ಪಾಕ್‌ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಣ್ಣನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿ ; ವಿಡಿಯೋ ವೈರಲ್‌

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಮತ್ತು ಅದರ ರಾಜಕೀಯ ಮುಖವಾಣಿ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ನಾಯಕರು ಅಲ್ಲಿ ಕಾಣಿಸಿಕೊಂಡಿರುವುದು ಪಾಕಿಸ್ತಾನದಲ್ಲಿ ಉಗ್ರರಿಗೆ ಸುರಕ್ಷಿತ ಆಶ್ರಯ ದೊರೆಯುತ್ತಿದೆ ಎಂಬ ಆತಂಕವನ್ನು ಮತ್ತೊಮ್ಮೆ ಹೆಚ್ಚಿಸಿದೆ.
ಲಷ್ಕರ್-ಎ-ತೊಯ್ಬಾಯ ರಾಜಕೀಯ ಪ್ರತಿನಿಧಿ ಸಂಘಟನೆಯೆಂದು ಪರಿಗಣಿಸಲ್ಪಡುವ ಪಾಕಿಸ್ತಾನ್ ಮುಸ್ಲಿಂ ಲೀಗ್ (PMML) ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, 26/11 ಮುಂಬೈ ಉಗ್ರ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದನ ಆಪ್ತ ಸಹಚರರು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಸಹೋದರ ಶಾಹಿದ್ ಅಖ್ತರ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಹಫೀಜ್ ಸಯೀದ್ ಲಷ್ಕರ್-ಎ-ತೊಯ್ಬಾದ ಸ್ಥಾಪಕರಾಗಿದ್ದಾರೆ.

ಬಹಿರಂಗವಾದ ಚಿತ್ರಗಳು ಮತ್ತು ವಿಡಿಯೊಗಳ ಪ್ರಕಾರ, ಪಾಕಿಸ್ತಾನ್ ಮಾರ್ಕಝಿ ಮುಸ್ಲಿಂ ಲೀಗ್(PMML)ನ ಇಸ್ಲಾಮಾಬಾದ್ ಮುಖ್ಯಸ್ಥ ಇನಾಮ್-ಉರ್-ರೆಹ್ಮಾನ್ ಕಂಬೋಹ್, ಉಪ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ತೂರ್, ವಲಯ ಪ್ರಧಾನ ಕಾರ್ಯದರ್ಶಿ ಹಫೀಜ್ ಉಮರ್, ಖಿದ್ಮತ್ ಸಮಿತಿಯ ಅಧ್ಯಕ್ಷ ಅಮ್ಜದ್ ಭಟ್ಟಿ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಹಾಜರಿದ್ದರು.

ಪಾಕಿಸ್ತಾನದ ಮಾಧ್ಯಮಗಳ ವರದಿಗಳ ಪ್ರಕಾರ, ಶಾಹಿದ್ ಅಖ್ತರ್ ಮೂರು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಕುಟುಂಬದಲ್ಲಿ ಸಂಭವಿಸಿದ ಈ ದುಃಖದ ಘಟನೆಯನ್ನು ಶೋಯೆಬ್ ಅಖ್ತರ್ ದೃಢಪಡಿಸಿದ್ದರು. ಆದರೆ, ತಮ್ಮ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ರಾಜಕೀಯ ಪ್ರತಿನಿಧಿ ಸಂಘಟನೆಯ ನಾಯಕರು ಭಾಗವಹಿಸಿರುವುದರ ಬಗ್ಗೆ ವ್ಯಕ್ತವಾಗಿರುವ ಟೀಕೆಗಳಿಗೆ ಶೋಯೆಬ್ ಅಖ್ತರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಯ ಕುಟುಂಬದ ಅಂತ್ಯಕ್ರಿಯೆಯಲ್ಲಿ ಉಗ್ರ ಸಂಘಟನೆಗಳಿಗೆ

ಸಂಬಂಧಿಸಿದ ನಾಯಕರು ಹಾಜರಾಗಿರುವ ಘಟನೆ, ಪಾಕಿಸ್ತಾನವು ಉಗ್ರರ ಪ್ರಮುಖ ಸಂಚುಕೋರರಿಗೆ ರಕ್ಷಣೆ ನೀಡುತ್ತಿದೆ ಮತ್ತು ಅವರು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುತ್ತಿದೆ ಎಂಬ ಭಾರತದ ಆತಂಕಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತವು ಹಲವು ದಶಕಗಳಿಂದ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದ ತೊಂದರೆ ಎದುರಿಸುತ್ತಿದ್ದು, ಉಗ್ರ ಚಟುವಟಿಕೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಆರೋಪಿಸುತ್ತ, ಈ ವಿಷಯವನ್ನು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತ ಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement