ದಾವಣಗೆರೆ: ಅಪಘಾತದಲ್ಲಿ ಗಾಯಗೊಂಡು ರಾತ್ರಿಯಿಡೀ ರಸ್ತೆ ಬದಿಯಲ್ಲಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ದಾವಣಗೆರೆ ತಾಲೂಕಿನ ಕೊಕ್ಕನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಸೋಮವಾರ ರಾತ್ರಿ ಹೆದ್ದಾರಿ ದಾಟುತ್ತಿದ್ದ ವೇಳೆ ರಭಸವಾಗಿ ಬಂದ ಕಾರೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರತೆ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು, ಅದರ ಕಣ್ಣು ಹಾಗೂ ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಘಟನೆ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲಿಂಗ್ ಸಿಬ್ಬಂದಿಯ ಗಮನಕ್ಕೆ ಬಂದ ತಕ್ಷಣ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ಅಪಘಾತದಿಂದ ಗಾಯಗೊಂಡಿದ್ದ ಚಿರತೆಗೆ ಚಿರತೆ ಸರಿಯಾಗಿ ಎದ್ದು ನಿಲ್ಲಲು ಹಾಗೂ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅದು ಆಕ್ರಮಣಕಾರಿ ವರ್ತನೆ ತೋರುತ್ತಿತ್ತು. ಪರಿಸ್ಥಿತಿಯನ್ನು ಗಮನಿಸಿ ಅದಕ್ಕೆ ಚಿಕಿತ್ಸೆ ನೀಡುವ ಉದ್ದೇಶದಿಂದ ಅದನ್ನು ಸೆರೆಹಿಡಿಯಲು ಮುಂದಾದರು. ಇದಕ್ಕಾಗಿ ಹಂಪಿಯಿಂದ ವನ್ಯಜೀವಿ ವೈದ್ಯರ ತಂಡವನ್ನು ಕರೆಸಲಾಗಿತ್ತು.
ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವೈದ್ಯರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಮೊದಲ ಅರಿವಳಿಕೆ ಇಂಜೆಕ್ಷನ್ ನೀಡಿದರು. ನಂತರ ಬಳಿಕ ಅದನ್ನು ರಕ್ಷಿಸಲು ಮುಂದಾದರು. ಈ ವೇಳೆ ಚಿರತೆ ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಅರಣ್ಯ ರಕ್ಷಕರೊಬ್ಬರಿಗೆ ಕೈ, ಕಾಲು ಹಾಗೂ ಎದೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಚಿರತೆಗೆ ಎರಡನೇ ಬಾರಿಗೆ ಅರಿವಳಿಕೆ ನೀಡಲಾಗಿದ್ದು, ಅದನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ನಂತರ ಚಿಕಿತ್ಸೆ ನೀಡಲು ಚಿರತೆಯನ್ನು ಕರೆದೊಯ್ಯಲಾಗಿದೆ.
ಹಂಪಿಯಿಂದ ಆಗಮಿಸಿದ ವೈದ್ಯರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮೊದಲ ಅರಿವಳಿಕೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಲು ಯತ್ನಿಸಿದಾಗ, ಸಿಬ್ಬಂದಿಯ ಮೇಲೆಯೇ ಚಿರತೆ ದಾಳಿ ಮಾಡಿದೆ. ಇದರಿಂದ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡನೇ ಬಾರಿಗೆ ಅರಿವಳಿಕೆ ನೀಡಿದ ಬಳಿಕ ಚಿರತೆಯನ್ನು ಸೆರೆಹಿಡಿದು, ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ಎಸಿಎಫ್ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ನುರಿತ ವನ್ಯಜೀವಿ ವೈದ್ಯರು ಲಭ್ಯವಿಲ್ಲದ ಕಾರಣ ಹಂಪಿಯಿಂದ ವನ್ಯಜೀವಿ ವೈದ್ಯರ ತಂಡವನ್ನು ಕರೆಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ದಾವಣಗೆರೆ ತಾಲೂಕಿನ ಆನಗೋಡಿನಿಂದ ಕೊಕ್ಕನೂರು ಗ್ರಾಮದವರೆಗೆ ಕಾಡುಪ್ರಾಣಿಗಳ ಸಂಚಾರವಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸುವಂತೆ ಸೂಚಿಸುವ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ವಾಹನ ಸವಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


ನಿಮ್ಮ ಕಾಮೆಂಟ್ ಬರೆಯಿರಿ