿಗಳ ತಂಡ ನವಿ ಮುಂಬೈಗೆ ಆಗಮಿಸಿ ತನಿಖೆ ನಡೆಸಿತು. ಯಶ್ ಸಿಂಗ್ನ ಚಟುವಟಿಕೆಗಳು ಹಾಗೂ ಕೇರಳದಲ್ಲಿ ದಾಖಲಾಗಿದ್ದ ಪ್ರಕರಣದ ನಡುವಿನ ಸಂಬಂಧವನ್ನು ಪರಿಶೀಲಿಸಿದ ಬಳಿಕ ಆತನನ್ನು ಬಂಧಿಸಿತು.
ನರಿಮನ್ ಹೌಸ್ ಮೇಲೆ ವಿಶೇಷ ನಿಗಾ
ಪೊಲೀಸರ ಪ್ರಕಾರ, ಯಶ್ ಸಿಂಗ್ಗೆ ಮುಂಬೈನ ಸೂಕ್ಷ್ಮ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಅದರಲ್ಲೂ ಕೊಲಾಬಾ ಪ್ರದೇಶದಲ್ಲಿರುವ ನರಿಮನ್ ಹೌಸ್ ಮೇಲೆ ವಿಶೇಷ ಗಮನ ಹರಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.
ನರಿಮನ್ ಹೌಸ್ನಲ್ಲಿ ಯಹೂದಿಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಿದೆ. 2008ರ ನವೆಂಬರ್ನಲ್ಲಿ ನಡೆದ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಉಗ್ರರ ಪ್ರಮುಖ ದಾಳಿಯ ಕೇಂದ್ರಗಳಲ್ಲಿ ಇದೂ ಒಂದಾಗಿತ್ತು.
ಆರೋಪಿಗೆ ಯಹೂದಿ ಪ್ರಜೆಗಳು, ಅವರ ವಾಣಿಜ್ಯ ಸಂಸ್ಥೆಗಳು ಹಾಗೂ ನಗರದಲ್ಲಿ ನೆಲೆಸಿರುವ ಅಥವಾ ವ್ಯವಹಾರ ನಡೆಸುತ್ತಿರುವ ವಿದೇಶಿ ನಾಗರಿಕರ ಛಾಯಾಚಿತ್ರಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಅವರ ವಾಹನಗಳ ವಿವರಗಳು ಮತ್ತು ನಿಖರ ಸ್ಥಳದ ಮಾಹಿತಿಯನ್ನೂ ಸಂಗ್ರಹಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ನಿರುದ್ಯೋಗಿ ಯುವಕರ ಮೂಲಕ ಉಗ್ರ ಜಾಲದ ಕಾರ್ಯಾಚರಣೆ?
ನವಿ ಮುಂಬೈ ಎಟಿಎಸ್ ಪ್ರಕಾರ, ಪಾಕಿಸ್ತಾನಿ ಭಯೋತ್ಪಾದಕ ಶಹಜಾದ್ ಭಟ್ಟಿ (Shahzad Bhatti) ನೇತೃತ್ವದ ಅಪರಾಧ ಸಿಂಡಿಕೇಟ್ಗೆ ಸಂಬಂಧಿಸಿದೆ ಎನ್ನಲಾದ ಜಾಲಗಳು ಟೆಲಿಗ್ರಾಂ, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ನಿರುದ್ಯೋಗಿ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಯುವಕರನ್ನು ಸಂಪರ್ಕಿಸುತ್ತಿವೆ.
ಇಂತಹ ಯುವಕರಿಗೆ ಹಣದ ಆಮಿಷವೊಡ್ಡಿ ಸೂಕ್ಷ್ಮ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸುವುದು, ಪ್ರಮುಖ ಸ್ಥಳಗಳ ಛಾಯಾಚಿತ್ರ ಹಾಗೂ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ಭಯೋತ್ಪಾದಕ ಸಂಚುಗಳಿಗೆ ಸಂಬಂಧಿಸಿದ ವಿವಿಧ ಕೆಲಸಗಳನ್ನು ವಹಿಸಲಾಗುತ್ತಿದೆ ಎಂದು ಎಟಿಎಸ್ ತಿಳಿಸಿದೆ.
26/11 ದಾಳಿಯಲ್ಲಿ ನರಿಮನ್ ಹೌಸ್ ಉಗ್ರರ ಗುರಿಯಾಗಿದ್ದೇಕೆ?
2008ರ ನವೆಂಬರ್ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗೆ ಸೇರಿದ ಉಗ್ರರು ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ, ನಗರದ ವಿವಿಧೆಡೆ ಏಕಕಾಲದಲ್ಲಿ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟಗಳನ್ನು ನಡೆಸಿದ್ದರು.
ಸಮುದ್ರ ಮಾರ್ಗವಾಗಿ ಬಂದಿದ್ದ ಉಗ್ರರು ಕೊಲಾಬಾ ಸಮೀಪದ ಮೀನುಗಾರಿಕಾ ದಡವೊಂದರ ಬಳಿ ಇಳಿದು ನಗರ ಪ್ರವೇಶಿಸಿದ್ದರು. ಈ ಪ್ರದೇಶ ನರಿಮನ್ ಹೌಸ್ಗೆ ಸಮೀಪದಲ್ಲಿತ್ತು.
ಸತತ ಮೂರು ದಿನಗಳ ಕಾಲ ನಡೆದ ಈ ಭೀಕರ ದಾಳಿಯಲ್ಲಿ ಕನಿಷ್ಠ 166 ಮಂದಿ ಮೃತಪಟ್ಟಿದ್ದು, ಸುಮಾರು 300 ಮಂದಿ ಗಾಯಗೊಂಡಿದ್ದರು. ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಸಮುಚ್ಚಯ, ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ಹಾಗೂ ನರಿಮನ್ ಹೌಸ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಉಗ್ರರು ಗುರಿಯಾಗಿಸಿಕೊಂಡಿದ್ದರು.
ನರಿಮನ್ ಹೌಸ್ನಲ್ಲಿ ಇಬ್ಬರು ಉಗ್ರರು ಕಟ್ಟಡವನ್ನು ವಶಕ್ಕೆ ಪಡೆದು ಅಲ್ಲಿದ್ದ ಹಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಈ ಕಟ್ಟಡದಲ್ಲಿ ಚಾಬಾದ್-ಲುಬಾವಿಚ್ ಯಹೂದಿ ಧಾರ್ಮಿಕ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ 26/11 ದಾಳಿಯ ಸಂದರ್ಭದಲ್ಲಿ ಇದು ಅತ್ಯಂತ ಪ್ರಮುಖ ದಾಳಿಯ ಕೇಂದ್ರವಾಗಿ ಮಾರ್ಪಟ್ಟಿತ್ತು.
ಈ ದಾಳಿಯಲ್ಲಿ ಕೇಂದ್ರದ ರಬ್ಬಿ (ಯಹೂದಿ ಧಾರ್ಮಿಕ ಗುರು) ಗಾವ್ರಿಯೆಲ್ ಹೋಲ್ಟ್ಜ್ಬರ್ಗ್ ಮತ್ತು ಅವರ ಗರ್ಭಿಣಿ ಪತ್ನಿ ರಿವ್ಕಾ ಹೋಲ್ಟ್ಜ್ಬರ್ಗ್ ಮೃತಪಟ್ಟಿದ್ದರು. ಇವರ ಜೊತೆಗೆ ಇಬ್ಬರು ಇಸ್ರೇಲಿ ಪ್ರಜೆಗಳು, ಓರ್ವ ಅಮೆರಿಕನ್ ಹಾಗೂ ಓರ್ವ ಮೆಕ್ಸಿಕನ್ ಪ್ರಜೆಯೂ ದಾಳಿಯಲ್ಲಿ ಹತ್ಯೆಯಾಗಿದ್ದರು. ಮೃತಪಟ್ಟ ಈ ನಾಲ್ವರೂ ಯಹೂದಿ ಸಮುದಾಯಕ್ಕೆ ಸೇರಿದವರಾಗಿದ್ದರು. ಭಾರತೀಯ ಭದ್ರತಾ ಸಿಬ್ಬಂದಿಯೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಆದರೆ, ದಂಪತಿಯ ಎರಡು ವರ್ಷದ ಪುತ್ರ ಮೊಶೆ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದ. ಮಗುವಿನ ಭಾರತೀಯ ಆಯಾ ಸಾಂಡ್ರಾ ಸ್ಯಾಮ್ಯುಯೆಲ್ಸ್ ಉಗ್ರರ ದಾಳಿಯ ನಡುವೆಯೂ ಆತನನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತಂದಿದ್ದರು. ದಾಳಿಯ ಕೆಲ ದಿನಗಳ ಬಳಿಕ ಮೊಶೆಯನ್ನು ಸಾಂಡ್ರಾ ಅವರೊಂದಿಗೆ ಇಸ್ರೇಲ್ಗೆ ಕರೆದೊಯ್ಯಲಾಗಿತ್ತು.
2008ರ ಮುಂಬೈ ದಾಳಿಯ ಪ್ರಮುಖ ಗುರಿಗಳಲ್ಲಿ ಒಂದಾಗಿದ್ದ ನರಿಮನ್ ಹೌಸ್ ಮೇಲೆ ಮತ್ತೆ ಬೇಹುಗಾರಿಕೆ ನಡೆದಿರುವ ಆರೋಪ ಇದೀಗ ಭದ್ರತಾ ಸಂಸ್ಥೆಗಳ ಗಮನ ಸೆಳೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



ನಿಮ್ಮ ಕಾಮೆಂಟ್ ಬರೆಯಿರಿ