

ತೆಹ್ರಾನ್: ಆರ್ಥಿಕ ಸಂಕಷ್ಟ, ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳಿಂದ ಕಂಗೆಟ್ಟಿರುವ ಇರಾನ್ನ ಜನರು ಇದೀಗ ಜೀವನ ನಡೆಸಲು ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕಿಡುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೂತ್ರಪಿಂಡ, ಮೂಳೆಮಜ್ಜೆ, ಯಕೃತ್ತು ಮಾತ್ರವಲ್ಲದೆ ಕಣ್ಣಿನ ಕಾರ್ನಿಯಾಗಳನ್ನೂ ಮಾರಾಟ ಮಾಡುವುದಾಗಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಅಂಗಾಂಗ ಖರೀದಿದಾರರನ್ನು ಹುಡುಕಲು ಕೂಡ ಅಂಗಾಂಗಳನ್ನು ಮಾರಾಟಕ್ಕೆ ಮುಂದಾಗಿರುವವರೇ ಹಣ ಪಾವತಿಸಬೇಕಾದ ಪರಿಸ್ಥಿತಿ ಇದೆ.
ಇರಾನ್ ಇಂಟರ್ನ್ಯಾಷನಲ್ ನಡೆಸಿದ ತನಿಖಾ ವರದಿಯಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಮೇ ತಿಂಗಳ ಕೊನೆಯ ವಾರದಿಂದ ಅಕ್ಟೋಬರ್ ಕೊನೆಯ ವಾರದವರೆಗೆ ಟೆಲಿಗ್ರಾಂನ ಒಂದು ಚಾನೆಲ್ನಲ್ಲಿ ಪ್ರಕಟವಾಗಿದ್ದ 600ಕ್ಕೂ ಹೆಚ್ಚು ಅಂಗಾಂಗ ಮಾರಾಟದ ಜಾಹೀರಾತುಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಜಾಹೀರಾತುಗಳಲ್ಲಿ ಒಂದಕ್ಕಿಂತ ಹೆಚ್ಚು ಅಂಗಾಂಗ ಅಥವಾ ದೇಹದ ಅಂಗಾಂಶಗಳನ್ನು ಮಾರಾಟ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ.
ತನ್ನ ದೇಹದ ಹಲವು ಅಂಗಾಂಗಗಳನ್ನು ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ ವ್ಯಕ್ತಿಯೊಬ್ಬ ಇರಾನ್ ಇಂಟರ್ನ್ಯಾಷನಲ್ಗೆ ಪ್ರತಿಕ್ರಿಯಿಸಿ, ‘ಈ ಅಂಗಾಂಗಗಳನ್ನು ಕಳೆದುಕೊಂಡರೂ ನಾನು ಬದುಕಬಲ್ಲೆ’ ಎಂದು ಹೇಳಿದ್ದಾನೆ. ಆದರೆ ಆತ ಮಾರಾಟಕ್ಕೆ ಮುಂದಾಗಿದ್ದ ಕೆಲವು ಅಂಗಾಂಗಗಳ ಕಸಿ ಪ್ರಕ್ರಿಯೆಗಳು ಇರಾನ್ನಲ್ಲಿ ವೈದ್ಯಕೀಯವಾಗಿ ಇನ್ನೂ ಸ್ಥಾಪಿತವಾಗಿಲ್ಲ ಎಂಬ ಅರಿವೇ ಆತನಿಗಿರಲಿಲ್ಲ.
ಮೂತ್ರಪಿಂಡಕ್ಕೆ ಅತಿ ಹೆಚ್ಚು ಬೇಡಿಕೆ
ಪರಿಶೀಲಿಸಲಾದ 600ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಮೂತ್ರಪಿಂಡ ಮಾರಾಟದ ಪ್ರಸ್ತಾಪವೇ ಅತ್ಯಧಿಕವಾಗಿತ್ತು. ಒಟ್ಟು 498 ಜಾಹೀರಾತುಗಳಲ್ಲಿ ಮೂತ್ರಪಿಂಡ ಮಾರಾಟದ ಬಗ್ಗೆ ಉಲ್ಲೇಖವಿತ್ತು. 279 ಜಾಹೀರಾತುಗಳಲ್ಲಿ ಮೂಳೆಮಜ್ಜೆ, 51ರಲ್ಲಿ ಯಕೃತ್ತು ಹಾಗೂ ಎರಡು ಜಾಹೀರಾತುಗಳಲ್ಲಿ ಕಣ್ಣಿನ ಕಾರ್ನಿಯಾ ಮಾರಾಟದ ಪ್ರಸ್ತಾಪ ಮಾಡಲಾಗಿತ್ತು. 142 ಜಾಹೀರಾತುಗಳಲ್ಲಿ ಮೂತ್ರಪಿಂಡ ಮತ್ತು ಮೂಳೆಮಜ್ಜೆ ಎರಡನ್ನೂ ಮಾರಾಟ ಮಾಡುವುದಾಗಿ ತಿಳಿಸಲಾಗಿತ್ತು. ಮತ್ತೊಂದರಲ್ಲಿ 26 ಜಾಹೀರಾತುಗಳಲ್ಲಿ ಮೂತ್ರಪಿಂಡ, ಮೂಳೆಮಜ್ಜೆ ಮತ್ತು ಯಕೃತ್ತು ಮೂರನ್ನೂ ಮಾರಾಟಕ್ಕೆ ಇಟ್ಟಿರುವುದಾಗಿ ಹೇಳಲಾಗಿತ್ತು. 110 ಜಾಹೀರಾತುಗಳಲ್ಲಿ ಮೂತ್ರಪಿಂಡದ ಉಲ್ಲೇಖವೇ ಇರಲಿಲ್ಲ. ಇವುಗಳಲ್ಲಿ ಇತರ ಅಂಗಾಂಗಗಳು ಅಥವಾ ದೇಹದ ಅಂಗಾಂಶಗಳನ್ನು ಮಾರಾಟ ಮಾಡುವುದಾಗಿ ಪ್ರಕಟಿಸಲಾಗಿತ್ತು.
ಅಂಗಾಂಗ ಮಾರಾಟಕ್ಕೆ ಮುಂದಾಗಿರುವ ಹಲವರನ್ನು ಇರಾನ್ ಇಂಟರ್ನ್ಯಾಷನಲ್ ಸಂದರ್ಶಿಸಿದ್ದು, ಅವರ ಮಾತುಗಳು ದೇಶದ ಆರ್ಥಿಕ ದುಸ್ಥಿತಿಯ ಭೀಕರ ಚಿತ್ರಣವನ್ನು ತೆರೆದಿಟ್ಟಿವೆ. ದಿವಾಳಿತನ, ಸಾಲದ ಸುಳಿ, ಮಕ್ಕಳನ್ನು ಸಾಕುವ ಸಂಕಷ್ಟ, ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಬದುಕುವ ಅನಿವಾರ್ಯತೆ ಸೇರಿದಂತೆ ಹಲವು ಸಮಸ್ಯೆಗಳು ಅವರನ್ನು ಇಂತಹ ನಿರ್ಧಾರಕ್ಕೆ ತಳ್ಳಿವೆ.


ಬೆಳೆದುನಿಂತ ಮಗಳ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ತನ್ನ ದೇಹದ ಪ್ರಮುಖ ಅಂಗಾಂಗಗಳನ್ನೂ ಮಾರಾಟ ಮಾಡಲು ಸಿದ್ಧನಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ. ಅಂಗಾಂಗ ಮಾರಾಟದ ಮೂಲಕ ಮಗಳ ಆರ್ಥಿಕ ಭವಿಷ್ಯಕ್ಕೆ ನೆರವಾಗಬಹುದು ಎಂಬುದು ಆತನ ನಿರೀಕ್ಷೆ.
ಈ ಹಿಂದೆ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಮತ್ತೊಬ್ಬ ವ್ಯಕ್ತಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ದಿವಾಳಿಯಾಗಿದ್ದಾನೆ. ಇದರಿಂದ ಸಾಲದ ಹೊರೆ ಹೆಚ್ಚಾಗಿದ್ದು, ನೀಡಿದ್ದ ಚೆಕ್ಗಳು ಬೌನ್ಸ್ ಆಗಿವೆ. ತನ್ನ ಹಣಕಾಸಿನ ಬಾಧ್ಯತೆಗಳನ್ನು ಪೂರೈಸಲು ಸಾಧ್ಯವಾಗದ ಆತ, ಕನಿಷ್ಠ ಕೆಲವಷ್ಟು ಸಾಲಗಳನ್ನಾದರೂ ತೀರಿಸಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ಅಂಗಾಂಗವೊಂದನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.
ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ ಒಂದೆಡೆಯಿಂದ ಮತ್ತೊಂದೆಡೆಗೆ ಮನೆ ಬದಲಾಯಿಸುತ್ತಾ ಜೀವನ ಸಾಗಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ, ಅಂಗಾಂಗ ಮಾರಾಟದಿಂದ ಬರುವ ಹಣದಲ್ಲಿ ಸ್ವಂತ ಮನೆ ಖರೀದಿಸುವ ಕನಸು ಕಂಡಿದ್ದಾನೆ. ಇಬ್ಬರು ಹೆಣ್ಣುಮಕ್ಕಳನ್ನು ಒಬ್ಬಂಟಿಯಾಗಿ ಸಾಕುತ್ತಿರುವ ಮಹಿಳೆಯೊಬ್ಬಳು, ತನ್ನ ಕುಟುಂಬದ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದಕ್ಕಾಗಿಯೇ ಖರೀದಿದಾರರನ್ನು ಹುಡುಕುತ್ತಿದ್ದಾಳೆ.
ಶೇ.89ಕ್ಕೆ ತಲುಪಿದ ಹಣದುಬ್ಬರ!
ಇರಾನ್ನಲ್ಲಿ ಜನರು ಇಂತಹ ತೀವ್ರ ನಿರ್ಧಾರಕ್ಕೆ ಮುಂದಾಗಲು ದೇಶದ ಆರ್ಥಿಕ ಪರಿಸ್ಥಿತಿಯೂ ಪ್ರಮುಖ ಕಾರಣವಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾರ್ಷಿಕ ಹಣದುಬ್ಬರ ಪ್ರಮಾಣ ಸುಮಾರು ಶೇ.89ಕ್ಕೆ ತಲುಪಿದೆ. ಇದರಿಂದ ಜನರ ಆದಾಯದ ಮೌಲ್ಯ ಕುಸಿದಿದ್ದು, ಮನೆ ಬಾಡಿಗೆ ಮತ್ತು ಅಗತ್ಯ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ.
2024ರಲ್ಲಿ ತೆಹ್ರಾನ್ನ ಮೂತ್ರಪಿಂಡ ಮಾರಾಟ ಮಾರುಕಟ್ಟೆಯಲ್ಲಿ ಭಾಗವಹಿಸಿದ್ದ 215 ಜನರನ್ನು ಆಧರಿಸಿ ನಡೆಸಲಾದ ಶೈಕ್ಷಣಿಕ ಅಧ್ಯಯನವೂ ಇದೇ ರೀತಿಯ ಪರಿಸ್ಥಿತಿಯನ್ನು ಬಯಲು ಮಾಡಿದೆ. ಈ ಅಧ್ಯಯನದ ಪ್ರಕಾರ, ಸುಮಾರು ಶೇ.83ರಷ್ಟು ಜನರು ದೀರ್ಘಕಾಲೀನ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಂಗಾಂಗ ಮಾರಾಟಕ್ಕೆ ಮುಂದಾಗಿದ್ದರು. ಸಾಲ ತೀರಿಸುವುದು ಮತ್ತು ದೀರ್ಘಕಾಲ ಬಳಸಬಹುದಾದ ವಸ್ತುಗಳನ್ನು ಖರೀದಿಸುವುದು ಅವರ ಪ್ರಮುಖ ಉದ್ದೇಶಗಳಾಗಿದ್ದವು. ಅಧ್ಯಯನದಲ್ಲಿ ಭಾಗವಹಿಸಿದ್ದವರ ಪೈಕಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.
10 ವರ್ಷಗಳಲ್ಲಿ ಅಂಗಾಂಗಗಳ ಬೆಲೆ ಸಾವಿರ ಪಟ್ಟು ಏರಿಕೆ!
ಅಂಗಾಂಗಗಳನ್ನು ಮಾರಾಟ ಮಾಡಲು ಬಯಸುವವರು ಕೇಳುತ್ತಿರುವ ಬೆಲೆಯೂ ಕಳೆದ ಒಂದು ದಶಕದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2016ರಲ್ಲಿ ಮೂತ್ರಪಿಂಡವೊಂದಕ್ಕೆ ಸಾಮಾನ್ಯವಾಗಿ 2 ಕೋಟಿ ಟೊಮನ್ನಿಂದ 3 ಕೋಟಿ ಟೊಮನ್ವರೆಗೆ ಬೆಲೆ ನಿಗದಿಪಡಿಸಿ ಜಾಹೀರಾತು ನೀಡಲಾಗುತ್ತಿತ್ತು. 2020ರ ವೇಳೆಗೆ ಮಾಧ್ಯಮ ವರದಿಗಳಲ್ಲಿ ಈ ಬೆಲೆ 10 ಕೋಟಿ ಟೊಮನ್ನಿಂದ 15 ಕೋಟಿ ಟೊಮನ್ಗೆ ಏರಿಕೆಯಾಗಿರುವುದಾಗಿ ಉಲ್ಲೇಖಿಸಲಾಗಿತ್ತು. 2021ರಲ್ಲಿ ಇದು 15 ಕೋಟಿ ಟೊಮನ್ನಿಂದ 20 ಕೋಟಿ ಟೊಮನ್ಗೆ ತಲುಪಿತ್ತು.
ಆದರೆ ಇತ್ತೀಚಿನ ತನಿಖೆಯಲ್ಲಿ ಪರಿಶೀಲಿಸಲಾದ ಕೆಲವು ಜಾಹೀರಾತುಗಳಲ್ಲಿ ಮೂತ್ರಪಿಂಡವೊಂದಕ್ಕೆ ಬರೋಬ್ಬರಿ 30 ಬಿಲಿಯನ್ ಟೊಮನ್ವರೆಗೆ ಬೆಲೆ ಕೇಳಲಾಗಿದೆ. ಇದು ಹತ್ತು ವರ್ಷಗಳ ಹಿಂದೆ ಜಾಹೀರಾತುಗಳಲ್ಲಿ ಉಲ್ಲೇಖಿಸಲಾಗುತ್ತಿದ್ದ ಗರಿಷ್ಠ ಬೆಲೆಗಿಂತ ಸುಮಾರು 1,000 ಪಟ್ಟು ಹೆಚ್ಚಾಗಿದೆ.
ಯಕೃತ್ತಿನ ಮಾರಾಟಕ್ಕೂ 30 ಬಿಲಿಯನ್ ಟೊಮನ್ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಮೂಳೆಮಜ್ಜೆಗೆ ಗರಿಷ್ಠ 23 ಬಿಲಿಯನ್ ಟೊಮನ್ ಹಾಗೂ ವೃಷಣಗಳಿಗೆ 10 ಬಿಲಿಯನ್ ಟೊಮನ್ವರೆಗೆ ಬೆಲೆ ಕೇಳಲಾಗಿದೆ. ಕಣ್ಣಿನ ಕಾರ್ನಿಯಾ ಮಾರಾಟಕ್ಕೆ ಮುಂದಾಗಿರುವವರು ಮಾತ್ರ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಬೆಲೆ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
ಆದರೆ ಜಾಹೀರಾತುಗಳಲ್ಲಿ ಉಲ್ಲೇಖಿಸಿರುವ ಈ ಬೆಲೆಗಳಿಗೆ ನಿಜವಾಗಿಯೂ ಅಂಗಾಂಗಗಳ ವಹಿವಾಟು ನಡೆದಿದೆಯೇ ಅಥವಾ ಮಾರಾಟಕ್ಕೆ ಮುಂದಾಗಿರುವವರಿಗೆ ಕೇಳಿದಷ್ಟು ಹಣ ಸಿಕ್ಕಿದೆಯೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ, ಶಸ್ತ್ರಚಿಕಿತ್ಸೆಯ ವೆಚ್ಚ ಮತ್ತು ನಂತರದ ವೈದ್ಯಕೀಯ ಆರೈಕೆಗೆ ತಗಲುವ ಹಣವನ್ನು ಕಡಿತಗೊಳಿಸಿದರೆ ಮಾರಾಟಗಾರರ ಕೈಗೆ ಸಿಗುವ ಮೊತ್ತ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ.
ಎಲ್ಲ ಅಂಗಾಂಗಗಳನ್ನೂ ಜೀವಂತ ವ್ಯಕ್ತಿಯಿಂದ ಪಡೆಯಲು ಸಾಧ್ಯವಿಲ್ಲ!
ಅಂಗಾಂಗ ಮಾರಾಟದ ಜಾಹೀರಾತುಗಳಲ್ಲಿ ಉಲ್ಲೇಖಿಸಿರುವ ಎಲ್ಲ ಅಂಗಾಂಗಗಳನ್ನೂ ಜೀವಂತ ವ್ಯಕ್ತಿಯಿಂದ ಪಡೆದು ಮತ್ತೊಬ್ಬರಿಗೆ ಕಸಿ ಮಾಡಲು ಸಾಧ್ಯವಿಲ್ಲ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೀವಂತ ವ್ಯಕ್ತಿಯೊಬ್ಬ ತನ್ನ ಒಂದು ಮೂತ್ರಪಿಂಡವನ್ನು ದಾನ ಮಾಡಬಹುದು. ಅದೇ ರೀತಿ ಯಕೃತ್ತಿನ ಒಂದು ಭಾಗವನ್ನೂ ದಾನ ಮಾಡಬಹುದು. ಆದರೆ ಈ ಎರಡೂ ಪ್ರಕ್ರಿಯೆಗಳಲ್ಲಿ ಆರೋಗ್ಯದ ಅಪಾಯಗಳಿವೆ. ಅದರಲ್ಲೂ ಯಕೃತ್ತಿನ ಭಾಗವನ್ನು ದಾನ ಮಾಡುವ ಶಸ್ತ್ರಚಿಕಿತ್ಸೆ ಹೆಚ್ಚು ಸಂಕೀರ್ಣವಾಗಿರುತ್ತದೆ.
ಮೂಳೆಮಜ್ಜೆ ದಾನ ಮಾಡುವ ಸಂದರ್ಭದಲ್ಲಿ ಇಡೀ ಅಂಗವನ್ನು ತೆಗೆದುಹಾಕುವುದಿಲ್ಲ. ಬದಲಿಗೆ ರಕ್ತಕಣಗಳನ್ನು ಉತ್ಪಾದಿಸುವ ಸ್ಟೆಮ್ ಸೆಲ್ಗಳನ್ನು ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಕಾರ್ನಿಯಾಗಳನ್ನು ಮೃತಪಟ್ಟ ದಾನಿಗಳಿಂದ ಪಡೆಯಲಾಗುತ್ತದೆ.
ಅಂಗಾಂಗ ಮಾರಾಟದ ಜಾಹೀರಾತಿಗೂ ಹಣ ಪಾವತಿಸಬೇಕು!
ಈ ಅಂಗಾಂಗ ಮಾರಾಟದ ಜಾಲದಲ್ಲಿ ಮತ್ತೊಂದು ಆಘಾತಕಾರಿ ಸಂಗತಿಯೂ ಬಯಲಾಗಿದೆ. ತಮ್ಮ ಅಂಗಾಂಗಗಳನ್ನು ಮಾರಾಟ ಮಾಡಲು ಬಯಸುವವರು ಜಾಹೀರಾತು ಪ್ರಕಟಿಸಲು ಅಥವಾ ಸಂಭಾವ್ಯ ಖರೀದಿದಾರರನ್ನು ಸಂಪರ್ಕಿಸಲು ಮಧ್ಯವರ್ತಿಗಳಿಗೆ ಹಣ ನೀಡಬೇಕಾಗಿದೆ.
ತನ್ನ ತನಿಖಾ ವರದಿಗಾರೊಬ್ಬರು ಅಂಗಾಂಗ ಮಾರಾಟದ ಜಾಹೀರಾತು ಪ್ರಕಟಿಸುವಂತೆ ಟೆಲಿಗ್ರಾಂ ಚಾನೆಲ್ನ ನಿರ್ವಾಹಕರನ್ನು ಸಂಪರ್ಕಿಸಿದಾಗ, ಜಾಹೀರಾತು ಪ್ರಕಟಿಸಲು 2 ಲಕ್ಷ ಟೊಮನ್ ಹಣ ನೀಡುವಂತೆ ಆತ ಕೇಳಿದ್ದಾನೆ ಎಂದು ಇರಾನ್ ಇಂಟರ್ನ್ಯಾಷನಲ್ ವರದಿ ಹೇಳಿದೆ.
ಇದಕ್ಕೆ ಹೆಚ್ಚುವರಿಯಾಗಿ 4 ಲಕ್ಷ ಟೊಮನ್ ಪಾವತಿಸಿದರೆ, ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳು ಮತ್ತು ಸಂಭಾವ್ಯ ದಾನಿಗಳನ್ನು ಸಂಪರ್ಕಿಸುವ ಸಂಘಟನೆಯೊಂದರ ಮೂಲಕ ಮಾರಾಟಗಾರರ ವಿವರಗಳನ್ನು ಹಂಚಿಕೊಳ್ಳುವುದಾಗಿ ಚಾನೆಲ್ ನಿರ್ವಾಹಕ ಭರವಸೆ ನೀಡಿದ್ದಾನೆ.
ಅಂದರೆ ಜಾಹೀರಾತು ಪ್ರಕಟಿಸಲು ಮತ್ತು ಸಂಭಾವ್ಯ ಖರೀದಿದಾರರನ್ನು ಸಂಪರ್ಕಿಸಲು ಒಟ್ಟು 6 ಲಕ್ಷ ಟೊಮನ್ ಪಾವತಿಸಬೇಕಾಗುತ್ತದೆ. ಆದರೆ ಯಾವುದೇ ಖರೀದಿದಾರ ಸಿಗುವ ಮೊದಲೇ ಈ ಹಣವನ್ನು ಮುಂಗಡವಾಗಿ ನೀಡಬೇಕೆಂದು ತಿಳಿಸಲಾಗಿದೆ. ಹಣ ಪಾವತಿಸಲು ಚಾನೆಲ್ ನಿರ್ವಾಹಕ ತನ್ನ ಬ್ಯಾಂಕ್ ಕಾರ್ಡ್ ಸಂಖ್ಯೆಯನ್ನೂ ನೀಡಿದ್ದಾನೆ.
ಇರಾನ್ನ ಮಾಧ್ಯಮಗಳು ಈ ಹಿಂದೆ ಪ್ರಕಟಿಸಿರುವ ವರದಿಗಳ ಪ್ರಕಾರ, ಕೆಲವು ಟೆಲಿಗ್ರಾಂ ಮಧ್ಯವರ್ತಿಗಳು ಅಂಗಾಂಗ ಮಾರಾಟಕ್ಕೆ ಮುಂದಾಗಿರುವವರ ಹೆಸರು ನೋಂದಾಯಿಸಿ, ಖರೀದಿದಾರರನ್ನು ಹುಡುಕಿಕೊಡುವುದಾಗಿ ಹೇಳಿ ಸುಮಾರು 40 ಲಕ್ಷ ಟೊಮನ್ವರೆಗೆ ಹಣ ವಸೂಲಿ ಮಾಡುತ್ತಾರೆ. ಮತ್ತೊಂದೆಡೆ, ತಮ್ಮ ಅಂಗಾಂಗಗಳಿಗೆ ಹೆಚ್ಚಿನ ಬೆಲೆ ಕೊಡಿಸುವುದಾಗಿ ಹೇಳುವ ದಲ್ಲಾಳಿಗಳನ್ನೂ ಕೆಲವು ಮಾರಾಟಗಾರರು ಹುಡುಕುತ್ತಿದ್ದಾರೆ.
ಒಟ್ಟಿನಲ್ಲಿ, ಸಾಲದ ಸುಳಿ, ಆರ್ಥಿಕ ಸಂಕಷ್ಟ, ಅಭದ್ರ ವಸತಿ ವ್ಯವಸ್ಥೆ ಮತ್ತು ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲಾಗದ ಪರಿಸ್ಥಿತಿಯಿಂದ ಹೊರಬರಲು ಇರಾನ್ನ ಜನರು ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕೆ ಇಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಂಕಷ್ಟದ ನಡುವೆ ಅಂಗಾಂಗ ಮಾರಾಟಕ್ಕೆ ಮುಂದಾದವರಿಗೆ ಖರೀದಿದಾರರು ಸಿಗುತ್ತಾರೆ ಎಂಬ ಖಾತರಿಯೂ ಇಲ್ಲ. ಕೇಳಿದಷ್ಟು ಹಣ ಕೈಗೆ ಸಿಗುತ್ತದೆ ಎಂಬ ಭರವಸೆಯೂ ಇಲ್ಲ. ತಮ್ಮನ್ನು ಈ ಹಂತಕ್ಕೆ ತಳ್ಳಿರುವ ಬಡತನ ಮತ್ತು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ ಎಂಬ ಖಚಿತತೆಯೂ ಇಲ್ಲ. ಬದುಕಿನ ಅನಿವಾರ್ಯತೆ ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸಬಹುದು ಎಂಬುದಕ್ಕೆ ಇರಾನ್ನ ಈ ಬೆಳವಣಿಗೆ ಕರುಣಾಜನಕ ನಿದರ್ಶನವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ