ಕೊಲೊರಾಡೋ (ಅಮೆರಿಕ) : ಕೇವಲ ಮಧ್ಯಾಹ್ನದ ಊಟದ ವಿಷಯಕ್ಕೆ ಆರಂಭವಾದ ವಿವಾದವೊಂದು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದಕ್ಕೆ ಭಾರೀ ದಂಡ ತೆರುವಂತೆ ಮಾಡಿದೆ. ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಭಾರತೀಯ ವಿದ್ಯಾರ್ಥಿಗಳು, ಜನಾಂಗೀಯ ತಾರತಮ್ಯದ ವಿರುದ್ಧ ಕಾನೂನು ಹೋರಾಟ ನಡೆಸಿ ಸುಮಾರು 1.65 ಕೋಟಿ ರೂಪಾಯಿ ($200,000) ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 5, 2023 ರಂದು ಮಾನವಶಾಸ್ತ್ರ ವಿಭಾಗದ ವಿದ್ಯಾರ್ಥಿ ಆದಿತ್ಯ ಪ್ರಕಾಶ ಅವರು ವಿಶ್ವವಿದ್ಯಾಲಯದ ಮೈಕ್ರೋವೇವ್‌ನಲ್ಲಿ ತಾವು ಮನೆಯಿಂದ ತಂದಿದ್ದ ‘ಪಾಲಕ್ ಪನೀರ್’ ಅನ್ನು ಬಿಸಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಿಬ್ಬಂದಿಯೊಬ್ಬರು, ‘ಪಾಲಕ್ ಪನೀರ್’ ವಾಸನೆಗೆ ಆಕ್ಷೇಪ ವ್ಯಕ್ತಪಡಿಸಿ ಮೈಕ್ರೋವೇವ್ ಬಳಸದಂತೆ ಅವರನ್ನು ತಡೆದರು. “ಇದು ಕೇವಲ ಆಹಾರ, ನಾನು ಬಿಸಿ ಮಾಡಿ ಹೋಗುತ್ತೇನೆ” ಎಂದು ಆದಿತ್ಯ ಹೇಳಿದರೂ ಕೇಳದ ಸಿಬ್ಬಂದ ಾಹಾರ ಬಿಸಿ ಮಾಡಲು ಅವಕಾಶ ನೀಡಲಿಲ್ಲ. ಈ ಸಣ್ಣ ವಿಷಯವು ಮುಂದೆ ದೊಡ್ಡ ವಿವಾದಕ್ಕೆ ನಾಂದಿಯಾಯಿತು.
ವಿಶ್ವವಿದ್ಯಾಲಯದ ವಿರುದ್ಧ ಕಿರುಕುಳ ಮತ್ತು ತಾರತಮ್ಯದ ಆರೋಪ
ಈ ಘಟನೆಯ ನಂತರ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆದಿತ್ಯ ಮತ್ತು ಅವರ ಸಂಗಾತಿ ಊರ್ಮಿ ಭಟ್ಟಾಚಾರ್ಯ ಅವರ ಮೇಲೆ ಸರಣಿ ಕಿರುಕುಳ ನೀಡಲು ಆರಂಭಿಸಿತು ಎಂದು ಅವರ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿರಿಯ ಅಧ್ಯಾಪಕರ ಸಭೆಗೆ ಪದೇ ಪದೇ ಕರೆಸಿ, ತಮ್ಮ ನಡವಳಿಕೆಯಿಂದ ಸಿಬ್ಬಂದಿ “ಅಸುರಕ್ಷಿತ” ಎಂದು ಭಾವಿಸುತ್ತಿದ್ದಾರೆ ಎಂದು ಆರೋಪಿಸಲಾಯಿತು. ಪಿಎಚ್‌ಡಿ ವ್ಯಾಸಂಗದ ಅವಧಿಯಲ್ಲಿ ಸಾಮಾನ್ಯವಾಗಿ ನೀಡಲಾಗುವ ಸ್ನಾತಕೋತ್ತರ (Master’s) ಪದವಿಯನ್ನು ಈ ದಂಪತಿಗೆ ನೀಡಲು ವಿಶ್ವವಿದ್ಯಾಲಯ ನಿರಾಕರಿಸಿತು ಎಂದು ಅವರು ಆರೋಪಿಸಿದ್ದರು.
ಕೆಲಸದಿಂದ ವಜಾ:
ಯಾವುದೇ ಮುನ್ಸೂಚನೆ ಇಲ್ಲದೆ ಊರ್ಮಿ ಭಟ್ಟಾಚಾರ್ಯ ಅವರನ್ನು ಬೋಧನಾ ಸಹಾಯಕಿ (Teaching Assistant) ಹುದ್ದೆಯಿಂದ ತೆಗೆದುಹಾಕಲಾಯಿತು. ಅವರು ಮತ್ತೊಮ್ಮೆ ಭಾರತೀಯ ಆಹಾರ ತಂದಾಗ, ಈ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ “ದಂಗೆ ಏಳಲು ಪ್ರಚೋದಿಸುತ್ತಿದ್ದಾರೆ” ಎಂಬ ಗಂಭೀರ ಆರೋಪವನ್ನೂ ಮಾಡಲಾಗಿತ್ತು.
ನ್ಯಾಯಾಲಯದ ಮೆಟ್ಟಿಲೇರಿದ ವಿದ್ಯಾರ್ಥಿಗಳು
ವಿಶ್ವವಿದ್ಯಾಲಯದ ಈ ಕ್ರಮಗಳು ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳ ವಿರುದ್ಧದ ‘ಜನಾಂಗೀಯ ತಾರತಮ್ಯ’ ಮತ್ತು ‘ಆಹಾರದ ಮೇಲಿನ ತಾರತಮ್ಯ’ (Food Racism) ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿವಿಲ್ ರೈಟ್ಸ್ ಮೊಕದ್ದಮೆ ಹೂಡಿದರು. ಸುದೀರ್ಘ ಕಾನೂನು ಹೋರಾಟದ ನಂತರ, ವಿಶ್ವವಿದ್ಯಾಲಯವು ತನ್ನ ತಪ್ಪು ಒಪ್ಪಿಕೊಳ್ಳದಿದ್ದರೂ, ವಿದ್ಯಾರ್ಥಿಗಳೊಂದಿಗೆ ರಾಜಿ ಮಾಡಿಕೊಂಡು ಬೃಹತ್ ಮೊತ್ತದ ಸುಮಾರು 1.65 ಕೋಟಿ ರೂಪಾಯಿ ($200,000) ಪರಿಹಾರ ನೀಡಲು ಒಪ್ಪಿಕೊಂಡಿದೆ. ಅಲ್ಲದೆ ಇಬ್ಬರಿಗೂ ಮ್ಯಾಸ್ಟರ್ಸ್ ಪದವಿ (Master’s degrees) ಪ್ರದಾನ ಮಾಡಲಾಗುವುದು ಎಂದು ಹೇಳಿದೆ. ಆದರೆ, ಭವಿಷ್ಯದಲ್ಲಿ ಅವರು ಈ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮಾಡುವಂತಿಲ್ಲ ಅಥವಾ ಶಿಕ್ಷಣ ಮುಂದುವರಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ, “ನನ್ನ ಆಹಾರ ನನ್ನ ಹೆಮ್ಮೆ. ಯಾವ ವಾಸನೆ ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ಸಾಂಸ್ಕೃತಿಕವಾಗಿ ನಿರ್ಧರಿಸಲ್ಪಡುತ್ತದೆ. ಬ್ರೊಕೋಲಿ ವಾಸನೆ ಬರುತ್ತದೆಯಾದರೂ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಕೇವಲ ನಮ್ಮ ಆಹಾರವನ್ನೇ ಏಕೆ ಗುರಿಯಾಗಿಸಲಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.
“ಆಹಾರದ ಹೆಸರಿನಲ್ಲಿ ನಡೆಯುವ ಇಂತಹ ಜನಾಂಗೀಯ ತಾರತಮ್ಯವನ್ನು ಯಾರೂ ಸಹಿಸಿಕೊಳ್ಳಬಾರದು ಎಂಬ ಸಂದೇಶವನ್ನು ಈ ಗೆಲುವು ಸಾರುತ್ತದೆ” ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ