ಮುಂಬೈ: ಮಹಿಳೆಯೊಬ್ಬರು ತನ್ನ ಮೊಬೈಲಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ ಬಸ್ ಚಾಲಕನನ್ನು ಪತ್ತೆಹಚ್ಚಿ, ಆತನಿಗೆ ನಡುರಸ್ತೆಯಲ್ಲೇ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು ಅದರ ವೀಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಟಿಕೆಟ್ ಬುಕಿಂಗ್ ದಾಖಲೆಯಿಂದ ಮೊಬೈಲ್ ನಂಬರ್ ತೆಗೆದುಕೊಂಡು ಸಂಪರ್ಕ ವಿವರಗಳನ್ನು ಬಳಸಿಕೊಂಡು ತನ್ನ ಫೋನ್ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು ಆತನನ್ನು ಪತ್ತೆ ಹಚ್ಚಿದ ನಂತರ ಸಾರ್ವಜನಿಕವಾಗಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಮಹಿಳೆ ಕೆಲವು ತಿಂಗಳ ಹಿಂದೆ ಕಂಕವ್ಲಿಯಲ್ಲಿರುವ ಖಾಸಗಿ ಟ್ರಾವೆಲ್ ಕಂಪನಿಯ ಕಚೇರಿಯ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಕಂಕವ್ಲಿ ಮತ್ತು ಮುಂಬೈ ನಡುವಿನ ಪ್ರಯಾಣಕ್ಕಾಗಿ ಅದೇ ಕಂಪನಿಯ ಬಸ್ ನಲ್ಲಿ ಆಗಾಗ ಹೋಗುತ್ತಿದ್ದರು.
ಚಾಲಕ ಟಿಕೆಟ್ ಬುಕಿಂಗ್ ದಾಖಲೆಗಳಿಂದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಮೆಸೇಜಿಂಗ್ ಅಪ್ಲಿಕೇಶನ್ಗಳ ಮೂಲಕ ಮಹಿಳೆಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಈ ಕೃತ್ಯವನ್ನು ಪುನರಾವರ್ತಿಸಿದ ನಂತರ, ಮಹಿಳೆ ಪಾಠ ಕಲಿಸಲು ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 16ರ ಸಂಜೆ, ಮಹಿಳೆ ಕಂಕವ್ಲಿ ಬಸ್ ನಿಲ್ದಾಣದ ಬಳಿಯ ಕಂಪನಿಯ ಬುಕಿಂಗ್ ಕಚೇರಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಬಂದಿದ್ದಾರೆ. ಚಾಲಕನನ್ನು ಪತ್ತೆ ಮಾಡಿದ ನಂತರ, ಆತನಿಗೆ ತನ್ನ ಫೋನ್ನಿಂದ ಸಂದೇಶಗಳನ್ನು ತೋರಿಸಿ ಆತನಿಗೆ ಉಗಿದಿದ್ದಾರೆ. ನಂತರ ಆತನಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವೀಡಿಯೊದಲ್ಲಿ ಮಹಿಳೆಯರು ಚಾಲಕನಿಗೆ ಸಾರ್ವಜನಿಕರ ಮುಂದೆಯೇ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಈ ಘಟನೆಯ ನಂತರ ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ