ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿಗಳಾದ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಅವರನ್ನು ನೇಮಿಸಿಕೊಂಡಿದ್ದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ (Al-Falah University) ಸಂಸ್ಥಾಪಕ ಮತ್ತು ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ ಅವರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಿದ್ದಿಕಿ ಹಿನ್ನೆಲೆ ಮತ್ತು ಅವರ ವ್ಯಾಪಕ ಕಾರ್ಪೊರೇಟ್ ಜಾಲವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯವು ಹಣಕಾಸು ಮೂಲಗಳ ಕುರಿತು ಜಾರಿ ನಿರ್ದೇಶನಾಲಯದ (Enforcement Directorate – ED) ಪ್ರತ್ಯೇಕ ತನಿಖೆಯನ್ನು ಎದುರಿಸುತ್ತಿದೆ. ಸಿದ್ದಿಕಿ ಅವರ “ವಿಸ್ತಾರವಾದ ಕಾರ್ಪೊರೇಟ್ ನೆಟ್‌ವರ್ಕ್” ಮತ್ತು ₹ 7.5 ಕೋಟಿ ವಂಚನೆಗೆ ಸಂಬಂಧಿಸಿದ ಹಳೆಯ ಕ್ರಿಮಿನಲ್ ಮೊಕದ್ದಮೆ ಈಗ ಸಮಾನಾಂತರ ತನಿಖೆಯ ಮುಖ್ಯ ಕೇಂದ್ರಬಿಂದುಗಳಾಗಿವೆ.
₹ 7.5 ಕೋಟಿ ವಂಚನೆ ಆರೋಪದ ಪ್ರಕರಣ
ಸಿದ್ದಿಕಿ ಮತ್ತು ಅವರ ಸಹಾಯಕರು ನಕಲಿ ಹೂಡಿಕೆ ಯೋಜನೆಗಳನ್ನು ರೂಪಿಸಿ, ಜನರಿಂದ ಹಣ ಠೇವಣಿ ಮಾಡಿಸಿಕೊಂಡು, ನಂತರ ಆ ಠೇವಣಿಗಳನ್ನು ಷೇರುಗಳಾಗಿ ಪರಿವರ್ತಿಸಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪದ ಮೇಲೆ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಮೂಲಕ ಹೂಡಿಕೆದಾರರಿಂದ ಒಟ್ಟು ₹ 7.5 ಕೋಟಿ ಹಣವನ್ನು ಸಂಗ್ರಹಿಸಿ, ಅದನ್ನು ಆರೋಪಿಗಳ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಲಾಗಿತ್ತು.
ಸಿದ್ದಿಕಿ ಅವರನ್ನು 2001 ರಲ್ಲಿ ಬಂಧಿಸಲಾಗಿತ್ತು. ಮಾರ್ಚ್ 2003 ರಲ್ಲಿ ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅಂತಿಮವಾಗಿ 2004 ರ ಫೆಬ್ರವರಿಯಲ್ಲಿ, ವಂಚನೆಗೊಳಗಾದ ಹೂಡಿಕೆದಾರರಿಗೆ ಹಣವನ್ನು ಮರುಪಾವತಿ ಮಾಡಲು ಒಪ್ಪಿದ ನಂತರವೇ ಅವರಿಗೆ ಜಾಮೀನು ದೊರೆತಿತ್ತು.
ವ್ಯಾಪಕ ಕಾರ್ಪೊರೇಟ್ ಜಾಲ, ಒಂಬತ್ತು ಕಂಪನಿಗಳು:
ಮಧ್ಯಪ್ರದೇಶದ ಮಾವ್ ಮೂಲದವರಾದ ಸಿದ್ದಿಕಿ, ಒಂಬತ್ತು ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವೆಲ್ಲವೂ ವಿವಿಯ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪರಸ್ಪರ ಸಂಪರ್ಕ ಹೊಂದಿವೆ. ಶಿಕ್ಷಣ, ಸಾಫ್ಟ್‌ವೇರ್, ಹಣಕಾಸು ಸೇವೆಗಳು ಮತ್ತು ಇಂಧನ ಕ್ಷೇತ್ರಗಳಲ್ಲಿ ಈ ಕಂಪನಿಗಳು ಹರಡಿವೆ. ಈ ಬಹುತೇಕ ಕಂಪನಿಗಳು ದೆಹಲಿಯ ಓಖ್ಲಾ ನೆರೆಹೊರೆಯ ಜಾಮಿಮಾ ನಗರದಲ್ಲಿರುವ ‘ಅಲ್-ಫಲಾಹ್ ಹೌಸ್’ ಎಂಬ ಒಂದೇ ವಿಳಾಸವನ್ನು ಹಂಚಿಕೊಂಡಿರುವುದು ಮತ್ತೊಂದು ಗಮನ ಸೆಳೆಯುವ ಅಂಶವಾಗಿದೆ. 2019 ರವರೆಗೆ ಬಹುತೇಕ ಸಂಸ್ಥೆಗಳು ಸಕ್ರಿಯವಾಗಿದ್ದವು ಎಂದು ಹೇಳಲಾಗಿದೆ.
ಕೆಂಪುಕೋಟೆ ಸ್ಫೋಟ :
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ಗೆ ಸಂಬಂಧ ಹೊಂದಿದ್ದ ಉಮರ್ ಮೊಹಮ್ಮದ್ ಓಡಿಸುತ್ತಿದ್ದ ಹ್ಯುಂಡೈ ಐ20 ಕಾರು, ಕೆಂಪುಕೋಟೆ ಬಳಿ ಸ್ಫೋಟಗೊಂಡ ಪರಿಣಾಮ 13 ಜನರು ಸಾವಿಗೀಡಾಗಿದ್ದಾರೆ. ತನಿಖೆಯ ಪ್ರಕಾರ, ದೆಹಲಿ ಪ್ರದೇಶದಾದ್ಯಂತ 32 ಕಾರುಗಳಲ್ಲಿ ಸರಣಿ ಬಾಂಬ್ ದಾಳಿ ನಡೆಸಲು ಭಯಾನಕ ಸಂಚು ರೂಪಿಸಲಾಗಿತ್ತು ಎಂಬುದು ತಿಳಿದುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ