6 ಅಡಿ ಎತ್ತರದ ಬಲಿಷ್ಠ ರೋಬೋಟ್ ವಿರುದ್ಧ ಬಾಕ್ಸಿಂಗ್‌ ಫೈಟ್‌ ನಡೆಸಿದ ವ್ಯಕ್ತಿ ; ಗೆದ್ದೋರು ಯಾರು..? ವಿಡಿಯೋ ವೈರಲ್‌

ಸ್ಯಾನ್‌ಫ್ರಾನ್ಸಿಸ್ಕೋ : ಆರು ಅಡಿ ಎತ್ತರದ ಮಾನವರೂಪಿ ರೋಬೋಟ್‌ ಹಾಗೂ ಮನುಷ್ಯ ಬಾಕ್ಸಿಂಗ್‌ ರಿಂಗ್‌ನಲ್ಲಿ ಕಾದಾಡಿದ ಅಪರೂಪದ ಘಟನೆ ಇದೀಗ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಅಮೆರಿಕ ಮೂಲದ ರೋಬೋಟಿಕ್ಸ್‌ ಕಂಪನಿ ಆರ್‌ಇಕೆ (REK) ಈ ವಿಶೇಷ ಕಾಳಗವನ್ನು ಆಯೋಜಿಸಿತ್ತು.
ಇದರಲ್ಲಿ ದೂರದಿಂದ ಮಾನವರೂಪಿ ರೋಬೋಟ್‌ಗಳನ್ನು ನಿಯಂತ್ರಿಸಿ ಪರಸ್ಪರ ಸ್ಪರ್ಧಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ನಡೆದ ಪಂದ್ಯದಲ್ಲಿ ಇನ್‌ಫ್ಲುಯೆನ್ಸರ್ ಹಾಗೂ ಕಂಟೆಂಟ್ ಕ್ರಿಯೇಟರ್ ಫ್ರಾಂಕಿ ಲಾಪೆನ್ನಾ (Frankie LaPenna) ಅವರು ರಿಮೋಟ್ ಮೂಲಕ ನಿಯಂತ್ರಿಸಲ್ಪಟ್ಟ ಮಾನವರೂಪಿ ರೋಬೋಟ್ (humanoid robot) ವಿರುದ್ಧ ಬಾಕ್ಸಿಂಗ್‌ ರಿಂಗ್‌ನಲ್ಲಿ ಸೆಣಸಾಡಿದರು.
ರೋಬೋಟ್ ಪಂದ್ಯ ಆರಂಭಕ್ಕೂ ಮುನ್ನ ರಿಂಗ್‌ನಲ್ಲಿ ಓಡಾಡುತ್ತಾ ಚಲನವಲನ ಅಭ್ಯಾಸ ಮಾಡಿತು. ಕಾದಾಟ ಆರಂಭವಾದ ಬಳಿಕ ಲಾಪೆನ್ನಾ ರೋಬೋಟ್‌ಗೆ ಹಲವು ಪಂಚ್‌ಗಳನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ರೋಬೋಟ್ ಕೂಡ ಪಂಚ್‌ಗಳ ಜೊತೆಗೆ ಬಲಿಷ್ಠ ಕಿಕ್‌ಗಳನ್ನು ನೀಡಿತು.
ಕೆಲವು ಸಂದರ್ಭಗಳಲ್ಲಿ ರೋಬೋಟ್ ನೀಡಿದ ಒದೆತದ ರಭಸಕ್ಕೆ ಲಾಪೆನ್ನಾ ರಿಂಗ್‌ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಬಿದ್ದ ದೃಶ್ಯವೂ ಕಂಡುಬಂದಿದೆ. ಇದರಿಂದ ರೋಬೋಟ್‌ ಚಲಿಸುವ ಹಾಗೂ ಹೊಡೆತ ನೀಡುವ ಸಾಮರ್ಥ್ಯ ಗಮನ ಸೆಳೆಯಿತು.

ಪ್ರಮುಖ ಸುದ್ದಿ :-   3 ಮಾಧ್ಯಮಗಳಿಗೆ ಶ್ವೇತಭವನ ಪ್ರವೇಶ ನಿಷೇಧಿಸಿದ್ದಕ್ಕೆ ಅಮೆರಿಕದ ಟಿವಿ ಜಾಲಗಳ ತಿರುಗೇಟು ; ಟ್ರಂಪ್ ಕಾರ್ಯಕ್ರಮಗಳ ಪ್ರಸಾರ ಬಹಿಷ್ಕಾರ

ಇದನ್ನು ತನ್ನ ಮೊದಲ ಮಾನವ-ವರ್ಸಸ್-ಮಾನವಾಕೃತಿ ರೋಬೋಟ್ ಕಾಳಗ ಎಂದು ಆರ್‌ಇಕೆ (REK) ಹೇಳಿಕೊಂಡಿದೆ. ಪಂದ್ಯಕ್ಕೆ ಸಂಬಂಧಿಸಿದ ಇನ್ನಷ್ಟು ದೃಶ್ಯಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೇಳೆ, “ನಾವು ಮೊದಲ ಮಾನವ VS ಟರ್ಮಿನೇಟರ್ ರೋಬೋಟ್ ಕಾದಾಟದ ಮೂಲಕ ಇತಿಹಾಸ ನಿರ್ಮಿಸಿದ್ದೇವೆ. ಫ್ರಾಂಕಿ ಲಾಪೆನ್ನಾ ತಮ್ಮ ಕೈಲಾದಷ್ಟು ಹೋರಾಡಿದರು” ಎಂದು ಬರೆಯಲಾಗಿದೆ.
ಈ ಅಸಾಮಾನ್ಯ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್‌ ಆಗಿದ್ದು, ಭವಿಷ್ಯದಲ್ಲಿ ದೂರದಿಂದ ನಿಯಂತ್ರಿಸಲ್ಪಡುವ ರೋಬೋಟ್‌ಗಳು ವೃತ್ತಿಪರ ಕಾದಾಟವು ಕ್ರೀಡೆಗಳ ಭಾಗವಾಗಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ.

“ನಿಜವಾದ ವೃತ್ತಿಪರ ಫೈಟರ್ ಈ ರೋಬೋಟ್ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬ ಕುತೂಹಲವಿದೆ. ಒಬ್ಬ ಪ್ರೊಫೆಷನಲ್ ಫೈಟರ್ ಇದಕ್ಕಿಂತ ಉತ್ತಮವಾಗಿ ಹೋರಾಡಬಹುದು ಎಂದು ನನಗನಿಸುತ್ತದೆ” ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, “ಮುಂದಿನ ಐದು ವರ್ಷಗಳಲ್ಲಿ ರೋಬೋಟ್‌ಗಳು ಮತ್ತು ಮನುಷ್ಯರ ಕಾದಾಟ ಯುಎಫ್‌ಸಿ(UFC)ಯ ಭಾಗವಾಗಲಿದೆ. ಎಐ(AI) ಕುರಿತು ಹೆಚ್ಚುತ್ತಿರುವ ಆತಂಕ ಇದನ್ನು ಅನಿವಾರ್ಯಗೊಳಿಸುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾನವಾಕೃತಿ ರೋಬೋಟ್‌ವೊಂದು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ದೃಶ್ಯ ವೈರಲ್ ಆಗಿ ಅದನ್ನು ಕಾಲ್ಪನಿಕ ‘ಟರ್ಮಿನೇಟರ್’ ಚಿತ್ರಗಳೊಂದಿಗೆ ಹೋಲಿಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಎಲೆಕ್ಟ್ರಾನಿಕ್ಸ್‌ ಅಂಗಡಿಯೊಂದರಲ್ಲಿ ಗ್ರಾಹಕನೊಬ್ಬ ರೋಬೋಟ್‌ ಅನ್ನು ತಳ್ಳಿದ ಬಳಿಕ, ಅದು ಪ್ರತಿಕ್ರಿಯಿಸಿದಂತೆ ಕಂಡ ವಿಡಿಯೋ ಕೂಡ ವೈರಲ್ ಆಗಿತ್ತು.
ಆ ದೃಶ್ಯದಲ್ಲಿ ಗ್ರಾಹಕನತ್ತ ರೋಬೋಟ್‌ ಸಾಗಿ ಹೋಗಿದ್ದು, ಆತನಿಗೆ ಒದೆಯಲು ಪ್ರಯತ್ನಿಸಿದಂತೆ ಕಂಡುಬಂದಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಅಂಗಡಿ ಸಿಬ್ಬಂದಿ ಮಧ್ಯಪ್ರವೇಶಿಸಿ ರೋಬೋಟ್‌ನನ್ನು ಆಫ್ ಮಾಡಿದ್ದರು.
ಇದೀಗ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಮಾನವ-ರೋಬೋಟ್ ಕಾದಾಟ, ರೋಬೋಟಿಕ್ಸ್ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಮನರಂಜನೆ ಹಾಗೂ ವೃತ್ತಿಪರ ಕ್ರೀಡೆಗಳ ಸ್ವರೂಪವನ್ನೇ ಬದಲಾಯಿಸಬಹುದೇ ಎಂಬ ಚರ್ಚೆಗೆ ಮತ್ತಷ್ಟು ವೇಗ ನೀಡಿದೆ.

ಪ್ರಮುಖ ಸುದ್ದಿ :-   3 ಮಾಧ್ಯಮಗಳಿಗೆ ಶ್ವೇತಭವನ ಪ್ರವೇಶ ನಿಷೇಧಿಸಿದ್ದಕ್ಕೆ ಅಮೆರಿಕದ ಟಿವಿ ಜಾಲಗಳ ತಿರುಗೇಟು ; ಟ್ರಂಪ್ ಕಾರ್ಯಕ್ರಮಗಳ ಪ್ರಸಾರ ಬಹಿಷ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement