ಟಿ20 ವಿಶ್ವಕಪ್ 2024 : ರೋಚಕ ಪಂದ್ಯದಲ್ಲಿ ಅಮೆರಿಕಕ್ಕೆ 5 ರನ್‌ ದಂಡ, ಸುಲಭವಾಯ್ತು ಭಾರತ ಗೆಲುವು..! ಅದು ಹೇಗೆ.. ಏನಿದು ನಿಯಮ..?

ಭಾರತ ತಂಡವು ಸತತ ಮೂರು ಗೆಲುವಿನೊಂದಿಗೆ ಟಿ20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಸೂಪರ್​-8ರ ಹಂತಕ್ಕೆ ಪ್ರವೇಶಿಸಿದೆ. ರೋಹಿತ್​ ಶರ್ಮಾ ನಾಯಕತ್ವದ ಭಾರತದ ತಂಡವು ಅಮೆರಿಕ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ದಾಖಲಿಸಿದ ನಂತರ ಸೂಪರ್​-8 ಹಂತಕ್ಕೆ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಮೆರಿಕ ಮಾಡಿದ ತಪ್ಪಿನಿಂದಾಗಿ ಪೆನಾಲ್ಟಿ ರೂಪದಲ್ಲಿ ಭಾರತದ ತಂಡಕ್ಕೆ ಉಚಿತವಾಗಿ 5 ರನ್‌ಗಳು ಸೇರ್ಪಡೆಯಾದವು. ​ಅದು ಹೇಗೆ ಎಂಬ ಬಗ್ಗೆ ಆರಂಭದಲ್ಲಿ ಕೆಲಕಾಲ ಗೊಂದಲವಾದರೂ ಈ ಅನಿರೀಕ್ಷಿತ 5 ರನ್‌ಗಳು ಭಾರತವು ನಿಗದಿತ 111 ರನ್​ ಗುರಿಯನ್ನು ತಲುಪಲು ಅನುಕೂಲವಾಐಇತು. ಭಾರತದ ತಂಡವು 7 ವಿಕೆಟ್​ಗಳ ನಷ್ಟಕ್ಕೆ ತಲುಪಿ ಗೆಲುವಿನ ನಗೆ ಬೀರಿತು.
ಪಂದ್ಯದ 15 ಓವರ್‌ಗಳ ಅಂತ್ಯಕ್ಕೆ ಭಾರತಕ್ಕೆ 30 ಎಸೆತಗಳಲ್ಲಿ 35 ರನ್‌ಗಳ ಅಗತ್ಯವಿತ್ತು. ಅಮೆರಿಕ ತಂಡವು 16ನೇ ಓವರ್‌ ಆರಂಭಿಸುವ ಮೊದಲು ನಿರ್ಣಾಯಕ ಘಟ್ಟದಲ್ಲಿ, ಅಂಪೈರ್ ಭಾರತದ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡಿದರು.

ಯಾಕೆಂದರೆ ಓವರ್ ಆರಂಭಿಸಲು ಅಮೆರಿಕ ತಂಡವು ತಡ ಮಾಡಿತ್ತು. ಒಂದು ಓವರ್‌ ಮುಗಿದ ನಂತರ ಮತ್ತೊಂದು ಓವರ್‌ ಎಸೆಯುವುದನ್ನು 60 ಸೆಕೆಂಡುಗಳ ಒಳಗೆ ಆರಂಭಿಸಬೇಕಿತ್ತು. ಆದರೆ ವಿಳಂಬ ಮಾಡಿದ್ದರಿಂದ ಅಮೆರಿಕ ತಂಡ 5 ರನ್‌ಗಳ ದಂಡಕ್ಕೆ ಗುರಿಯಾಯಿತು. ಈ ಪಂದ್ಯದಲ್ಲಿ ಸಮಯಮಿತಿ ಮೀರು ಎರಡು ಸಲ ತಡ ಮಾಡಿದ್ದ ಅಮೆರಿಕ ತಂಡವು​ 16ನೇ ಓವರ್‌ ಎಸೆಯುವ ವೇಳೆ ಮೂರನೇ ಬಾರಿಗೆ ತಡಮಾಡಿದ್ದರಿಂದ ನಿಯಮದ ಪ್ರಕಾರ ದಂಡ ವಿಧಿಸಲಾಯಿತು. ಕಳೆದ ವರ್ಷ ಐಸಿಸಿ ಜಾರಿಗೆ ತಂದ ಹೊಸ ನಿಯಮದಂತೆ ಐದು ಪೆನಾಲ್ಟಿ ರನ್‌ ಗಳನ್ನು ಬ್ಯಾಟ್‌ ಮಾಡುತ್ತಿದ್ದ ತಂಡಕ್ಕೆ ನೀಡಲಾಯಿತು. ಈ ನಿಯಮವನ್ನು ಸ್ಟಾಪ್ ಕ್ಲಾಕ್​ ರೂಲ್ (stop-clock rule)​ ಎಂದು ಕರೆಯಲಾಗುತ್ತದೆ.
ಟಿ 20 ವಿಶ್ವಕಪ್‌ 2024ರಲ್ಲಿ ಬುಧವಾರ ಭಾರತ-ಅಮೆರಿಕದ ನಡುವೆ ನಡೆದ ಪಂದ್ಯವು ಐಸಿಸಿ (ICC) ಸ್ಟಾಪ್ ಕ್ಲಾಕ್​ ರೂಲ್ ನಿಯಮದಂತೆ ಪೆನಾಲ್ಟಿ ವಿಧಿಸಿದ ಮೊದಲ ಪಂದ್ಯವಾಗಿದೆ.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸ್ಟಾಪ್ ಕ್ಲಾಕ್ ರೂಲ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ..?
ನಿಯಮದ ಹೆಸರೇ ಸೂಚಿಸುವಂತೆ, ಸಮಯದ ಮಿತಿಯೊಳಗೆ ಪಂದ್ಯವನ್ನು ಪೂರ್ಣಗೊಳಿಸಲು ಅನುಕೂಲವಾಗಲು ಈ ನಿಯಮ ಜಾರಿಗೆ ತರಲಾಗಿದೆ.
ಪುರುಷರ ಏಕದಿನದ ಪಂದ್ಯಗಳು (ODI) ಮತ್ತು T20 ಪಂದ್ಯಗಳಲ್ಲಿ ಫೀಲ್ಡಿಂಗ್ ತಂಡವು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಷರತ್ತು 41.9 ರ ಅಡಿಯಲ್ಲಿ ಈ ನಿಯಮವನ್ನು ಸೇರಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟಾಪ್-ಕ್ಲಾಕ್ ನಿಯಮ ಜಾರಿಗೆ ತರಲಾಗಿದೆ. ಬಳಿಕ ಏಪ್ರಿಲ್ 2024ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದು ಜಾರಿಗೆ ಬಂದಿದೆ. ಓವರ್‌ ಮುಗಿದ ನಂತರ ತಂಡಗಳು ಮುಂದಿನ ಓವರ್ ಪ್ರಾರಂಭಿಸುವಾಗ 60 ಸೆಕೆಂಡ್​ಗಳ ಕಾಲಾವಕಾಶ ಮಾತ್ರ ನೀಡಲಾಗುತ್ತದೆ. ಫೀಲ್ಡಿಂಗ್ ತಂಡವು ಹಿಂದಿನ ಓವರ್‌ ಮುಗಿದ 60 ಸೆಕೆಂಡ್‌ಗಳ ಒಳಗೆ ಮುಂದಿನ ಓವರ್ ಪ್ರಾರಂಭಿಸಬೇಕು.

60 ಸೆಕೆಂಡುಗಳ ಸಮಯವನ್ನು ಗ್ರೌಂಡ್‌ ಮೇಲಿರುವ ಎಲೆಕ್ಟ್ರಾನಿಕ್ ಗಡಿಯಾರದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಅವಧಿಯನ್ನು ಮೀರಿ ಸಮಯ ವ್ಯಯಿಸಿದರೆ, ಎರಡು ಬಾರಿ ವಾರ್ನಿಂಗ್​ ಮಾಡಲಾಗುತ್ತದೆ. ಬಳಿಕವೂ ಸಮಯ ವ್ಯಯಿಸಿದರೆ ಫೀಲ್ಡಿಂಗ್‌ ತಂಡವು ಪೆನಾಲ್ಟಿಗೆ ಗುರಿಯಾಗಬೇಕಾಗುತ್ತದೆ. ಮುಂದಿನ ಪ್ರತಿಯೊಂದು ಉಲ್ಲಂಘನೆಗೂ ಕೂಡ 5 ರನ್ ಪೆನಾಲ್ಟಿ ವಿಧಿಸುತ್ತ ಹೋಗಲಾಗುತ್ತದೆ. ಹೀಗೆ ಈ ಸ್ಟಾಪ್-ಕ್ಲಾಕ್ ನಿಯಮದಡಿ ಅಮೆರಿಕವು 5 ರನ್​ ದಂಡಕ್ಕೆ ಗುರಿಯಾದ ಮೊದಲ ತಂಡವಾಗಿದೆ. T20 ವಿಶ್ವಕಪ್‌ನಿಂದ ಎಲ್ಲಾ ವೈಟ್-ಬಾಲ್ ಪಂದ್ಯಗಳಿಗೆ ಇದನ್ನು ಕಡ್ಡಾಯಗೊಳಿಸಲಾಯಿತು.
ಅಮೆರಿಕ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಮೂರು ವಿಕೆಟ್‌ ನಷ್ಟಕ್ಕೆ 111 ರನ್ ಗಳ ನಿಗದಿತ ಗುರಿ ತಲುಪಿದೆ. ಸೂರ್ಯಕುಮಾರ ಯಾದವ್ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಪಂದ್ಯದಲ್ಲಿ 9 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement