

ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಸಮೂಹದ ಆಡಳಿತ ಮತ್ತು ನಿಯಂತ್ರಣದ ವಿಚಾರ ಇದೀಗ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ ನೋಂದಾಯಿಸಬೇಕೇ ಎಂಬ ಪ್ರಶ್ನೆಯೊಂದಿಗೆ ಆರಂಭವಾದ ವಿವಾದ ಈಗ ಸಮೂಹದ ಮೇಲಿನ ಅಧಿಕಾರ ಯಾರ ಕೈಯಲ್ಲಿರಬೇಕು, ಟಾಟಾ ಟ್ರಸ್ಟ್ಗಳ ಪ್ರಭಾವ ಎಷ್ಟಿರಬೇಕು ಮತ್ತು ಕುಟುಂಬದ ಸದಸ್ಯರು ದತ್ತಿ ಸಂಸ್ಥೆಗಳ ಮೂಲಕ ಉದ್ಯಮ ಸಮೂಹದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೂ ವಿಸ್ತರಿಸಿದೆ.
ದಿವಂಗತ ರತನ್ ಟಾಟಾ ಅವರ ಕಿರಿಯ ಸಹೋದರ ಹಾಗೂ ಟಾಟಾ ಟ್ರಸ್ಟ್ಗಳ ಅಧ್ಯಕ್ಷ ನೋಯೆಲ್ ಟಾಟಾ ಅವರ ಮಲಸಹೋದರ ಜಿಮ್ಮಿ ನೇವಲ್ ಟಾಟಾ ಇದೀಗ ಈ ವಿವಾದದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಟಾಟಾ ಸನ್ಸ್ ಷೇರುಪೇಟೆಯಲ್ಲಿ ನೋಂದಣಿಯಾಗಬೇಕು ಎಂಬುದಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎನ್. ಚಂದ್ರಶೇಖರನ್ ಅವರು ಟಾಟಾ ಸನ್ಸ್ನ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೂ ಸಹಮತ ಸೂಚಿಸಿದ್ದಾರೆ. ಇದೇ ವೇಳೆ, ಸಮೂಹದ ಮೇಲೆ ಯಾವುದೇ ನಿರ್ಬಂಧವಿಲ್ಲದ ಅಧಿಕಾರ ಸ್ಥಾಪಿಸಲು ನೋಯೆಲ್ ಟಾಟಾ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟಾಟಾ ಟ್ರಸ್ಟ್ಗಳ ಇತರ ಟ್ರಸ್ಟಿಗಳಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಜಿಮ್ಮಿ ಟಾಟಾ, ಟಾಟಾ ಸನ್ಸ್ ಷೇರುಪೇಟೆ ಪ್ರವೇಶಿಸುವುದರಿಂದ ಸಂಸ್ಥೆಯಲ್ಲಿರುವ ಗೌಪ್ಯತೆಯ ಸಂಸ್ಕೃತಿಗೆ ಅಂತ್ಯ ಹಾಡಬಹುದು ಮತ್ತು ಆಡಳಿತದಲ್ಲಿ ಹೊಣೆಗಾರಿಕೆ ಹೆಚ್ಚಿಸಬಹುದು ಎಂದು ಪ್ರತಿಪಾದಿಸಿದ್ದಾರೆ. ಷೇರುಪೇಟೆ ನೋಂದಣಿ ನಿಯಮಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಟಾಟಾ ಸನ್ಸ್ನ ರಚನೆಯನ್ನೇ ಬದಲಿಸುವ ಅಥವಾ ವಿಭಜಿಸುವ ಯಾವುದೇ ಪ್ರಯತ್ನಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಷೇರುಪೇಟೆ ಪ್ರವೇಶಕ್ಕೆ ಜಿಮ್ಮಿ ಟಾಟಾ ಒತ್ತಾಯ
ಟಾಟಾ ಸನ್ಸ್ ಖಾಸಗಿ ಕಂಪನಿಯಾಗಿಯೇ ಮುಂದುವರಿಯಬೇಕೇ ಅಥವಾ ಸಾರ್ವಜನಿಕವಾಗಿ ಷೇರುಪೇಟೆಯಲ್ಲಿ ನೋಂದಣಿಯಾಗಬೇಕೇ ಎಂಬುದು ಈಗಿನ ವಿವಾದದ ಪ್ರಮುಖ ಅಂಶವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2022ರ ಸೆಪ್ಟೆಂಬರ್ನಲ್ಲಿ ಟಾಟಾ ಸನ್ಸ್ ಅನ್ನು ಉನ್ನತ ಶ್ರೇಣಿಯ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ಎಂದು ವರ್ಗೀಕರಿಸಿತ್ತು. ಈ ವರ್ಗದ ಸಂಸ್ಥೆಗಳು ಮೂರು ವರ್ಷಗಳೊಳಗೆ ಷೇರುಪೇಟೆಯಲ್ಲಿ ನೋಂದಣಿಯಾಗುವುದು ನಿಯಮದ ಪ್ರಕಾರ ಕಡ್ಡಾಯವಾಗಿದೆ.
ಈ ಗಡುವು 2025ರ ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಂಡಿದ್ದರೂ ಟಾಟಾ ಸನ್ಸ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸುವ ಪ್ರಕ್ರಿಯೆ ಕೈಗೊಂಡಿರಲಿಲ್ಲ. ಬದಲಾಗಿ, 2023-24ನೇ ಹಣಕಾಸು ವರ್ಷದಲ್ಲಿ 21,813 ಕೋಟಿ ರೂ. ಸಾಲವನ್ನು ಮರುಪಾವತಿಸಿತ್ತು. ಅಲ್ಲದೆ, ತನ್ನ ಕೋರ್ ಇನ್ವೆಸ್ಟ್ಮೆಂಟ್ ಕಂಪನಿ ನೋಂದಣಿಯನ್ನು ಹಿಂತಿರುಗಿಸುವಂತೆ ಆರ್ಬಿಐಗೆ ಅರ್ಜಿ ಸಲ್ಲಿಸಿತ್ತು. ಈ ಮೂಲಕ ಷೇರುಪೇಟೆ ಪ್ರವೇಶದ ಕಡ್ಡಾಯದಿಂದ ಹೊರಗುಳಿಯುವ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರ ಇದರ ಹಿಂದಿತ್ತು ಎನ್ನಲಾಗಿದೆ.
ಆದರೆ, 2026ರ ಸೆಪ್ಟೆಂಬರ್ನಲ್ಲಿ ಟಾಟಾ ಸನ್ಸ್ನ ನೋಂದಣಿ ರದ್ದತಿ ಅರ್ಜಿಯನ್ನು ಆರ್ಬಿಐ ತಿರಸ್ಕರಿಸಿ, ಅನ್ವಯವಾಗುವ ನಿಯಮಗಳನ್ನು ಪಾಲಿಸುವಂತೆ ಸೂಚಿಸಿತ್ತು.


ಈ ಹಿನ್ನೆಲೆಯಲ್ಲಿ ಷೇರುಪೇಟೆ ಪ್ರವೇಶದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬುದು ಜಿಮ್ಮಿ ಟಾಟಾ ಅವರ ಅಭಿಪ್ರಾಯ. ಸಾರ್ವಜನಿಕ ಕಂಪನಿಯಾಗಿ ನೋಂದಣಿಯಾದರೆ ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚುವುದರ ಜತೆಗೆ ಕಾನೂನುಬದ್ಧ ಹೊಣೆಗಾರಿಕೆಯೂ ಅನಿವಾರ್ಯವಾಗಲಿದೆ. ಇದಕ್ಕಾಗಿ ಸಂಸ್ಥೆಯ ಸಂಘದ ನಿಯಮಾವಳಿಗಳಲ್ಲಿಯೂ (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ಬದಲಾವಣೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರತನ್ ಟಾಟಾ ಅವರ ನಾಯಕತ್ವದ ಅವಧಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಷೇರುಪೇಟೆಯಲ್ಲಿ ನೋಂದಣಿಯಾದುದನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಜಿಮ್ಮಿ, ಆ ನಿರ್ಧಾರದಿಂದ ಟಾಟಾ ಸನ್ಸ್ಗೆ ಪ್ರಯೋಜನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಷೇರುಪೇಟೆ ಪ್ರವೇಶದ ನಿಯಮದಿಂದ ತಪ್ಪಿಸಿಕೊಳ್ಳಲು ಟಾಟಾ ಸನ್ಸ್ ಅನ್ನು ವಿಭಜಿಸುವ ಅಥವಾ ಅದರ ರಚನೆಯನ್ನು ಬದಲಿಸುವ ಸಾಧ್ಯತೆಯೇ ಅವರ ಪ್ರಮುಖ ಆತಂಕಕ್ಕೆ ಕಾರಣವಾಗಿದೆ. ಇಂತಹ ಕ್ರಮವು ಸಾರ್ವಜನಿಕರ ಹಾಗೂ ಷೇರುದಾರರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದರ ಜತೆಗೆ ಸಂಸ್ಥೆಯಲ್ಲಿನ ಗೌಪ್ಯತೆ ಮತ್ತು ವೈಯಕ್ತಿಕ ನಿಯಂತ್ರಣವನ್ನು ಮುಂದುವರಿಸಲು ಅವಕಾಶ ಮಾಡಿಕೊಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಹೀಗಾಗಿ, ನಿಯಮಗಳನ್ನು ತಪ್ಪಿಸಿಕೊಳ್ಳಲು ಮರುರಚನೆಯನ್ನು ಅಸ್ತ್ರವಾಗಿ ಬಳಸುವುದಕ್ಕೆ ಅವಕಾಶ ನೀಡಬಾರದು ಮತ್ತು ಆರ್ಬಿಐ ನಿಗದಿತ ಕಾಲಮಿತಿಯೊಳಗೆ ನಿಯಮಗಳ ಅನುಷ್ಠಾನ ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಟಾ ಟ್ರಸ್ಟ್ಗಳ ಅಧಿಕಾರದ ಬಗ್ಗೆಯೂ ಪ್ರಶ್ನೆ
ಟಾಟಾ ಸನ್ಸ್ನ ಷೇರುಪೇಟೆ ಪ್ರವೇಶದ ವಿವಾದದ ಜತೆಗೆ ಟಾಟಾ ಟ್ರಸ್ಟ್ಗಳ ಆಡಳಿತಾತ್ಮಕ ಪ್ರಭಾವವೂ ಚರ್ಚೆಗೆ ಬಂದಿದೆ. ಟಾಟಾ ಟ್ರಸ್ಟ್ಗಳು ಒಟ್ಟಾಗಿ ಟಾಟಾ ಸನ್ಸ್ನಲ್ಲಿ ಸುಮಾರು 66ರಷ್ಟು ಪಾಲು ಹೊಂದಿವೆ. ಹೀಗಾಗಿ, ಟಾಟಾ ಸಮೂಹದ ಅತಿದೊಡ್ಡ ಷೇರುದಾರ ಸಂಸ್ಥೆಗಳಾಗಿವೆ. ಸಾರ್ವಜನಿಕ ಕಲ್ಯಾಣ ಮತ್ತು ಸಮಾಜಸೇವೆಯ ಉದ್ದೇಶದಿಂದ ಸ್ಥಾಪನೆಯಾದ ಈ ದತ್ತಿ ಸಂಸ್ಥೆಗಳ ಕೈಯಲ್ಲಿರುವ ಷೇರುಪಾಲು, ಟಾಟಾ ಸಮೂಹದ ಆಡಳಿತ ಮತ್ತು ನಿರ್ಧಾರಗಳ ಮೇಲೆ ಗಣನೀಯ ಪ್ರಭಾವ ಬೀರುವ ಅಧಿಕಾರವನ್ನೂ ನೀಡಿದೆ.
ಆದರೆ, ಈ ಟ್ರಸ್ಟ್ಗಳನ್ನು ಕುಟುಂಬದ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಸಾಧನವಾಗಿ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಜಿಮ್ಮಿ ಟಾಟಾ ಎತ್ತಿದ್ದಾರೆ. ಟ್ರಸ್ಟಿಗಳು ಸಾರ್ವಜನಿಕ ಹಿತಾಸಕ್ತಿಗಾಗಿ ಸ್ಥಾಪನೆಯಾದ ದತ್ತಿ ಸಂಸ್ಥೆಗಳ ಪಾಲಕರು ಮಾತ್ರವೇ ಹೊರತು ಅವುಗಳ ಮಾಲೀಕರಲ್ಲ ಎಂಬುದು ಅವರ ವಾದ. ಒಂದೇ ಕುಟುಂಬದ ಹಲವು ಸದಸ್ಯರು ಟ್ರಸ್ಟ್ಗಳ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದರೆ, ಅದರ ಮೂಲಕ ಟಾಟಾ ಸನ್ಸ್ನಲ್ಲಿರುವ ಷೇರುಪಾಲಿನ ಮೇಲೆಯೂ ಕುಟುಂಬದ ಹಿಡಿತ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.
ಕುಟುಂಬದ ಸದಸ್ಯರಿಗೆ ಟ್ರಸ್ಟ್ಗಳಲ್ಲಿ ಸ್ಥಾನ ನೀಡುತ್ತಿರುವುದನ್ನು ಪ್ರಶ್ನಿಸಿರುವ ಅವರು, ಇಂತಹ ವ್ಯವಸ್ಥೆಯು ಟಾಟಾ ಸನ್ಸ್ ಮೇಲೆ ಪರೋಕ್ಷವಾಗಿ ಕುಟುಂಬದ ಹಿಡಿತ ಸಾಧಿಸುವ ಪ್ರಯತ್ನವಾಗಬಹುದು ಎಂದು ಎಚ್ಚರಿಸಿದ್ದಾರೆ.
ನೋಯೆಲ್ ಟಾಟಾ ಅವರ ಮಕ್ಕಳನ್ನು ಕೆಲವು ಟಾಟಾ ಟ್ರಸ್ಟ್ಗಳಿಗೆ ಸೇರಿಸಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಆಕ್ಷೇಪ ಮಹತ್ವ ಪಡೆದಿದೆ. ನೆವಿಲ್ ಟಾಟಾ ಅವರು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ನ ಟ್ರಸ್ಟಿಯಾಗಿದ್ದಾರೆ. ನೆವಿಲ್, ಲಿಯಾ ಮತ್ತು ಮಾಯಾ ಟಾಟಾ ಅವರು ಇತರ ಕೆಲವು ದತ್ತಿ ಟ್ರಸ್ಟ್ಗಳ ಆಡಳಿತ ಮಂಡಳಿಗಳಲ್ಲಿಯೂ ಸ್ಥಾನ ಪಡೆದಿದ್ದಾರೆ.
ಚಂದ್ರಶೇಖರನ್ ಮುಂದುವರಿಕೆಗೆ ಜಿಮ್ಮಿ ಬೆಂಬಲ
ಟಾಟಾ ಸಮೂಹದ ಆಡಳಿತಾತ್ಮಕ ಸಂಘರ್ಷದ ಮತ್ತೊಂದು ಪ್ರಮುಖ ವಿಚಾರ ಎನ್. ಚಂದ್ರಶೇಖರನ್ ಅವರ ಅಧ್ಯಕ್ಷ ಸ್ಥಾನದ ಮುಂದುವರಿಕೆ.
2026ರ ಸೆಪ್ಟೆಂಬರ್ 17ರಂದು ನಡೆದ ಟಾಟಾ ಸನ್ಸ್ ಆಡಳಿತ ಮಂಡಳಿ ಸಭೆಯಲ್ಲಿ ಚಂದ್ರಶೇಖರನ್ ಅವರಿಗೆ ಮೂರನೇ ಐದು ವರ್ಷಗಳ ಅವಧಿ ನೀಡುವ ನಿರ್ಣಯವನ್ನು 4-1 ಬಹುಮತದಿಂದ ಅಂಗೀಕರಿಸಲಾಗಿತ್ತು. ಆದರೆ, ಈ ನಿರ್ಣಯಕ್ಕೆ ನೋಯೆಲ್ ಟಾಟಾ ವಿರೋಧ ವ್ಯಕ್ತಪಡಿಸಿದ್ದರು.
ಇದಕ್ಕೂ ಮುನ್ನ, 2027ರ ಫೆಬ್ರವರಿಯಲ್ಲಿ ತಮ್ಮ ಪ್ರಸ್ತುತ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೊಂದು ಅವಧಿಗೆ ಮುಂದುವರಿಯುವ ಉದ್ದೇಶವಿಲ್ಲ ಎಂದು ಚಂದ್ರಶೇಖರನ್ ಸೂಚಿಸಿದ್ದರು. ಆಡಳಿತ ಮಂಡಳಿಯಲ್ಲಿ ಒಮ್ಮತದ ಕೊರತೆಯೇ ಇದಕ್ಕೆ ಕಾರಣವೆಂದು ಹೇಳಲಾಗಿತ್ತು.
ಆದರೆ, ಚಂದ್ರಶೇಖರನ್ ಅವರ ಕಾರ್ಯನಿರ್ವಹಣೆಯನ್ನು ಜಿಮ್ಮಿ ಟಾಟಾ ಸಮರ್ಥಿಸಿಕೊಂಡಿದ್ದಾರೆ. ಭಾರಿ ಸಾಲದ ಹೊರೆ ಹೊಂದಿದ್ದ ಟಾಟಾ ಸಮೂಹದ ಹಲವು ಕಂಪನಿಗಳನ್ನು ಅವರು ಚೇತರಿಕೆಯ ಹಾದಿಗೆ ತಂದಿದ್ದಾರೆ. ದಾಖಲೆಯ ಆದಾಯ ಗಳಿಕೆ ಮತ್ತು ಷೇರುದಾರರಿಗೆ ಗಣನೀಯ ಪ್ರಮಾಣದ ಲಾಭಾಂಶ ವಿತರಣೆ ಸಾಧ್ಯವಾಗುವಂತೆ ಮಾಡಿದ್ದಾರೆ ಎಂಬುದು ಜಿಮ್ಮಿ ಅವರ ವಾದ.
ಟಾಟಾ ಸಮೂಹದ ಕಂಪನಿಗಳು ಶೇ. 6,500ಕ್ಕೂ ಅಧಿಕ ಪ್ರಮಾಣದ ಲಾಭಾಂಶ ಪಾವತಿಸಿವೆ ಎಂದು ಅವರು ಉಲ್ಲೇಖಿಸಿದ್ದು, ಇದರಿಂದ ಟಾಟಾ ಸನ್ಸ್ ಕೂಡ ಪ್ರಯೋಜನ ಪಡೆದಿದೆ ಎಂದು ಹೇಳಿದ್ದಾರೆ.
ಚಂದ್ರಶೇಖರನ್ ಅವರ ಮುಂದುವರಿಕೆಗೆ ನೋಯೆಲ್ ಟಾಟಾ ವಿರೋಧ ವ್ಯಕ್ತಪಡಿಸಿದ್ದನ್ನೂ ಜಿಮ್ಮಿ ಪ್ರಶ್ನಿಸಿದ್ದಾರೆ. ತಿದ್ದುಪಡಿ ಮಾಡಲಾದ ಸಂಸ್ಥೆಯ ಸಂಘದ ನಿಯಮಾವಳಿಗಳ ಅಡಿಯಲ್ಲಿ ತನಗಿರುವ ವೀಟೊ ಅಧಿಕಾರವನ್ನು ನೋಯೆಲ್ ಬಳಸಿಕೊಂಡಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ ಎಂಬುದು ಜಿಮ್ಮಿ ಟಾಟಾ ಅವರ ಆರೋಪವಾಗಿದೆ.
ಟಾಟಾ ಸನ್ಸ್ ಷೇರುಪೇಟೆ ಪ್ರವೇಶ, ಟಾಟಾ ಟ್ರಸ್ಟ್ಗಳ ಅಧಿಕಾರ ವ್ಯಾಪ್ತಿ, ಕುಟುಂಬದ ಸದಸ್ಯರ ನೇಮಕಾತಿ ಮತ್ತು ಚಂದ್ರಶೇಖರನ್ ಅವರ ನಾಯಕತ್ವದ ಮುಂದುವರಿಕೆ ಹೀಗೆ ಹಲವು ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿದ್ದು, ಟಾಟಾ ಸಮೂಹದ ಭವಿಷ್ಯದ ಆಡಳಿತ ವ್ಯವಸ್ಥೆ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ