‘ಡೂಮ್ಸ್‌ಡೇ ವಿಮಾನʼದಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಭಾರತ ಪ್ರವಾಸ : ಇದು ‘ಆಕಾಶದ ಅರಮನೆ’ ; ಚಿನ್ನ ಲೇಪಿತ ವಸ್ತುಗಳು-ಹೈ ಸೆಕ್ಯುರಿಟಿ…..

 ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಉನ್ನತ ಮಟ್ಟದ ನಿಯೋಗದ ಜೊತೆ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರದ ವಿಸ್ತರಣೆಯ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ.
ವಿಶ್ವದ ಅತ್ಯಂತ ಬಿಗಿ ಭದ್ರತೆ ಹೊಂದಿರುವ ನಾಯಕರಲ್ಲಿ ಒಬ್ಬರಾದ ಪುತಿನ್ ಅವರ ದೆಹಲಿ ಆಗಮನದ ವೇಳೆ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕನಿಷ್ಠ ಸುಳಿವು ಸಿಗದಂತೆ, ಏಕಕಾಲದಲ್ಲಿ ಒಂದೇ ರೀತಿಯ ಎರಡು ವಿಶೇಷ ವಿಮಾನಗಳು ಹಾರಾಟ ನಡೆಸಿದ್ದವು. ಶತ್ರುಗಳ ಕಣ್ಣು ತಪ್ಪಿಸಲು ಹಾಗೂ ಅಧ್ಯಕ್ಷರು ಯಾವ ವಿಮಾನದಲ್ಲಿದ್ದಾರೆ ಎಂಬುದು ಯಾರಿಗೂ ತಿಳಿಯದಿರಲಿ ಎಂಬ ಕಾರಣಕ್ಕೆ ಒಂದು ವಿಮಾನವನ್ನು ‘ಡಿಕಾಯ್’ (ಹುಸಿ ವಿಮಾನ) ಆಗಿ ಬಳಸಲಾಗಿತ್ತು. ಈ ‘ಡಬಲ್-ಶೀಲ್ಡ್’ ರಕ್ಷಣಾ ತಂತ್ರವನ್ನು ರಷ್ಯಾ ಈ ಹಿಂದೆಯೂ ತನ್ನ ಅಧ್ಯಕ್ಷರ ವಿದೇಶಿ ಪ್ರವಾಸಗಳಲ್ಲಿ ಹಲವು ಬಾರಿ ಬಳಸಿದೆ.
ʼಡೂಮ್ಸ್‌ಡೇ ವಿಮಾನ’ದ ವಿಶೇಷತೆಗಳು
ಪುತಿನ್ ಅವರು ಸದಾ ತಮ್ಮ ವಿಶೇಷ ವಿನ್ಯಾಸದ ‘ಇಲ್ಯುಷಿನ್ ಐಎಲ್-96-300ಪಿಯು’ (Ilyushin IL-96-300PU) ವಿಮಾನದಲ್ಲೇ ಪ್ರಯಾಣಿಸುತ್ತಾರೆ. ಇದನ್ನು ‘ಫ್ಲೈಯಿಂಗ್ ಕ್ರೆಮ್ಲಿನ್’ ಅಥವಾ ‘ಡೂಮ್ಸ್‌ಡೇ ಪ್ಲೇನ್’ ಎಂದೇ ಕರೆಯಲಾಗುತ್ತದೆ.
1980ರ ದಶಕದಲ್ಲಿ ಇಲ್ಯುಷಿನ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿದ ಈ ದೀರ್ಘ ಶ್ರೇಣಿಯ, ನಾಲ್ಕು ಎಂಜಿನ್‌ಗಳ ವಿಮಾನವು ಯಾವುದೇ ಭೀಕರ ತುರ್ತು ಪರಿಸ್ಥಿತಿಯಲ್ಲೂ ದೇಶದ ಉನ್ನತ ನಾಯಕತ್ವಕ್ಕೆ ಸಂಪೂರ್ಣ ರಕ್ಷಣೆ ನೀಡುವಂತೆ ವಿನ್ಯಾಸಗೊಂಡಿದೆ.
 ‘ಆವಿಯಾಡ್ವಿಗೇಟೆಲ್ ಪಿಎಸ್-90ಎ’ (Aviadvigatel PS-90A) ಟರ್ಬೋಫ್ಯಾನ್ ಎಂಜಿನ್‌ಗಳನ್ನು ಹೊಂದಿರುವ ಈ ವಿಮಾನವು 55.35 ಮೀಟರ್ ಉದ್ದ ಹಾಗೂ 60.12 ಮೀಟರ್ ಅಗಲದ ರೆಕ್ಕೆಗಳನ್ನು ಹೊಂದಿದೆ. ಇದು ಒಮ್ಮೆಗೆ ಸುಮಾರು 11,000 ಕಿಲೋಮೀಟರ್‌ಗಳಷ್ಟು ಸುದೀರ್ಘ ದೂರ ಸಾಗಬಲ್ಲದು. ಹೀಗಾಗಿ ಸುದೀರ್ಘ ಪ್ರಯಾಣದ ವೇಳೆಯೂ ಪದೇಪದೇ ಇಂಧನ ತುಂಬಿಸುವ ಅಗತ್ಯವಿರುವುದಿಲ್ಲ.
ಸಂಚಾರಿ ಕಮಾಂಡ್ ಸೆಂಟರ್ ಮತ್ತು ಭದ್ರತೆ: ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಇದು ಸಂಪೂರ್ಣ ಸಂಚಾರಿ ಕಮಾಂಡ್ ಸೆಂಟರ್ ಆಗಿ ಕೆಲಸ ಮಾಡುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಮಿಲಿಟರಿ, ಗೂಢಚರ ಮತ್ತು ಸರ್ಕಾರಿ ನೆಟ್‌ವರ್ಕ್‌ಗಳ ಜೊತೆ ಸುರಕ್ಷಿತವಾಗಿ ಸಂಪರ್ಕ ಸಾಧಿಸಲು ಇದರಲ್ಲಿ ಎನ್‌ಕ್ರಿಪ್ಟೆಡ್ ಸಂವಹನ ವ್ಯವಸ್ಥೆಗಳಿವೆ. ರೇಡಾರ್-ಜಾಮಿಂಗ್ ತಂತ್ರಜ್ಞಾನ, ಸುಧಾರಿತ ರಕ್ಷಣಾ ವ್ಯವಸ್ಥೆಗಳು, ಉಪಗ್ರಹ ಲಿಂಕ್‌ಗಳು ಮತ್ತು ನಿರಂತರ ದತ್ತಾಂಶ ರವಾನೆಗೆ ಸುರಕ್ಷಿತ ರೇಡಿಯೋ ಚಾನೆಲ್‌ಗಳನ್ನು ಇದು ಹೊಂದಿದೆ.
ರಾಜವೈಭೋಗ ಹಾಗೂ ಐಷಾರಾಮಿ ಸೌಲಭ್ಯ:
ಭದ್ರತೆಯ ಜೊತೆಗೆ ಈ ವಿಮಾನವು ಅತ್ಯಂತ ಐಷಾರಾಮಿಯಾಗಿದೆ. ಅಧ್ಯಕ್ಷರ ಖಾಸಗಿ ಸೂಟ್, ಮಲಗುವ ಕೋಣೆಗಳು, ಐಷಾರಾಮಿ ಸ್ನಾನಗೃಹಗಳು, ಖಾಸಗಿ ಅಡುಗೆಮನೆ, ಊಟದ ಸ್ಥಳ ಮತ್ತು ಬೋರ್ಡ್‌ರೂಮ್ ಶೈಲಿಯ ಆಸನಗಳನ್ನು ಹೊಂದಿರುವ ಬೃಹತ್ ಸಭಾಂಗಣವಿದೆ. ಇದರ ಒಳಾಂಗಣ ವಿನ್ಯಾಸದಲ್ಲಿ ಚಿನ್ನದ ಲೇಪಿತ ಫಿಟ್ಟಿಂಗ್‌ಗಳು, ಅತ್ಯುನ್ನತ ಮರದ ಕೆತ್ತನೆಗಳು ಮತ್ತು ಪ್ರೀಮಿಯಂ ಚರ್ಮದ (ಲೆದರ್) ಅಲಂಕಾರಿಕ ವಸ್ತುಗಳನ್ನು ಬಳಸಿ ರಾಜವೈಭೋಗವನ್ನು ಸೃಷ್ಟಿಸಲಾಗಿದೆ.
ಈ ಬೃಹತ್ ವಿಮಾನ ಸರಣಿಯ ಉಸ್ತುವಾರಿಯನ್ನು ರಷ್ಯಾದ ‘ಸ್ಪೆಷಲ್ ಫ್ಲೈಟ್ ಸ್ಕ್ವಾಡ್ರನ್’ ನಿರ್ವಹಿಸುತ್ತಿದ್ದು, ಅಧ್ಯಕ್ಷರ ಎಲ್ಲಾ ಪ್ರವಾಸಗಳ ಭದ್ರತೆಯ ಹೊಣೆಯನ್ನು ಇದು ಹೊತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement