ಅರ್ಜೆಂಟೀನಾ ಕನಸು ಭಗ್ನ; 107ನೇ ನಿಮಿಷದ ಗೋಲಿನಿಂದ 2026ರ ಫೀಫಾ ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್‌

ನ್ಯೂಯಾರ್ಕ್: 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ 10 ಆಟಗಾರರೊಂದಿಗೆ ಹೋರಾಡಿದ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ, ಅಮೆರಿಕದ ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಿಕೊ ವಿಲಿಯಮ್ಸ್ ನೀಡಿದ ಕ್ರಾಸ್ ಪಾಸ್‌ ಅನ್ನು ಹೆಡರ್ ಮೂಲಕ ಗೋಲಿನ ಮುಂಭಾಗಕ್ಕೆ ಮರಳಿಸಿದ ಬಳಿಕ, ಫೆರಾನ್ ಟೊರೆಸ್ ಸಮೀಪದಿಂದ ಗೋಲು ಹೊಡೆದರು. ಸಾಮಾನ್ಯ ಸಮಯದಲ್ಲಿ ಯಾವುದೇ ಗೋಲುಗಳಿಲ್ಲದ ಕಾರಣ ಹೆಚ್ಚುವರಿ ಸಮಯ ನೀಡಲಾಯಿತು. ಹೆಚ್ಚುವರಿ ಮಯದ ಮುಕ್ತಾಯದ ವೇಳೆ ಅರ್ಜೆಂಟೀನಾ ಮಧ್ಯಮೈದಾನದ ಆಟಗಾರ ಎನ್ಜೊ ಫೆರ್ನಾಂಡೆಸ್ ಕೆಂಪು ಕಾರ್ಡ್ ಪಡೆದು ಆಟದಿಂದ ಹೊರಹೋಗಬೇಕಾಯಿತು. ಇದರಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಹೆಚ್ಚುವರಿ ಸಮಯವನ್ನು ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು.

ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಸ್ಪೇನ್ ಸಂಪೂರ್ಣ ಹಿಡಿತ ಸಾಧಿಸಿತು. ಆದರೆ ಅರ್ಜೆಂಟೀನಾದ ಶಿಸ್ತುಬದ್ಧ ರಕ್ಷಣಾ ವಿಭಾಗವನ್ನು ಭೇದಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ಮೊದಲಾರ್ಧದಲ್ಲೇ ಸ್ಪೇನ್ ಶೇ.60ಕ್ಕೂ ಹೆಚ್ಚು ಚೆಂಡಿನ ನಿಯಂತ್ರಣ ಹೊಂದಿದ್ದರೆ, ಅರ್ಜೆಂಟೀನಾ ಇಡೀ ಪಂದ್ಯದಲ್ಲಿ ಒಂದೇ ಒಂದು ಬಾರಿ ಕೂಡ ಗುರಿಯತ್ತ ನೇರ ಶಾಟ್ ದಾಖಲಿಸಲು ವಿಫಲವಾಯಿತು.
ಅರ್ಜೆಂಟೀನಾ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಬಹುತೇಕ ಪಂದ್ಯದುದ್ದಕ್ಕೂ ಉಳಿಸಿದರು. ಅವರು ಒಟ್ಟು 11 ಸೇವ್‌ಗಳು ಮಾಡಿದ್ದು, ಫಿಫಾ ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಒಬ್ಬ ಗೋಲ್‌ಕೀಪರ್ ದಾಖಲಿಸಿದ ಗರಿಷ್ಠ ಸೇವ್‌ಗಳ ಸಾಧನೆಯಾಗಿದೆ. ಮೊದಲಾರ್ಧದ ಕೊನೆಯಲ್ಲಿ ಮಾರ್ಕ್ ಕುಕುರೆಲ್ಲಾ ಅವರ ಪ್ರಯತ್ನವನ್ನು ತಡೆದ ಮಾರ್ಟಿನೆಸ್, ನಿಯಮಿತ ಸಮಯದ ಹೆಚ್ಚುವರಿ ವೇಳೆಯಲ್ಲಿ ಲಮಿನ್ ಯಮಾಲ್ ಅವರ ಫ್ರೀ ಕಿಕ್ ಅನ್ನು ತಳ್ಳಿಹಾಕಿದರು. ನಂತರ ಎರಡನೇಾರ್ಧ ಹಾಗೂ ಹೆಚ್ಚುವರಿ ವೇಳೆಯಲ್ಲಿ ನಿಕೊ ವಿಲಿಯಮ್ಸ್, ಪೆಡ್ರಿ ಮತ್ತು ಪೌ ಕುಬಾರ್ಸಿ ಅವರ ಪ್ರಯತ್ನಗಳನ್ನೂ ಅದ್ಭುತವಾಗಿ ವಿಫಲಗೊಳಿಸಿದರು.

ಇದೇ ವೇಳೆ 96ನೇ ನಿಮಿಷದಲ್ಲಿ ನಿಕೊ ವಿಲಿಯಮ್ಸ್ ಸಮೀಪದಿಂದ ಗೋಲು ಗಳಿಸಿ ಸ್ಪೇನ್ ಮುನ್ನಡೆ ಸಾಧಿಸಿದೆ ಎಂದು ಭಾಸವಾದರೂ, ಫೌಲ್ ಆದ ಕಾರಣ ರೆಫರಿ ಅದನ್ನು ರದ್ದುಗೊಳಿಸಿದರು. ಆದರೂ ಸ್ಪೇನ್ ಒತ್ತಡವನ್ನು ಮುಂದುವರಿಸಿತು. ಮಿಕೆಲ್ ಮೆರಿನೊ ಸುಲಭ ಅವಕಾಶವನ್ನು ಹೆಡರ್ ಮೂಲಕ ಗೋಲಿನ ಹೊರಗೆ ಕಳುಹಿಸಿದರೆ, ಕೆಲವೇ ಕ್ಷಣಗಳ ಬಳಿಕ ನಿಕೊ ವಿಲಿಯಮ್ಸ್ ನೀಡಿದ ಅವಕಾಶವನ್ನು ಫೆರಾನ್ ಟೊರೆಸ್ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು.
ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಗೆ ಸ್ಪೇನ್‌ನ ಬಿಗಿ ರಕ್ಷಣೆಯ ವಿರುದ್ಧ ಯಾವುದೇ ಪ್ರಭಾವ ಬೀರುವ ಅವಕಾಶ ಸಿಗಲಿಲ್ಲ. ಸ್ಪೇನ್‌ನ ಆಟದ ಒತ್ತಡದಿಂದ ಅರ್ಜೆಂಟೀನಾ ದೀರ್ಘಕಾಲ ತನ್ನದೇ ಅರ್ಧಭಾಗದಲ್ಲಿ ಸಿಲುಕಿಕೊಂಡಿತ್ತು.

ಗೋಲುರಹಿತ ಸಮಬಲ ಸಾಧಿಸಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ಗೆ ಕೊಂಡೊಯ್ಯುವ ಉದ್ದೇಶದಿಂದ ಅರ್ಜೆಂಟೀನಾ ರಕ್ಷಣಾತ್ಮಕ ಆಟವನ್ನೇ ಅವಲಂಬಿಸಿತು. ಮೆಸ್ಸಿಯನ್ನು ಹೊರತುಪಡಿಸಿ ತಂಡದ ಎಲ್ಲಾ ಆಕ್ರಮಣಕಾರಿ ಆಟಗಾರರನ್ನು ಕ್ರಮೇಣ ಬದಲಿಸಿ ರಕ್ಷಣಾತ್ಮಕ ಆಟಗಾರರನ್ನು ಕಣಕ್ಕಿಳಿಸಲಾಯಿತು.
ಈ ಗೆಲುವಿನೊಂದಿಗೆ ಸ್ಪೇನ್ 2010ರ ಬಳಿಕ 16 ವರ್ಷಗಳ ನಿರೀಕ್ಷೆಗೆ ತೆರೆ ಎಳೆದು ಮತ್ತೊಮ್ಮೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮತ್ತೊಂದೆಡೆ, ಹಾಲಿ ಚಾಂಪಿಯನ್ ಅರ್ಜೆಂಟೀನಾದ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಸತತ ಉತ್ತಮ ಪ್ರದರ್ಶನದ ನಡುವೆಯೂ ಫೈನಲ್‌ನಲ್ಲಿ ಅಂತ್ಯವಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement