

ಹೈದರಾಬಾದ್/ನವದೆಹಲಿ: ಭಾರತದ ಆಂತರಿಕ ರಾಜಕೀಯದಲ್ಲಿ ವಿದೇಶಿ ರಾಜಕೀಯ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಲು ರಾಹುಲ್ ಗಾಂಧಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ಹೈದರಾಬಾದ್ನಲ್ಲಿ ಶನಿವಾರ ಆಯೋಜಿಸಿದ್ದ ಭಾರತ್ ಶೃಂಗಸಭೆಯಲ್ಲಿ ಇಟಲಿಯ ರಾಜಕೀಯ ನಾಯಕನೊಬ್ಬ ಕಾಂಗ್ರೆಸ್ನ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆಯನ್ನು ಕೂಗಿ, ಅದನ್ನು ಇಂಗ್ಲಿಷ್ಗೆ ಭಾಷಾಂತರಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ನಗುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಪಾರ್ಟಿ ಆಫ್ ಯುರೋಪಿಯನ್ ಸೋಷಿಯಲಿಸ್ಟ್ಸ್’ (PES) ನ ಪ್ರಧಾನ ಕಾರ್ಯದರ್ಶಿ ಹಾಗೂ ಇಟಲಿಯ ನಾಯಕ ಜಿಯಾಕೊಮೊ ಫಿಲಿಬೆಕ್ (Giacomo Filibeck) ಅವರು ಸಭೆಯಲ್ಲಿ ಪ್ರತಿಪಕ್ಷಗಳ ‘ವೋಟ್ ಚೋರ್, ಗದ್ದಿ ಛೋಡ್’ (ಮತ ಕಳ್ಳ, ಗದ್ದುಗೆ ಬಿಡು) ಎಂಬುದನ್ನು ಉಲ್ಲೇಖಿಸಿ, ಅದನ್ನು “ವೋಟ್ ಥೀಫ್, ಲೀವ್ ಯುವರ್ ಸೀಟ್” (ಮತ ಕಳ್ಳ, ನಿನ್ನ ಸ್ಥಾನ ಬಿಡು) ಎಂದು ಅನುವಾದಿಸಿದರು.. ಬಿಜೆಪಿ ನೇತೃತ್ವದ ಸರ್ಕಾರವು ಚುನಾವಣಾ ಆಯೋಗದ ಜತೆಗೂಡಿ ಚುನಾವಣೆಯಲ್ಲಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಲು ರಾಹುಲ್ ಗಾಂಧಿ ಇದೇ ಘೋಷಣೆಯನ್ನು ಬಳಸುತ್ತಾ ಬಂದಿದ್ದಾರೆ. ಇಟಲಿಯ ನಾಯಕ ಈ ಘೋಷಣೆ ಕೂಗುತ್ತಿದ್ದಾಗ ರಾಹುಲ್ ಗಾಂಧಿ ನಗುತ್ತಿರುವುದು ಕಂಡುಬಂದಿತ್ತು.
ಕಾಂಗ್ರೆಸ್ನ ಸೈದ್ಧಾಂತಿಕ ಮಿತ್ರ ಪಕ್ಷಗಳು ಮತ್ತು ಪ್ರಪಂಚದಾದ್ಯಂತದ ಪ್ರಗತಿಪರ ಚಿಂತಕರ ಸಮಾವೇಶವಾಗಿ ತೆಲಂಗಾಣ ಸರ್ಕಾರವು ಈ ಶೃಂಗಸಭೆಯನ್ನು ಆಯೋಜಿಸಿತ್ತು.
ವಿದೇಶಿಯರು ಭಾರತವನ್ನು ಅವಮಾನಿಸಿದಾಗ ನಗುವುದೇ?
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿದೇಶಿಯೊಬ್ಬರು ಭಾರತವನ್ನು ಅವಮಾನಿಸುವಾಗ ಯಾರಾದರೂ ಭಾರತೀಯರು ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ವಿದೇಶಕ್ಕೆ ಹೋಗಿ ಅವಮಾನ ಮಾಡುವ ಭಾರತೀಯರ ಬಗ್ಗೆ ನಾನೀಗ ಕೇಳುತ್ತಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಹತಾಶೆಯನ್ನು ಕಾಂಗ್ರೆಸ್ ಪಕ್ಷ ಹೀಗೆ ಹೊರಹಾಕುತ್ತಿದೆ ಎಂದು ಟೀಕಿಸಿದ ಅವರು, ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆಯನ್ನೂ ಪ್ರಸ್ತಾಪಿಸಿದರು. “ದೇಶದ ಒಳಗಿನಿಂದ ಹಾಗೂ ವಿದೇಶಗಳಿಂದ ಎಡಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವವರನ್ನು ಕಾಂಗ್ರೆಸ್ ಆಹ್ವಾನಿಸಿತ್ತು. ಕಾಂಗ್ರೆಸ್ನ ಯುವರಾಜರೂ ಅಲ್ಲಿಗೆ ಹೋಗಿದ್ದರು. ಅದಕ್ಕೆ ‘ಭಾರತ್ ಶೃಂಗಸಭೆ’ ಎಂದು ಹೆಸರಿಟ್ಟಿದ್ದರು. ಆದರೆ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ರಾಹುಲ್ ಗಾಂಧಿ ಇಡೀ ಜಗತ್ತಿನ ಮುಂದೆ ಭಾರತವನ್ನು ಅಪಖ್ಯಾತಿಗೊಳಿಸುವ ಕೆಲಸ ಮಾಡಿದ್ದಾರೆ” ಎಂದು ಅಮಿತ್ ಶಾ ಆರೋಪಿಸಿದರು. ಅಲ್ಲದೆ, ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಅವಮಾನಿಸುತ್ತಾರೆ ಎಂದೂ ಅವರು ಟೀಕಿಸಿದರು.
ಇಟಲಿ ಮೂಲದ ವಿಚಾರ ಮುಂದಿಟ್ಟ ಬಿಜೆಪಿ
ಹೈದರಾಬಾದ್ ಶೃಂಗಸಭೆಯನ್ನು ‘ಭಾರತ ವಿರೋಧಿ ಶೃಂಗಸಭೆ’ ಎಂದು ಕರೆದಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಾಗೂ ತೆಲಂಗಾಣದ ಬಿಜೆಪಿ ನಾಯಕ ಬಂಡಿ ಸಂಜಯಕುಮಾರ, ಕಾಂಗ್ರೆಸ್ ವಿರುದ್ಧ ಇಟಲಿ ಮೂಲದ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ.
“ಒಂದು ಕಾಲದಲ್ಲಿ ಇಟಲಿ ಮೂಲದ ವ್ಯಕ್ತಿಯೊಬ್ಬರನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಈಗ ತನ್ನ ಭಾರತ ವಿರೋಧಿ ಶೃಂಗಸಭೆಯಲ್ಲಿ ಇಟಲಿಯ ರಾಜಕೀಯ ನಾಯಕನೊಬ್ಬ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾನೆ” ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಟಲಿ ಮೂಲವನ್ನು ಬಿಜೆಪಿ ಹಿಂದಿನಿಂದಲೂ ರಾಜಕೀಯ ಟೀಕೆಗೆ ಬಳಸಿಕೊಳ್ಳುತ್ತಾ ಬಂದಿದೆ. 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ್ದರು. ನಂತರ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.
ತೆಲಂಗಾಣದ ಕಾಂಗ್ರೆಸ್ ಸರ್ಕಾರವನ್ನೂ ಗುರಿಯಾಗಿಸಿಕೊಂಡ ಬಂಡಿ ಸಂಜಯಕುಮಾರ, “ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದೇಶಿ ರಾಜಕೀಯ ಪ್ರತಿನಿಧಿಗಳಿಗೆ ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ವೇದಿಕೆ ಒದಗಿಸಿದೆ. ಇತ್ತ ರಾಹುಲ್ ಗಾಂಧಿ ನಾಚಿಕೆಯಿಲ್ಲದೆ ನಗುತ್ತಿದ್ದಾರೆ” ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದ್ರ ರಾವ್ ಕೂಡ ತೆಲುಗಿನಲ್ಲಿ ಪ್ರತಿಕ್ರಿಯಿಸಿ, “ವಿದೇಶಿ ನಾಯಕರು ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಲು ಅವಕಾಶ ಮಾಡಿಕೊಟ್ಟು, ಅವರ ಮಾತುಗಳಿಗೆ ಹೆಮ್ಮೆಯಿಂದ ಚಪ್ಪಾಳೆ ತಟ್ಟುವುದು ದೇಶದ್ರೋಹವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಆತ್ಮಾವಲೋಕನ ಮಾಡಿಕೊಳ್ಳಲಿ ಎಂದ ಕಾಂಗ್ರೆಸ್
ಬಿಜೆಪಿಯ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ನ ಘೋಷಣೆಯಾಗಲಿ, ಅದನ್ನು ವಿದೇಶಿ ನಾಯಕನೊಬ್ಬ ಬಳಸಿದ್ದಾಗಲಿ ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದೆ.
ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, “ಲೂಟಿ ಮತ್ತು ಭ್ರಷ್ಟಾಚಾರದ ಸಿಂಹಾಸನದ ಮೇಲೆ ಕುಳಿತಿರುವವರಿಗೆ, ಅದರಲ್ಲೂ ವಿಶೇಷವಾಗಿ ಮೋದಿ ಸರ್ಕಾರ ಮತ್ತು ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಹೇಳಿದರು.
ವಿದೇಶಿ ನಾಯಕನೊಬ್ಬ ‘ವೋಟ್ ಚೋರ್’ ಘೋಷಣೆ ಕೂಗಿರುವ ಬಗ್ಗೆ ಕೇಳಿದಾಗ, “ಒಬ್ಬ ವಿದೇಶಿಯೇ ಬಂದು ಹೀಗೆ ಹೇಳುತ್ತಿದ್ದರೆ, ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ” ಎಂದರು.
ಕಾಂಗ್ರೆಸ್ ವಕ್ತಾರೆ ಗಿರಿಜಾ ಶೆಟ್ಕರ್ ಕೂಡ ಎಕ್ಸ್ನಲ್ಲಿ ಬಿಜೆಪಿಯ ಟೀಕೆಗೆ ಪ್ರತಿಯಾಗಿ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. “2019ರಲ್ಲಿ ‘ಅಬ್ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆ ಮತ್ತೊಂದು ದೇಶದ ಆಂತರಿಕ ರಾಜಕೀಯದ ಬಗ್ಗೆ ಮಾಡಿದ ಹೇಳಿಕೆಯಾಗಿರಲಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
2019ರಲ್ಲಿ ಅಮೆರಿಕದ ಹೂಸ್ಟನ್ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವ ರೀತಿಯಲ್ಲಿ ಮಾತನಾಡಿದ್ದನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಕೂಡ ಇಟಲಿ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಚಾಕೊಲೇಟ್ಗಳನ್ನು ನೀಡಬಹುದಾದರೆ, ಇಟಲಿಯ ರಾಜಕೀಯ ನಾಯಕನೊಬ್ಬ ಇಲ್ಲಿಗೆ ಬಂದು ಈ ದೇಶದ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಮೇ ತಿಂಗಳಲ್ಲಿ ಪ್ರಧಾನಿ ಮೋದಿ ರೋಮ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿಗಳ ಪ್ಯಾಕೆಟ್ ನೀಡಿದ್ದ ಘಟನೆಯನ್ನು ಸಂಜಯ ರಾವತ್ ಉಲ್ಲೇಖಿಸಿದ್ದಾರೆ.
ಫಿಲಿಬೆಕ್ ಶೃಂಗಸಭೆಯಲ್ಲಿ ಹೇಳಿದ್ದೇನು?
ಹೈದರಾಬಾದ್ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ್ದ ಇಟಲಿಯ ಜಿಯಾಕೊಮೊ ಫಿಲಿಬೆಕ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಶ್ಲಾಘಿಸಿದ್ದರು. “ವಿದ್ಯಾರ್ಥಿಗಳು, ಯುವಕರು ಮತ್ತು ಪ್ರತಿಪಕ್ಷಗಳು ಶಿಕ್ಷಣ ಸುಧಾರಣೆ ಹಾಗೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿರುವ ಲಕ್ಷಾಂತರ ಹೆಸರುಗಳಿಗೆ ಉತ್ತರದಾಯಿತ್ವ ಕೇಳಿ ಬೀದಿಗಿಳಿದಿದ್ದಾರೆ. ಈ ಹೋರಾಟದ ಕೇಂದ್ರಬಿಂದುವಿನಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವವಿದೆ” ಎಂದು ಅವರು ಹೇಳಿದ್ದರು. ಬಳಿಕ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆಯನ್ನು ಕೂಗುವ ಮೂಲಕ ತಮ್ಮ ಮಾತು ಮುಗಿಸಿದ್ದರು.
ವಿದೇಶಿ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಣೆ ಆರೋಪ
ಇದಕ್ಕೂ ಮೊದಲು ತಮ್ಮ ಭಾಷಣ ಆರಂಭಿಸಿದ್ದ ರಾಹುಲ್ ಗಾಂಧಿ, ಭಾರತ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವೀಸಾ ಹೊಂದಿದ್ದರೂ ಹಲವು ವಿದೇಶಿ ಪ್ರತಿನಿಧಿಗಳಿಗೆ ಭಾರತ ಪ್ರವೇಶಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಆರೋಪಿಸಿದ್ದರು. “ಈ ಕಾರ್ಯಕ್ರಮಕ್ಕೆ ಬರಬೇಕಿದ್ದ ಹಲವು ಪ್ರತಿನಿಧಿಗಳು ಮತ್ತು ನಾಯಕರು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಅವರಿಗೆ ಭಾರತ ಸರ್ಕಾರ ಪ್ರವೇಶ ನಿರಾಕರಿಸಿದೆ. ಅವರ ಪರವಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದೇ ವೇಳೆ, ಮತಗಳ್ಳತನದ ತಮ್ಮ ಆರೋಪವನ್ನೂ ಅವರು ಪುನರುಚ್ಚರಿಸಿದ್ದರು. ಹೀಗೆ ಹೈದರಾಬಾದ್ನ ಭಾರತ್ ಶೃಂಗಸಭೆಯಲ್ಲಿ ಇಟಲಿಯ ರಾಜಕೀಯ ನಾಯಕನ ಘೋಷಣೆ, ಅದಕ್ಕೆ ರಾಹುಲ್ ಗಾಂಧಿ ನಕ್ಕಿದ್ದು ಹಾಗೂ ವಿದೇಶಿ ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ರಾಜಕೀಯ ವಾಕ್ಸಮರ ಆರಂಭವಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ