
ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಗುರುವಾರ ಪಕ್ಷದ ಸಂಘಟನಾತ್ಮಕ ವಿಭಾಗದಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದ್ದು, ದೇಶದ ಪ್ರಮುಖ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.
ಪಂಜಾಬ್, ಹರಿಯಾಣ, ದೆಹಲಿ ಮತ್ತು ತ್ರಿಪುರಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಪಕ್ಷದ ಅಧಿಕೃತ ಪ್ರಕಟಣೆಯ ಪ್ರಕಾರ, ಹರ್ಷ ಮಲ್ಹೋತ್ರಾ ಅವರನ್ನು ದೆಹಲಿ ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರನ್ನು ವೀರೇಂದ್ರ ಸಚದೇವ ಅವರ ಬದಲಿಗೆ ನೇಮಕ ಮಾಡಲಾಗಿದೆ. ಹರಿಯಾಣದಲ್ಲಿ ಮೋಹನ್ ಲಾಲ್ ಬಡೋಲಿ ಅವರ ಸ್ಥಾನಕ್ಕೆ ಅರ್ಚನಾ ಗುಪ್ತಾ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತ್ರಿಪುರಾದಲ್ಲಿ ರಾಜೀಬ್ ಭಟ್ಟಾಚಾರ್ಯ ಅವರ ಸ್ಥಾನಕ್ಕೆ ಅಭಿಷೇಕ್ ದೆಬ್ರಾಯ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಾಗೂ ಪಂಜಾಬಿನಲ್ಲಿ ಹಿರಿಯ ನಾಯಕ ಸುನಿಲ ಜಾಖರ್ ಅವರ ಸ್ಥಾನಕ್ಕೆ ಕೇವಲ್ ಸಿಂಗ್ ಧಿಲ್ಲೋನ್ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಪಂಜಾಬ್ ಬಿಜೆಪಿಗೆ ಕೇವಲ್ ಸಿಂಗ್ ಧಿಲ್ಲೋನ್: ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ
ಈ ಎಲ್ಲಾ ನೇಮಕಾತಿಗಳ ನಡುವೆ ಪಂಜಾಬ್ ರಾಜ್ಯಾಧ್ಯಕ್ಷರ ಬದಲಾವಣೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಬರ್ನಾಲಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಧಿಲ್ಲೋನ್, ದೀರ್ಘಕಾಲದಿಂದ ಪಂಜಾಬ್ ರಾಜಕಾರಣದಲ್ಲಿ ಸಕ್ರಿಯ ಪ್ರಭಾವ ಹೊಂದಿದ್ದಾರೆ. ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು, ಈ ಹಿಂದೆ ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು ಎಂಬುದು ಗಮನಾರ್ಹ.
ಕೇವಲ್ ಸಿಂಗ್ ಧಿಲ್ಲೋನ್ ಅವರು 2007 ರಿಂದ 2017 ರವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬರ್ನಾಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, 2017 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಗುರ್ಮೀತ್ ಸಿಂಗ್ ಮೀತ್ ಹೈಯರ್ ವಿರುದ್ಧ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರದಿಂದ ಭಗವಂತ್ ಮಾನ್ ವಿರುದ್ಧ ಸೋಲು ಅನುಭವಿಸಿದ್ದರು. ತದನಂತರ 2022 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅವರು, 2022 ರ ಸಂಗ್ರೂರ್ ಲೋಕಸಭಾ ಉಪಚುನಾವಣೆ ಹಾಗೂ 2024 ರ ಬರ್ನಾಲಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರಾದರೂ ಜಯದ ಹಾದಿ ಸುಲಭವಾಗಲಿಲ್ಲ.
2027ರ ಚುನಾವಣೆಯ ಮೇಲೆ ಬಿಜೆಪಿ ಕಣ್ಣು:
ರಾಜಕೀಯ ವಿಶ್ಲೇಷಕರ ಪ್ರಕಾರ, 2027 ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಪ್ರಮುಖ ಕಾರ್ಯತಂತ್ರದ ನಿರ್ಧಾರ ಕೈಗೊಂಡಿದೆ. ಪಂಜಾಬ್‌ನಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಸಿಖ್ ಸಮುದಾಯವನ್ನು ಪ್ರಭಾವಿಸಲು ಪ್ರಬಲ ‘ಸಿಖ್ ಮುಖ’ವೊಂದನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಧಿಲ್ಲೋನ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕೇವಲ್ ಸಿಂಗ್ ಧಿಲ್ಲೋನ್ ಅವರ ಸಾರಥ್ಯದಲ್ಲಿ ಪಂಜಾಬ್ ಬಿಜೆಪಿ ಯಾವ ರೀತಿಯ ಹೊಸ ರಾಜಕೀಯ ರಣತಂತ್ರಗಳೊಂದಿಗೆ ಮುನ್ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ