ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ನಾಸಾ ಬಾಹ್ಯಾಕಾಶ ನೌಕೆಯ ಅದ್ಭುತ ಸಾಧನೆ ; ಭೂಮಿಯಿಂದ ಒಂದು ಬೆಳಕಿನ ದಿನದ ದೂರ ತಲುಪಿದ ವಾಯೇಜರ್-1 ; ಹಾಗೆಂದರೇನು ?

ವಾಷಿಂಗ್ಟನ್: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಉಡಾವಣೆ ಮಾಡಿರುವ ವಾಯೇಜರ್-1 (Voyager 1) ಬಾಹ್ಯಾಕಾಶ ನೌಕೆ ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರವನ್ನು ತಲುಪಿದೆ. ಭೂಮಿಯಿಂದ ಹೊರಟು ಇಷ್ಟು ದೂರ ಕ್ರಮಿಸಿದ ಮಾನವ ನಿರ್ಮಿತ ಯಾವುದೇ ಬಾಹ್ಯಾಕಾಶ ನೌಕೆ ಈ ಸಾಧನೆ ಮಾಡಿರಲಿಲ್ಲ. ಬೆಳಕು ಒಂದು ದಿನದಲ್ಲಿ ಕ್ರಮಿಸುವ ದೂರವನ್ನು ತಲುಪಿರುವ ವಾಯೇಜರ್-1, ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಬುಧವಾರ ಮಧ್ಯಾಹ್ನ 3:46ಕ್ಕೆ (ಭಾರತೀಯ ಕಾಲಮಾನ) ವಾಯೇಜರ್-1 ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಒಂದು ಬೆಳಕಿನ ದಿನ ಎಂದರೆ ಬೆಳಕು 24 ಗಂಟೆಗಳಲ್ಲಿ ಕ್ರಮಿಸುವ ದೂರ. ಇದರ ಅಂತರ ಸುಮಾರು 16 ಶತಕೋಟಿ ಮೈಲುಗಳು ಅಥವಾ 26 ಶತಕೋಟಿ ಕಿಲೋಮೀಟರ್‌ಗಳು. ಅಂದರೆ, ಭೂಮಿಯಿಂದ ಹೊರಟು ಸಾಗುತ್ತಿರುವ ಈ ಬಾಹ್ಯಾಕಾಶ ನೌಕೆಯಿಂದ ಹೊರಡುವ ಬೆಳಕಿನ ಸಂಕೇತವೊಂದು ಭೂಮಿಯನ್ನು ತಲುಪಲು ಬರೋಬ್ಬರಿ ಒಂದು ದಿನ ಬೇಕಾಗುತ್ತದೆ.
ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ವಿಜ್ಞಾನಿಗಳು ಈ ಸಾಧನೆಯನ್ನು ದೃಢಪಡಿಸುವ ನೌಕೆಯ ಸಂಕೇತವನ್ನು ಸ್ವೀಕರಿಸಲು ಸುಮಾರು ಒಂದು ದಿನ ಕಾಯಬೇಕಾಗಿದೆ. ಈ ಐತಿಹಾಸಿಕ ಸಾಧನೆಯ ಕುರಿತು ಚರ್ಚಿಸಲು ಗುರುವಾರ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ವಾಯೇಜರ್ ಯೋಜನೆಯ ವ್ಯವಸ್ಥಾಪಕಿ ಸುಝೇನ್ ಡಾಡ್ ಅವರು ರಾಯಿಟರ್ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, “ಒಂದು ಬೆಳಕಿನ ದಿನದಷ್ಟು ದೂರವನ್ನು ತಲುಪಿರುವುದು ಅದ್ಭುತ ಸಾಧನೆ. ನನ್ನ ಜೀವಿತಾವಧಿಯಲ್ಲಿ ಇಂತಹ ಸಾಧನೆಯನ್ನು ನೋಡಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದು ಹೇಳಿದ್ದಾರೆ.

ಗಂಟೆಗೆ 61 ಸಾವಿರ ಕಿ.ಮೀ. ವೇಗದಲ್ಲಿ ಸಾಗುತ್ತಿರುವ ನೌಕೆ
ವಾಯೇಜರ್-1 ಪ್ರಸ್ತುತ ಮಾನವ ನಿರ್ಮಿತ ವಸ್ತುಗಳ ಪೈಕಿ ಭೂಮಿಯಿಂದ ಅತ್ಯಂತ ದೂರದಲ್ಲಿರುವ ಬಾಹ್ಯಾಕಾಶ ನೌಕೆಯಾಗಿದೆ. ಇದು ಗಂಟೆಗೆ ಸುಮಾರು 38,000 ಮೈಲುಗಳು ಅಂದರೆ 61,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದೆ.
ಸೂರ್ಯನಿಂದ ಹೊರಹೊಮ್ಮುವ ಕಣಗಳು ಮತ್ತು ಕಾಂತೀಯ ಕ್ಷೇತ್ರಗಳು ಸೇರಿ ಸೃಷ್ಟಿಸುವ ರಕ್ಷಣಾತ್ಮಕ ಗುಳ್ಳೆಯಂತಿರುವ ‘ಹೀಲಿಯೋಸ್ಪಿಯರ್’ (Heliosphere) ಹೊರ ಅಂಚನ್ನು ದಾಟಿ 2012ರಲ್ಲಿ ನಕ್ಷತ್ರಾಂತರ ಬಾಹ್ಯಾಕಾಶವನ್ನು (Interstellar Space) ಪ್ರವೇಶಿಸಿತ್ತು. ಸೌರವ್ಯೂಹದ ಹೊರಭಾಗವನ್ನು ಸುತ್ತುವರಿದಿರುವ ಈ ಹೆಲಿಯೋಸ್ಫಿಯರ್‌ನ ಗಡಿಯನ್ನು ದಾಟಿರುವುದು ವಾಯೇಜರ್-1ರ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.
ವಾಯೇಜರ್-1ರ ಅವಳಿ ಬಾಹ್ಯಾಕಾಶ ನೌಕೆಯಾದ ವಾಯೇಜರ್-2 ಕೂಡ 1977ರಲ್ಲೇ ಉಡಾವಣೆಯಾಗಿತ್ತು. ಅದು 2018ರಲ್ಲಿ ‘ಹೀಲಿಯೋಸ್ಪಿಯರ್’ (heliosphere)ನ ಗಡಿಯನ್ನು ದಾಟಿ ನಕ್ಷತ್ರಾಂತರ ಬಾಹ್ಯಾಕಾಶವನ್ನು ಪ್ರವೇಶಿಸಿತ್ತು.

ಇನ್ನೂ 3ರಿಂದ 4 ವರ್ಷ ಕಾರ್ಯನಿರ್ವಹಿಸುವ ಸಾಧ್ಯತೆ
ಸುಮಾರು ಐದು ದಶಕಗಳ ಹಿಂದೆ ಉಡಾವಣೆಗೊಂಡಿರುವ ಈ ಎರಡೂ ಬಾಹ್ಯಾಕಾಶ ನೌಕೆಗಳು ಇಂದಿಗೂ ಕಾರ್ಯನಿರ್ವಹಿಸುತ್ತಿರುವುದು ವಿಜ್ಞಾನಿಗಳ ಪಾಲಿಗೆ ವಿಶೇಷ ಸಂಗತಿಯಾಗಿದೆ. ಇತ್ತೀಚೆಗೆ ಕೈಗೊಂಡಿರುವ ವಿದ್ಯುತ್ ಉಳಿತಾಯ ಕ್ರಮಗಳಿಂದಾಗಿ ವಾಯೇಜರ್-1 ಮತ್ತು ವಾಯೇಜರ್-2 ಇನ್ನೂ ಮೂರುರಿಂದ ನಾಲ್ಕು ವರ್ಷಗಳವರೆಗೆ ಭೂಮಿಯೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಬಹುದು ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ಆದರೆ, ಸದ್ಯ ನಾಸಾದ ಪ್ರಮುಖ ಉದ್ದೇಶ ಮುಂದಿನ ವರ್ಷ ಈ ಎರಡೂ ನೌಕೆಗಳ ಉಡಾವಣೆಯ 50ನೇ ವಾರ್ಷಿಕೋತ್ಸವದವರೆಗೂ ಅವುಗಳಲ್ಲಿರುವ ಪ್ರಸ್ತುತ ವೈಜ್ಞಾನಿಕ ಉಪಕರಣಗಳನ್ನು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದಾಗಿದೆ.
“ಈ ಯೋಜನೆಯ ಮುಖ್ಯ ಉದ್ದೇಶ ವೈಜ್ಞಾನಿಕ ಸಂಶೋಧನೆ ನಡೆಸುವುದಾಗಿದೆ. ಪ್ರಸ್ತುತ ಲಭ್ಯವಿರುವ ವಿದ್ಯುತ್ ಶಕ್ತಿಯು ಮುಂದಿನ ವರ್ಷದ 50ನೇ ಉಡಾವಣಾ ವಾರ್ಷಿಕೋತ್ಸವದವರೆಗೂ ಈಗಿರುವ ವೈಜ್ಞಾನಿಕ ಉಪಕರಣಗಳನ್ನು ಕಾರ್ಯನಿರ್ವಹಿಸುವಂತೆ ಇರಿಸಲು ಸಾಕಾಗುತ್ತದೆ. ಅದಕ್ಕಿಂತ ಮುಂದಿನ ಅವಧಿಯ ಬಗ್ಗೆ ಈಗಲೇ ಏನನ್ನೂ ಊಹಿಸುವುದು ಕಷ್ಟ. ಏಕೆಂದರೆ, ಇವು ಸುಮಾರು 50 ವರ್ಷ ಹಳೆಯದಾದ ಬಾಹ್ಯಾಕಾಶ ನೌಕೆಗಳು. ತಂಡದ ನಿರೀಕ್ಷೆಗೆ ಮೀರಿದ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಯೂ ಇದೆ” ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಪ್ರತಿನಿಧಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚೀನಾದಲ್ಲಿ ಮಹತ್ವದ ಶೃಂಗಸಭೆ: ಶಿಷ್ಟಾಚಾರ ಮುರಿದು ವಿಮಾನ ನಿಲ್ದಾಣಕ್ಕೆ ತೆರಳಿ ಟ್ರಂಪ್‌ರನ್ನು ಖುದ್ದಾಗಿ ಬರಮಾಡಿಕೊಂಡ ಕ್ಸಿ ಜಿನ್‌ಪಿಂಗ್

ಗುರು, ಶನಿಯ ಅಧ್ಯಯನದಿಂದ ನಕ್ಷತ್ರಾಂತರ ಬಾಹ್ಯಾಕಾಶದವರೆಗೆ
ವಾಯೇಜರ್-1 ತನ್ನ ಆರಂಭಿಕ ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲಿ ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು (Jupiter) ಮತ್ತು ಶನಿಯ (Saturn) ಸಮೀಪ ಹಾದುಹೋಗಿತ್ತು. ಈ ಸಂದರ್ಭದಲ್ಲಿ ಹಲವು ಮಹತ್ವದ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿ, ಗ್ರಹಗಳ ಕುರಿತು ಅಮೂಲ್ಯ ಮಾಹಿತಿಯನ್ನು ಭೂಮಿಗೆ ರವಾನಿಸಿತ್ತು.
ಹೆಲಿಯೋಸ್ಫಿಯರ್‌ನ ಗಡಿಯನ್ನು ದಾಟಿ ನಕ್ಷತ್ರಾಂತರ ಬಾಹ್ಯಾಕಾಶವನ್ನು ಪ್ರವೇಶಿಸಿದ ನಂತರವೂ ಅದರ ಸಂಶೋಧನೆ ನಿಂತಿಲ್ಲ. ಅಲ್ಲಿ ಇರುವ ಅಲ್ಪ ಪ್ರಮಾಣದ ಅನಿಲದ ನಿರಂತರ ಕಂಪನಗಳಿಂದ ಉಂಟಾಗುವ ಅತ್ಯಂತ ಕ್ಷೀಣವಾದ, ಏಕತಾನತೆಯ ಧ್ವನಿಯನ್ನೂ ಅದರ ಉಪಕರಣಗಳು ಪತ್ತೆಹಚ್ಚಿವೆ.
ವಾಯೇಜರ್ ನೌಕೆಯು ಕಾಂತೀಯ ಕ್ಷೇತ್ರಗಳು, ಕಾಸ್ಮಿಕ್ ಕಿರಣಗಳು (Cosmic Rays) ಮತ್ತು ಪ್ಲಾಸ್ಮಾ ಅಲೆಗಳ (Plasma Waves) ಕುರಿತು ನಿರಂತರವಾಗಿ ವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದೆ ಎಂದು ಯೋಜನೆಯ ವ್ಯವಸ್ಥಾಪಕಿ ಸುಝೇನ್ ಡಾಡ್ ತಿಳಿಸಿದ್ದಾರೆ.
ನಾಸಾದ ಡೀಪ್ ಸ್ಪೇಸ್ ನೆಟ್‌ವರ್ಕ್ (Deep Space Network) ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಬೃಹತ್ ರೇಡಿಯೊ ಆಂಟೆನಾಗಳ ಜಾಲವಾಗಿದೆ. ಗ್ರಹಗಳ ನಡುವಿನ ಬಾಹ್ಯಾಕಾಶದಲ್ಲಿ ಸಂಚರಿಸುವ ನೌಕೆಗಳು ಮತ್ತು ಇತರ ಬಾಹ್ಯಾಕಾಶ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಲು ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ನೆಟ್‌ವರ್ಕ್‌ನ ಆಂಟೆನಾಗಳು ವಾಯೇಜರ್-1ರ ಕಡೆಗೆ ತಿರುಗಿದಾಗಲೆಲ್ಲ ಅದರ ವೈಜ್ಞಾನಿಕ ದತ್ತಾಂಶಗಳನ್ನು ಭೂಮಿಯಲ್ಲಿ ಸ್ವೀಕರಿಸಲಾಗುತ್ತದೆ.

ಸೂರ್ಯನ ಕಾಂತೀಯ ಕ್ಷೇತ್ರದ ಕುರಿತು ವಿಜ್ಞಾನಿಗಳಿಗೆ ಇನ್ನೂ ಕಾಡುತ್ತಿರುವ ಪ್ರಶ್ನೆ
ವಾಯೇಜರ್-1ರ ಸಂಶೋಧನೆಗಳಲ್ಲಿ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿರುವ ಮತ್ತೊಂದು ಸಂಗತಿಯೆಂದರೆ ‘ಹೀಲಿಯೋಸ್ಪಿಯರ್’ (heliosphere)ನ ಹೊರಭಾಗದಲ್ಲಿರುವ ಕಾಂತೀಯ ಕ್ಷೇತ್ರದ ದಿಕ್ಕು.
ವಾಯೇಜರ್ ನೌಕೆ ಹೆಲಿಯೋಪಾಸ್ (Heliopause) ಎಂದು ಕರೆಯಲಾಗುವ ಹೆಲಿಯೋಸ್ಫಿಯರ್‌ನ ಹೊರಗಿನ ಗಡಿಯನ್ನು ದಾಟಿದ ನಂತರ, ಅಲ್ಲಿನ ಕಾಂತೀಯ ಕ್ಷೇತ್ರದ ದಿಕ್ಕು ಸುತ್ತಲಿನ ನಕ್ಷತ್ರಾಂತರ ಮಾಧ್ಯಮದ (Interstellar Medium) ಕಾಂತೀಯ ಕ್ಷೇತ್ರದ ದಿಕ್ಕಿಗೆ ಅನುಗುಣವಾಗಿ ಬದಲಾಗಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದರು.
ಆದರೆ, ನಿರೀಕ್ಷಿಸಿದಂತೆ ಕಾಂತೀಯ ಕ್ಷೇತ್ರದ ದಿಕ್ಕಿನಲ್ಲಿ ಬದಲಾವಣೆ ಸಂಭವಿಸಿಲ್ಲ. ಬದಲಾಗಿ, ವಾಯೇಜರ್-1 ಮತ್ತು ವಾಯೇಜರ್-2 ಹೆಲಿಯೋಪಾಸ್ ದಾಟಿದ ಸಂದರ್ಭದಲ್ಲಿ ಇದ್ದ ಸೂರ್ಯನ ಪ್ರಭಾವಕ್ಕೆ ಒಳಪಟ್ಟ ದಿಕ್ಕಿನಲ್ಲೇ ಕಾಂತೀಯ ಕ್ಷೇತ್ರ ಮುಂದುವರಿದಿದೆ.
“‘ಹೀಲಿಯೋಸ್ಪಿಯರ್’ (heliosphere) ದಾಟಿದ ನಂತರ ಕಾಂತೀಯ ಕ್ಷೇತ್ರದ ದಿಕ್ಕು ನಕ್ಷತ್ರಾಂತರ ಮಾಧ್ಯಮದ ದಿಕ್ಕಿಗೆ ತಿರುಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಹಾಗಾಗಿಲ್ಲ. ಎರಡೂ ವಾಯೇಜರ್ ನೌಕೆಗಳು ಹೀಲಿಯೋಪಾಸ್ ದಾಟಿದಾಗ ಇದ್ದ, ನಮ್ಮ ಸೂರ್ಯನಿಂದ ನಿಯಂತ್ರಿಸಲ್ಪಟ್ಟ ದಿಕ್ಕಿನಲ್ಲೇ ಅದು ಮುಂದುವರಿದಿದೆ. ಈ ದಿಕ್ಕಿನಲ್ಲಿ ಬದಲಾವಣೆ ಯಾವಾಗ ಸಂಭವಿಸಬಹುದು ಎಂಬುದನ್ನು ನಾವು ಗಮನಿಸುತ್ತಿದ್ದೇವೆ” ಎಂದು ಸುಝೇನ್ ಡಾಡ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚೀನಾದಲ್ಲಿ ಮಹತ್ವದ ಶೃಂಗಸಭೆ: ಶಿಷ್ಟಾಚಾರ ಮುರಿದು ವಿಮಾನ ನಿಲ್ದಾಣಕ್ಕೆ ತೆರಳಿ ಟ್ರಂಪ್‌ರನ್ನು ಖುದ್ದಾಗಿ ಬರಮಾಡಿಕೊಂಡ ಕ್ಸಿ ಜಿನ್‌ಪಿಂಗ್

ಇಷ್ಟು ದೂರದಲ್ಲಿದ್ದರೂ ಸೂರ್ಯನ ಪ್ರಭಾವದಿಂದ ಮುಕ್ತವಾಗಿಲ್ಲ!
ವಾಯೇಜರ್-1 ಸೂರ್ಯನಿಂದ ಶತಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದರೂ ಸೂರ್ಯನ ಚಟುವಟಿಕೆಗಳ ಪರಿಣಾಮವನ್ನು ಪತ್ತೆಹಚ್ಚುತ್ತಲೇ ಇದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಸೂರ್ಯನಲ್ಲಿ ಸಂಭವಿಸುವ ಪ್ರಬಲ ಸೌರ ಬಿರುಗಾಳಿಗಳು, ಅದರಲ್ಲೂ ವಿಶೇಷವಾಗಿ ಕರೋನಲ್ ಮಾಸ್ ಇಜೆಕ್ಷನ್‌ಗಳು (Coronal Mass Ejections) ಅಪಾರ ಪ್ರಮಾಣದ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳನ್ನು ಬಾಹ್ಯಾಕಾಶಕ್ಕೆ ಹೊರಸೂಸುತ್ತವೆ. ಇವುಗಳಿಂದ ಉಂಟಾಗುವ ಆಘಾತ ತರಂಗಗಳು (Shocks) ಮತ್ತು ಒತ್ತಡದ ಅಲೆಗಳು ಅಪಾರ ದೂರ ಕ್ರಮಿಸಿ ವಾಯೇಜರ್-1 ಇರುವ ಪ್ರದೇಶವನ್ನೂ ತಲುಪುತ್ತವೆ. ಇಂತಹ ಸೌರ ಚಟುವಟಿಕೆಗಳ ಪರಿಣಾಮಗಳನ್ನು ನೌಕೆ ಇಂದಿಗೂ ದಾಖಲಿಸುತ್ತಿದೆ.
“ಕರೋನಲ್ ಮಾಸ್ ಇಜೆಕ್ಷನ್‌ಗಳಂತಹ ಪ್ರಬಲ ಸೌರ ಬಿರುಗಾಳಿಗಳಿಂದ ಉಂಟಾಗುವ ಆಘಾತ ತರಂಗಗಳು ಮತ್ತು ಒತ್ತಡದ ಅಲೆಗಳು ವಾಯೇಜರ್-1 ಇರುವಷ್ಟು ದೂರಕ್ಕೂ ಹಾಗೂ ಅದಕ್ಕೂ ಆಚೆಗೂ ತಲುಪುತ್ತವೆ. ಸೂರ್ಯನ ಚಟುವಟಿಕೆಗಳ ಪರಿಣಾಮಗಳನ್ನು ನಾವು ಇನ್ನೂ ಗಮನಿಸುತ್ತಿದ್ದೇವೆ” ಎಂದು ಡಾಡ್ ತಿಳಿಸಿದ್ದಾರೆ.

ಇದರೊಂದಿಗೆ ವಿಜ್ಞಾನಿಗಳ ಮುಂದಿರುವ ಅತ್ಯಂತ ಕುತೂಹಲಕಾರಿ ಪ್ರಶ್ನೆಯೊಂದನ್ನೂ ಅವರು ಪ್ರಸ್ತಾಪಿಸಿದ್ದಾರೆ. “ಸೂರ್ಯನ ಪ್ರಭಾವ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಸಂಪೂರ್ಣವಾಗಿ ನಕ್ಷತ್ರಾಂತರ ಬಾಹ್ಯಾಕಾಶ ಎಲ್ಲಿ ಆರಂಭವಾಗುತ್ತದೆ? ಬಹುಶಃ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಷ್ಟು ಕಾಲ ವಾಯೇಜರ್ ಕಾರ್ಯನಿರ್ವಹಿಸಬಹುದು” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
1977ರಲ್ಲಿ ಆರಂಭವಾದ ವಾಯೇಜರ್-1ರ ಬಾಹ್ಯಾಕಾಶ ಯಾನ ಸುಮಾರು ಐದು ದಶಕಗಳ ನಂತರವೂ ಮುಂದುವರಿದಿದೆ. ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ತಲುಪಿರುವ ಈ ನೌಕೆ, ಮಾನವನ ವೈಜ್ಞಾನಿಕ ಕುತೂಹಲ ಮತ್ತು ಬಾಹ್ಯಾಕಾಶ ಸಂಶೋಧನೆಯ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಸೂರ್ಯನ ಪ್ರಭಾವದ ಗಡಿ ಎಲ್ಲಿ ಕೊನೆಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ವಾಯೇಜರ್-1 ಇನ್ನೂ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement