ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಅಮಿತಾಬ್ ಬಚ್ಚನ್ ಜುಹು ಬಂಗಲೆ ‘ಜಲ್ಸಾ’ ಈಗ ಕುಟುಂಬದ ಆಸ್ತಿ ವಿವಾದದ ಕೇಂದ್ರ ; ವರದಿ

ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರಸಿದ್ಧ ‘ಜಲ್ಸಾ’ ಬಂಗಲೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕುಟುಂಬದೊಳಗಿನ ಆಸ್ತಿ ವಿವಾದ ಭುಗಿಲೆದ್ದಿದೆ ಎಂದು ವರದಿಯಾಗಿದೆ. 1993ರಲ್ಲಿ ಈ ಬಂಗಲೆಯನ್ನು ನಟಿ ಜಯಾ ಬಚ್ಚನ್ ಅವರ ಹೆಸರಿಗೆ ವರ್ಗಾಯಿಸಲು ಮಾಡಲಾಗಿದ್ದ ಉಡುಗೊರೆ ಪತ್ರದ (Gift Deed) ಸಿಂಧುತ್ವವನ್ನೇ ಪ್ರಶ್ನಿಸಿ ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್ ದೂರು ನೀಡಿದ್ದು, ತಮ್ಮ ಅರಿವಿಗೆ ಅಥವಾ ಒಪ್ಪಿಗೆಗೆ ಬಾರದೆ ಆಸ್ತಿ ವರ್ಗಾವಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಪ್ರಕರಣ ಇದೀಗ ಮುಂಬೈನ ಅಂಧೇರಿಯಲ್ಲಿರುವ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ (Deputy Registrar of Co-operative Societies) ಕಚೇರಿಯ ಮೆಟ್ಟಿಲೇರಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ರಮೋಲಾ ಬಚ್ಚನ್ ಅವರು ಹಲವು ಬಾರಿ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಈ ವಿವಾದದ ಪ್ರಮುಖ ಅಂಶವೆಂದರೆ ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಸರ್ಕಾರಿ ದಾಖಲೆಗಳು ಮತ್ತು ವಸತಿ ಸಂಘದ ದಾಖಲೆಗಳ ನಡುವಿನ ವ್ಯತ್ಯಾಸ. ಜಲ್ಸಾ ಬಂಗಲೆ ಇರುವ ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ ಜಯಾ ಬಚ್ಚನ್ ಅವರ ಹೆಸರನ್ನು ಮಾಲೀಕರಾಗಿ ನಮೂದಿಸಲಾಗಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆಸ್ತಿ ದಾಖಲೆ (Property Card) ಯಲ್ಲಿ ಈಗಲೂ ರಮೋಲಾ ಬಚ್ಚನ್ ಅವರ ಹೆಸರೇ ಇದೆ ಎಂದು ವರದಿಯಾಗಿದೆ.
ಸರ್ಕಾರದ ಆಸ್ತಿ ದಾಖಲೆಯಲ್ಲಿರುವ ರಮೋಲಾ ಅವರ ಹೆಸರನ್ನು ತೆಗೆದು ಜಯಾ ಬಚ್ಚನ್ ಅವರ ಹೆಸರನ್ನು ಸೇರಿಸಲು ಪ್ರಯತ್ನ ನಡೆದಾಗ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ. ರಮೋಲಾ ಬಚ್ಚನ್ ತಮ್ಮ ದೂರಿನಲ್ಲಿ, ಜಲ್ಸಾ ಬಂಗಲೆ ಆರಂಭದಲ್ಲಿ ತಮ್ಮ ಹೆಸರಿನಲ್ಲೇ ನೋಂದಣಿಯಾಗಿತ್ತು. ಬಳಿಕ 1993ರಲ್ಲಿ ಉಡುಗೊರೆ ಪತ್ರದ ಮೂಲಕ ಅದರ ಮಾಲೀಕತ್ವವನ್ನು ಜಯಾ ಬಚ್ಚನ್ ಅವರಿಗೆ ವರ್ಗಾಯಿಸಲಾಯಿತು ಎಂದು ತಿಳಿಸಿದ್ದಾರೆ. ಈ ಉಡುಗೊರೆ ಪತ್ರವನ್ನು ಸಿದ್ಧಪಡಿಸಿದ ರೀತಿಯ ಬಗ್ಗೆಯೇ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ʼಎಲ್ ನಿನೊʼದಿಂದ ಆರೋಗ್ಯ ತೊಂದರೆ ಭೀತಿ : ʼತುರ್ತು ಎಚ್ಚರಿಕೆ ಮಟ್ಟʼವನ್ನು ಗರಿಷ್ಠಕ್ಕೇರಿಸಿದ ಡಬ್ಲ್ಯುಎಚ್‌ಒ ; ಭಾರತಕ್ಕೂ ಹೆಚ್ಚಿನ ಅಪಾಯ!

1993ರಲ್ಲಿ ಈ ದಾಖಲೆ ಸಾಮಾನ್ಯ ಕಾಗದದ ಮೇಲೆ ಸಿದ್ಧಪಡಿಸಲಾಗಿತ್ತು. ಆಗ ಯಾವುದೇ ಮುದ್ರಾಂಕ ಶುಲ್ಕ (Stamp Duty) ಪಾವತಿಸಿರಲಿಲ್ಲ. ಅಲ್ಲದೆ, ಉಡುಗೊರೆ ಪತ್ರದಲ್ಲಿ ಸಾಕ್ಷಿಗಳ ಸಹಿಗಳೂ ಇರಲಿಲ್ಲ ಎಂದು ರಮೋಲಾ ಆರೋಪಿಸಿದ್ದಾರೆ. ಹೀಗಾಗಿ ಈ ದಾಖಲೆ ಕಾನೂನುಬದ್ಧವಾಗಿ ಮಾನ್ಯವಾಗಿದೆಯೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ಇದರ ಜೊತೆಗೆ, ನಂತರದ ದಿನಗಳಲ್ಲಿ ಈ ಉಡುಗೊರೆ ಪತ್ರವನ್ನು ನೋಂದಣಿ ಮಾಡಿಸಿದ ಮತ್ತು ಕಾನೂನುಬದ್ಧಗೊಳಿಸಿದ ಪ್ರಕ್ರಿಯೆಯ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದ್ದ ‘ಅಭಯ ಯೋಜನೆ’ಯಡಿ (Abhay Yojana) ಈ ದಾಖಲೆಯನ್ನು ನೋಂದಣಿ ಹಾಗೂ ಕ್ರಮಬದ್ಧಗೊಳಿಸಿದ ರೀತಿಯೂ ಪರಿಶೀಲನೆಗೆ ಒಳಪಡಬೇಕು ಎಂದು ಅವರು ದೂರಿನಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳ ಭೇಟಿಗೆ ಪ್ರಸಿದ್ಧವಾದ ‘ಜಲ್ಸಾ’
ಮುಂಬೈನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾಗಿರುವ ಜಲ್ಸಾ ಬಂಗಲೆ, ಅಮಿತಾಭ್ ಬಚ್ಚನ್ ಅವರ ನಿವಾಸ ಎಂಬ ಕಾರಣಕ್ಕೆ ದೇಶಾದ್ಯಂತ ಪರಿಚಿತವಾಗಿದೆ. ಅದರಲ್ಲೂ ಪ್ರತಿ ಭಾನುವಾರ ಬಂಗಲೆಯ ಹೊರಗೆ ಜಮಾಯಿಸುವ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಅವರು ಕಾಣಿಸಿಕೊಂಡು ಕೈಬೀಸಿ ಶುಭಾಶಯ ತಿಳಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಇದೀಗ ಅಭಿಮಾನಿಗಳ ಪಾಲಿಗೆ ವಿಶೇಷ ಗುರುತಾಗಿರುವ ಇದೇ ಜಲ್ಸಾ ಬಂಗಲೆಯ ಮಾಲೀಕತ್ವದ ವಿಚಾರ ಕುಟುಂಬದ ಆಸ್ತಿ ವಿವಾದವಾಗಿ ರೂಪುಗೊಂಡಿದ್ದು, 1993ರ ಉಡುಗೊರೆ ಪತ್ರದ ಸಿಂಧುತ್ವದ ಕುರಿತು ನಡೆಯುತ್ತಿರುವ ವಿಚಾರಣೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪ ; ‘ಪ್ರಧಾನಿ ಮೋದಿ ಹಾಗೆ ಮಾಡುವುದಿಲ್ಲ ಎಂದ ಕಾಂಗ್ರೆಸ್ ನಾಯಕ ಪಿತ್ರೋಡಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement