ಕೃತಕ ಬುದ್ಧಿಮತ್ತೆ (AI) ಕ್ಷೇತ್ರವು ಮಾನವ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪಿದೆ. ಮಾನವ ಮೆದುಳಿನ ಬಹುತೇಕ ಎಲ್ಲ ಜ್ಞಾನಾತ್ಮಕ ಸಾಮರ್ಥ್ಯಗಳನ್ನು ಹೊಂದಿರುವ ಕೃತಕ ಸಾಮಾನ್ಯ ಬುದ್ಧಿಮತ್ತೆ (Artificial General Intelligence–AGI) ಇನ್ನೇನು ಕೆಲವೇ ವರ್ಷಗಳಲ್ಲಿ ವಾಸ್ತವವಾಗುವ ಸಾಧ್ಯತೆಯಿದೆ. ಹೀಗಾಗಿ, ಈ ತಂತ್ರಜ್ಞಾನವು ಮಾನವಕುಲದ ಹಿತಕ್ಕಾಗಿ ಕಾರ್ಯನಿರ್ವಹಿಸುವಂತೆ ಈಗಿನಿಂದಲೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಗೂಗಲ್ ಡೀಪ್‌ಮೈಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆಮಿಸ್ ಹಸ್ಸಾಬಿಸ್ ಹೇಳಿದ್ದಾರೆ.
ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಈ ಕುರಿತು ಬರೆದಿರುವ ಹಸ್ಸಾಬಿಸ್, ಎಜಿಐ (AGI) ಅನ್ನು “ಮಾನವ ಮೆದುಳು ಹೊಂದಿರುವ ಎಲ್ಲ ಜ್ಞಾನಾತ್ಮಕ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವ್ಯವಸ್ಥೆ” ಎಂದು ವ್ಯಾಖ್ಯಾನಿಸಿದ್ದಾರೆ. ಇದೇ ವರ್ಷದ ಜೂನ್‌ನಲ್ಲಿ ಅವರು ಎಜಿಐ ಮೂರರಿಂದ ನಾಲ್ಕು ವರ್ಷಗಳಲ್ಲಿ ಸಾಕಾರವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ, “ಎಜಿಐ ಇನ್ನೇನು ಕೆಲವೇ ವರ್ಷಗಳ ದೂರದಲ್ಲಿದೆ” ಎಂದು ಪುನರುಚ್ಚರಿಸಿದ್ದಾರೆ.
ಎಐ ಸಂಬವನೀಯ ಅಪಾಯಗಳಿಗೆ ಇನ್ನೂ ಸಮರ್ಪಕ ಪರಿಹಾರ ಇಲ್ಲ
ಎಜಿಐ ವಾಸ್ತವ ಆಗುವುದು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅದರೊಂದಿಗೆ ಉದ್ಭವಿಸಬಹುದಾದ ಅಪಾಯಗಳನ್ನು ಎದುರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹಸ್ಸಾಬಿಸ್ ಎಚ್ಚರಿಸಿದ್ದಾರೆ. ಆದರೆ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಎಐ ಸುರಕ್ಷತೆಗಿಂತ ಕಂಪನಿಗಳು ಮತ್ತು ರಾಷ್ಟ್ರಗಳ ನಡುವಿನ ಎಐ ಪೈಪೋಟಿಯೇ ಹೆಚ್ಚು ಗಮನ ಸೆಳೆಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
“ಎಜಿಐ ವಾಸ್ತವವಾಗುವುದು ಸಮೀಪಿಸುತ್ತಿರುವಂತೆ ಹೊಸ ರೀತಿಯ ಅಪಾಯಗಳೂ ಎದುರಾಗಲಿವೆ. ಈಗಾಗಲೇ ಅತ್ಯಾಧುನಿಕ ಎಐ ಮಾದರಿಗಳು ಸೈಬರ್ ಭದ್ರತೆಗೆ ಸವಾಲುಗಳನ್ನು ಒಡ್ಡಿವೆ. ಮುಂದಿನ ದಿನಗಳಲ್ಲಿ ಅಣ್ವಸ್ತ್ರ ಭದ್ರತೆ ಹಾಗೂ ಜೈವಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ಅಪಾಯಗಳೂ ಎದುರಾಗುವ ಸಾಧ್ಯತೆಯಿದೆ. ಎಐ ಸಾಮರ್ಥ್ಯಗಳು ವೇಗವಾಗಿ ವಿಸ್ತರಿಸುತ್ತಿರುವುದರಿಂದ ಇಂತಹ ಸಂಭವನೀಯ ಅಪಾಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ತನ್ನ ಸಾಮರ್ಥ್ಯ ತಾನೇ ಹೆಚ್ಚಿಸಿಕೊಂಡು ಮುನ್ನಡೆಯುತ್ತಿರುವ ಎಐ ಬಗ್ಗೆ ಆತಂಕ
ಎಐ ಯಾವ ದಿಕ್ಕಿನಲ್ಲಿ ಬೆಳೆಯಲಿದೆ ಎಂಬುದರ ಬಗ್ಗೆ ಉತ್ಸಾಹ ಮತ್ತು ಆತಂಕ ಎರಡನ್ನೂ ಸೃಷ್ಟಿಸುವ ಅಜ್ಞಾತ ಕ್ಷೇತ್ರವಾಗಿದೆ. ಈ ವಿಚಾರದಲ್ಲಿ ಎಐ ಕ್ಷೇತ್ರದ ಬಹುತೇಕ ತಜ್ಞರು ಹಾಗೂ ಈ ತಂತ್ರಜ್ಞಾನದ ಮುಂಚೂಣಿಯ ವಿಜ್ಞಾನಿಗಳ ಅಭಿಪ್ರಾಯವೂ ಇದೇ ಆಗಿದೆ.
“ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ (Agentic) ಹಾಗೂ ನಿರಂತರವಾಗಿ ತನ್ನ ಸಾಮರ್ಥ್ಯವನ್ನು ತಾನೇ ಹೆಚ್ಚಿಸಿಕೊಳ್ಳುವ (Recursively Self-improving) ಎಐ ವ್ಯವಸ್ಥೆಗಳ ಮೇಲೆ ಮಾನವ ನಿಯಂತ್ರಣವನ್ನು ಉಳಿಸಿಕೊಳ್ಳಲು ಬಲಿಷ್ಠ ಸುರಕ್ಷತಾ ವ್ಯವಸ್ಥೆಗಳು ಅಗತ್ಯವಾಗುತ್ತವೆ. ಜೊತೆಗೆ, ಈಗ ಊಹಿಸಲಾಗದ ಹೊಸ ಸವಾಲುಗಳೂ ಭವಿಷ್ಯದಲ್ಲಿ ಎದುರಾಗಲಿವೆ” ಎಂದು ಹಸ್ಸಾಬಿಸ್ ಹೇಳಿದ್ದಾರೆ.
ಈಗಾಗಲೇ ಮಾನವ ಹಸ್ತಕ್ಷೇಪವಿಲ್ಲದೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಇನ್ನಷ್ಟು ಶಕ್ತಿಶಾಲಿ ಎಐ ವ್ಯವಸ್ಥೆಗಳನ್ನು ರೂಪಿಸುವ ಸಾಧ್ಯತೆಯ ಬಗ್ಗೆ ಆಂಥ್ರೋಪಿಕ್ ಸಂಸ್ಥೆಯ ಸಂಶೋಧನೆಯೂ ಎಚ್ಚರಿಕೆ ನೀಡಿದೆ.
ಕ್ಲೌಡ್ (Claude) ಎಐ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಆಂಥ್ರೋಪಿಕ್ ಸಂಸ್ಥೆಯ ಸಿಇಒ ಡಾರಿಯೊ ಅಮೊಡೆ ಕೂಡ ಎಐ ಅಪಾಯಗಳ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಎಐ ಮಾದರಿಗಳ ಆಂತರಿಕ ಕಾರ್ಯವಿಧಾನವನ್ನು ತಾವೇ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ ಎಂದು ಒಪ್ಪಿಕೊಂಡಿರುವ ಅವರು, ಎಐ ಅಭಿವೃದ್ಧಿಗೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಸುರಕ್ಷತಾ ನಿಯಮಗಳು ಅಗತ್ಯವೆಂದು ಆಗ್ರಹಿಸಿದ್ದಾರೆ.
“ಎಐಗೆ ಸಂಬಂಧಿಸಿದ ತಾಂತ್ರಿಕ ಅಪಾಯಗಳನ್ನು ನಾವು ಒಟ್ಟಾಗಿ ಎದುರಿಸಿ ನಿಯಂತ್ರಿಸಬಹುದು ಎಂಬ ವಿಶ್ವಾಸ ನನಗಿದೆ. ಆದರೆ ಅದಕ್ಕಾಗಿ ಅಗತ್ಯವಾದ ಸಮಯ ಮತ್ತು ಅವಕಾಶವನ್ನು ನಾವು ಪಡೆದುಕೊಳ್ಳಬೇಕು. ಪ್ರಸ್ತುತ ಎಐ ಕ್ಷೇತ್ರವೂ ಹಾಗೂ ಸಮಾಜವೂ ಅದಕ್ಕೆ ಬೇಕಾದಷ್ಟು ಅವಕಾಶ ನೀಡುತ್ತಿಲ್ಲ” ಎಂದು ಹಸ್ಸಾಬಿಸ್ ಹೇಳಿದ್ದಾರೆ.
ಅಮೆರಿಕ ನೇತೃತ್ವದಲ್ಲಿ ಜಾಗತಿಕ ಎಐ ನಿಯಂತ್ರಣ ಸಂಸ್ಥೆ ಬರಲಿ
ಎಐ ಅಭಿವೃದ್ಧಿಗೆ ಮೇಲ್ವಿಚಾರಣೆ ನಡೆಸಲು ಅಮೆರಿಕದ ನೇತೃತ್ವದಲ್ಲಿ ಜಾಗತಿಕ ನಿಯಂತ್ರಣ ಸಂಸ್ಥೆಯನ್ನು ತುರ್ತಾಗಿ ರಚಿಸಬೇಕೆಂದು ಹಸ್ಸಾಬಿಸ್ ಪ್ರಸ್ತಾಪಿಸಿದ್ದಾರೆ.
ಅಮೆರಿಕದ ವಾಲ್ ಸ್ಟ್ರೀಟ್ ಬ್ರೋಕರೇಜ್ ಸಂಸ್ಥೆಗಳನ್ನು ಫೆಡರಲ್ ಮೇಲ್ವಿಚಾರಣೆಯಡಿ ನಿಯಂತ್ರಿಸುವ FINRA (Financial Industry Regulatory Authority) ಮಾದರಿಯಲ್ಲೇ ಎಐ ನಿಯಂತ್ರಣ ಸಂಸ್ಥೆಯನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ಸಂಸ್ಥೆಯಲ್ಲಿ ಪ್ರಮುಖ ತಾಂತ್ರಿಕ ತಜ್ಞರು ಕಾರ್ಯನಿರ್ವಹಿಸಬೇಕು. ಇದರ ವೆಚ್ಚವನ್ನು ಮುಖ್ಯವಾಗಿ ಎಐ ಉದ್ಯಮವೇ ಭರಿಸಬೇಕು. ಜೊತೆಗೆ, ಅತ್ಯಾಧುನಿಕ ಎಐ ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಅವು ಕಡ್ಡಾಯವಾಗಿ ಪೂರೈಸಬೇಕಾದ ಸುರಕ್ಷತಾ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯನ್ನು ಈ ಸಂಸ್ಥೆಗೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಅವರ ಯೋಜನೆಯ ಪ್ರಕಾರ, ಆರಂಭದಲ್ಲಿ ಎಐ ಕಂಪನಿಗಳು ತಮ್ಮ ಅತ್ಯಾಧುನಿಕ ಮಾದರಿಗಳನ್ನು ಬಿಡುಗಡೆ ಮಾಡುವ 30 ದಿನಗಳ ಮುಂಚಿತವಾಗಿ ಸ್ವಯಂಪ್ರೇರಿತವಾಗಿ ಪರಿಶೀಲನೆಗೆ ಸಲ್ಲಿಸಬೇಕು. ಈ ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹವಾಗಿದೆ ಎಂಬುದು ಸಾಬೀತಾದ ಬಳಿಕ ಅದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಮುಂದೆ ಏನಾಗಲಿದೆ ಎಂಬುದನ್ನು ಜಗತ್ತಿನಲ್ಲಿ ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಜ್ಞರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಇಂತಹ ಅನಿಶ್ಚಿತತೆ ಮತ್ತು ದೊಡ್ಡ ಸವಾಲಿನ ಸಂದರ್ಭದಲ್ಲಿ ಎಚ್ಚರಿಕೆಯ ಆಶಾವಾದದೊಂದಿಗೆ ಮುಂದುವರಿಯುವುದೇ ಅತ್ಯಂತ ಸೂಕ್ತ ಮಾರ್ಗ,” ಎಂದು ಹಸ್ಸಾಬಿಸ್ ಹೇಳಿದ್ದಾರೆ.
ಅಮೆರಿಕ ಮೊದಲ ಹೆಜ್ಜೆ ಇಡಲಿ
ಆರ್ಥಿಕ ಹಾಗೂ ತಾಂತ್ರಿಕ ಸಾಮರ್ಥ್ಯದ ದೃಷ್ಟಿಯಿಂದ ಈ ಜಾಗತಿಕ ನಿಯಂತ್ರಣ ವ್ಯವಸ್ಥೆಗೆ ಅಮೆರಿಕವೇ ಮೊದಲ ಹೆಜ್ಜೆ ಇಡಲು ಸೂಕ್ತ ದೇಶವಾಗಿದೆ ಎಂದು ಹಸ್ಸಾಬಿಸ್ ಹೇಳಿದ್ದಾರೆ.
ಅಮೆರಿಕದ ನೇತೃತ್ವದಲ್ಲಿ ಆರಂಭವಾಗುವ ಈ ಪ್ರಯತ್ನವು ಅತ್ಯಾಧುನಿಕ ಸಾಮಾನ್ಯ ಉದ್ದೇಶದ ಎಐ ಮಾದರಿಗಳಾದ ಫ್ರಾಂಟಿಯರ್ ಎಐ (Frontier AI) ಕುರಿತ ಜಾಗತಿಕ ಮಾನದಂಡಗಳನ್ನು ರೂಪಿಸಲು ಭದ್ರ ನೆಲೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.
“ಈ ತಂತ್ರಜ್ಞಾನವು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುವುದರಿಂದ, ಗಂಭೀರ ಅಪಾಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಜಾಗತಿಕ ಒಮ್ಮತ ನಿರ್ಮಾಣವಾಗಬೇಕು. ಜೊತೆಗೆ, ಎಐ ನೀಡುವ ಅವಕಾಶಗಳ ಲಾಭ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಎಜಿಐ ಮಾನವಕುಲಕ್ಕೆ ಸುವರ್ಣಯುಗ ತರಬಹುದು
ಎಜಿಐ ಕುರಿತು ಅಪಾರ ಉತ್ಸಾಹ ಮತ್ತು ಅನಿಶ್ಚಿತತೆ ಎರಡೂ ಇರುವುದನ್ನು ಒಪ್ಪಿಕೊಂಡಿರುವ ಹಸ್ಸಾಬಿಸ್, “ಭವಿಷ್ಯ ಇನ್ನೂ ಬರೆಯಲ್ಪಟ್ಟಿಲ್ಲ. ಎಜಿಐ ಬರುವ ಮುನ್ನ ನಮಗೆ ದೊರೆತಿರುವ ಈ ಅಮೂಲ್ಯ ಸಮಯವನ್ನು ಮಾನವಕುಲದ ಹಿತಕ್ಕಾಗಿ ಬಳಸಿಕೊಳ್ಳಬೇಕು,” ಎಂದು ಕರೆ ನೀಡಿದ್ದಾರೆ.
“ನಾವು ಈಗ ತೆಗೆದುಕೊಳ್ಳುವ ನಿರ್ಧಾರಗಳೇ ನಾಗರಿಕತೆಯ ಮುಂದಿನ ಹಂತವನ್ನು ನಿರ್ಧರಿಸಲಿವೆ. ಎಜಿಐಯನ್ನು ಸುರಕ್ಷಿತವಾಗಿ ಜಗತ್ತಿಗೆ ಪರಿಚಯಿಸಿದರೆ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಹೊಸ ಸುವರ್ಣಯುಗ ಆರಂಭವಾಗಲಿದೆ. ಅದು ಮಾನವ ಸಮೃದ್ಧಿಯ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ” ಎಂದು ಅವರು ಹೇಳಿದ್ದಾರೆ.
ಮಾನವ ಇತಿಹಾಸದ ಅತಿದೊಡ್ಡ ತಿರುವು
“ಇದು ಮಾನವಕುಲಕ್ಕೆ ಹೊಸ ಯುಗದ ಉದಯಕ್ಕಿಂತ ಕಡಿಮೆ ಅಲ್ಲ,” ಎಂದು ಹಸ್ಸಾಬಿಸ್ ಹೇಳಿದ್ದಾರೆ. ತಮ್ಮ ಇಡೀ ಜೀವನವನ್ನು ಎಜಿಐ ಅಭಿವೃದ್ಧಿಗೆ ಮೀಸಲಿಟ್ಟಿರುವ ಅವರು, “ಎಜಿಐಯನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸಿ ಬಳಸಿದರೆ ಅದು ಮಾನವ ಇತಿಹಾಸದಲ್ಲೇ ಅತ್ಯಂತ ಉಪಯುಕ್ತ ಹಾಗೂ ಪರಿವರ್ತನಾತ್ಮಕ ತಂತ್ರಜ್ಞಾನವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಜಿಐಯನ್ನು ಇಂಟರ್‌ನೆಟ್ ಅಥವಾ ಮೊಬೈಲ್ ತಂತ್ರಜ್ಞಾನಗಳಂತಹ ಆವಿಷ್ಕಾರಗಳ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. “ಇದು ವಿದ್ಯುತ್ ಅಥವಾ ಬೆಂಕಿಯ ಆವಿಷ್ಕಾರದಷ್ಟೇ ಮಹತ್ವದ್ದಾಗಿದೆ. ನಾವು ಮೂಲತಃ ಮರಳಿನಿಂದ (ಸಿಲಿಕಾನ್‌ನಿಂದ ತಯಾರಾಗುವ ಸೆಮಿಕಂಡಕ್ಟರ್ ಚಿಪ್‌ಗಳ ಮೂಲಕ) ಯೋಚಿಸುವ ಸಾಮರ್ಥ್ಯವನ್ನು ಸೃಷ್ಟಿಸಿದ್ದೇವೆ. ಇದು ನಿಜಕ್ಕೂ ಅದ್ಭುತ” ಎಂದು ಅವರು ಹೇಳಿದ್ದಾರೆ.
“ಈ ತಂತ್ರಜ್ಞಾನದ ಪರಿಣಾಮ ಕೈಗಾರಿಕಾ ಕ್ರಾಂತಿಗಿಂತ ಹತ್ತು ಪಟ್ಟು ದೊಡ್ಡದಾಗಿದ್ದು, ಅದರ ಬೆಳವಣಿಗೆಯ ವೇಗವೂ ಹತ್ತು ಪಟ್ಟು ಹೆಚ್ಚಿರಬಹುದು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಔಷಧ ಸಂಶೋಧನೆಯಿಂದ ಶುದ್ಧ ಇಂಧನದವರೆಗೆ ಮಹತ್ವದ ಕೊಡುಗೆ
ಎಜಿಐ ಸಮಾಜ ಎದುರಿಸುತ್ತಿರುವ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹಸ್ಸಾಬಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಔಷಧ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವುದು, ಹೊಸ ಶುದ್ಧ ಇಂಧನ ಮೂಲಗಳನ್ನು ಕಂಡುಹಿಡಿಯುವುದು, ಅತ್ಯಾಧುನಿಕ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಎಜಿಐ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ.) ಇನ್ನೇನು ಕೆಲವೇ ವರ್ಷಗಳಲ್ಲಿ ವಾಸ್ತವವಾಗುವ ಸಾಧ್ಯತೆಯಿದೆ. ಹೀಗಾಗಿ, ಈ ತಂತ್ರಜ್ಞಾನವು ಮಾನವಕುಲದ ಹಿತಕ್ಕಾಗಿ ಕಾರ್ಯನಿರ್ವಹಿಸುವಂತೆ ಈಗಿನಿಂದಲೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಗೂಗಲ್ ಡೀಪ್‌ಮೈಂಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆಮಿಸ್ ಹಸ್ಸಾಬಿಸ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ