ದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು !

ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭಾರಿ ರಾಜಕೀಯ ಭೂಕಂಪ ಸಂಭವಿಸಿದೆ.  ಟಿಎಂಸಿ ಪಕ್ಷದ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಟಿಎಂಸಿಯ ಪ್ರತ್ಯೇಕ ಬಣವೊಂದು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದ್ದು, ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದೊಳಗಿನ ಭಿನ್ನಮತ ತೀವ್ರಗೊಳ್ಳುತ್ತಿರುವುದು ಟಿಎಂಸಿ ಸುಪ್ರೀಮೋ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಒತ್ತಡ ತಂದಿಟ್ಟಿದೆ. ಹಿರಿಯ ಟಿಎಂಸಿ ನಾಯಕ ಸುಖೇಂದು ಶೇಖರ ರಾಯ್ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬಿಕ್ಕಟ್ಟು ತಾರಕಕ್ಕೇರಿದೆ.  ದೆಹಲಿಯಲ್ಲಿ ನಡೆದ ಸರಣಿ ಸಭೆಗಳು ಮತ್ತು ರಾಜಕೀಯ ಧ್ರುವೀಕರಣಗಳು ಈಗ ದೊಡ್ಡ ಬಂಡಾಯವಾಗಿ ಮಾರ್ಪಟ್ಟಿವೆ.
ಸುಖೇಂದು ರಾಯ ಭೇಟಿ, ದೆಹಲಿಯಲ್ಲಿ ಹೈ-ವೋಲ್ಟೇಜ್ ಸಭೆಗಳು:
ಮೂಲಗಳ ಪ್ರಕಾರ, ಆರಂಭದಲ್ಲಿ ಟಿಎಂಸಿಯ ಸುಮಾರು 13 ಲೋಕಸಭಾ ಸದಸ್ಯರು ದೆಹಲಿಯಲ್ಲಿ ಸುಖೇಂದು ಶೇಖರ ರಾಯ್ ಅವರನ್ನು ಭೇಟಿಯಾಗಿದ್ದರು. ಇದು ಪಕ್ಷದೊಳಗೆ ಹೊಸ ಮೈತ್ರಿಯ ಮುನ್ಸೂಚನೆಯನ್ನು ನೀಡಿತು. ಇದರ ಬೆನ್ನಲ್ಲೇ, ಇದೇ ಸಂಸದರ ಗುಂಪು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಉಪಸ್ಥಿತರಿದ್ದರು ಎನ್ನಲಾಗಿದ್ದರೂ, ಸಭೆಯಲ್ಲಿ ಭಾಗವಹಿಸಿದವರ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಎನ್‌ಡಿಎ ಒಕ್ಕೂಟಕ್ಕೆ ಬಂಡಾಯ ಸಂಸದರ ಬೆಂಬಲ:
ಈ ಬೆಳವಣಿಗೆಗಳ ನಡುವೆ, ಟಿಎಂಸಿ ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್ ಅವರು ತಾವೂ ಸೇರಿದಂತೆ ಸುಮಾರು 20 ಟಿಎಂಸಿ ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.  “ನಾವು ಬೆಂಗಾಳದ ಚುನಾವಣಾ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ನಮ್ಮ ಮುಂದಿನ ರಾಜಕೀಯ ಹಾದಿಯು ಎನ್‌ಡಿಎ ಜೊತೆಗೆ ಇರಬೇಕು ಎಂದು ನಾವು ನಂಬುತ್ತೇವೆ,” ಎಂದು ದಸ್ತಿದಾರ್ ಸ್ಪಷ್ಟಪಡಿಸಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ, ಈ ರಾಜಕೀಯ ಬೆಳವಣಿಗೆಗಳಲ್ಲಿ ಸಭೆಯಲ್ಲಿ ಪ್ರಸೂನ್ ಬ್ಯಾನರ್ಜಿ (ಹೌರಾ), ಶರ್ಮಿಳಾ ಸರ್ಕಾರ್ (ಬರ್ಧಮಾನ್ ಪುರ್ಬಾ),  ಅರೂಪ್ ಚಕ್ರವರ್ತಿ (ಬಾಕುರಾ), ಕಾಳಿಪಾದ ಸೋರೆನ್ (ಝಾರ್ಗ್ರಾಮ್), ಜಗದೀಶ ಚಂದ್ರ ಬಸುನಿಯಾ (ಕೂಚ್ ಬೆಹಾರ್), ಕಾಕೋಲಿ ಘೋಷ್ ದಸ್ತಿದಾರ್ (ಬಾರಾಸತ್), ಪಾರ್ಥ ಭೌಮಿಕ್ (ಬ್ಯಾರಕ್‌ಪೂರ್), ಬಾಪಿ ಹಲ್ದರ್ (ಮಥುರಾಪುರ), ಶತಾಬ್ದಿ ರಾಯ್ (ಬೀರ್‌ಭೂಮ್), ಅಸಿತ್ ಕುಮಾರ ಮಾಲ್ (ಬೋಲ್ಪುರ್), ಜೂನೆ ಮಲಿಯಾ (ಮೇದಿನಿಪುರ), ಅಬು ತಾಹೇರ್ ಖಾನ್ (ಮುರ್ಷಿದಾಬಾದ್), ಖಲೀಲೂರ್ ರೆಹಮಾನ್ (ಜಂಗೀಪುರ) ಪಾಲ್ಗೊಂಡಿದ್ದರು ಎನ್ನಲಾಗಿದೆ.
ಆದಾಗ್ಯೂ, ಅಲ್ಪಸಂಖ್ಯಾತ ಸಮುದಾಯದ ಹಿನ್ನೆಲೆಯುಳ್ಳ ಸಂಸದರಿಗೆ ಹೊಸ ರಾಜಕೀಯ ಸಂಘಟನೆ ಸೇರುವುದು ಕಷ್ಟವಾಗಬಹುದು ಮತ್ತು ಅವರಲ್ಲಿ ಕೆಲವರು ಅಂತಿಮವಾಗಿ ಮತ್ತೆ ಟಿಎಂಸಿ ಪಕ್ಷಕ್ಕೇ ಮರಳಬಹುದು ಎಂದು ಟಿಎಂಸಿ ಆಂತರಿಕ ವಲಯದ ನಾಯಕರು ವಾದಿಸುತ್ತಿದ್ದಾರೆ.
ಪಕ್ಷದ ವಿರುದ್ಧ ಸುಖೇಂದು ರಾಯ್ ಗಂಭೀರ ಆರೋಪ:
ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ಸುಖೇಂದು ಶೇಖರ ರಾಯ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಸರ್ಕಾರದಲ್ಲಿ “ವ್ಯಾಪಕ ಭ್ರಷ್ಟಾಚಾರ, ಮಹಿಳೆಯರ ಮೇಲಿನ ತೀವ್ರ ದೌರ್ಜನ್ಯ ಮತ್ತು ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯೋಗ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರಮುಖ ವಲಯಗಳಲ್ಲಿ “ತೀವ್ರ ಅರಾಜಕತೆ” ಮನೆಮಾಡಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಬಿಜೆಪಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರಾಯ್, “ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ಮತದಾರರು ಸೀಟುಗಳ ವಿಷಯದಲ್ಲಿ ಸ್ಪಷ್ಟ ಮತ್ತು ನಿರ್ಣಾಯಕ ಜನಾದೇಶವನ್ನು ನೀಡಿದ್ದಾರೆ. ಹೊಸ ಸರ್ಕಾರವು ಈಗಾಗಲೇ ತನ್ನ ಚುನಾವಣಾ ವಾಗ್ದಾನಗಳಿಗೆ ಅನುಗುಣವಾಗಿ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ರಚನೆ ಬೆನ್ನಲ್ಲೇ ಆಘಾತ:
ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಪಕ್ಷದೊಳಗೆ ಆಂತರಿಕ ಕಲಹ ಮತ್ತು ವಲಸೆ ಪರ್ವ ತೀವ್ರಗೊಂಡಿದೆ. ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಟಿಎಂಸಿ ಸಂಸದರು ಬಂಡಾಯ ಏಳುವ ಕೆಲವೇ ಗಂಟೆಗಳ ಮುನ್ನ, ಸೋಮವಾರ ಬೆಳಿಗ್ಗೆ ಟಿಎಂಸಿಯ ರಾಜ್ಯಸಭಾ ಸಂಸದ ಸುಖೇಂದು ಶೇಖರ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತ ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಈ ನಾಟಕೀಯ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ.
ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ:
ಈ ಬೆಳವಣಿಗೆಗಳು ಟಿಎಂಸಿ ಪಕ್ಷದೊಳಗಿನ ತೀವ್ರ ಭಿನ್ನಾಭಿಪ್ರಾಯವನ್ನು ಬಿಚ್ಚಿಟ್ಟಿವೆ. ಮಮತಾ ಬ್ಯಾನರ್ಜಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಮತ್ತು ಹಲವು ಹಿರಿಯ ನಾಯಕರು ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅದೇ ಸಮಯದಲ್ಲಿ ಬಂಡಾಯ ಸಂಸದರು ಕೇಂದ್ರ ಸಚಿವ ಹಾಗೂ ಬಿಜೆಪಿಯ ಪಶ್ಚಿಮ ಬಂಗಾಳ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಅವರ ಮೋತಿಲಾಲ್ ನೆಹರು ಮಾರ್ಗದ ನಿವಾಸದಲ್ಲಿ ಜಮಾಯಿಸಿದ್ದರು.
ಮೂಲಗಳ ಪ್ರಕಾರ, ರಾಜೀನಾಮೆ ನೀಡಿರುವ ಸುಖೇಂದು ಶೇಖರ ರಾಯ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಮ್ಮುಖದಲ್ಲಿ ಸುಮಾರು 20 ಸಂಸದರು ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆಯ ಟಿಎಂಸಿ ಶಾಸಕಾಂಗ ಪಕ್ಷದಲ್ಲೂ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾರಿ ಬಂಡಾಯ ನಡೆದಿತ್ತು. ಪಕ್ಷದ 80 ಶಾಸಕರ ಪೈಕಿ 58 ಶಾಸಕರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದ ರಿತಬ್ರತಾ ಬ್ಯಾನರ್ಜಿ ಅವರನ್ನು ಸ್ಪೀಕರ್ ರಥೀಂದ್ರ ಬೋಸ್ ಅವರು ಅಧಿಕೃತವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾನ್ಯ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಸಂಸತ್ತಿನಲ್ಲೂ ಬಂಡಾಯ ನಡೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement