ವಿಡಿಯೊ| ಹಸೀನಾ ಜೊತೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಖ್ಯಾತ ಕ್ರಿಕೆಟರ್‌ ಶಕೀಬ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ನವದೆಹಲಿ : ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಹಾಗೂ ಮಾಜಿ ಅವಾಮಿ ಲೀಗ್ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಭಾರತದ ದೆಹಲಿಯಿಂದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜೊತೆ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಕೀಬ್ ಅಲ್ ಹಸನ್ ಭಾಗವಹಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿದೆ.
ದಾಳಿ ಬುಧವಾರ ರಾತ್ರಿ ಸ್ಥಳೀಯ ಸಮಯ ಸುಮಾರು 8:45ರ ವೇಳೆಗೆ ಬಾಂಗ್ಲಾದೇಶದ ಮಗುರಾ ಪಟ್ಟಣದ ಕೇಶಬ್‌ಮೋರ್ ಪ್ರದೇಶದಲ್ಲಿರುವ ಶಕೀಬ್ ಅಲ್ ಹಸನ್ ಅವರ ಪಾರಂಪರಿಕ ನಿವಾಸದಲ್ಲಿ ನಡೆದಿದೆ. ದಾಳಿಯ ವೇಳೆ ಮನೆಗೆ ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಶೇಖ್ ಹಸೀನಾ ಅವರು ದೆಹಲಿಯ ವಿದೇಶಿ ವರದಿಗಾರರ ಕ್ಲಬ್‌ನಲ್ಲಿ ಆಯೋಜಿಸಿದ್ದ ವರ್ಚುವಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ಸಮಯದ ಬಳಿಕ ನಡೆದಿದೆ.
ಈ ದಾಳಿಯನ್ನು ಖಂಡಿಸಿರುವ ಅವಾಮಿ ಲೀಗ್, “ಅವಾಮಿ ಲೀಗ್‌ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕೆ ಮನೆಗಳಿಗೆ ಬೆಂಕಿ ಹಚ್ಚುವಂತಾಗಿದೆ. ಬಾಂಗ್ಲಾದೇಶವನ್ನು ನವ ಫ್ಯಾಸಿಸಂ ಆವರಿಸುತ್ತಿದೆ” ಎಂದು ಹೇಳಿಕೆ ನೀಡಿದೆ.

ಅವಾಮಿ ಲೀಗ್ ತನ್ನ ಹೇಳಿಕೆಯಲ್ಲಿ, “ಬಾಂಗ್ಲಾದೇಶದ ಖ್ಯಾತ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ ಅವರು ಪಕ್ಷದ ಅಧ್ಯಕ್ಷೆ ಶೇಖ್ ಹಸೀನಾ ಅವರ ಜೊತೆ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ನಿವಾಸದ ಮೇಲೆ ಭೀಕರ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಸುದ್ದಿಗೋಷ್ಠಿಗೂ ಮುನ್ನ ಬಿಎನ್‌ಪಿ, ಇಸ್ಲಾಮಿಸ್ಟ್ ಜಮಾತ್ ಮತ್ತು ಎನ್‌ಸಿಪಿ ಪಕ್ಷಗಳು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಬಹಿರಂಗ ಬೆದರಿಕೆ ಹಾಕಿದ್ದವು. ಸುದ್ದಿಗೋಷ್ಠಿಯ ವರದಿ ಮಾಡಿದರೆ ನ್ಯಾಯಾಂಗವನ್ನು ಬಳಸಿಕೊಂಡು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದವು” ಎಂದು ಆರೋಪಿಸಿದೆ.
“ಪ್ರಜಾಪ್ರಭುತ್ವ ಸ್ಥಾಪನೆಯ ಹೆಸರಿನಲ್ಲಿ ಅವಾಮಿ ಲೀಗ್ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಸಂಘಟಿತ ದಾಳಿಗಳು ಹಾಗೂ ಹಿಂಸಾಚಾರಕ್ಕೆ ಈ ದಾಳಿ ಮತ್ತೊಂದು ಸಾಕ್ಷಿಯಾಗಿದೆ. ಇದು ಫ್ಯಾಸಿಸಂನ ಲಕ್ಷಣಗಳನ್ನು ತೋರಿಸುತ್ತದೆ” ಎಂದು ಅವಾಮಿ ಲೀಗ್ ಹೇಳಿದೆ.

ಪ್ರಮುಖ ಸುದ್ದಿ :-   ಬೆಚ್ಚಿಬೀಳಿಸುವ ವಿಡಿಯೋ | ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು ; 12 ಮಂದಿಗೆ ಗಾಯ

‘ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ’: ಶೇಖ್ ಹಸೀನಾ
ಇದೇ ವೇಳೆ, ದೆಹಲಿಯಿಂದ ವರ್ಚುವಲ್ ಮೂಲಕ ಮಾತನಾಡಿದ ಶೇಖ್ ಹಸೀನಾ, ತಾವು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಬಂಧನವಾಗಲಿ ಅಥವಾ ಜೀವಕ್ಕೆ ಅಪಾಯವಾಗಲಿ, ಅದನ್ನು ಎದುರಿಸಲು ಸಿದ್ಧವಿರುವುದಾಗಿ ಅವರು ಹೇಳಿದರು.
“ನನ್ನ ಮರಳುವಿಕೆ ಅಧಿಕಾರಕ್ಕಾಗಿ ಅಲ್ಲ. ಬಾಂಗ್ಲಾದೇಶವನ್ನು ಮತ್ತೆ ಅಭಿವೃದ್ಧಿ, ಜಾತ್ಯತೀತತೆ ಮತ್ತು ಸಮೃದ್ಧಿಯ ಹಾದಿಗೆ ತರುವುದಕ್ಕಾಗಿ” ಎಂದು 78 ವರ್ಷದ ಮಾಜಿ ಪ್ರಧಾನಿ ಹೇಳಿದರು.
ದೇಶಕ್ಕೆ ಮರಳಿದರೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಅರಿವಿದೆ ಎಂದು ಹೇಳಿದ ಹಸೀನಾ, “ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಕೊಲ್ಲಬಹುದು ಎಂಬುದು ನನಗೆ ಗೊತ್ತಿದೆ. ಆದರೆ ನಾನು ನನ್ನ ಜನರೊಂದಿಗೆ ಇರಲು ಮನೆಗೆ ಮರಳುತ್ತೇನೆ. ನಾನು ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ ಮತ್ತು ಹೋಗುತ್ತೇನೆ” ಎಂದು ಹೇಳಿದರು.
2024ರ ಆಗಸ್ಟ್ 5ರಂದು ಬಾಂಗ್ಲಾದೇಶದಲ್ಲಿ ತಿಂಗಳುಗಳ ಕಾಲ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ಬಳಿಕ ಅವರ ಸರ್ಕಾರ ಪತನಗೊಂಡಾಗ ಶೇಖ್ ಹಸೀನಾ ಢಾಕಾದಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು. ಅಂದಿನಿಂದ ಅವರು ಭಾರತದಲ್ಲೇ ವಾಸಿಸುತ್ತಿದ್ದಾರೆ.

ಮಾನವತೆಯ ವಿರುದ್ಧದ ಅಪರಾಧ ಆರೋಪ; ಗಲ್ಲು ಶಿಕ್ಷೆ ತೀರ್ಪು
ಕಳೆದ ನವೆಂಬರ್‌ನಲ್ಲಿ ಢಾಕಾದ ವಿಶೇಷ ನ್ಯಾಯಮಂಡಳಿಯೊಂದು 2024ರ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ವೇಳೆ ಸರ್ಕಾರ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ “ಮಾನವತೆಯ ವಿರುದ್ಧದ ಅಪರಾಧ” ಆರೋಪದಡಿ ಶೇಖ್ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿತ್ತು. ಈ ತೀರ್ಪಿನ ಬಳಿಕ ಬಾಂಗ್ಲಾದೇಶ ಸರ್ಕಾರವು ಭಾರತದಿಂದ ಅವರ ಹಸ್ತಾಂತರಕ್ಕೆ ಹಲವು ಬಾರಿ ಮನವಿ ಮಾಡಿದೆ.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಸೀನಾ, “ಭಯವು ಮನೆಗಳು, ಕೆಲಸದ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರವೇಶಿಸಿದೆ. ಇದು ನಾವು ನಿರ್ಮಿಸಿದ ಬಾಂಗ್ಲಾದೇಶವಲ್ಲ. ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಜನರ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಜನರ ಬೆಂಬಲಕ್ಕೆ ನಿಲ್ಲಬೇಕು” ಎಂದು ಕರೆ ನೀಡಿದರು.

ಪ್ರಮುಖ ಸುದ್ದಿ :-   ಚಂದ್ರನಿಗೆ ಅಪ್ಪಳಿಸಿದ 4000 ಕಿಲೋ ತೂಕದ ಫಾಲ್ಕನ್–9 ರಾಕೆಟ್‌ ಭಾಗ ; 100 ಅಡಿ ಅಗಲ-16 ಅಡಿ ಆಳದ ಕುಳಿ ಆಗಿರುವ ಸಾಧ್ಯತೆ

ಪ್ರತಿಭಟನೆಗಳನ್ನು ಸಂಘಟಿತ ಗುಂಪುಗಳು ಉದ್ದೇಶಪೂರ್ವಕವಾಗಿ ಹಿಂಸಾತ್ಮಕ ರಾಜಕೀಯ ಅಭಿಯಾನವಾಗಿ ಪರಿವರ್ತಿಸಿವೆ ಎಂದು ಹಸೀನಾ ಆರೋಪಿಸಿದರು. “ನನ್ನನ್ನು ನನ್ನ ದೇಶದಿಂದ ದೂರ ಮಾಡಲಾಗಿದೆ, ಆದರೆ ನಾನು ಎಂದಿಗೂ ನನ್ನ ಜನರಿಂದ ಬೇರ್ಪಟ್ಟಿಲ್ಲ” ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೇದ್ ಜಾಯ್ ಸೇರಿದಂತೆ ಹಲವು ಅವಾಮಿ ಲೀಗ್ ನಾಯಕರು ಭಾಗವಹಿಸಿದ್ದರು. ಮಾಜಿ ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧುರಿ ನೌಫೆಲ್ ಕೂಡ ವರ್ಚುವಲ್ ಮೂಲಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಭಾರತದ ಜೊತೆರಾಜತಾಂತ್ರಿಕ ವಿಚಾರವಾದ ಹಸೀನಾ ಸುದ್ದಿಗೋಷ್ಠಿ
ಶೇಖ್ ಹಸೀನಾ ಅವರು ಭಾರತದ ನೆಲದಿಂದ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವುದು ಈಗಾಗಲೇ ರಾಜತಾಂತ್ರಿಕ ವಿಚಾರವಾಗಿ ಪರಿಣಮಿಸಿದೆ. ಈ ವಾರದ ಆರಂಭದಲ್ಲೇ ಬಾಂಗ್ಲಾದೇಶವುಈ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ಭಾರತದಿಂದ ಸ್ಪಷ್ಟೀಕರಣವನ್ನು ಕೇಳಿತ್ತು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement