ಧಾರವಾಹಿ ಶೂಟಿಂಗ್‌ ವೇಳೆ ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ಸಾವು

ಬಂಗಾಳಿ ಚಿತ್ರರಂಗದ ಜನಪ್ರಿಯ ನಟ ರಾಹುಲ್ ಅರುಣೋದಯ ಬ್ಯಾನರ್ಜಿ (43) ಅವರು ಮಾರ್ಚ್ 29 ರಂದು ಒಡಿಶಾ-ಪಶ್ಚಿಮ ಬಂಗಾಳ ಗಡಿಯ ಬಳಿಯ ದಿಘಾದ ತಲ್ಸಾರಿಯಲ್ಲಿ ದಿಘಾ ಸಮೀಪದ ತಾಲ್ಸರಿ ಬೀಚ್‌ನಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
‘ಭೋಲೆ ಬಾಬಾ ಪಾರ್ ಕರೇಗಾ’ ಎಂಬ ಬಂಗಾಳಿ ಕಿರುತೆರೆ ಸರಣಿಯ ಚಿತ್ರೀಕರಣಕ್ಕಾಗಿ ರಾಹುಲ್ ಅವರು ಈ ಕರಾವಳಿ ಪ್ರದೇಶಕ್ಕೆ ತೆರಳಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಚಿತ್ರೀಕರಣ ಸುಗಮವಾಗಿ ಸಾಗಿತ್ತು. ಆದರೆ, ಮಧ್ಯಾಹ್ನ ಶೂಟಿಂಗ್ ಮುಗಿದ ನಂತರ (ಪ್ಯಾಕ್-ಅಪ್) ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಚಿತ್ರೀಕರಣ ಮುಗಿದ ನಂತರ ರಾಹುಲ್ ಅವರು ಒಬ್ಬರೇ ಸಮುದ್ರದ ಆಳವಾದ ನೀರಿಗೆ ಇಳಿದಿದ್ದರು. ಕೆಲವೇ ನಿಮಿಷಗಳಲ್ಲಿ ಅವರು ನಾಪತ್ತೆಯಾಗಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಸೆಟ್‌ನಲ್ಲಿದ್ದ ತಾಂತ್ರಿಕ ವರ್ಗದವರು ಮತ್ತು ತಂಡದ ಸದಸ್ಯರು ತಕ್ಷಣ ಸಮುದ್ರಕ್ಕೆ ಧುಮುಕಿ ಅವರನ್ನು ಹೊರಕ್ಕೆ ಎಳೆದು ತಂದಿದ್ದಾರೆ. ಅವರನ್ನು ತಕ್ಷಣವೇ 10-12 ಕಿ.ಮೀ ದೂರದಲ್ಲಿದ್ದ ದಿಘಾ ಉಪವಿಭಾಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6:10ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಘಟನೆಯ ಬಗ್ಗೆ ಮಾತನಾಡಿದ ಸಹನಟ ದಿಗಂತ ಬಾಗ್ಚಿ, “ಶೂಟಿಂಗ್ ಮುಗಿದ ನಂತರ ರಾಹುಲ್ ಒಬ್ಬರೇ ನೀರಿಗೆ ಇಳಿದಿದ್ದರು. ಬಹುಶಃ ನೀರಿನ ಅಡಿಯಲ್ಲಿ ಯಾವುದೋ ವಸ್ತುವಿಗೆ ಸಿಲುಕಿಕೊಂಡಿರಬಹುದು. ತಂಡದವರು ಕೂಗಾಡುತ್ತಾ ಅವರನ್ನು ರಕ್ಷಿಸಲು ಮುಂದಾದರು, ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು,” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಪತ್ನಿ ಪ್ರಿಯಾಂಕಾ ಸರ್ಕಾರ ಮನವಿ:
ರಾಹುಲ್ ಅವರಿಗೆ ಪತ್ನಿ (ನಟಿ ಪ್ರಿಯಾಂಕಾ ಸರ್ಕಾರ) ಮತ್ತು ಒಬ್ಬ ಮಗನಿದ್ದಾನೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕಾ, “ಇದು ನಮಗೆ ಅತ್ಯಂತ ದುಃಖದ ಸಮಯ. ಕುಟುಂಬದ ಗೌಪ್ಯತೆಯನ್ನು ಗೌರವಿಸಿ. ಮನೆಯಲ್ಲಿ ಮಗು ಮತ್ತು ವಯಸ್ಸಾದ ತಾಯಿ ಇದ್ದಾರೆ, ಈ ನೋವನ್ನು ಭರಿಸಲು ನಮಗೆ ಸಮಯ ನೀಡಿ,” ಎಂದು ವಿನಂತಿಸಿದ್ದಾರೆ.
ಮಮತಾ ಬ್ಯಾನರ್ಜಿ ಸಂತಾಪ:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಇದು ಬಂಗಾಳಿ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಅವರು ಬಣ್ಣಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement