
ಟೆನ್ನೆಸ್ಸಿ: ಅಮೆರಿಕದ ಟೆನ್ನೆಸ್ಸಿಯ ಗ್ಯಾಟ್ಲಿನ್ ಬರ್ಗ್‌ನಲ್ಲಿ ನಡೆದ 50ನೇ ವಾರ್ಷಿಕ ‘ಫ್ಯಾಂಟಸಿ ಲೈಟ್ಸ್ ಕ್ರಿಸ್ಮಸ್ ಪರೇಡ್’ನಲ್ಲಿ ದೈತ್ಯಾಕಾರದ ಕಪ್ಪು ಕರಡಿಯೊಂದು ಅನಿರೀಕ್ಷಿತವಾಗಿ ಜನರಿಂದ ತುಂಬಿದ್ದ ರಸ್ತೆಯಲ್ಲಿ ಬಂದು ಆತಂಕ ಮೂಡಿಸಿತು.
ಶುಕ್ರವಾರ (ಡಿಸೆಂಬರ್ 5) ರಾತ್ರಿ ಪರೇಡ್ ಮುಗಿದು ಜನರು ಚದುರುತ್ತಿದ್ದ ಸಂದರ್ಭದಲ್ಲಿ ನಡೆದ ಈ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ.
ಹಬ್ಬದ ಸಂಭ್ರಮ ಮುಗಿದ ಬೆನ್ನಲ್ಲೇ ಈ ಕಪ್ಪು ಕರಡಿ ನಗರದ ಮಧ್ಯಭಾಗಕ್ಕೆ ಬಂದಿದೆ. ನೂರಾರು ಜನರ ಸಮ್ಮುಖದಲ್ಲೇ ರಸ್ತೆಯ ಬದಿಯಲ್ಲಿದ್ದ ಕಸದ ಬುಟ್ಟಿಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುತ್ತಮುತ್ತ ಜನರಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕರಡಿ, ತನ್ನ ಪಾಡಿಗೆ ತಾನು ಆಹಾರ ಹುಡುಕುತ್ತಿತ್ತು. ಹಾಗೂ ಸ್ವಲ್ಪವೂ ವಿಚಲಿತವಾದಂತೆ ಕಂಡುಬರಲಿಲ್ಲ. ಸ್ವಲ್ಪ ಸಮಯದ ನಂತರ ಕರಡಿ ತಾನಾಗಿಯೇ ಜನದಟ್ಟಣೆಯ ಪ್ರದೇಶದಿಂದ ಕಾಡಿನತ್ತ ತೆರಳಿದೆ.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಾಣಿಗಳನ್ನು ಕೆಣಕಬೇಡಿ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿತ್ತು.
ಗ್ಯಾಟ್ಲಿನ್ ಬರ್ಗ್ ನಗರವು ‘ಗ್ರೇಟ್ ಸ್ಮೋಕಿ ಮೌಂಟೇನ್ಸ್ ನ್ಯಾಷನಲ್ ಪಾರ್ಕ್’ ಸಮೀಪವಿರುವುದರಿಂದ ಇಲ್ಲಿ ಕರಡಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೆ, ‘ಗ್ರೇಟ್ ಸ್ಮೋಕಿ ಮೌಂಟೇನ್ಸ್ ನ್ಯಾಷನಲ್ ಪಾರ್ಕ್’ ಹೆಚ್ಚಿನ ಸಂಖ್ಯೆಯ ಕಪ್ಪು ಕರಡಿಗಳಿಗೆ ನೆಲೆಯಾಗಿದೆ.
ಕಳೆದ ತಿಂಗಳು ಕೂಡ ಕಟ್ಟಡವೊಂದರ ಮೇಲೇರಿದ್ದ ಕರಡಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದರು.
ಚಳಿಗಾಲದಲ್ಲಿ ನೈಸರ್ಗಿಕ ಆಹಾರದ ಕೊರತೆ ಇರುವುದರಿಂದ, ಕಸದ ಬುಟ್ಟಿಗಳಲ್ಲಿನ ಆಹಾರದ ವಾಸನೆಗೆ ಆಕರ್ಷಿತವಾಗಿ ಕರಡಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎಂದು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.
ಪ್ರವಾಸಿಗರು ಮತ್ತು ಸ್ಥಳೀಯರು ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಮತ್ತು ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಬಿಡಬಾರದು ಎಂದು ಆಡಳಿತ ಮಂಡಳಿ ಮತ್ತೊಮ್ಮೆ ಮನವಿ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ