ಅಪಘಾತದಿಂದಾಗಿ ನೆನಪು ಕಳೆದುಕೊಂಡು ಮನೆಯಿಂದ ದೂರಾಗಿ 45 ವರ್ಷಗಳ ನಂತ್ರ ಮತ್ತೊಂದು ಅಪಘಾತ…ಮರುಕಳಿಸಿದ ನೆನಪು..ಮನೆಗೆ ಬಂದ ವ್ಯಕ್ತಿ..!

ನವದೆಹಲಿ: ಒಂದು ವಿಚಿತ್ರ, ಆದರೆ ಹೃದಯಸ್ಪರ್ಶಿ ಘಟನೆಯಲ್ಲಿ, ಅಪಘಾತದಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡು 45 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕವಿಲ್ಲದೆ ಇದ್ದ ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಇದೀಗ ಮರಳಿ ತಮ್ಮ ಮನೆ ಸೇರಿದ್ದಾರೆ. ಅಚ್ಚರಿಯೆಂದರೆ ಅವರಿಗೆ ಮತ್ತೊಂದು ಅಪಘಾತದಿಂದಾ ಕಳೆದುಹೋದ ನೆನಪು ಮರಳಿ ಬಂದಿದ್ದು, ಇಡೀ ಗ್ರಾಮವೇ ಈ ಪವಾಡವನ್ನು ಸಂಭ್ರಮಿಸುತ್ತಿದೆ.
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯ ನಿವಾಸಿಯಾಗಿರುವ ರಿಖಿ ರಾಮ ಅವರ ಜೀವನದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.
ನೆನಪು ಕಳೆದುಕೊಂಡ ದುರಂತ
1980 ರಲ್ಲಿ, ತಮ್ಮ 16ನೇ ವಯಸ್ಸಿನಲ್ಲಿ, ರಿಖಿ ರಾಮ ಅವರು ಸಿರ್ಮೌರ್‌ನ ನಾದಿ ಗ್ರಾಮದ ತಮ್ಮ ಮನೆಯನ್ನು ತೊರೆದು ಕೆಲಸ ಹುಡುಕಿಕೊಂಡು ಹರಿಯಾಣದ ಯಮುನಾನಗರಕ್ಕೆ ಪ್ರಯಾಣಿಸಿದ್ದರು. ಅಲ್ಲಿ ಅವರು ಒಂದು ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಆದರೆ, ಸಹೋದ್ಯೋಗಿಯೊಂದಿಗೆ ಅಂಬಾಲಾಗೆ ಪ್ರಯಾಣಿಸುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದ ಅವರ ಜೀವನದಲ್ಲಿ ದೊಡ್ಡ ತಿರುವು ಉಂಟಾಯಿತು.
ತಲೆಗೆ ಆದ ಗಾಯದಿಂದಾಗಿ ಅವರು ತಮ್ಮ ನೆನಪಿನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡರು ಮತ್ತು ಕುಟುಂಬದೊಂದಿಗಿನ ಸಂಪರ್ಕವು ಕಡಿದುಹೋಯಿತು. ಆ ದಿನಗಳಲ್ಲಿ ಫೋನ್‌ಗಳು ಅಥವಾ ವಿಶ್ವಾಸಾರ್ಹ ಸಂಪರ್ಕ ಮಾರ್ಗಗಳು ಇರದ ಕಾರಣ, ಅವರ ಕುಟುಂಬಕ್ಕೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವರ ತಂದೆ-ತಾಯಿಗಳು ಮಗ ಎಲ್ಲಿದ್ದಾನೆಂದು ತಿಳಿಯದೆ ನಿಧನರಾದರು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಹೊಸ ಜೀವನ, ಹೊಸ ಹೆಸರು
ಅವರಿಗೆ ತಮ್ಮ ಹೆಸರು ಹಾಗೂ ಕುಟುಂಬದ ಬಗ್ಗೆ ನೆನಪಿಸಿಕೊಳ್ಳಲುಸಾಧ್ಯವಾಗದೇ ಇದ್ದಾಗ, ಅವರ ಸಹೋದ್ಯೋಗಿ ಅವರಿಗೆ “ರವಿ ಚೌಧರಿ” ಎಂದು ಹೊಸ ಹೆಸರಿಟ್ಟರು. ಅವರು ಅಂತಿಮವಾಗಿ ಮುಂಬೈನಲ್ಲಿ ನೆಲೆಸಿದ ಅವರು, ನಂತರ ಮಹಾರಾಷ್ಟ್ರದ ನಾಂದೇಡಕ್ಕೆ ತೆರಳಿ ಅಲ್ಲಿನ ಕಾಲೇಜೊಂದರಲ್ಲಿ ಕೆಲಸ ಪಡೆದರು. 1994 ರಲ್ಲಿ, ಅವರು ಸಂತೋಷಿ ಅವರನ್ನು ವಿವಾಹವಾದರು ಮತ್ತು ಈ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಸೇರಿದಂತೆ ಮೂವರು ಮಕ್ಕಳಿದ್ದಾರೆ. ರಿಖಿ ರಾಮ ಅವರು ತಮ್ಮ ಹೊಸ ಜೀವನದಲ್ಲಿ ಮುಂದುವರೆದರು, ಅವರ ಹಳೆಯ ಗುರುತಿನ ಎಲ್ಲಾ ಕುರುಹುಗಳು ಮರೆತು ಹೋಗಿದ್ದವು.
ಎರಡನೇ ಅಪಘಾತದಿಂದ ಮರಳಿ ಬಂದ ನೆನಪು
ದಶಕಗಳ ನಂತರ, ವಿಧಿಯು ಅವರ ಜೀವನದಲ್ಲಿ ಮತ್ತೊಂದು ತಿರುವು ನೀಡಿತು. ಕೆಲ ತಿಂಗಳ ಹಿಂದೆ, ಅವರು ಮತ್ತೊಂದು ರಸ್ತೆ ಅಪಘಾತಕ್ಕೆ ಒಳಗಾದ ನಂತರ ಅವರಿಗೆ ಕಳೆದುಹೋದ ನೆನಪುಗಳು ಕ್ರಮೇಣ ಮರಳಿ ಬರಲು ಪ್ರಾರಂಭಿಸಿದವು.
ಅವರಿಗೆ ತಮ್ಮ ಬಾಲ್ಯದ ಮನೆ, ಸತೌನ್ ಪ್ರದೇಶ, ಮಾವಿನ ಮರಗಳು, ಗ್ರಾಮದ ಜೋಕಾಲಿಗಳು ಮತ್ತು ಬೆಟ್ಟದ ಹಾದಿಗಳ ಚಿತ್ರಗಳು ಕನಸುಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಮೊದಲು ಅವರು ಇದನ್ನು ನಿರ್ಲಕ್ಷಿಸಿದರು, ಆದರೆ ಈ ದೃಶ್ಯಗಳು ಪುನರಾವರ್ತನೆಯಾಗುತ್ತಿದ್ದಾಗ, ಅವರು ತಮ್ಮ ಹೆಂಡತಿಗೆ ತಿಳಿಸಿ ತಮ್ಮ ಹಿಂದಿನ ಜೀವನದ ಬಗ್ಗೆ ಹುಡುಕಾಟ ಶುರು ಮಾಡಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಪವಾಡ ಸದೃಶರೀತಿಯಲ್ಲಿ ಕುಟುಂಬದ ಜೊತೆ ಮರುಮಿಲನ
ಶಿಕ್ಷಣದ ಕೊರತೆಯಿಂದಾಗಿ, ಅವರು ಆನ್‌ಲೈನ್‌ನಲ್ಲಿ ಹುಡುಕಲು ಕಾಲೇಜು ವಿದ್ಯಾರ್ಥಿಯೊಬ್ಬರ ಸಹಾಯ ಪಡೆದರು. ಹುಡುಕಾಟದ ಸಮಯದಲ್ಲಿ, ಅವರು ತಮ್ಮ ಮೂಲವನ್ನು ನಾದಿ ಗ್ರಾಮ ಎಂದು ಪತ್ತೆಹಚ್ಚಿದರು ಮತ್ತು ಸತೌನ್‌ನಲ್ಲಿರುವ ಒಂದು ಕೆಫೆಯ ಫೋನ್‌ ಸಂಖ್ಯೆಯನ್ನು ಕಂಡುಕೊಂಡರು. ಕೆಫೆಯ ಸಿಬ್ಬಂದಿ ಅವರನ್ನು ಅವರ ಗ್ರಾಮದ ರುದ್ರ ಪ್ರಕಾಶ ಎಂಬವರಿಗೆ ಸಂಪರ್ಕಿಸಿದರು.
ಮೊದಲಿಗೆ, ರುದ್ರ ಪ್ರಕಾಶ ಅವರು ರಿಖಿ ರಾಮ ಅವರ ಕಥೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು, ಆದರೆ ಪದೇ ಪದೇ ಬಂದ ಕರೆಗಳ ನಂತರ ಮತ್ತು ರಿಖಿ ರಾಮ ಅವರು ತಮ್ಮ ಕುಟುಂಬದ ವಿವರಗಳು ಮತ್ತು ಸಹೋದರ-ಸಹೋದರಿಯರ ಹೆಸರುಗಳನ್ನು ನೆನಪಿಸಿಕೊಂಡ ನಂತರ, ರುದ್ರ ಪ್ರಕಾಶ ಅವರಿಗೆ ವಿಶ್ವಾಸ ಮೂಡಿತು. ಇದೀಗ ರಿಖಿ ರಾಮ ಅವರು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದು, ಅವರ ಕುಟುಂಬ ಸದಸ್ಯರು ಅತೀವ ಸಂತೋಷ ಮತ್ತು ಸಂಭ್ರಮದಿಂದ ಅವರನ್ನು ಸ್ವಾಗತಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement