ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಡಿಯೋ | ವಿಚ್ಛೇದನ, ಮತ್ತೆ ಮದುವೆ; ಹಿಂದೂ ಸಂಪ್ರದಾಯದಂತೆ ಲಕ್ನೊದಲ್ಲಿ ಜಪಾನ್ ದಂಪತಿಯ ಮರುಮದುವೆ

ಲಕ್ನೋ : ವಿಚ್ಛೇದನ ಪಡೆದು ದೂರವಾಗಿದ್ದ ಜಪಾನಿನ ದಂಪತಿ ಮತ್ತೆ ಒಂದಾಗಿದ್ದು, ಭಾರತದ ಉತ್ತರ ಪ್ರದೇಶದ ಲಕ್ನೋದಲ್ಲಿ ಸಾಂಪ್ರದಾಯಿಕವಾಗಿ ಮರುಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. 2022ರಲ್ಲಿ ವಿಚ್ಛೇದನ ಪಡೆದಿದ್ದ ಈ ದಂಪತಿ ಬಳಿಕ ಮತ್ತೆ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದು, ನವೆಂಬರ್ 23ರಂದು ಲಕ್ನೋದ ಗೋಮತಿನಗರದಲ್ಲಿರುವ ರಾಧಾ-ಕೃಷ್ಣ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನೆರವೇರಿತು. ದಂಪತಿಯ ಮಕ್ಕಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆ ಸಂಭ್ರಮದಿಂದ ನಡೆಯಿತು.
ಜಪಾನ್ ಮೂಲದ ಹಿರೋ ಚಿಹಾರಾ (Hiro Chihara) ಎಂಬವರು ವಧುವಿನೊಂದಿಗೆ ದೇವಸ್ಥಾನದಲ್ಲಿ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಿದರು. ದಂಪತಿ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾದರು. ಮದುವೆ ಸಮಾರಂಭದಲ್ಲಿ ಅವರ ಮಕ್ಕಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದ ಈ ಮದುವೆಯಲ್ಲಿ, ದಂಪತಿಗಳು ಹಾರಗಳನ್ನು ಧರಿಸಿ ದೇವಾಲಯದಲ್ಲಿನ ಸಮಾರಂಭದಲ್ಲಿ ಪಾಲ್ಗೊಂಡರು. ವಿಡಿಯೋ ದೃಶ್ಯಗಳಲ್ಲಿ, ಚಿಹಾರಾ ಮತ್ತು ಅವರ ಪತ್ನಿ ಒಟ್ಟಿಗೆ ಕುಳಿತಿದ್ದು, ಅವರ ಸುತ್ತಲೂ ಕುಟುಂಬ ಸದಸ್ಯರು ಮತ್ತು ಅತಿಥಿಗಳು ನೆರೆದಿರುವುದನ್ನು ಕಾಣಬಹುದು.
ಈ ಅಪರೂಪದ ಮರುಮದುವೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ.
ಭಾರತದಲ್ಲಿ ಹಿಂದೂ ಪದ್ಧತಿಯಂತೆ  ಮದುವೆಯಾಗಬೇಕೆಂಬ ಬಯಕೆ
2022ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು. ಆದರೆ, 2023ರಲ್ಲಿ ಮತ್ತೆ ಒಂದಾಗಿ ಜೀವನ ಮುಂದುವರಿಸಲು ನಿರ್ಧರಿಸಿದರು. ಭಾರತೀಯ ಸ್ನೇಹಿತರ ಬೆಂಬಲ ಮತ್ತು ಪ್ರೋತ್ಸಾಹ ತಮ್ಮಿಬ್ಬರನ್ನು ಮತ್ತೆ ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ತಿಳಿಸಿದ್ದಾರೆ.
 2026ರ ನವೆಂಬರ್ 21ರಂದು ತಮ್ಮ ಸ್ನೇಹಿತ ಪಂಕಜ ಜೋಶಿ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಹಿರೋ ಮತ್ತು ಶಿಜು ಲಕ್ನೊಗೆ ಆಗಮಿಸಿದ್ದರು. ಅಲ್ಲಿನ ಭಾರತೀಯ ವಿವಾಹ ಸಂಪ್ರದಾಯಗಳು ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ಪ್ರಭಾವಿತರಾದ ದಂಪತಿ, ತಾವೂ ಹಿಂದೂ ಸಂಪ್ರದಾಯದಂತೆ ಮರುಮದುವೆಯಾಗಲು ನಿರ್ಧರಿಸಿದರು.
ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟಿದ್ದ ಹಿರೋ ಮತ್ತು ಶಿಜು, ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡರು. ಬಳಿಕ ಹಣೆಗೆ ಸಿಂಧೂರವಿಟ್ಟು, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಅವರ ಮೂವರು ಮಕ್ಕಳು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಉಪಸ್ಥಿತರಿದ್ದು, ದಂಪತಿಯ ಮರುಮದುವೆಗೆ ಸಾಕ್ಷಿಯಾದರು.
ಮದುವೆಯ ಬಳಿಕ ತಮ್ಮ ಸಂತಸ ಹಂಚಿಕೊಂಡ ಹಿರೋ ಚಿಹಾರಾ, “ಇಂತಹ ಸುಂದರವಾದ ಮದುವೆಯನ್ನು ಮಾಡಿಕೊಳ್ಳಲು ಸಾಧ್ಯವಾಗಿದ್ದು ನಮಗೆ ಅತ್ಯಂತ ಅಮೂಲ್ಯವಾದ ಅನುಭವ. ನಾವು 2022ರಲ್ಲಿ ವಿಚ್ಛೇದನ ಪಡೆದಿದ್ದೆವು. ಬಳಿಕ ಮತ್ತೆ ಪರಸ್ಪರ ಮದುವೆಯಾಗಿದ್ದೇವೆ. ಈ ಮದುವೆಯನ್ನು ಭಾರತದಲ್ಲಿ ಮಾಡಿಕೊಳ್ಳಬೇಕೆಂದು ಬಯಸಿದ್ದೆವು” ಎಂದು ಹೇಳಿದ್ದಾರೆ.
 ಮತ್ತೆ ಒಂದಾದ ದಂಪತಿ
2022ರಲ್ಲಿ ವಿಚ್ಛೇದನ ಪಡೆಯಲು ಕಾರಣವೇನು? ಬಳಿಕ ಮತ್ತೆ ಒಂದಾಗಿ ಮದುವೆಯಾಗಲು ನಿರ್ಧರಿಸಿದ್ದೇಕೆ? ಎಂಬ ಬಗ್ಗೆ ಹಿರೋ ಚಿಹಾರಾ ಯಾವುದೇ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ವಿಚ್ಛೇದನದ ಬಳಿಕವೂ ಪರಸ್ಪರ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದು ಮತ್ತು ತಮ್ಮ ಮರುಮದುವೆಯನ್ನು ಭಾರತದಲ್ಲಿ ಮಾಡಿಕೊಳ್ಳಲು ಬಯಸಿರುವುದು ಅವರ ಮಾತುಗಳಿಂದ ವ್ಯಕ್ತವಾಗಿದೆ.
ಮಕ್ಕಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಈ ಮದುವೆ ದಂಪತಿಯ ಪಾಲಿಗೆ ವಿಶೇಷ ಕ್ಷಣವಾಗಿ ಮೂಡಿಬಂದಿದೆ. ದೇವಸ್ಥಾನದಲ್ಲಿ ನಡೆದ ಮದುವೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ವಿಚ್ಛೇದನದ ಬಳಿಕ ಮತ್ತೆ ಒಂದಾದ ನಂತರ ಜಪಾನ್ ದಂಪತಿಯ ಹಿಂದೂ ಪದ್ಧತಿಯಂತೆ ನಡೆದ ಮರುಮದುವೆ ಇದೀಗ ಗಮನಸೆಳೆದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement