ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು ಏಪ್ರಿಲ್ ತಿಂಗಳಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ. ಗಡಿ ದಾಟಿದೆ.
ಈ ಕುರಿತಂತೆ ಹಣಕಾಸು ಸಚಿವಾಲಯವು ಪ್ರಕಟಣೆ ಹೊರಡಿಸಿದೆ. ದೇಶೀಯ ವಹಿವಾಟು ಮತ್ತು ಆಮದು ಹೆಚ್ಚಳದಿಂದ ತೆರಿಗೆ ಸಂಗ್ರಹವೂ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
‘ಏಪ್ರಿಲ್ 2024ರಲ್ಲಿ ಸರಕು ಮತ್ತು ಸೇವಾ ತೆರಿಗೆಯು(ಜಿಎಸ್‌ಟಿ) ದಾಖಲೆಯ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ. ದೇಶೀಯ ವಹಿವಾಟು ಮತ್ತು ಆಮದು ಹೆಚ್ಚಳವಾಗಿರುವುದರಿಂದ ಶೇ 12.4 ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದನ್ನು ಇದು ಸೂಚಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹವು ₹ 1.78 ಲಕ್ಷ ಕೋಟಿ ಆಗಿತ್ತು. 2023‌ರ ಏಪ್ರಿಲ್‌ನಲ್ಲಿ ₹1.87 ಲಕ್ಷ ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ. ರೀಫಂಡ್ ಲೆಕ್ಕಾಚಾರದ ಬಳಿಕ ಏಪ್ರಿಲ್ 2024ರ ನಿವ್ವಳ ಜಿಎಸ್‌ಟಿ ಸಂಗ್ರಹ ₹1.92 ಲಕ್ಷ ಕೋಟಿಯಾಗಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷ ಶೇ 15.5ರಷ್ಟು ಹೆಚ್ಚಳ ದಾಖಲಾಗಿದೆ.
ಕರ್ನಾಟಕಕ್ಕೆ ಎರಡನೇ ಸ್ಥಾನ
ಕರ್ನಾಟಕದಲ್ಲಿ ಈ ಬಾರಿ 15,978 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಸಂಗ್ರಹವಾಗಿತ್ತು. ಮಹಾರಾಷ್ಟ್ರ 37,671 ಕೋಟಿ ರೂ., ಗುಜರಾತ್‌ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ., ಹರ್ಯಾಣ 12,168 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement